ಜೀನ್ಸ್ ಜೇಬಿನ ಬಳಿ ಇರುವ ಪುಟ್ಟ ಲೋಹದ ಗುಂಡಿಗಳು ಯಾಕೆ? 
ನ್ಯೂಸ್

ಜೀನ್ಸ್ ಜೇಬಿನಲ್ಲಿರೋ ಪುಟ್ಟ ಲೋಹದ ಗುಂಡಿಗಳ ಕೆಲಸವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ | Rivets on Jeans

ಜೀನ್ಸ್ ಪ್ಯಾಂಟ್‌ನ ಜೇಬಿನ ಮೂಲೆಗಳಲ್ಲಿರುವ ಪುಟ್ಟ ಲೋಹದ ಗುಂಡಿಗಳ ಕೆಲಸವೇನು ಗೊತ್ತಾ? ಬಟ್ಟೆ ಹರಿಯದಂತೆ ಇವು ಹೇಗೆ ಸಹಾಯ ಮಾಡುತ್ತವೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ.

Metal buttons on jeans pockets: ನೀವು ಜೀನ್ಸ್ ಪ್ಯಾಂಟ್ ಹಾಕ್ಕೊಳ್ತೀರಾ? ಹಾಗಾದ್ರೆ ಜೇಬಿನ ಮೂಲೆಗಳಲ್ಲಿರೋ ಪುಟ್ಟ ಲೋಹದ ಗುಂಡಿಗಳನ್ನ ಗಮನಿಸಿರಬಹುದು. ಇವು ಬರೀ ಅಲಂಕಾರಕ್ಕಲ್ಲ. ಜೇಬಿನ ಹೊಲಿಗೆ ಗಟ್ಟಿಯಾಗಿರೋಕೆ, ಬಟ್ಟೆ ಬೇಗ ಹರಿದುಹೋಗದಿರೋಕೆ ಇವು ಸಹಾಯ ಮಾಡುತ್ತವೆ. ಹಾಗಾದ್ರೆ, ಈ ಪುಟ್ಟ ಗುಂಡಿಗಳ ಹಿಂದಿರೋ ಕಥೆ ಏನು ಗೊತ್ತಾ?

ಜೀನ್ಸ್ ಜೇಬಿನ ಮೂಲೆಗಳಲ್ಲಿರೋ ಈ ಲೋಹದ ಗುಂಡಿಗಳಿಗೆ ರಿವೆಟ್‌ಗಳು (Rivets) ಅಂತಾರೆ. ಜೇಬಿಗೆ ಪದೇಪದೆ ಕೈ ಹಾಕೋದು, ವಸ್ತುಗಳನ್ನ ಇಡೋದು, ತೆಗೆಯೋದ್ರಿಂದ ಆ ಭಾಗದ ಮೇಲೆ ಹೆಚ್ಚು ಒತ್ತಡ ಬೀಳುತ್ತೆ. ಇದರಿಂದ ಹೊಲಿಗೆ ಸಡಿಲವಾಗಿ ಬಟ್ಟೆ ಹರಿಯಬಹುದು. ಈ ಜಾಗದಲ್ಲಿ ರಿವೆಟ್‌ಗಳನ್ನ ಹಾಕೋದ್ರಿಂದ ಬಟ್ಟೆ ಗಟ್ಟಿಯಾಗಿರುತ್ತೆ. ಜೇಬಿನ ಮೂಲೆಗಳು ಬೇಗ ಸವೆಯೋದನ್ನೂ ಕಡಿಮೆ ಮಾಡಬಹುದು. ಆರಂಭದಲ್ಲಿ ತಾಮ್ರದ ರಿವೆಟ್‌ಗಳನ್ನ ಬಳಸಲಾಗುತ್ತಿತ್ತು. ಈಗ ಬೇರೆ ಲೋಹಗಳಲ್ಲೂ ಇವುಗಳನ್ನ ತಯಾರಿಸಲಾಗುತ್ತೆ.

ಜೀನ್ಸ್‌ಗೆ ರಿವೆಟ್‌ಗಳು ಬಂದಿದ್ದು ಹೇಗೆ?

19ನೇ ಶತಮಾನದಲ್ಲಿ ಕೆಲಸಗಾರರು ಹಾಕುತ್ತಿದ್ದ ಪ್ಯಾಂಟ್‌ಗಳ ಜೇಬುಗಳು ಮತ್ತು ಹೊಲಿಗೆಗಳು ಬೇಗ ಹರಿದುಹೋಗುತ್ತಿದ್ದವು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಮೆರಿಕದ ನೆವಾಡಾ ರಾಜ್ಯದ ರೆನೊದಲ್ಲಿ ದರ್ಜಿಯಾಗಿದ್ದ ಜಾಕಬ್ ಡೇವಿಸ್, ಜೇಬಿನ ಭಾಗಗಳಿಗೆ ಲೋಹದ ರಿವೆಟ್‌ಗಳನ್ನ ಹಾಕೋ ವಿಧಾನವನ್ನ ಅಭಿವೃದ್ಧಿಪಡಿಸಿದರು.

150 ವರ್ಷಗಳಿಗೂ ಹಿಂದೆ ಪರಿಚಯಿಸಲಾದ ಲೋಹದ ಗುಂಡಿಗಳು

ಬಟ್ಟೆ ವ್ಯಾಪಾರಿ ಲೆವಿ ಸ್ಟ್ರಾಸ್ ಜೊತೆ ಕೈಜೋಡಿಸಿದ ಡೇವಿಸ್, ಈ ವಿನ್ಯಾಸವನ್ನ ಮತ್ತಷ್ಟು ಅಭಿವೃದ್ಧಿಪಡಿಸಿದರು. 1873ರ ಮೇ 20ರಂದು ಈ ವಿಧಾನಕ್ಕೆ ಅಮೆರಿಕದಲ್ಲಿ ಪೇಟೆಂಟ್ ಸಿಕ್ಕಿತು. ಆಮೇಲೆ ರಿವೆಟ್‌ಗಳಿರೋ ಜೀನ್ಸ್ ಜನಪ್ರಿಯವಾಗತೊಡಗಿತು.

ಕೆಲವು ಜೀನ್ಸ್‌ಗಳಲ್ಲಿ ರಿವೆಟ್‌ಗಳು ಯಾಕೆ ಕಾಣಿಸಲ್ಲ?

ಎಲ್ಲ ಜೀನ್ಸ್‌ಗಳಲ್ಲೂ ಹೊರಗಡೆ ಕಾಣಿಸುವ ರಿವೆಟ್‌ಗಳು ಇರಲ್ಲ. ಕೆಲವು ಕಂಪನಿಗಳು ಬಟ್ಟೆಯ ಒಳಭಾಗದಲ್ಲಿ ಇವನ್ನ ಹಾಕುತ್ತವೆ. ಇನ್ನು ಕೆಲವು ಗಟ್ಟಿಯಾದ ಹೊಲಿಗೆ ಅಥವಾ ಬೇರೆ ವಿಧಾನಗಳ ಮೂಲಕ ಜೇಬುಗಳನ್ನ ಬಲಪಡಿಸುತ್ತವೆ. ಹಿಂಬದಿಯ ಜೇಬಿನ ರಿವೆಟ್‌ಗಳಿಂದ ಕುರ್ಚಿ ಸೇರಿದಂತೆ ಪೀಠೋಪಕರಣಗಳ ಮೇಲೆ ಗೀರು ಬೀಳುವ ಸಾಧ್ಯತೆ ಇತ್ತು. ಹೀಗಾಗಿ, ಲೆವಿ ಸ್ಟ್ರಾಸ್ ಕಂಪನಿ 1937ರಲ್ಲಿ ಹಿಂಬದಿಯ ಜೇಬಿನ ರಿವೆಟ್‌ಗಳನ್ನ ಬಟ್ಟೆಯಿಂದ ಮುಚ್ಚಲು ಶುರು ಮಾಡಿತು. 1966ರ ವೇಳೆಗೆ ಅವುಗಳನ್ನ ಹಿಂಬದಿಯ ಜೇಬುಗಳಿಂದ ತೆಗೆದುಹಾಕಿತು.

ಇದನ್ನೂ ಓದಿ: Ramayana Movie: ಜಟಾಯು ಪಾತ್ರಕ್ಕೆ ಅನೂಪ್ ಖೇರ್ ಧ್ವನಿ! ‘ದಿ ವಿಂಗ್ಸ್ ಆಫ್ ಧರ್ಮ’ ಪೋಸ್ಟರ್ ರಿಲೀಸ್​

ಇಂದಿಗೂ ರಿವೆಟ್‌ಗಳು ಯಾಕೆ ಬೇಕು?

ಜೀನ್ಸ್ ಜೇಬಿನ ಮೂಲೆಗಳು ಬೇಗ ಹರಿಯದಿರೋಕೆ ರಿವೆಟ್‌ಗಳು ಸಹಾಯ ಮಾಡುತ್ತವೆ. 150 ವರ್ಷಗಳಿಗೂ ಹಿಂದೆ ಪರಿಚಯಿಸಲಾದ ಈ ಪುಟ್ಟ ಲೋಹದ ಗುಂಡಿಗಳು ಇವತ್ತಿಗೂ ಜೀನ್ಸ್‌ನ ಬಾಳಿಕೆ ಹೆಚ್ಚಿಸುವುದರ ಜತೆಗೆ ಅದರ ವಿನ್ಯಾಸದ ಭಾಗವಾಗಿವೆ. ಆದ್ರೆ, ರಿವೆಟ್‌ಗಳಿದ್ದ ಮಾತ್ರಕ್ಕೆ ಬಟ್ಟೆ ಯಾವತ್ತೂ ಹರಿಯಲ್ಲ ಅಂತಲ್ಲ. ಕಾಲ ಕಳೆದಂತೆ ಬಟ್ಟೆ ಸವೆಯಬಹುದು.