ಬೆಂಗಳೂರು: ಹೊರಗುತ್ತಿಗೆಯಲ್ಲೂ ಮೀಸಲಾತಿ ಕೇಳುವುದರಲ್ಲಿ ತಪ್ಪೇನಿದೆ. ದಲಿತ ಸಂಘಟನೆ, ಮುಖಂಡರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ. ಸರ್ಕಾರದ ದುಡ್ಡು ಅಂದಮೇಲೆ ಕೊಡಬೇಕು. ಕೊಟ್ಟರೆ ತಪ್ಪೇನು?(What is wrong with reservation in outsourcing?) ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarakiholi) ಹೇಳಿದರು.
ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರುವಂಹತದ್ದು ಏನೂ ಇಲ್ಲ. ಸಿಂಪಲ್ ವಿಚಾರ. ಮೀಸಲಾತಿ ಕೊಟ್ಟರೆ ಆಯಿತು ಎಂದು ಹೇಳಿದರು.
ಗ್ಯಾರಂಟಿಗಳಿಗೆ ಎಸ್‌ಸಿಪಿ/ಟಿಎಸ್‌ಪಿ ಹಣ ಬಳಕೆ ಕುರಿತು ಸಿಎಂ ಉತ್ತರ ಕೊಡುತ್ತಾರೆ. ಈ ಹಣ ಗ್ಯಾರಂಟಿಗಳಿಗೆ ಕೊಡುವ ಬಗ್ಗೆ ವಿರೋಧ ಇದ್ದೇ ಇರುತ್ತದೆ. ಈ ಬಗ್ಗೆ ನಾವು ಸಭೆ ಮಾಡಿದ್ದೇವೆ. ಪರಿಶಿಷ್ಟರ ಹಣ ಅವರಿಗೆ ಸೇರಬೇಕಲ್ಲೆ ಎಂದು ಪ್ರಶ್ನಿಸಿದರು.
ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಈ ಬಗ್ಗೆ ಈಗಾಗಲೇ ಉತ್ತರ ಕೊಟ್ಟಿದ್ದಾರೆ. 12 ಸಾವಿರ ಕೋಟಿ ರೂ. ಬಳಕೆಯಾಗಿದೆ ಎಂದು ಹೇಳಿದ್ದಾರೆ. ಹಿಂದೆ ಬಿಜೆಪಿಯವರೂ ಬಳಸಿದ್ದರು ಎಂದರು.
ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ನಮ್ಮ ಪಕ್ಷದ ನಿಲುವಿನ ಪ್ರಕಾರ ರಾಜ್ಯದಲ್ಲಿ ಕಡಿಮೆ ಆಗಬಹುದು ಎಂಬ ಆತಂಕ ಇದೆ. ಬಿಜೆಪಿಯವರು ಕಡಿಮೆ ಆಗುವುದಿಲ್ಲ ಎನ್ನುತ್ತಿದ್ದಾರೆ. ಏನು ತೀರ್ಮಾನ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ನಮ್ಮ ಸೀಟು ಎಷ್ಟಿವೆ ಅಷ್ಟು ಉಳಿಯಬೇಕು. ಉತ್ತರ ಭಾರತಲ್ಲಿ ಹೆಚ್ಚಾಗಬಹುದು. ಹಾಗೇನಾದರೂ ಆದರೆ ನಮಗೆ ನಷ್ಟ ಆಗಬಹುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.