ಬೆಂಗಳೂರು: ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಕಳೆದ ಮೂರು ವರ್ಷಗಳಿಂದ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕಡೆಗೂ ಪ್ರತಿಫಲ ಸಿಕ್ಕಿದೆ. ಇಂದು ವಿಧಾನಸೌಧದ ಸಭಾಂಗಣದಲ್ಲಿ ನಡೆದ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಮತ್ತು ಇತರೆ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಇದೀಗ ರಾಜ್ಯ ಸರ್ಕಾರ ಕೈಬಿಟ್ಟಿದೆ.
ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್ ಕೇಳಿದ್ದೇ ತಪ್ಪಾಯ್ತಾ? ಟ್ರಾಫಿಕ್ ಪೊಲೀಸನಿಗೆ ಹಿಗ್ಗಾಮುಗ್ಗಾ ಥಳಿಸಿದ ಅಪ್ಪ-ಮಗ | Driving License
ಕೆಲವು ವರ್ಷಗಳಿಂದ ನಡೆಯುತ್ತಿದ್ದ ಭೂಸ್ವಾಧೀನ ವಿವಾದ ಕಡೆಗೂ ಇತ್ಯರ್ಥಗೊಂಡಿದ್ದು, ರೈತರ ಹಿತದೃಷ್ಟಿಯಿಂದ ನಾವು ಪ್ರಕ್ರಿಯೆಯನ್ನು ಇಲ್ಲಿಗೆ ಕೈಬಿಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ.
• ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದೆ. ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು.
• ಅಂತಹ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರವನ್ನು ನೀಡಲಿದ್ದು, ಅಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬಯಸುವ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ.
ದೇವನಹಳ್ಳಿ ತಾಲೂಕು ಬೆಂಗಳೂರಿಗೆ ಹತ್ತಿರದ್ದಲ್ಲಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಲ್ಲಿಯೇ ಇದೆ. ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗಬೇಕಿದ್ದರೆ ಅಭಿವೃದ್ದಿ ಕಾರ್ಯ ನಡೆಯಬೇಕಾಗಿದೆ. ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ, ಬಂಡವಾಳ ಹೂಡಿಕೆಗೆ ಜಮೀನಿನ ಅಗತ್ಯವಿದೆ. ಜಮೀನು ಸ್ವಾಧೀನಪಡಿಸಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ನೀಡಬೇಕಾಗುತ್ತದೆ.
• 1777 ಎಕರೆ ಜಮೀನು ದೇವನಹಳ್ಳಿ ತಾಲೂಕಿನಲ್ಲಿ ಸ್ವಾಧೀನಪಡಿಸಿಕೊಂಡು, ಅಲ್ಲಿ ಏರೋಸ್ಪೇಸ್ ಪ್ರಾರಂಭಿಸುವುದು ಸರ್ಕಾರದ ಉದ್ದೇಶ. ಬೆಂಗಳೂರಿನ ಸಮೀಪದಲ್ಲಿ ಇದಕ್ಕೆ ಜಮೀನು ಒದಗಿಸಲು ಕೋರಿಕೆ ಸ್ವೀಕರಿಸಲಾಗಿತ್ತು.
• ರಾಜ್ಯದಲ್ಲಿ ಭೂಸ್ವಾಧೀನ ವಿರುದ್ಧ ಈ ಮಟ್ಟದ ಪ್ರತಿಭಟನೆ ನಡೆದಿಲ್ಲ. ಅದು ಫಲವತ್ತಾದ ವ್ಯವಸಾಯಕ್ಕೆ ಯೋಗ್ಯವಾದ ಭೂಮಿ. ಅಲ್ಲಿನ ರೈತರು ಆ ಜಮೀನಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.
• ಸರ್ಕಾರ ರೈತರು, ಜಮೀನುದಾರರು ಸೇರಿದಂತೆ ಎಲ್ಲರ ಅಹವಾಲುಗಳನ್ನು ಆಲಿಸಿದೆ. ರಾಜ್ಯದ ಅಭಿವೃದ್ದಿಗೆ, ಬೆಳವಣಿಗೆಗೆ ಕೈಗಾರಿಕೆ ಉತ್ತೇಜನ ನೀಡುವುದು ಅಗತ್ಯವಿದೆ.
• ಯಾವುದೇ ಕಾರಣಕ್ಕೂ ಜಮೀನು ಸ್ವಾಧೀನ ಕೈಬಿಟ್ಟರೆ ಈ ಕೈಗಾರಿಕೆ ಬೇರೆ ಕಡೆ ಹೋಗುವ ಸಾಧ್ಯತೆ ಇದೆ. ಆದರೂ ಸರ್ಕಾರ ರೈತಪರವಾಗಿದ್ದು, ಅವರ ಬೇಡಿಕೆಗಳನ್ನು ಪರಿಗಣಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ನಿರ್ಧರಿಸಿದೆ.