ನ್ಯೂಸ್

ಮೋದಿ ಸಂಪುಟದಲ್ಲಿ ರಾಜ್ಯಕ್ಕೆಷ್ಟು ಪಾಲು?

ಎಚ್​ಡಿಕೆಗೆ ಫಿಕ್ಸ್ | ಬಿಜೆಪಿಯಿಂದ ಯಾರಿಗೆ ಲಕ್ | ಡಾ. ಮಂಜುನಾಥ್​ಗೂ ಸಿಗುತ್ತಾ ಚಾನ್ಸ್

| ರಾಘವ ಶರ್ಮ ನಿಡ್ಲೆ ನವದೆಹಲಿ ನರೇಂದ್ರ ಮೋದಿ ಸತತ 3ನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಎಲ್ಲಾ ತಯಾರಿಗಳು ನಡೆಯುತ್ತಿರುವ ಮಧ್ಯೆ ಕರ್ನಾಟಕದಿಂದ ಕೇಂದ್ರ ಮಂತ್ರಿ ಸ್ಥಾನದ ಭಾಗ್ಯ ಯಾರಿಗೆ ಒಲಿಯಲಿದೆ ಎಂಬ ಚರ್ಚೆಗಳು ಶುರುವಾಗಿವೆ.

ಮಿತ್ರಪಕ್ಷ ಜೆಡಿಎಸ್​ನಿಂದ ಸಂಸದರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರ ಕ್ಯಾಬಿನೆಟ್ ಹುದ್ದೆ ಬಹುತೇಕ ಖಚಿತಗೊಂಡಿದೆ. ಭಾನುವಾರ ಅವರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ವರಿಷ್ಠರು ರಾಜ್ಯ ಬಿಜೆಪಿಯಿಂದ ಯಾರನ್ನು ಆಯ್ಕೆ ಮಾಡಬಹುದು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ.

ಬಿಜೆಪಿಯ ಇಬ್ಬರು ಸಂಸದರಿಗೆ ಮಂತ್ರಿ ಸ್ಥಾನ ನೀಡಿದಲ್ಲಿ, ರಾಜ್ಯದ ಮೂವರಿಗೆ ಸಚಿವ ಸ್ಥಾನ ಸಿಕ್ಕಂತಾಗಲಿದೆ. ಈಗಿನ ಸನ್ನಿವೇಶದಲ್ಲಿ ಮೂರಕ್ಕಿಂತ ಹೆಚ್ಚು ಸಚಿವ ಸ್ಥಾನ ರಾಜ್ಯಕ್ಕೆ ಸಿಗುವುದು ಕಷ್ಟ. ಜೆಡಿಎಸ್ ಮತ್ತು ಬಿಜೆಪಿಗೆ ತಲಾ ಒಂದು ಸ್ಥಾನಕ್ಕೆ ಸೀಮಿತಗೊಂಡರೂ ಅಚ್ಚರಿ ಇಲ್ಲ ಎಂದು ಪಕ್ಷದ ಹಿರಿಯ ಸಂಸದರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಆಯ್ಕೆಯಾಗಿರುವ, ತಮ್ಮ ಸಂಬಂಧಿ ಡಾ. ಸಿ.ಎನ್. ಮಂಜುನಾಥ ಅವರಿಗೂ ಮಂತ್ರಿ ಸ್ಥಾನ ನೀಡಬೇಕು ಎಂದು ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಿರಿಯ ಬಿಜೆಪಿ ಮುಖಂಡರೊಬ್ಬರೊಂದಿಗೆ ಮಾತನಾಡಿರುವ ಗೃಹ ಸಚಿವ ಅಮಿತ್ ಷಾ, ಈ ಬಗ್ಗೆ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಸಂಸದ ಪ್ರಲ್ಹಾದ್ ಜೋಶಿ ಅವರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂದು ಬಿಜೆಪಿಯ ಬಹುತೇಕ ಸಂಸದರು ಹೇಳುತ್ತಿದ್ದಾರೆ.

ಜಾತಿವಾರು ಲೆಕ್ಕಾಚಾರ ಏನು? : ಜಾತಿವಾರು ಲೆಕ್ಕಾಚಾರಗಳ ಪ್ರಕಾರ, ಒಕ್ಕಲಿಗ, ಲಿಂಗಾಯತ, ಒಬಿಸಿ, ದಲಿತ, ಬ್ರಾಹ್ಮಣ ಸಮುದಾಯಗಳಿಗೆ ಆದ್ಯತೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ಈ ಎಲ್ಲಾ ಜಾತಿಯ ಸಂಸದರಿಗೆ ಮಂತ್ರಿ ಸ್ಥಾನ ಸಿಗುವುದು ಅನುಮಾನ. ಕೇವಲ 3 ಮಂದಿಗೆ ಮಂತ್ರಿ ಸ್ಥಾನ ಎಂದು ನಿರ್ಧಾರವಾದರೆ ಒಕ್ಕಲಿಗ, ಲಿಂಗಾಯತ, ದಲಿತ, ಒಬಿಸಿ ಮತ್ತು ಬ್ರಾಹ್ಮಣ ಸಮುದಾಯದ ಸಂಸದರಲ್ಲಿ ಯಾರನ್ನು ಪರಿಗಣಿಸಬಹುದು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ದಲಿತ ಸಮುದಾಯ ಪ್ರತಿನಿಧಿಸುವ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೆಸರೂ ಚರ್ಚೆಯಲ್ಲಿದೆ. ಇಬ್ಬರು ಮೇಲ್ವರ್ಗದ ಸಂಸದರಿಗೆ, ಮತ್ತೊಂದು ಸ್ಥಾನವನ್ನು ದಲಿತ ಅಥವಾ ಒಬಿಸಿಗೆ ನೀಡಬೇಕಾಗುತ್ತದೆ. ಇಲ್ಲದಿದ್ದರೆ ತಪ್ಪು ಸಂದೇಶ ರವಾನೆಯಾದೀತು ಎಂದು ಬಿಜೆಪಿಯ ಮತ್ತೋರ್ವ ಹಿರಿಯ ಸಂಸದ ವಿಜಯವಾಣಿ ಜತೆ ಅನಿಸಿಕೆ ಹಂಚಿಕೊಂಡಿದ್ದಾರೆ.

ಹಿರಿತನ ಅಥವಾ ಮೆರಿಟ್? : ಲಿಂಗಾಯತ ಸಮುದಾಯದವರಾದ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಮತ್ತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದರೂ, ಸಂಸದರಾಗಿ ಹಿರಿತನದ ಆಧಾರದಲ್ಲಿ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ್ ಮತ್ತು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮುಂಚೂಣಿಯಲ್ಲಿದ್ದಾರೆ. ಆದರೆ, ಹೈಕಮಾಂಡ್ ಹಿರಿತನ ಪರಿಗಣಿಸುತ್ತದೋ ಅಥವಾ ಮೆರಿಟ್ ಆಧಾರದಲ್ಲಿ ಮಂತ್ರಿ ಸ್ಥಾನ ನೀಡುತ್ತದೋ ಎನ್ನುವುದು ಯಾರಿಗೂ ಗೊತ್ತಿಲ್ಲ.

ಮಿತ್ರಪಕ್ಷಗಳ ಒಲೈಕೆ ಅನಿವಾರ್ಯ : ಹೊಸ ಸರ್ಕಾರದಲ್ಲಿ ಮಿತ್ರಪಕ್ಷಗಳನ್ನು ತೃಪ್ತಿಪಡಿಸುವ ಅನಿವಾರ್ಯತೆ ಇದೆ. ಹೀಗಾಗಿ, ಸದ್ಯದಲ್ಲಿ ಚುನಾವಣೆ ಇಲ್ಲದ ರಾಜ್ಯಗಳಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಆದ್ಯತೆ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಲೆಕ್ಕಾಚಾರದ ಪ್ರಕಾರ ಕರ್ನಾಟಕಕ್ಕೆ ಸದ್ಯ 2 ಸಚಿವ ಸ್ಥಾನ ನೀಡಿ, ಸಂಪುಟ ವಿಸ್ತರಣೆ ವೇಳೆ ಮತ್ತಿಬ್ಬರಿಗೆ ಅವಕಾಶ ನೀಡಬಹುದು ಎಂದೂ ಹೇಳಲಾಗುತ್ತಿದೆ. ಮುಂದಿನ ಕೆಲ ತಿಂಗಳಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿಯಲ್ಲಿ ವಿಧಾನಸಭೆ ಚುನಾವಣೆಗಳಿರುವುದರಿಂದ ಆ ರಾಜ್ಯಗಳಿಗೆ ಆದ್ಯತೆ ಸಿಗಬಹುದು. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಬಿಜೆಪಿಗೆ ನಿರೀಕ್ಷಿತ ಫಲಿತಾಂಶವೂ ಬಂದಿಲ್ಲ. ಹೀಗಾಗಿ, ಈ ವಿಷಯದಲ್ಲಿ ಹೈಕಮಾಂಡ್​ಗೆ ಅಳೆದು ತೂಗಿ ತೀರ್ಮಾನ ಮಾಡಬೇಕಾದ ಸ್ಥಿತಿ ಇದೆ.

ಶೋಭಾ ಬದಲು ಸುಧಾಕರ್​ಗೆ ಅವಕಾಶ? : ಕರ್ನಾಟಕದಿಂದ ಆಯ್ಕೆಯಾಗಿರುವ ಬಿಜೆಪಿಯ ಏಕೈಕ ಮಹಿಳಾ ಸಂಸದೆ ಶೋಭಾ ಕರಂದ್ಲಾಜೆ ಕಳೆದ ಸರ್ಕಾರದಲ್ಲಿ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವರಾಗಿದ್ದರು. ಈ ಬಾರಿ ಅವರ ಬದಲು ಬಿಜೆಪಿ ನೆಲೆಯಿಲ್ಲದ ಕೋಲಾರ-ಚಿಕ್ಕಬಳ್ಳಾಪುರದಲ್ಲಿ ಪಕ್ಷ ಕಟ್ಟಿರುವ ಡಾ. ಕೆ. ಸುಧಾಕರ್​ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ. ಒಕ್ಕಲಿಗ ಸಮುದಾಯವನ್ನೇ ಸುಧಾಕರ್ ಕೂಡ ಪ್ರತಿನಿಧಿಸುತ್ತಿರುವುದು ಹಾಗೂ ಈ ಬಾರಿಯ ಚುನಾವಣೆಯಲ್ಲಿ ಅತ್ಯುತ್ತಮ ಸ್ವರ್ಧೆಯೊಡ್ಡಿರುವುದು ವರಿಷ್ಠರ ಗಮನ ಸೆಳೆದಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ರಚನೆಗೆ ಹಕ್ಕು ಮಂಡನೆ: ಎನ್​ಡಿಎ ಸರ್ಕಾರ ರಚನೆ ಪ್ರಕ್ರಿಯೆ ಚುರುಕುಗೊಂಡಿದ್ದು, ಶಾಸಕಾಂಗ ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಸತತ ಮೂರನೇ ಬಾರಿ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಎನ್​ಡಿಎ ಸಭೆಯಲ್ಲಿ ಮೋದಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಭೆಯ ನಂತರ ರಾಷ್ಟ್ರಪತಿ ಭವನಕ್ಕೆ ತೆರಳಿ, ಸರ್ಕಾರಕ್ಕೆ ಬೆಂಬಲ ಸೂಚಿಸಿದ ಮಿತ್ರಪಕ್ಷಗಳ ಪಟ್ಟಿಯನ್ನು ರಾಷ್ಟ್ರಪತಿ ದ್ರೌಪದಿ ಮುಮು ಅವರಿಗೆ ಸಲ್ಲಿಸುವ ಮೂಲಕ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ರಾಷ್ಟ್ರಪತಿಗಳು ಸರ್ಕಾರ ರಚನೆಗೆ ಆಹ್ವಾನ ನೀಡಿದರು. ನರೇಂದ್ರ ಮೋದಿ ಭಾನುವಾರ ಸಂಜೆ 7.15ಕ್ಕೆ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅಭಿವೃದ್ಧಿಯ ಹೊಸ ಅಧ್ಯಾಯ: ಎನ್​ಡಿಎ ಮೈತ್ರಿಕೂಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೂರನೇ ಅವಧಿಯಲ್ಲಿ ಸರ್ಕಾರ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ಮುನ್ನೋಟ ಹಂಚಿಕೊಂಡರು. ರಾಷ್ಟ್ರ ಮೊದಲು ಎಂಬ ತತ್ತ್ವಕ್ಕೆ ಎನ್​ಡಿಎ ಬದ್ಧವಾಗಿದೆ. ಸರ್ಕಾರವು ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಿದೆ. ಭಾರತದ ಇತಿಹಾಸದಲ್ಲೇ ಎನ್​ಡಿಎ ಅತ್ಯಂತ ಯಶಸ್ವಿ ಮೈತ್ರಿಕೂಟವಾಗಿದೆ ಎಂದರು.

ಮೋದಿ ಹೇಳಿದ್ದೇನು?

1. ನಾವು ಸೋತಿಲ್ಲ, ಅದ್ಭುತ ವಿಜಯ ಸಾಧಿಸಿದ್ದೇವೆ. ನಮಗೆ ಗೆಲುವು ಮತ್ತು ಸೋಲು ಎರಡನ್ನೂ ಜೀರ್ಣಿಸಿಕೊಳ್ಳುವುದು ಗೊತ್ತು.

2. ಸರ್ಕಾರ ರಚಿಸಲು ಬಹುಮತ ಬೇಕು. ಆದರೆ, ದೇಶ ಮುನ್ನಡೆಸಲು ಏಕತೆ ಬೇಕು.

3. ಕಳೆದ ಮೂರು ಲೋಕಸಭಾ ಚುನಾವಣೆಗಳನ್ನು ಸೇರಿಸಿಯೂ ಕಾಂಗ್ರೆಸ್ ಪಕ್ಷವು ಬಿಜೆಪಿ ಈ ಚುನಾವಣೆಯಲ್ಲಿ ತೆಗೆದುಕೊಂಡಿರುವಷ್ಟು ಸ್ಥಾನಗಳನ್ನು ಪಡೆದುಕೊಂಡಿಲ್ಲ.

4. ರಾಜಕೀಯ ಲಾಭಕ್ಕೆ ಪ್ರತಿಪಕ್ಷಗಳು ಪ್ರಜಾತಂತ್ರದ ಮೌಲ್ಯಗಳನ್ನು ದುರ್ಬಲಗೊಳಿಸುತ್ತಿದ್ದಾರೆ.