ನ್ಯೂಸ್

ಉದ್ಧವ್ ಮುಂದಿರುವ ಹಾದಿ ಏನು?: ಠಾಕ್ರೆ ಕುಟುಂಬದಿಂದ ಕೈಜಾರಿದ ಶಿವಸೇನೆ; ಸಿಎಂ ಶಿಂಧೆ ಬಣ ಮೇಲುಗೈ

Webdesk - Ravikanth

| ರಾಘವ ಶರ್ಮ ನಿಡ್ಲೆ, ನವದೆಹಲಿ

ಶೀವಸೇನೆಯ ಬಿಲ್ಲು ಮತ್ತು ಬಾಣ ಚಿಹ್ನೆಯ ನಿಜವಾದ ವಾರಸುದಾರ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣ ಎಂದು ಕೇಂದ್ರ ಚುನಾವಣಾ ಆಯೋಗ ಆದೇಶಿಸುವ ಮೂಲಕ ಬಾಳಾ ಸಾಹೇಬ್ ಠಾಕ್ರೆ ಸ್ಥಾಪಿಸಿದ್ದ ಶಿವಸೇನೆ ಪಕ್ಷ ಠಾಕ್ರೆ ಕುಟುಂಬದಿಂದ ಅಧಿಕೃತವಾಗಿ ಕೈಜಾರಿದಂತಾಗಿದೆ.

ಬಾಳಾ ಸಾಹೇಬ್ ಠಾಕ್ರೆ ರಾಜಕೀಯ ಬಳುವಳಿ ಮುಂದುವರಿಸುವ ಜವಾಬ್ದಾರಿ ಹೊತ್ತರೂ ಬಿಜೆಪಿ ಜತೆ ಮುನಿಸಿಕೊಂಡು ಕಾಂಗ್ರೆಸ್-ಎನ್​ಸಿಪಿ ಜತೆ ಮೈತ್ರಿ ಮಾಡಿಕೊಂಡು ಸಿಎಂ ಕುರ್ಚಿಗೇರಿದ್ದ ಉದ್ಧವ್ ಠಾಕ್ರೆ, ಎರಡೇ ವರ್ಷದಲ್ಲಿ ಸರ್ಕಾರವನ್ನು ಕಳೆದುಕೊಳ್ಳುವ ಜತೆಗೆ ಈಗ ಶಿವಸೇನೆ ಪಕ್ಷದ ಚಿಹ್ನೆಯನ್ನೂ ಕಳೆದು ಕೊಂಡಿದ್ದಾರೆ.

ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವೆ ಎಂದು ಉದ್ಧವ್ ಹೇಳಿದ್ದರೂ, ಸುಪ್ರೀಂಕೋರ್ಟ್ ವಿಚಾರಣೆ ಯಲ್ಲಿ ಚುನಾವಣಾ ಆಯೋಗ ನೀಡುವ ಅಭಿಪ್ರಾಯ ನಿರ್ಣಾಯಕ ಪಾತ್ರವಹಿಸುತ್ತದೆ ಎನ್ನುವುದು ವಾಸ್ತವ. ಹೀಗಾಗಿ, ಉದ್ಧವ್ ಠಾಕ್ರೆಗೆ ಪಾಲಿಗಿದು ದೊಡ್ಡ ರಾಜಕೀಯ ಹಿನ್ನಡೆಯೇ ಸರಿ. ಶಿವಸೇನೆ-ಎನ್​ಸಿಪಿ-ಕಾಂಗ್ರೆಸ್ ಒಳಗೊಂಡ ಮಹಾ ಅಘಾಡಿ (ಮಹಾಮೈತ್ರಿ) ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಏಕನಾಥ ಶಿಂಧೆ, ಬಿಜೆಪಿಯ ವ್ಯವಸ್ಥಿತ ಕಾರ್ಯಾಚರಣೆಯ ಭಾಗವಾಗಿ ಕಳೆದ ಜೂನ್ ತಿಂಗಳಲ್ಲಿ ಸರ್ಕಾರದಿಂದ ಹೊರಬಂದು ತಮ್ಮ ನೇತೃತ್ವದ ಶಿವಸೇನೆ ಮೂಲಕ ಮಹಾ ಅಘಾಡಿ ಸರ್ಕಾರ ಪತನಗೊಳಿಸಿದ್ದರು.

ಶಿವಸೇನೆಯ 55 ಶಾಸಕರಲ್ಲಿ 40 ಶಾಸಕರು ಶಿಂಧೆ ಜತೆ ಕೈಜೋಡಿಸಿ ಮತ್ತೆ ಬಿಜೆಪಿ ಜತೆ ಸರ್ಕಾರ ರಚಿಸುವ ನಿರ್ಧಾರಕ್ಕೆ ಬಂದರು. ಸರ್ಕಾರ ಬಿದ್ದ ಕೆಲವೇ ದಿನಗಳಲ್ಲಿ ಬಿಜೆಪಿ-ಶಿವಸೇನೆ (ಶಿಂಧೆ ಬಣ) ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಮುಖ್ಯವಾಗಿ, ಅಚ್ಚರಿಯ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಬದಲು ಶಿಂಧೆಯವರನ್ನೇ ಸಿಎಂ ಮಾಡಲು ಬಿಜೆಪಿ ದಿಲ್ಲಿ ವರಿಷ್ಠರು ತೀರ್ವನಿಸಿದ್ದರು.

ಸರ್ಕಾರ ರಚನೆಯಾದಂತೆ ದಿಲ್ಲಿ ಬಿಜೆಪಿ ವರಿಷ್ಠರು ಮತ್ತು ಕಾನೂನು ಪಂಡಿತರು ಬಿಲ್ಲು-ಬಾಣದ ಚಿಹ್ನೆಯನ್ನು ಶಿಂಧೆ ಪಾಲಾಗುವಂತೆ ನೋಡಿಕೊಳ್ಳುವ ಕೆಲಸ ಶುರು ಮಾಡಿದ್ದರು. ಶಿಂಧೆ ಬಣಕ್ಕೆ ಎಲ್ಲಾ ಕಾನೂನು ನೆರವು ನೀಡಿದ ಬಿಜೆಪಿ ಬೆಂಬಲಿತ ಕಾನೂನು ತಜ್ಞರು, ಚುನಾವಣಾ ಆಯೋಗದ ಮುಂದೆಯೂ ಪ್ರಖರ ವಾದ ಮಂಡಿಸಿ ಬಿಲ್ಲು-ಬಾಣದ ಚಿಹ್ನೆ ಪಡೆದುಕೊಂಡು, ಶಿಂಧೆ ನೇತೃತ್ವದ ಬಣವೇ ನೈಜ ಶಿವಸೇನೆ ಎಂದು ಆಯೋಗದಿಂದ ಅಧಿಕೃತ ಮುದ್ರೆ ಒತ್ತಿಸಿಕೊಂಡಿದ್ದಾರೆ. ಶಿವಸೇನೆ ಪಕ್ಷ ಸ್ಥಾಪಿಸಿದ್ದೇ ನಾವು ಎಂದು ಉದ್ಧವ್ ಠಾಕ್ರೆ ಹೇಳಿಕೊಳ್ಳಬಹುದು. ಆದರೆ, ಅಂತಿಮವಾಗಿ ಸಂಖ್ಯಾಬಲವೇ ನಿರ್ಣಾಯಕ. ಏಕನಾಥ ಶಿಂಧೆಗೆ ಬಹುಪಾಲು ಶಾಸಕರು, ಸಂಸದರ ಬೆಂಬಲವಿರುವುದರಿಂದ ರಾಜಕೀಯ ಅಖಾಡದಲ್ಲೀಗ ಉದ್ಧವ್ ಏಕಾಂಗಿಯಾಗಿದ್ದಾರೆ.

ಅವರು (ಶಿಂಧೆ ಬಣ) ಕದ್ದ ಬಿಲ್ಲು ಮತ್ತು ಬಾಣದೊಂದಿಗೆ ನಮ್ಮ ಮುಂದೆ ಬರಲಿ. ನಾವು ಚುನಾವಣೆಯಲ್ಲಿ ‘ಟಾರ್ಚ್’ ಚಿಹ್ನೆಯೊಂದಿಗೆ ಸ್ಪರ್ಧಿಸುತ್ತೇವೆ. ನಮ್ಮ ಪರೀಕ್ಷೆ, ಹೋರಾಟ ಆರಂಭವಾಗಿದೆ. | ಉದ್ಧವ್ ಠಾಕ್ರೆ ಮಾಜಿ ಸಿಎಂ

ಶಿವಸೇನೆಗೆ 40 ಶಾಸಕರು, 13 ಸಂಸದರ ಬೆಂಬಲ

2018ರಲ್ಲಿ ಶಿವಸೇನೆ ಪರ ಗೆದ್ದ 55 ಶಾಸಕರಲ್ಲಿ 40 ಮಂದಿ ಏಕನಾಥ ಶಿಂಧೆ ಸರ್ಕಾರ ಬೆಂಬಲಿಸುತ್ತಿದ್ದಾರೆ. ಅಂದರೆ ಶಿವಸೇನೆ ಪರ ಬಿದ್ದ ಒಟ್ಟು 47,82440 ಮತಗಳಲ್ಲಿ 36,57,327 ಮತ ಗಳಿಸಿದ ಶಾಸಕರು ಶಿಂಧೆ ಬಣದೊಂದಿಗಿದ್ದಾರೆ. ಶೇ.76 ರಷ್ಟು ಮತಗಳು ಶಿಂಧೆ ಪಾಲಿಗಿದೆ. ಉದ್ಧವ್ ಠಾಕ್ರೆ ಬಣದಲ್ಲಿರುವುದು 15 ಶಾಸಕರು ಮತ್ತು 11,25,113 ಮತಗಳು ಮಾತ್ರ. ಅಂದರೆ ಶೇ. 23.5 ಮತ ಪ್ರಮಾಣ. ಲೋಕಸಭೆ ಚುನಾವಣೆ ಗೆದ್ದ 18 ಸಂಸದರಲ್ಲಿ 13 ಮಂದಿ ಶಿಂಧೆ ಜತೆಗಿದ್ದಾರೆ ಮತ್ತು 13 ಮಂದಿಯ ಒಟ್ಟು ಮತಗಳ ಸಂಖ್ಯೆ 74,88,634. ಠಾಕ್ರೆ ಜತೆಗಿರುವುದು 5 ಸಂಸದರು ಮತ್ತು ಅವರ ಮತಗಳ ಸಂಖ್ಯೆ 27,56,509. ಅಂದರೆ ಶೇ.73 ಮತಗಳನ್ನು ಪಡೆದಿರುವ ಶಿಂಧೆ ಬಣವೇ ಸಂಖ್ಯಾಬಲ ಹೊಂದಿರುವುದರಿಂದ ಆಯೋಗ ಶಿವಸೇನೆಯ ನೈಜ ವಾರಸುದಾರ ಶಿಂಧೆ ಬಣ ಎಂದೇ ಗುರುತಿಸಿ, ಚಿಹ್ನೆಯನ್ನೂ ನೀಡಿದೆ.

ಸಂಖ್ಯಾಬಲವೇ ನಿರ್ಣಾಯಕ

1971ರಲ್ಲಿ ಕಾಂಗ್ರೆಸ್​ನ ಎರಡು ಬಣಗಳ ನಡುವೆ ವಿವಾದ ಉದ್ಭವಿಸಿತ್ತು. ಆಗ ಚುನಾವಣಾ ಆಯೋಗವು ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಯಾವ ಬಣಕ್ಕೆ ಸೇರಬೇಕು ಎಂಬುದನ್ನು ನಿರ್ಧರಿಸಲು ಬಹುಮತದ ಪರೀಕ್ಷೆಯನ್ನು ಅವಲಂಬಿಸಿತ್ತು. ಮಾಜಿ ಪ್ರಧಾನಿ ಇಂದಿರಾಗಾಂಧಿ ಬೆಂಬಲಿತ ಬಣವನ್ನು ನಿಜವಾದ ಕಾಂಗ್ರೆಸ್ ಎಂಬ ಚುನಾವಣಾ ಆಯೋಗದ ನಿರ್ಧಾರವನ್ನು 1972 ರಲ್ಲಿ ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿತ್ತು. ರಾಜಕೀಯ ಪಕ್ಷವೊಂದರ ಸೀಟುಗಳ ಸಂಖ್ಯೆ ಅಥವಾ ರಾಜಕೀಯ ಪಕ್ಷದ ಅಭ್ಯರ್ಥಿಗಳ ಪರವಾಗಿ ಚಲಾವಣೆಯಾದ ಮತಗಳ ಸಂಖ್ಯೆಯು ಒಂದು ರಾಜಕೀಯ ಪಕ್ಷವನ್ನು ಗುರುತಿಸಲು ಸೂಕ್ತ ಮಾನದಂಡವಾಗಬಹುದು. ಕಾಂಗ್ರೆಸ್ ‘ಜೆ’ ಮತ್ತು ಕಾಂಗ್ರೆಸ್ ‘ಒ’ ಎಂಬ ಎರಡು ಗುಂಪುಗಳಲ್ಲಿ ಯಾವುದು ಕಾಂಗ್ರೆಸ್ ಪಕ್ಷ ಎಂದು ನಿರ್ಧರಿಸಲು ಬಹುಮತ ಮತ್ತು ಸಂಖ್ಯಾ ಬಲದ ನಿಯಮವನ್ನು ಅನ್ವಯಿಸುವಲ್ಲಿ ಆಯೋಗ ಕಂಡುಕೊಂಡ ವಿಧಾನದಲ್ಲಿ ನಮಗೆ ದೋಷ ಕಾಣುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ 1972 ರಲ್ಲಿ ತೀರ್ಪು ನೀಡಿತ್ತು. ಶಿವಸೇನೆ ಚಿಹ್ನೆ ವಿವಾದ ಪ್ರಕರಣದಲ್ಲಿ ಕೇಂದ್ರ ಚುನಾವಣಾ ಆಯೋಗ ಇದೇ ತೀರ್ಪನ್ನು ಉಲ್ಲೇಖಿಸಿದೆ.

ವಾದ- ಪ್ರತಿವಾದ ಏನಿತ್ತು?

ಠಾಕ್ರೆ ಬಣದ ಪರ ಮಾಜಿ ಕೇಂದ್ರ ಸಚಿವ, ಸುಪ್ರೀಂಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿ, ಬಹುಮತವೊಂದನ್ನೇ ಏಕೈಕ ನಿರ್ಣಾಯಕ ಅಂಶ ಎಂದು ಪರಿಗಣಿಸುವಂತಿಲ್ಲ. ಶಿಂಧೆ ಬಣ ನಿಜವಾದ ಶಿವಸೇನೆ ಎಂದು ಹೇಳಿಕೊಂಡಿದ್ದರೂ, ಅವರ ಪ್ರತಿಪಾದನೆ ಪಕ್ಷದ ಸಂವಿಧಾನದ ಪ್ರಕಾರವಾಗಿಲ್ಲ. ಪಕ್ಷದ ಸಂವಿಧಾನ ಅನುಸರಿಸದ ಗುಂಪಿಗೆ ಚುನಾವಣಾ ಆಯೋಗದ ಮಾನ್ಯತೆಯೂ ಇರಕೂಡದು.

2018ರಲ್ಲಿ ಪಕ್ಷದ ಸಂವಿಧಾನ ತಿದ್ದುಪಡಿ ಮಾಡಿದ್ದನ್ನು ಶಿಂಧೆ ಒಪ್ಪುವುದಿಲ್ಲ ಎನ್ನುವುದಾದರೆ, ಚಿಹ್ನೆಯನ್ನು ಪಡೆಯಲು ಅವರಿಗೆ ಯಾವುದೇ ಹಕ್ಕಿಲ್ಲ. ಅದೇ ತಿದ್ದುಪಡಿ ನಿಯಮದಡಿಯಲ್ಲಿ ಅವರು ಪದಾಧಿಕಾರಿಯಾಗಿ ನೇಮಕಗೊಂಡಿದ್ದನ್ನು ಗಮನಿಸಬೇಕು. ಪಕ್ಷದ ಚಿಹ್ನೆ ಕೇಳುವ ಬದಲು ಅವರು ತಮ್ಮದೇ ಆದ ಪಕ್ಷ ಸ್ಥಾಪಿಸಲಿ ಎಂದಿದ್ದರು. ಶಿವಸೇನೆ ಪಕ್ಷಕ್ಕೆ ಪದಾಧಿಕಾರಿಗಳನ್ನು ನೇಮಕ ಮಾಡುವ ಅಧಿಕಾರ ನೀಡಲು 2018ರಲ್ಲಿ ಪಕ್ಷದ ಸಂವಿಧಾನದಲ್ಲಿ ತಿದ್ದುಪಡಿ ತರಲಾಗಿತ್ತು. ಆದರೆ, ತನ್ನ ಆದೇಶದಲ್ಲಿ ಈ ಅಂಶ ದಾಖಲಿಸಿರುವ ಆಯೋಗ, ತಿದ್ದುಪಡಿ ನಿರ್ಧಾರದ ನಮಗೆ ಮಾಹಿತಿ ನೀಡಿಯೇ ಇಲ್ಲ.

ಇದು 1951 ಜನಪ್ರತಿನಿಧಿ ಕಾಯ್ದೆಗಳ ಉಲ್ಲಂಘನೆ ಎಂದು ದಾಖಲಿಸಿದೆ. 2018ರ ತಿದ್ದುಪಡಿ ವಿರುದ್ಧ ವಾದಿಸಿದ ಶಿಂಧೆ ಬಣ, 1999ರಲ್ಲಿ ಬಾಳಾಸಾಹೇಬ್ ಠಾಳ್ರೆ ಅವರು ಪ್ರಜಾಸತ್ತಾತ್ಮಕ ಸುಧಾರಣೆಗಳ ಅಂಶಗಳನ್ನೊಳಗೊಂಡ ಸಂವಿಧಾನ ತಿದ್ದುಪಡಿ ತಂದಿದ್ದರು. 2018ರ ತಿದ್ದುಪಡಿ ಇವೆಲ್ಲವನ್ನು ಗಾಳಿಗೆ ತೂರಿತು. 2018ರ ನಂತರ ಆದ ನೇಮಕಗಳ ಮಾನದಂಡದಲ್ಲಿ ಬಣಗಳ ಸಂಖ್ಯಾಬಲ ಬೆಂಬಲ ನಿರ್ಣಯಿಸುವುದು ಸರಿಯಲ್ಲ ಎಂದು ಪ್ರತಿಪಾದಿಸಿತು.