ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಡಿ.ಕೆ ಶಿವಕುಮಾರ್‌ಗೆ ಮಾತ್ರ ನೀಡಿರುವ ಉಪ ಮುಖ್ಯಮಂತ್ರಿ ಹುದ್ದೆಯನ್ನು ಇನ್ನಷ್ಟು ಮಂದಿಗೆ ನೀಡುವ ಚರ್ಚೆ ಜೋರಾಗಿ ಸಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸಚಿವರು, ಶಾಸಕರು ಈ ಬಗ್ಗೆ ಬಹಿರಂಗ ಅಭಿಪ್ರಾಯ ನೀಡುತ್ತಲೇ ಬಂದಿದ್ದಾರೆ.
ಗುರುವಾರ ಕೈಗಾರಿಕೆ ಸಚಿವ ಹಾಗೂ ಎಂ.ಬಿ ಪಾಟೀಲ್ ಅವರು ಮಾತನಾಡಿದ್ದು, ಆರಂಭದಲ್ಲಿ ವಿಷಯ ಎತ್ತಿದ್ದ ರಾಜಣ್ಣ ಪರವಾಗಿ ದನಿ ಗೂಡಿಸಿದ್ದಾರೆ.
ಡಿಸಿಎಂ ವಿಚಾರದಲ್ಲಿ ರಾಜಣ್ಣ ಹೇಳೋದರಲ್ಲಿ ತಪ್ಪಿಲ್ಲ. ಅವರು ಲೋಕಸಭಾ ಚುನಾವಣೆ ದೃಷ್ಟಿಯಿಂದ ಹೇಳಿದ್ದಾರೆ. ಪಕ್ಷ ಇನ್ನಷ್ಟು ಸದೃಢವಾಗಬೇಕು. ನಿರ್ದಿಷ್ಟ ಸಮುದಾಯಗಳನ್ನ ಸೆಳೆಯಬೇಕು ಎಂಬ ದೃಷ್ಟಿಯಿಂದ ಹೇಳಿದ್ದಾರೆ. ಒಂದು ಸಂದೇಶ ಹೋಗಲಿ ಎಂದು ಅವರು ಹೇಳಿದ್ದಾರೆ ಎಂದು ಪರಮೇಶ್ವರ್ ಮಾಧ್ಯಮಗಳಿಗೆ ತಿಳಿಸಿದರು.
ರಾಜಣ್ಣ ತಪ್ಪು ಮಾಡಿದರು, ತಪ್ಪು ಹೇಳಿದರು ಅನ್ನುವುದು ಸರಿಯಲ್ಲ. ರಾಜಣ್ಣ ವೈಯುಕ್ತಿಕವಾಗಿ ಹೇಳಿಕೆ ಕೊಟ್ಟಿದ್ದಾರೆ. ನಾನು ವೈಯುಕ್ತಿಕ ಹೇಳಿಕೆ ಕೊಡುತ್ತೇನೆ. ಆದರೆ ಅವರು ಯಾವ ಅರ್ಥದಲ್ಲಿ ಕೊಟ್ಟಿದ್ದಾರೆ ಅನ್ನೋದು ಮುಖ್ಯ. ಅಂತಿಮವಾಗಿ ಸಂಪೂರ್ಣವಾಗಿ ಎಲ್ಲವನ್ನೂ ಹೈಕಮಾಂಡ್‌ಗೆ ತೀರ್ಮಾನಿಸುತ್ತದೆ ಎಂದು ಹೇಳಿದರು.
ಎಂ.ಬಿ ಪಾಟೀಲ್ ಮಾತನಾಡಿ, ಡಿಸಿಎಂ ಹುದ್ದೆಗಳನ್ನ ಹೈಕಮಾಂಡ್ ತೀರ್ಮಾನ ಮಾಡಬೇಕು. ನಮ್ಮ ಹಂತದಲ್ಲಿ ಯಾವುದೂ ಇಲ್ಲ. ಹೈಕಮಾಂಡ್ ಮೂರು ಡಿಸಿಎಂ ಮಾಡಬಹುದು, ನಾಲ್ಕೂ ಮಾಡಬಹುದು. ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡುತ್ತೇವೆ ಎಂದರು.
ಸಚಿವ ರಾಜಣ್ಣ ಅವರದ್ದು ವೈಯಕ್ತಿಕ ಹೇಳಿಕೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಹೇಳಬಹುದು. ಇದನ್ನ ತಪ್ಪು ಅಂತಾ ಹೇಳಲು ಆಗುತ್ತಾ ? ಎಂದು ಪ್ರಶ್ನಿಸಿದರು.
ಎಲ್ಲಾ ಸಮುದಾಯಗಳೂ ನಮ್ಮ ಜತೆಯಲ್ಲಿ ನಿಂತಿವೆ. ಜನರು 135 ಸ್ಥಾನ ದೊಡ್ಡ ಬಹುಮತ ಕೊಟ್ಟಿದ್ದಾರೆ. ಡಿಸಿಎಂ ವಿಚಾರ ನನ್ನ ಕಡೆ ಇಲ್ಲ, ಹೈಕಮಾಂಡ್ ಏನೇ ಹೇಳಿದರೂ ಒಪ್ಪಲೇಬೇಕು.
ದಲಿತ ಸಿಎಂ, ಡಿಸಿಎಂ ಬಗ್ಗೆ ಮಾತಾಡಿದ್ರೆ ತಪ್ಪೇನಿದೆ. ಅವರ ಅಭಿಪ್ರಾಯದ ಬಗ್ಗೆ ಪತ್ರ ಬರೆಯುತ್ತಾರೆ, ತಪ್ಪೇನಿದೆ. ಅನೇಕ ಸಮುದಾಯಗಳಿಗೆ ಸ್ಥಾನಮಾನ ಸಿಕ್ಕಿಲ್ಲ. ಲಂಬಾಣಿ ಸಮುದಾಯಕ್ಕೆ ಸಚಿವಸ್ಥಾನ ಕೊಡೋಕೆ ಆಗಿಲ್ಲ ಎಂದು ಹೇಳಿದರು.