ಬೆಂಗಳೂರು: ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕೆಲ ಹಾಲಿ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಅಲ್ಲದೆ ರೇಣುಕಾಚಾರ್ಯ ನಡೆ ಭಾರೀ ಕುತೂಹಲ ಮೂಡಿಸಿದೆ.
ರೇಣುಕಾಚಾರ್ಯ ಭೇಟಿ ವಿಚಾರವಾಗಿ ಡಿಕೆಶಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಅವರದೇ ಆದ ವಿಚಾರ, ಜನ ಹಾಗೂ ಕ್ಷೇತ್ರದ ಸಮಸ್ಯೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತಮಾಡಲು ಬರುತ್ತಾರೆ. ಅಧಿಕಾರದಲ್ಲಿ ಇದ್ದಾಗ ಅವರು ಬಂದು ನಮ್ಮನ್ನು ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಅದರಲ್ಲಿ ತಪ್ಪೇನಿದೆ? ಎಂದು ಹೇಳಿದ್ದಾರೆ.
ಸೋಮಶೇಖರ್ ಅವರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಅದಕ್ಕಾಗಿ ಅಲ್ಲಿಗೆ ಹೋಗುತ್ತಿದ್ದೇನೆ. ಜನಪ್ರತಿನಿಧಿಗಳಿಗೆ ನಾವು ಗೌರವ ಸಲ್ಲಿಸುತ್ತೇವೆ. ಹಾಲಿ ಶಾಸಕರಲ್ಲದಿದ್ದರೂ ಅವರ ಸಮಸ್ಯೆಗಳಿರುತ್ತವೆ. ಅವುಗಳನ್ನು ನಾನು ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ. ನಮಗೆ ಆಪರೇಷನ್ ಹಸ್ತ ಮಾಡುವ ಅಗತ್ಯವಿಲ್ಲ. ರಾಜಕೀಯವಾಗಿ ಅನೇಕ ಆಸೆ ಆಕಾಂಕ್ಷೆಗಳಿರುತ್ತವೆ. ಅವರು ಎಷ್ಟು ದಿನ ಎಂದು ಕಾಯುತ್ತಾರೆ. ನಾವು ನಮ್ಮ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸ್ಥಳೀಯ ಮಟ್ಟದಲ್ಲಿ ಬೇರೆ ಪಕ್ಷದವರನ್ನು ಸೇರಿಸಿಕೊಳ್ಳಲು ಸೂಚಿಸಿದ್ದೇವೆ ಅಷ್ಟೆ.
ನಮ್ಮ ಗ್ಯಾರಂಟಿ ಯೋಜನೆಗಳು ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗಲ್ಲ. ಎಲ್ಲಾ ಪಕ್ಷದವರಿಗೂ ಸಲ್ಲುತ್ತದೆ. ಉಡುಪಿಯಲ್ಲಿ ನಮ್ಮ ಯಾವುದೇ ಶಾಸಕರು ಇಲ್ಲ. ಆದರೂ ಶೇ.80 ರಷ್ಟು ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ನಮ್ಮ ಯೋಜನೆ ಪಕ್ಷಾತೀತವಾಗಿ ಸಿಗಲಿದೆ. ಹೀಗಾಗಿ ಬೇರೆ ಪಕ್ಷದ ಶಾಸಕರು ನಮ್ಮ ಸರ್ಕಾರ ಈ ಕೆಲಸ ಮಾಡಲಿಲ್ಲ. ನಿಮ್ಮ ಸರ್ಕಾರ ಮಾಡಿದೆ ಎಂದು ಶುಭಹಾರೈಸುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ” ಎಂದು ಉತ್ತರಿಸಿದರು.