ನ್ಯೂಸ್

ಶ್ವಾಸರೋಗದ ಮೂಲಕಾರಣ ಯಾವುದು?

ಜಗತ್ತಿನಲ್ಲಿ ಪ್ರತಿವರ್ಷ ಸುಮಾರು ಹನ್ನೆರಡು ಲಕ್ಷದಷ್ಟು ಜನರ ಜೀವ ತೆಗೆಯುವ ಕ್ಷಯರೋಗವು ಅಂಟುಜಾಡ್ಯ. ಅದಕ್ಕಾಗಿಯೇ ಕ್ಷಯರೋಗ ಚಿಕಿತ್ಸಾ ಆಸ್ಪತ್ರೆಯನ್ನು ಜನರ ಪ್ರತಿನಿತ್ಯದ ಓಡಾಟದ ಸ್ಥಳವನ್ನು ತಪ್ಪಿಸಿ ದೂರ ಪ್ರದೇಶದಲ್ಲಿ ನಿರ್ವಿುಸುತ್ತಿದ್ದರು. ಕಾಲಕ್ರಮೇಣ ಅದು ನಗರದ ಮಧ್ಯಭಾಗವೇ ಆಗಿಬಿಡುವುದು ನಗರಾಭಿವೃದ್ಧಿಯಿಂದ ಎದುರಾಗುವ ಕಂಟಕ. ಅಲ್ಲಿ ಅನೇಕ ವೈದ್ಯರು, ದಾದಿಯರು, ಸಹಾಯಕರು ದಿನವಿಡೀ ಕೆಲಸ ಮಾಡುತ್ತಿರುತ್ತಾರೆ.

ಅವರ್ಯಾರಿಗೂ ಕ್ಷಯರೋಗ ಅಂಟಿಕೊಳ್ಳುವುದಿಲ್ಲ! ರೈಲಿನಲ್ಲಿ ಎರಡು ದಿನಗಳ ದೂರಪ್ರಯಾಣ ಮಾಡುವಾಗ ಪಕ್ಕದಲ್ಲಿ ಕುಳಿತ ಪ್ರಯಾಣಿಕ ಬಹಳ ತೀವ್ರವಾಗಿ ಕೆಮ್ಮುತ್ತಿರುತ್ತಾನೆ. ಅವನಿಗೆ ಕ್ಷಯರೋಗ ಇದೆಯೆಂದು ನಮಗೆ ತಿಳಿದಿಲ್ಲ, ಅವನಿಗೂ ತಿಳಿದಿಲ್ಲ ಎಂದಿಟ್ಟುಕೊಳ್ಳಿ. ಎರಡು ದಿನಗಳ ನಿರಂತರ ಅತಿಸನಿಹದ ಸಂಪರ್ಕವಿದ್ದರೂ ನಮಗೆ ಆ ಕ್ಷಯರೋಗ ಹರಡುವುದಿಲ್ಲ! ನಮ್ಮ ಉಸಿರಾಟದ ಅಂಗಾಂಗಗಳು ಹೆಚ್ಚು ಬಲಶಾಲಿಯಾಗಿದ್ದರೆ ರೋಗ ಅದೆಷ್ಟೇ ಪ್ರಬಲವಾಗಿದ್ದರೂ ನಮ್ಮನ್ನು ಬಾಧಿಸುವುದಿಲ್ಲ. ಇಲ್ಲಿ ರೋಗಕಾರಕ ಸೂಕ್ಷ್ಮಕ್ರಿಮಿಗಳು ದೇಹದ ಬಳಿಯೇ ಕುಳಿತಿದ್ದರೂ ನಮಗೆ ರೋಗವು ಬರದಿರಲು ರೋಗ ನಿರೋಧಕ ಶಕ್ತಿಯೇ ಮೂಲಕಾರಣ ಎಂಬುದು ಸ್ಪಟಿಕಸ್ಪಷ್ಟ.

ಒಂದು ಕಾರ್ಖಾನೆಯಲ್ಲಿ ಸಾವಿರಾರು ಕೆಲಸಗಾರರಿರುತ್ತಾರೆ. ಅಲ್ಲಿ ಧೂಳು ಅಥವಾ ಹೊಗೆ ಹೊರಹೊಮ್ಮುವುದು ಸಹಜ. ಆ ಸಾವಿರ ಉದ್ಯೋಗಿಗಳಲ್ಲಿ ಐವತ್ತು ಮಂದಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದಿಟ್ಟುಕೊಳ್ಳೋಣ. ಆ ಐವತ್ತು ಜನರು ಕಾರ್ಖಾನೆಯಿಂದ ಹೊರಗೆ ಕಾಲಿಟ್ಟರೆ ಅವರಿಗೆ ಉಸಿರಾಟದ ಸಮಸ್ಯೆಯೇ ಇರುವುದಿಲ್ಲ! ಮನೆಯಲ್ಲಿ ಯಾವುದೇ ತೊಂದರೆಗಳಿಲ್ಲದೆ ಜೀವನ ನಡೆಸುತ್ತಿರುತ್ತಾರೆ.

ವೈದ್ಯರ ಬಳಿ ಹೋದರೆ ಕಾರ್ಖಾನೆಯಲ್ಲಿರುವ ಧೂಳು ಅಥವಾ ಹೊಗೆಯಿಂದಾಗಿ ಹೀಗಾಗುತ್ತಿದೆ ಎನ್ನುತ್ತಾರೆ. ಅವುಗಳ ಅಲರ್ಜಿಯೇ ಇದಕ್ಕೆ ಕಾರಣ ಎನ್ನುತ್ತಾರೆ. ನಮಗೂ ಹಾಗೇ ಅನಿಸುತ್ತದೆ. ಯಾಕೆಂದರೆ ಬೇರೆಡೆಯಿದ್ದಾಗ ಈ ಸಮಸ್ಯೆಯೇ ಇರುವುದಿಲ್ಲವಲ್ಲ. ಅಲರ್ಜಿ ಪರೀಕ್ಷೆಯನ್ನು ಮಾಡಿ ಯಾವುದು ಅಲರ್ಜಿಕಾರಕ ಎಂದು ಪತ್ತೆ ಹಚ್ಚಿದರೆ ಅದೂ ಇದನ್ನೇ ದೃಢಪಡಿಸುತ್ತದೆ. ಆದರೆ ಆಯುರ್ವೆದದ ದೃಷ್ಟಿಕೋನ ಹೇಳುವುದೇ ಬೇರೆ! ಇಲ್ಲಿ ಧೂಳು ಅಥವಾ ಹೊಗೆ ಮೂಲಕಾರಣವಲ್ಲ! ಒಂದುವೇಳೆ ಅದುವೇ ಮೂಲಕಾರಣವಾಗಿದ್ದರೆ ಆ ಕಾರ್ಖಾನೆಯಲ್ಲಿ ಜೊತೆಯಲ್ಲೇ ಕೆಲಸಮಾಡುವ ಉಳಿದ 950 ಜನರಿಗೂ ಉಸಿರಾಟದ ಸಮಸ್ಯೆ ಆಗಬೇಕಿತ್ತು. ಅಲ್ಲಿನ ಎಲ್ಲ ಉದ್ಯೋಗಿಗಳು ಅಕಸ್ಮಾತ್ತಾಗಿ ವಿಷವನ್ನು ಸೇವಿಸಿದರೆ ಬಹುತೇಕ ಎಲ್ಲರೂ ಸಾಯುತ್ತಾರೆ. ವಿಷವು ಎಲ್ಲರನ್ನೂ ತಟ್ಟುವುದರಿಂದ ಅಲ್ಲಿ ವಿಷವೇ ಸಾವಿಗೆ ನೇರಕಾರಣವಾಗುತ್ತದೆ.

ಹಾಗಿದ್ದಾಗ ಐವತ್ತು ಮಂದಿಗೆ ಕಾರ್ಖಾನೆಯಲ್ಲಿದ್ದಾಗ ಮಾತ್ರ ಯಾಕೆ ಉಸಿರಾಟದ ತೊಂದರೆ ಉಂಟಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಇಲ್ಲಿ ಧೂಳು ಮತ್ತು ಹೊಗೆ ರೋಗವನ್ನು ಉಲ್ಬಣಿಸುವ, ರೋಗವನ್ನು ಪೋಷಿಸುವ ಕಾರಣಾಂಶಗಳು. ಪ್ರಾಣವಹ ಸ್ರೋತಸ್, ಶ್ವಾಸಕಾಂಗ ವ್ಯವಸ್ಥೆ ದೂಷಿತವಾಗಿ ಬಲಹೀನವಾಗಿರುವುದೇ ಮೂಲಕಾರಣ. ಉಳಿದ 950 ಜನರ ಶ್ವಾಸಕಾಂಗವ್ಯೂಹ ಸದೃಢವಾಗಿರುವುದೇ ಅವರು ಶ್ವಾಸರೋಗದಿಂದ ಬಳಲದೆ ಇರಲು ಮೂಲಕಾರಣ. ಅವರಲ್ಲಿರುವ ಬಲಿಷ್ಠ ಶ್ವಾಸಕೋಶದ ವ್ಯಾಧಿಕ್ಷಮತ್ವ ಅವರನ್ನೆಲ್ಲಾ ಕಾಪಾಡಿದೆ.

ದೇಹಕ್ಕೆ ಅಸಹಿಷ್ಣುವಾದುದನ್ನು ಅಲರ್ಜಿಕಾರಕಗಳು ಎನ್ನುತ್ತೇವೆ. ಹಾಗಿದ್ದರೆ ಯಾವುದೆಲ್ಲಾ ಅಲರ್ಜಿಕಾರಕಗಳು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇದರ ವ್ಯಾಖ್ಯಾನ ಬಹಳ ಕುತೂಹಲಕಾರಿಯಾ ಗಿದೆ. ಸೂರ್ಯನ ಕೆಳಗಿರುವ ಎಲ್ಲಾ ವಸ್ತುಗಳು, ಸೂರ್ಯನನ್ನು ಒಳಗೊಂಡು ಎಲ್ಲವೂ ಅಲರ್ಜಿಕಾರಕಗಳೇ! ಅಂದರೆ ವಿಶ್ವದಲ್ಲಿರುವ ಯಾವೊಂದು ವಿಷಯವೂ ನಮ್ಮ ಶರೀರಕ್ಕೆ ಒಗ್ಗದೆ ಅಸಹನೀಯ ವಾಗಿರಬಹುದು.

ಒಬ್ಬ ವ್ಯಕ್ತಿಗೆ ಈಗ ಹತ್ತು ವಸ್ತುಗಳಿಗೆ ಅಲರ್ಜಿ ಯಿದೆಯೆಂದರೆ ನಾಲ್ಕು ವರ್ಷಗಳ ಬಳಿಕ ಆ ಸಂಖ್ಯೆ ಹದಿನೈದು ತಲುಪಬಹುದು. ಇದು ನಮ್ಮ ದೇಹದ ಅವಯವಗಳ ವ್ಯಾಧಿಕ್ಷ ಮತ್ವಕ್ಕೆ ನೇರವಾಗಿ ಸಂಬಂಧಿಸಿದೆ. ರೋಗನಿರೋಧಕ ಶಕ್ತಿ ಕಡಿಮೆ ಯಾಗುತ್ತಾ ಹೋದಂತೆ ಅಲರ್ಜಿಕಾರಕಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ! ಈ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿದರೆ ಅಲರ್ಜಿಕಾರಕಗಳ ಸಂಖ್ಯೆ ಇಳಿಮುಖವಾಗುತ್ತದೆ! ನಿನ್ನೆ ಇದ್ದ ಅಲರ್ಜಿಕಾರಕ ಇಂದು ದೇಹದ ಮೇಲೆ ಏನೂ ಪರಿಣಾಮವನ್ನೇ ಬೀರುವುದಿಲ್ಲ, ಬೆಂಗಳೂರಿನ ಕಲುಷಿತ ವಾತಾವರಣಕ್ಕೆ ಶರೀರ ಒಗ್ಗುವುದಿಲ್ಲ, ಅಲರ್ಜಿ ಇದೆ ಎಂದುಕೊಂಡು ಬೆಂಗಳೂರನ್ನು ಬಿಟ್ಟು ಹೋಗುವುದು ಶಾಶ್ವತ ಪರಿಹಾರವಲ್ಲ.

ಮೂಲಕಾರಣವಾದ ತ್ರಾಣ ಕಳೆದುಕೊಂಡ ಪ್ರಾಣವಹ ಸ್ರೋತಸ್​ಗೆ ಶಕ್ತಿ ತುಂಬುವುದೇ ನಿಜವಾದ ಸೂಕ್ತ ಚಿಕಿತ್ಸೆ. ಇಂತಹ ರೋಗ ನಿರೋಧಕ ಶಕ್ತಿಯನ್ನು ವ್ಯಕ್ತಿಯಲ್ಲಿ ಹೆಚ್ಚಿಸಲು ಆಯುರ್ವೆದ ಆಪದ್ಬಾಂಧವನಂತೆ ಕಾರ್ಯ ನಿರ್ವಹಿಸು ತ್ತದೆ. ಇದುವೇ ಶ್ವಾಸರೋಗದಲ್ಲಿ ಆಯುರ್ವೆದದ ಯಶಸ್ವೀ ಚಿಕಿತ್ಸೆಯ ತಿರುಳು. ಅಲರ್ಜಿಯನ್ನು ಹತೋಟಿಯಲ್ಲಿಡಲು ನೀಡುವ ಚಿಕಿತ್ಸೆ ಯಿಂದ ಆಸ್ತಮಾದಂತಹ ಶ್ವಾಸರೋಗವನ್ನು ಗುಣಪಡಿಸಲು ಸಾಧ್ಯ ವಾಗುವುದಿಲ್ಲ. ಹೆಚ್ಚೆಂದರೆ ತಾತ್ಕಾಲಿಕ ನೆರವು ನೀಡಬಹುದು. ಉಸಿರಾಟದ ಸಮಸ್ಯೆಗಳ ಮೂಲಕಾರಣ ಪರಿಗಣನೆಯಲ್ಲಿನ ಈ ದೊಡ್ಡ ವ್ಯತ್ಯಾಸ ಚಿಕಿತ್ಸಾ ಸ್ವರೂಪವನ್ನೇ ಸಂಪೂರ್ಣವಾಗಿ ಬದಲಿಸಿ ರೋಗಿ ಗಳ ಪಾಲಿಗೆ ಶಾಶ್ವತ ಪರಿಹಾರದ ನೆಮ್ಮದಿಯನ್ನು ಒದಗಿಸಬಲ್ಲದು. (ಪ್ರತಿಕ್ರಿಯಿಸಿ: vvsudina@gmail.com)