ಟಾಕ್ಸಿಕ್ ಪೋಸ್ಟರ್ 
ನ್ಯೂಸ್

ಆಗಸ್ಟ್​ 26ಕ್ಕೆ ಟಾಕ್ಸಿಕ್​ ತೆರೆ ಮೇಲೆ ತರಲು ಕಾರಣವೇನು?

ಪ್ರಮುಖ ಮುಖ್ಯಾಂಶಗಳು

  • ಎರಡು ಬಾರಿ ರಿಲೀಸ್ ಡೇಟ್ ಮುಂದೂಡಿದ್ದ ಚಿತ್ರತಂಡ
  • ಕೊನೆಗೂ ಆ. 26ಕ್ಕೆ ತೆರೆ ಮೇಲೆ ಬರಲು ಸಿದ್ಧ
  • ಸಾಲು ಸಾಲು ಹಬ್ಬಗಳ ನಡುವೆ ಬರಲಿದೆ ಯಶ್ ಬಹುನಿರೀಕ್ಷಿತ ಚಿತ್ರ
ಬೆಂಗಳೂರು: ಎಲ್ಲವೂ ಅಂದುಕೊಂಡಂತಾಗಿದ್ದರೆ, ಇಷ್ಟೊತ್ತಿಗೆ ಯಶ್ ನಟನೆಯ ಪ್ಯಾನ್ ವರ್ಲ್ಡ್ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ರಿಲೀಸ್ ಆಗಿರಬೇಕಿತ್ತು. ಕೆಲ ಕಾರಣಗಳಿಂದಾಗಿ ಚಿತ್ರತಂಡ ಎರಡು ಬಾರಿ ರಿಲೀಸ್ ಡೇಟ್ ಮುಂದೂಡಿತ್ತು. ಮೊದಲು ಘೋಷಿಸಿದಂತೆ ಮಾರ್ಚ್ 19ಕ್ಕೆ ‘ಟಾಕ್ಸಿಕ್’ ತೆರೆ ಮೇಲೆ ಬರಬೇಕಿತ್ತು. ಆದರೆ, ಹಿಂದಿಯ ‘ಧುರಂಧರ್ 2’ ಕ್ಲ್ಯಾಶ್ ಜತೆಗೆ ಮಧ್ಯಪ್ರಾಚ್ಯ ದೇಶಗಳಲ್ಲಿನ ಯುದ್ಧದ ಭೀತಿಯಿಂದಾಗಿ ಸಿನಿಮಾವನ್ನು ಜೂ. 4ಕ್ಕೆ ಪೋಸ್ಟ್ ಪೋನ್ ಮಾಡಲಾಗಿತ್ತು. ಆದರೂ, ಜೂ. 4ಕ್ಕೆ ಸಿನಿಮಾ ರಿಲೀಸ್ ಆಗಲಿಲ್ಲ. ಜಾಗತಿಕ ಮಾರುಕಟ್ಟೆಯ ವಿಸ್ತರಣೆಗಾಗಿ ಚಿತ್ರತಂಡ ಎರಡನೇ ಬಾರಿಗೆ ರಿಲೀಸ್ ಡೇಟ್ ಮುಂದೂಡಿತ್ತು. ಇದೀಗ ಅಂತಿಮವಾಗಿ ‘ಟಾಕ್ಸಿಕ್’ ಚಿತ್ರತಂಡವು ಭಾನುವಾರದ ‘ಫಾದರ್ಸ್ ಡೇ’ಯಂದು ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಅದರಂತೆ ಆಗಸ್ಟ್ 26ಕ್ಕೆ ‘ಟಾಕ್ಸಿಕ್’ ವಿಶ್ವಾದ್ಯಂತ ತೆರೆಗೆ ಬರಲಿದೆ. ಚಿತ್ರದಲ್ಲಿನ ಯಶ್‌ರ ‘ರಾಯ’ ಮತ್ತು ‘ಟಿಕೆಟ್’ ಅವತಾರಗಳನ್ನು ಹೈಲೈಟ್ ಮಾಡುವ ಹೊಸ ಪೋಸ್ಟರ್ ಮೂಲಕ ರಿಲೀಸ್ ಡೇಟ್ ಖಚಿತಪಡಿಸಲಾಗಿದೆ. ಗೀತುಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿದ್ದಾರೆ. ಅವರಿಗೆ ಬಾಲಿವುಡ್‌ನ ಕಿಯಾರಾ ಅಡ್ವಾಣಿ ಜೋಡಿಯಾಗಿದ್ದಾರೆ. ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ತಾರಾ ಸುತಾರಿಯಾ, ಅಕ್ಷಯ್ ಒಬೇರಾಯ್, ಸುದೇವ್ ನಾಯರ್, ಬಾಲಾಜಿ ಮನೋಹರ್ ತಾರಾಗಣದಲ್ಲಿದ್ದಾರೆ. ಕನ್ನಡ, ಇಂಗ್ಲೀಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ.
ಹಬ್ಬಗಳ ವೈಬ್
ಸಾಮಾನ್ಯವಾಗಿ ಕನ್ನಡ ಚಿತ್ರಗಳು ಗುರುವಾರ ಅಥವಾ ಶುಕ್ರವಾರ ರಿಲೀಸ್ ಆಗುವುದು ಅಲಿಖಿತ ನಿಯಮ. ಆದರೆ, ಹಬ್ಬಗಳ ವೈಬ್ ದೃಷ್ಟಿಯಲ್ಲಿಟ್ಟುಕೊಂಡು ‘ಟಾಕ್ಸಿಕ್’ ಆ.26ರ ಬುಧವಾರದಂದು ತೆರೆಗೆ ಬರುತ್ತಿದೆ. ಈ ಮೂಲಕ ಅ. 26ಕ್ಕೆ ಓಣಂ ಮತ್ತು 28ಕ್ಕೆ ವರಮಹಾಲಕ್ಷ್ಮೀ, ರಕ್ಷಾಬಂಧನ ಹಬ್ಬಗಳನ್ನು ಸದುಪಯೋಗಪಡಿಸಿಕೊಳ್ಳಲು ಚಿತ್ರತಂಡ ಮುಂದಾಗುತ್ತಿದೆ. ಇನ್ನು 2025ರಲ್ಲಿ ಸುದೀಪ್ ಅಭಿನಯದ ‘ಮ್ಯಾಕ್ಸ್’ ಕೂಡ ಬುಧವಾರವೇ (ಡಿ.25) ರಿಲೀಸ್ ಆಗಿತ್ತು.
4 ವರ್ಷಗಳ ಬಳಿಕ ಯಶ್ ದರ್ಶನ
‘ಕೆಜಿಎಫ್​ 2’ (2022) ಚಿತ್ರವೇ ಯಶ್ ಅಭಿನಯಿಸಿದ್ದ ಕೊನೆಯ ಸಿನಿಮಾ. ಇದು ರಿಲೀಸ್ ಆಗಿ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಯಶ್ ‘ಟಾಕ್ಸಿಕ್’ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನಟನ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಈ ಬಾರಿಯೂ ಯಶ್ ‘ಟಾಕ್ಸಿಕ್’ ವಿರುದ್ಧ ತೆಲುಗು, ಹಿಂದಿ ಸಿನಿಮಾಗಳು ಸೆಣಸಾಡಲಿವೆ. ನಾನಿ ಅಭಿನಯದ ತೆಲುಗಿನ ‘ದ ಪ್ಯಾರಡೈಸ್’ (ಆ. 21), ಹಿಂದಿಯಲ್ಲಿ ಶ್ರದ್ಧಾ ಕಪೂರ್ ನಟಿಸಿರುವ ‘ಈಥಾ’ (ಆ. 28) ರಿಲೀಸ್ ಆಗುತ್ತಿವೆ. ಹೀಗಾಗಿ, ಆಗಸ್ಟ್ ಕೊನೆಯ ವಾರದಲ್ಲಿ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸ್ಪರ್ಧೆ ನಡೆಯಲಿದೆ.