ನ್ಯೂಸ್

ಆಲ್ಕೋಹಾಲ್​ಗೂ ದೋಸೆಗೂ ಇದೆ ಲಿಂಕ್​! ಗುಂಡಿನ ಗಮ್ಮತ್ತು ಇರದೇ ಹೋಗಿದ್ದರೆ ದೋಸೆ ಹುಟ್ಟುತ್ತಿರಲಿಲ್ಲ

ನವದೆಹಲಿ: ಎಲ್ಲರ ನೆಚ್ಚಿನ ಆಹಾರ ದೋಸೆ ಎಂಬುದರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಚಟ್ನಿ, ಸಾಂಬಾರ್​ ಹಾಗೂ ಪಲ್ಯದ ಜತೆಗೆ ದೋಸೆ ಕಾಂಬಿನೇಷನ್​ ಸಖತ್​ ಟೇಸ್ಟಿಯಾಗಿರುತ್ತದೆ. ಸವಿದವರಿಗೆ ಮಾತ್ರ ಗೊತ್ತು ದೋಸೆಯ ರುಚಿ. ಹೀಗಾಗಿಯೇ ದೋಸೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​ ಇದೆ. ದೋಸೆಯಲ್ಲಿ ತುಂಬಾ ವೆರೈಟಿಗಳಿವೆ. ಮಸಾಲೆ ದೋಸೆ, ಸೆಟ್​ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ, ಬೆಣ್ಣೆ ದೋಸೆ ಹಾಗೂ ಮೊಟ್ಟೆ ದೋಸೆ ಹೀಗೆ ನಾನಾ ಬಗೆಯ ದೋಸೆ ಖಾದ್ಯಗಳಿವೆ. ದಿನನಿತ್ಯವೂ ದೋಸೆ ಸವಿಯುವವರಿದ್ದಾರೆ. ಆದರೆ, ಈ ದೋಸೆ ಹೇಗೆ ಹುಟ್ಟಿಕೊಂಡಿತು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಇದರ ಹಿಂದೆ ಒಂದು ಇಂಟೆರೆಸ್ಟಿಂಗ್​ ಕತೆ ಇದೆ. ಅದನ್ನು ನಾವಿಂದು ನಿಮಗೆ ಹೇಳುತ್ತಿದ್ದೇವೆ.

ಅಂದಹಾಗೆ ಪ್ರತಿಯೊಬ್ಬರು ದೋಸೆಯನ್ನು ಸವಿಯಲು ಬಯಸುತ್ತಾರೆ. ಕೆಲವೊಮ್ಮೆ ತ್ವರಿತ ಉಪಹಾರಕ್ಕಾಗಿ ನಾವೇ ತಯಾರಿಸುತ್ತೇವೆ. ಬೆಳಗಿನ ಉಪಹಾರಕ್ಕೆ ಮಾತ್ರವಲ್ಲ, ರಾತ್ರಿಯ ಊಟಕ್ಕೂ ಅದನ್ನು ಸೇವಿಸುತ್ತೇವೆ. ಎಲ್ಲರ ಬಾಯಲ್ಲಿ ನೀರೂರಿಸುವ ಭಕ್ಷ್ಯವು ಯಾವಾಗಲೂ ನಮ್ಮ ಮನಸ್ಸು ಮತ್ತು ಹೊಟ್ಟೆಯನ್ನು ತೃಪ್ತಿಪಡಿಸುತ್ತದೆ. ಈ ದೋಸೆಗೂ ಮತ್ತು ಮದ್ಯಕ್ಕೂ ಲಿಂಕ್​ ಇದೆ ಅಂದ್ರೆ ನೀವು ನಂಬುತ್ತೀರಾ? ನಂಬಲೇಬೇಕು. ಏಕೆಂದರೆ, ದೋಸೆ ಹುಟ್ಟಿಕೊಳ್ಳಲು ಕಾರಣವಾಗಿದ್ದೇ ಆಲ್ಕೋಹಾಲ್​.

ದೋಸೆ ಮೂಲದ ಜನಪ್ರಿಯ ದಂತಕಥೆ

ದೋಸೆಯನ್ನು ಮೊದಲು ಎಲ್ಲಿ ತಯಾರಿಸಲಾಗಿದೆ ಎಂದು ದೃಢೀಕರಿಸಲು ಸಾಧ್ಯವಾಗದಿದ್ದರೂ, ಉಡುಪಿಯ ಬ್ರಾಹ್ಮಣ ಅಡುಗೆಯವರು ದೋಸೆಯನ್ನು ರಚಿಸಿರಬಹುದು ಎಂದು ಸೂಚಿಸುವ ದಂತಕಥೆಯಿದೆ. ಬ್ರಾಹ್ಮಣರಿಗೆ ಆ ಕಾಲದಲ್ಲಿ ಮದ್ಯ ಅಥವಾ ಆಲ್ಕೋಹಾಲ್​ ಸೇವಿಸಲು ಅವಕಾಶವಿರಲಿಲ್ಲ. ಆದರೆ, ಓರ್ವ ಬ್ರಾಹ್ಮಣ ಮಾತ್ರ ಮದ್ಯಪಾನ ಮಾಡಲು ಮತ್ತು ತಮ್ಮ ನಂಬಿಕೆಯ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದನು. ಬಳಿಕ ಆತ ಅಕ್ಕಿಯನ್ನು ಹುದುಗಿಸುವ ಮೂಲಕ ಮದ್ಯವನ್ನು ತಯಾರಿಸಲು ಪ್ರಯತ್ನಿಸಿದನು. ಆದರೆ ಅದರಲ್ಲಿ ವಿಫಲರಾಗಿ ಕೊನೆಗೆ ಅಕ್ಕಿ ಹಿಟ್ಟನ್ನು ಕಂಡುಹಿಡಿದನು. ಬಳಿಕ ಬಿಸಿಯಾದ ಬಾಣಲೆಗೆ ಹಿಟ್ಟನ್ನು ಸುರಿದಾಗ ಪ್ರಪಂಚದ ಮೊದಲ ದೋಸೆ ರಚನೆಯಾಯಿತು ಎಂದು ಹೇಳಲಾಗಿದೆ. ಆಲ್ಕೋಹಾಲ್​ ಇಲ್ಲದಿದ್ದರೆ ದೋಸೆ ತಯಾರಾಗುತ್ತಿರಲಿಲ್ಲ ಎಂಬುದು ನಿಮಗೀಗ ತಿಳಿಯಿತು ಎಂದು ಭಾವಿಸುತ್ತೇನೆ.

ಇನ್ನೂ ದೋಸೆಗೆ ಈ ಹೆಸರು ಬರಲು ಕಾರಣವೇನೆಂದರೆ, ಮೊದಲು ದೋಸೆ ರಚಿಸಿದ ಬ್ರಾಹ್ಮಣನನ್ನು ಇನ್ನಿತರ ಬ್ರಾಹ್ಮಣರು ‘ದೋಷ’ ಅಥವಾ ‘ಪಾಪ’ ಮಾಡಿದನೆಂದು ಆರೋಪಿಸಿದರಂತೆ. ಹೀಗಾಗಿಯೇ ಈ ಖಾದ್ಯಕ್ಕೆ ಅದರ ದೋಷ ಎಂದು ಹೆಸರು ಬಂದಿತು. ಕಾಲಾನಂತರದಲ್ಲಿ ಬದಲಾವಣೆಯಾಗಿ ದೋಸೆ ಎಂಬ ಹೆಸರಿನಿಂದ ಜಗದ್ವಿಖ್ಯಾತವಾಗಿದೆ. (ಏಜೆನ್ಸೀಸ್​)