ಲಂಡನ್: ಕಳೆದ ವಾರ ಬ್ರಿಟನ್ ಸಂಸತ್ನಲ್ಲಿ ಅಂತಿಮ ಅಂಗೀಕಾರ ಪಡೆದಿದ್ದ ಬ್ರೆಕ್ಸಿಟ್ ಒಪ್ಪಂದದ ಪ್ರಕಾರ ಬ್ರಿಟನ್ ಜ.31ರ ಮಧ್ಯರಾತ್ರಿ ಐರೋಪ್ಯ ಒಕ್ಕೂಟದಿಂದ ಅಧಿಕೃತವಾಗಿ ಹೊರಬಂದಿದೆ. 2016ರಲ್ಲಿ ಜನಮತಸಂಗ್ರಹದಲ್ಲಿ ಬ್ರಿಟನ್ ಮತದಾರರು ಬ್ರೆಕ್ಸಿಟ್ ಆಯ್ಕೆ ಮಾಡಿಕೊಂಡ ಮೂರೂವರೆ ವರ್ಷಗಳ ನಂತರ, ಹಲವು ಸುತ್ತಿನ ರಾಜಕೀಯ ಗುದ್ದಾಟವನ್ನು ಎದುರಿಸಿದ ಬಳಿಕ ಬ್ರಿಟನ್ ಜನರು ಶನಿವಾರ ಐರೋಪ್ಯ ಒಕ್ಕೂಟದಿಂದ ಸ್ವಾತಂತ್ರ್ಯ ಪಡೆದಿದ್ದಾರೆ. ಬ್ರಿಟನ್ ಯುರೋಪಿಯನ್ ಒಕ್ಕೂಟದಲ್ಲಿ ಇರದಿದ್ದರೂ 11 ತಿಂಗಳ ಪರಿವರ್ತನೆ ಅವಧಿಗೆ ಅದು ಪ್ರವೇಶಿಸಲಿದ್ದು, ಈ ಅವಧಿಯಲ್ಲಿ ಹಿಂದಿನ ನಿಯಮಗಳನ್ನೇ ಪಾಲಿಸಬೇಕಾಗುತ್ತದೆ. ಆದರೆ ಒಕ್ಕೂಟದ ಸಂಸ್ಥೆಗಳಲ್ಲಿ ಬ್ರಿಟನ್ಗೆ ಯಾವುದೇ ಪ್ರಾತಿನಿಧ್ಯವಿರುವುದಿಲ್ಲ. ಸದ್ಯ ಸ್ವತಂತ್ರ ದೇಶದ ಸ್ಥಾನಮಾನ ಪಡೆದಿರುವ ಬ್ರಿಟನ್ನ ವ್ಯಾಪಾರ, ವ್ಯವಸ್ಥೆ ಮತ್ತು ಆಡಳಿತದಲ್ಲಿ ಹಲವು ಬದಲಾವಣೆಗಳು ಆಗಲಿವೆ.
ಏನಿದು ಬ್ರೆಕ್ಸಿಟ್?: 28 ದೇಶಗಳು ಸೇರಿ ರಚಿಸಿಕೊಂಡಿರುವ ರಾಜಕೀಯ ಮತ್ತು ಆರ್ಥಿಕ ಸಂಘಟನೆಯೇ ಐರೋಪ್ಯ ಒಕ್ಕೂಟ. 1980 ಮತ್ತು 90ರ ದಶಕದಿಂದಲೇ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಕೂಗು ಕೇಳಿಬರ ತೊಡಗಿತು. ಬ್ರೆಕ್ಸಿಟ್ ಹೆಸರಿನ ಆಂದೋಲನಗಳು ನಡೆದವು. 2016ರ ಜೂ.23ರಂದು ಜನಮತ ಗಣನೆ ನಡೆದು ಶೇ. 52 ಮಂದಿ ಬ್ರೆಕ್ಸಿಟ್ ಪರ ಅಭಿಪ್ರಾಯ ವ್ಯಕ್ತಪಡಿಸಿದರು. 2017ರ ಮಾ.29ರಂದು ಸರ್ಕಾರ ಸಂವಿಧಾನದ 50ನೇ ವಿಧಿ ಕೈಬಿಡುವ ಪ್ರಸ್ತಾವನೆ ಮಾಡಿದರು. ಇದರ ಅನ್ವಯ 2019ರ ಮಾರ್ಚ್ 29ರಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬೇಕಿತ್ತು. ಗಡುವಿನೊಳಗೆ ಬ್ರೆಕ್ಸಿಟ್ಗೆ ಥೆರೇಸಾ ಮೇ ರೂಪಿಸಿರುವ ನಿಯಮಾವಳಿಗೆ ಒಪ್ಪಿಗೆ ಪಡೆಯುವುದು ಅಗತ್ಯವಾಗಿತ್ತು. ಅದರಲ್ಲಿ ವಿಫಲವಾಗಿದ್ದ್ದಂದ ಅವರೂ 2019 ಮೇ 24ರಂದು ಪದತ್ಯಾಗ ಮಾಡಿದರು.
ಬದಲಾಗುವ ಅಂಶಗಳು
ಐರೋಪ್ಯ ಒಕ್ಕೂಟದಿಂದ ಹೊರಬಂದಿರುವುದರಿಂದ ಬ್ರಿಟನ್ ಇನ್ಮುಂದೆ ಬೇರೆ ದೇಶಗಳ ಜತೆಗೆ ಸ್ವತಂತ್ರವಾಗಿ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಬಹುದಾಗಿದೆ.
ಬ್ರಿಟನ್ ಮಾಜಿ ಪ್ರಧಾನಿ ಥೆರೇಸಾ ಮೇ ಐರೋಪ್ಯ ಒಕ್ಕೂಟದಿಂದ ಹೊರಬರಲು 2016ರಲ್ಲಿ ರಚಿಸಿದ್ದ 40 ಸದಸ್ಯರ ಬ್ರೆಕ್ಸಿಟ್ ಇಲಾಖೆಯನ್ನು ಇನ್ಮುಂದೆ ಮುಚ್ಚಲಾಗುತ್ತದೆ.
ಬೆಲ್ಜಿಯಂನ ಬ್ರಸೆಲ್ಸ್ನಲ್ಲಿ ಬ್ರಿಟನ್ನ ರಾಯಭಾರ ಅಧಿಕಾರಿಗಳ ಉಪಸ್ಥಿತಿಯನ್ನು ಮತ್ತೆ ಪ್ರಾರಂಭಿಸಲಾಗುತ್ತದೆ.
ಯುರೋಪ್ ಸಂಸತ್ನಲ್ಲಿನ 73 ಬ್ರಿಟನ್ ಸಂಸದರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳಲಿದ್ದಾರೆ.
ಬ್ರಿಟನ್ ಪಾಸ್ಪೋರ್ಟ್ನ ಬಣ್ಣ ಬದಲಾಗಲಿದ್ದು, ಅದರ ಹೊಸ ಪಾಸ್ಪೋರ್ಟ್ ಗಳು ಬರ್ಗ್ಯಾಂಡಿ ಬಣ್ಣದ ಬದಲಿಗೆ ಸಾಂಪ್ರದಾಯಿಕ ನೀಲಿ ಬಣ್ಣಕ್ಕೆ ಹಿಂದಿರುಗುತ್ತವೆ.
ಬ್ರೆಕ್ಸಿಟ್ ಸ್ಮರಣಾರ್ಥ 50 ಪೆನ್ಸ್ ಮುಖಬೆಲೆಯ 3 ಮಿಲಿಯನ್ ಡಾಲರ್ ನಾಣ್ಯಗಳನ್ನು ಬಿಡುಗಡೆಗೊಳಿಸಲಾಗುತ್ತದೆ.