ಬೆಂಗಳೂರು: ಇಲ್ಲಿನ ಜನಪ್ರತಿನಿಧಿ (MLA ಮುನಿರತ್ನ) ವರ್ತನೆ ನೋಡಿದರೆ, ನೀವು ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಎನಿಸುತ್ತಿದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್, MLA ಮುನಿರತ್ನಂ ವಿರುದ್ಧ ವಾಗ್ದಾಳಿ ನಡೆಸಿದರು.
ಮತ್ತಿಕೆರೆಯ ಜೆ.ಪಿ. ಪಾರ್ಕ್ ನಲ್ಲಿ ಶನಿವಾರ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರ ಸಂವಾದ ವೇಳೆ ಶಿವಕುಮಾರ್ ಅವರು ಮಾತನಾಡಿದರು. "ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ತಾಳ್ಮೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ್ಮ ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ನನಗೆ ಚನ್ನಾಗಿ ಗೊತ್ತಿದೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ" ಎಂದು ಹೇಳಿದರು.
ಇದನ್ನೂ ಓದಿ:Operation Blue Star ತಪ್ಪು ವಿಧಾನ, ಈ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣವನ್ನೇ ಪಣಕ್ಕಿಟ್ಟರು: ಪಿ.ಚಿದಂಬರಂ
"ಇಂತಹ ಪ್ರತಿನಿಧಿಯನ್ನು (ಮುನಿರತ್ನ) ಇಟ್ಟುಕೊಳ್ಳುವುದೋ, ಬೇಡವೋ ಎಂಬುದನ್ನು ಜನ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಜನಪ್ರತಿನಿಧಿಗಳಿಗೆ ಏನು ಗೌರವ ನೀಡಬೇಕು ಎನ್ನುವ ಅರಿವು ನನಗಿದೆ. ರಾಜಕಾರಣದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ ಯಾವುದೂ ಶಾಶ್ವತವಲ್ಲ" ಎಂದರು.(ಏಜೆನ್ಸೀಸ್)