ನವದೆಹಲಿ: ತಮ್ಮದೇ ಜನತಾದಳ ಸಂಯುಕ್ತ ಪಕ್ಷದ ಉಪಾಧ್ಯಕ್ಷ ಹಾಗೂ ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್ ಮತ್ತು ಬಿಜೆಪಿ ನಡುವೆ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ಸ್ಥಾನ ಹಂಚಿಕೆಯ ವಿಚಾರದಲ್ಲಿ ಮುಂದುವರಿದಿರುವ ತಿಕ್ಕಾಟದ ವಿಚಾರವಾಗಿ ನಿತೀಶ್ ಕುಮಾರ್ ತುಟಿ ಬಿಚ್ಚಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಎಲ್ಲವೂ ಸರಿಯಾಗಿದೆ" ಎಂದಷ್ಟೇ ಹೇಳಿದರು. ಭಿನ್ನಾಭಿಪ್ರಾಯ ಕುರಿತು ಹೆಚ್ಚಿಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ನಿರಂತರ ವಿರೋಧಿಸುತ್ತಾ ಮೈತ್ರಿ ಪಕ್ಷ ಬಿಜೆಪಿ ವಿರುದ್ಧ ವಾಕ್ಸಮರ ಮುಂದುವರಿಸಿರುವ ಪ್ರಶಾಂತ್ ಕಿಶೋರ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಂಹಪಾಲು ಸ್ಥಾನ ನಮಗೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಪ್ರಶಾಂತ್ ಕಿಶೋರ್ ನಡುವಿನ ವಾಕ್ಸಮರ ಮುಂದುವರಿದಿದೆ.
ಮಂಗಳವಾರ ಟ್ವೀಟ್ ಮಾಡಿದ್ದ ಬಿಜೆಪಿ ನಾಯಕ ಸುಶೀಲ್ ಮೋದಿ, ವೈಯಕ್ತಿಕ ಲಾಭಕ್ಕಾಗಿ ಬಿಸಿನೆಸ್ ನಡೆಸುವವರು ಮೊದಲು ತಮ್ಮ ಮಾರುಕಟ್ಟೆಯನ್ನು ನಿರ್ಮಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ. ಬಳಿಕ ದೇಶದ ಕಲ್ಯಾಣದ ಬಗ್ಗೆ ಚಿಂತಿಸುತ್ತಾರೆ ಎಂದು ಪ್ರಶಾಂತ್ ಕಿಶೋರ್ ಹೆಸರು ಹೇಳದೆ ತಿರುಗೇಟು ನೀಡಿದ್ದರು.
ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣಾ ವೇಳೆ ಬಿಜೆಪಿ ಮತ್ತು ಜೆಡಿಯು ಸಮಾನವಾದ ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಇದನ್ನೇ ಮುಂದುವರಿಸಲು ಬಿಜೆಪಿ ಅಪೇಕ್ಷಿಸಿತ್ತು ಎನ್ನಲಾಗಿದೆ. ಆದಾಗ್ಯೂ ಪ್ರಶಾಂತ್ ಕಿಶೋರ್, ಹಿಂದಿನ ಚುನಾವಣೆಯ ಪಾಲುದಾರಿಕೆಯ ಆಧಾರಕ್ಕಿಂತ ಜೆಡಿಯು ಹೆಚ್ಚಿನ ಅಭ್ಯರ್ಥಿಗಳನ್ನು ಪಡೆಯಬೇಕೆಂದು ಹೇಳಿಕೆ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯುವುದಾಗಿ ಈಗಾಗಲೇ ನಿರ್ಧಾರವಾಗಿದೆ. ಸಮಯ ಬಂದಾಗ ಸ್ಥಾನ ಹಂಚಿಕೆಯ ಬಗ್ಗೆ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸದ್ಯ ಯಾವುದೇ ತೊಂದರೆ ಇಲ್ಲವೆಂದು ಟ್ವೀಟ್ ಮೂಲಕ ಪ್ರಶಾಂತ್ಗೆ ಟಾಂಗ್ ನೀಡಿದ್ದರು. ಟ್ವೀಟ್ ಸಮರ ಮುಂದುವರಿದಿದ್ದು ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ. (ಏಜೆನ್ಸೀಸ್)