ನ್ಯೂಸ್

ಆರೋಪಿ ದರ್ಶನ್​ ಜಾಮೀನು ತೀರ್ಪು ಅ.30ಕ್ಕೆ: 'ದಾಸ'ನ ಪರ ವಕೀಲ ಸಿ.ವಿ ನಾಗೇಶ್ ಮಂಡಿಸಿದ ವಾದವೇನು? | Darshan

ಮೋಹನ್​ ಶೆಟ್ಟಿ

ಬೆಂಗಳೂರು: ಚಿತ್ರದುರ್ಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ನಟ ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು, ದರ್ಶನ್ (Darshan)​ ಪರ ವಕೀಲ ಸಿ.ವಿ. ನಾಗೇಶ್​ ಮಂಡಿಸಿದ ವಾದವನ್ನು ಆಲಿಸಿದ ಬಳಿಕ ಇದೀಗ ಹೈಕೋರ್ಟ್ ತೀರ್ಪನ್ನು ನಾಳೆಗೆ (ಅ.30) ಕಾಯ್ದಿರಿಸಿದೆ.

ದರ್ಶನ್​ ಪರ ಸಿ.ವಿ ನಾಗೇಶ್​ ಮಂಡಿಸಿದ ವಾದ

  • ಅರ್ಜಿದಾರರ ದೇಹದಲ್ಲಿ ಸಮರ್ಪಕವಾಗಿ. ರಕ್ತಪರಿಚಲನೆ ಆಗುತ್ತಿಲ್ಲ, ಪಾದಗಳಲ್ಲಿ ನಂಬ್ ನೆಸ್ (ಮರಗಟ್ಟುವಿಕೆ) ಇದೆ. ಡಿಸ್ಕ್ ಸಮಸ್ಯೆ ಇದೆ. ಕಾಲಿನಲ್ಲಿ ನರದ ತೊಂದರೆ ಉಂಟಾಗಿದ್ದು, ಈಗಾಗಲೇ ಸ್ವಲ್ಪ ಮಟ್ಟಿಗೆ ಪಾದ ಸ್ಪರ್ಶ ಕಳೆದುಕೊಂಡಿದ್ದಾರೆ.
  • ಹೀಗಿರುವಾಗ ಸೂಕ್ತ ಚಿಕಿತ್ಸೆ ‌ನೀಡುವಲ್ಲಿ ವಿಫಲವಾದರೆ, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಎಡಮಾಡಿಕೊಡಬಹುದು.
  • ವೈದ್ಯಕೀಯ ವರದಿಯೂ ಅವರು ಪಾರ್ಶ್ವವಾಯು ತುತ್ತಾಗುವ ಸಾಧ್ಯತೆ ಅಧಿಕವಾಗಿದೆ‌. ಹಾಗಾಗಿ‌ ತುರ್ತು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕು ಎಂದಿದ್ದಾರೆ. ಇವೆಲ್ಲವನ್ನೂ ಗಮನಿಸಿ ಮಧ್ಯಂತರ ಜಾಮೀ‌ನು‌ ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಪರ ವಕೀಲ ಪ್ರಸನ್ನ ಕುಮಾರ್ ವಾದ

  • ವೈದ್ಯಕೀಯ ವರದಿಯಲ್ಲಿ ಪಾರ್ಶ್ವವಾಯು ತುತ್ತಾಗುತ್ತಾರೆ ಎಂದಿಲ್ಲ, ತುತ್ತಾಗಲೂಬಹುದು ಎಂದು ವೈದ್ಯರು ಅಂದಾಜಿಸಿದ್ದಾರಷ್ಟೆ ಎಂದರು.

ಈ ವೇಳೆ ನ್ಯಾಯಪೀಠ ಏನು‌ ನಿಮ್ಮ ಮಾತಿನ ಅರ್ಥ? ಅರ್ಜಿದಾರರು ಅನಾರೋಗ್ಯದ ಅಂತಿಮ‌ ಹಂತಕ್ಕೆ ತಲುಪುವರೆಗೆ ಕಾಯಬೇಕು ಎನ್ನುವುದೇ ಎಂದಿತ್ತು. ತದನಂತರ ಸರ್ಕಾರಿ ಪರ ವಕೀಲರು ಉದ್ದೇಶಿಸಿ ನೋಡಿ ಆರೋಗ್ಯ ಎಂಬುವುದು ಮಾನವನ ಮೂಲಭೂತ ಹಕ್ಕು‌‌. ವ್ಯಕ್ತಿ ಆರೋಪಿಯಾಗಿರಲಿ, ಅಪರಾಧಿಯಾಗಿರಲಿ ಆರೋಗ್ಯ ಎಂಬುವುದು ಮುಖ್ಯವಾಗಿರುತ್ತದೆ. ಈ ರೀತಿ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ ಇದನ್ನು ಸುಪ್ರೀಂಕೋರ್ಟ್ ಸಹ ಹಲವು ವೇಳೆ‌ ಪುನುರುಚ್ಚರಿಸಿದೆ ಎಂದಿದೆ.

ವಾದ-‌ಪತ್ರಿವಾದ ಆಲಿಸಿದ ನ್ಯಾಯಪೀಠ ಅರ್ಜಿಯ ತೀರ್ಪನ್ನು ನಾಳೆಗೆ(ಬುಧವಾರ) ಪ್ರಕಟಿಸುವುದಾಗಿ ಹೇಳಿದೆ.