ಪ್ಯಾರಿಸ್: ರಷ್ಯಾದ ಮಾರ್ಕ್ ಜುಕರ್‌ಬರ್ಗ್ ಎಂದು ಕರೆಯಲ್ಪಡುವ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನ ಸಿಇಒ ಪಾವೆಲ್ ಡುರೊವ್ ಅವರನ್ನು ಪ್ಯಾರಿಸ್ ಬಳಿಯ ಲೆಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಶನಿವಾರ (ಆಗಸ್ಟ್ 24) ಬಂಧಿಸಲಾಗಿದೆ. ಇನ್ನೂ ನಾಲ್ಕು ದಿನಗಳವರೆಗೆ ಪಾವೆಲ್ ಡುರೊವ್ ಬಂಧನದಲ್ಲಿರಬಹುದು ಎಂದು ಫ್ರೆಂಚ್ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.
ಸಿಇಒ ಪಾವೆಲ್ ಡುರೊವ್ ಮರೆಮಾಚಲು ಏನು ಇಲ್ಲ. ಪ್ಲಾಟ್‌ಫಾರ್ಮ್‌ನ ದುರುಪಯೋಗಕ್ಕೆ ಪ್ಲಾಟ್‌ಫಾರ್ಮ್ ಅಥವಾ ಅದರ ಮಾಲೀಕರು ಜವಾಬ್ದಾರರು ಎನ್ನುವುದು ಅಸಂಬದ್ಧವಾಗಿದೆ. ಈ ಪರಿಸ್ಥಿತಿಯ ತ್ವರಿತ ಪರಿಹಾರಕ್ಕಾಗಿ ಕಾಯುತ್ತಿದ್ದೇವೆ. ನಾವು ನಿಮ್ಮೆಲ್ಲರೊಂದಿಗಿದೆ ಎಂದು ತಮ್ಮ ಸಿಇಒ ಬಂಧನದ ಕುರಿತು ಟೆಲಿಗ್ರಾಮ್ ಹೇಳಿದೆ.
ಇನ್ನು ಈ ಬಗ್ಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ತಮ್ಮ ದೇಶವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬದ್ಧವಾಗಿದೆ ಎಂದು ಹೇಳಿದರು. ಸಾಮಾಜಿಕ ಜಾಲತಾಣ ಮತ್ತು ನಿಜ ಜೀವನದಲ್ಲಿ ನಾಗರಿಕರನ್ನು ರಕ್ಷಿಸಲು ಮತ್ತು ಅವರ ಮೂಲಭೂತ ಹಕ್ಕುಗಳನ್ನು ಗೌರವಿಸಲು ಕಾನೂನು ಚೌಕಟ್ಟಿನೊಳಗೆ ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯಲಾಗುತ್ತದೆ. ಇದು ಯಾವುದೇ ರೀತಿಯ ರಾಜಕೀಯ ನಿರ್ಧಾರವಲ್ಲ. ಈ ವಿಷಯದ ಬಗ್ಗೆ ತೀರ್ಪು ನೀಡುವುದು ನ್ಯಾಯಾಧೀಶರಿಗೆ ಬಿಟ್ಟದ್ದು ಎಂದು ತಿಳಿಸಿದರು.
ಪಾವೆಲ್ ಡುರೊವ್ ಬಂಧನದ ಬಗ್ಗೆ ರಷ್ಯಾ ಪ್ರತಿಕ್ರಿಯೆ ನೀಡಿದೆ. ಡ್ಯುರೊವ್‌ನ ಆರೋಪ ಏನೆಂದು ನಮಗೆ ತಿಳಿದಿಲ್ಲ. ಈ ವಿಷಯದ ಬಗ್ಗೆ ನಾವು ಯಾವುದೇ ಅಧಿಕೃತ ಘೋಷಣೆಯನ್ನು ಕೇಳಿಲ್ಲ. ಆದ್ದರಿಂದ ಏನಾದರೂ ಹೇಳುವ ಮೊದಲು ಪರಿಸ್ಥಿತಿ ತಿಳಿಯಾಗುವವರೆಗೆ ಕಾಯಬೇಕಾಗಿದೆ. ಕಾಮೆಂಟ್ ಮಾಡುವುದು ಸೂಕ್ತವಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದರು.
ಟೆಲಿಗ್ರಾಮ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ.ಟೆಲಿಗ್ರಾಮ್‌ನ ಮಾಡರೇಟರ್‌ಗಳ ಕೊರತೆಯಿಂದಾಗಿ ಮೆಸೇಜಿಂಗ್ ಆ್ಯಪ್‌ನಲ್ಲಿ ಕ್ರಿಮಿನಲ್ ಚಟುವಟಿಕೆ ನಿರಂತರವಾಗಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಪಾವೆಲ್ ಬಂಧನದ ಸಮಯದಲ್ಲಿ ಫ್ರೆಂಚ್ ಪೊಲೀಸರು ಹೇಳಿದ್ದರು.(ಏಜೆನ್ಸೀಸ್)