ನ್ಯೂಸ್

ಆರ್ಥಿಕತೆ, ರಫ್ತು ವಹಿವಾಟಿನಲ್ಲಿ ಭಾರತ- ಚೀನಾಕ್ಕಿರುವ ಅಂತರ ಎಷ್ಟು? ಆಥಿರ್ಕ ತಜ್ಞ ಡಾ. ರಂಗರಾಜನ್ ಹೇಳಿದ್ದೇನು?

ಬೆಂಗಳೂರು ದೇಶವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕಾದರೆ ಈಗಿನಿಂದಲೇ ಬೆಳವಣಿಗೆ ವಿಷಯದಲ್ಲಿ ಸ್ಪಷ್ಟ ಮಾರ್ಗಸೂಚಿ ಹೊಂದಬೇಕಿದೆ. ರಫ್ತು, ಉತ್ಪಾದನೆ, ಸೇವಾ ಕ್ಷೇತ್ರದಲ್ಲಿನ ತಂತ್ರಗಳು ಬದಲಾಗಬೇಕಿದ್ದು, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಉತ್ತೇಜನ ನೀಡಬೇಕಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಾ. ಸಿ. ರಂಗರಾಜನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬುಧವಾರ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಅರ್ಥಶಾಸ ವಿದ್ಯಾಲಯ ವಿಶ್ವವಿದ್ಯಾಲಯದ (ಬೇಸ್) ಮೊದಲ ಘಟಿಕೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಆಹಾರ ಸಂಸ್ಕರಣೆ ಉದ್ದಿಮೆಯು ಉದ್ಯೋಗ ಸೃಷ್ಟಿ ಮತ್ತು ಕೃಷಿಗೆ ಹೆಚ್ಚು ಒತ್ತು ನೀಡುವುದರಿಂದ ಹಾಗೂ ರಫ್ತಿಗೆ ಅವಕಾಶ ಇರುವುದರಿಂದ ಈ ಉದ್ದಿಮೆಗೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.

1991-92 ರಿಂದಲೂ ಸರ್ಕಾರಗಳು ಭಾರತದ ಬೆಳವಣಿಗೆ ಸುಧಾರಣಾ ಕಾರ್ಯಸೂಚಿಯನ್ನು ಅನುಸರಿಸುತ್ತಿವೆ. ಆದರೆ, ದೇಶ-ವಿದೇಶಗಳಲ್ಲಿನ ಇತ್ತೀಚಿನ ಬೆಳವಣಿಗೆ ದೃಷ್ಟಿಯಿಂದ ಭಾರತದ ಅಭಿವೃದ್ಧಿ ಕಾರ್ಯತಂತ್ರವು ಬಹು ಆಯಾಮದಲ್ಲಿರಬೇಕಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿಯನ್ನು ಸಾಧಿಸಲು ಕೈಗಾರಿಕಾ ನೀತಿ ಮರು ವಿನ್ಯಾಸಗೊಳಿಸಬೇಕು ಎಂದು ವಿಶ್ಲೇಷಕರು ಪರಿಗಣಿಸಿದ್ದಾರೆ ಎಂದರು.

ಎರಡನೇ ಮಹಾಯುದ್ಧದ ನಂತರ ಪೂರ್ವ ಏಷ್ಯಾ ದೇಶಗಳು ರ್ತು ಬೆಳವಣಿಗೆ ತಂತ್ರವನ್ನು ಅಳವಡಿಸಿಕೊಂಡು ತ್ವರಿತ ಪ್ರಗತಿ ಸಾಧಿಸಿದವು. ತರುವಾಯ ಚೀನಾ ಇದೇ ನೀತಿಯನ್ನು ಅಳವಡಿಸಿಕೊಂಡಿತು. 1970ರಲ್ಲಿ ಚೀನಾ ಮತ್ತು ಭಾರತದ ರ್ತು ವಹಿವಾಟು ಶೇ.0.6 ಆಗಿತ್ತು. 2022ರ ವೇಳೆಗೆ ಚೀನಾ ಶೇ.11.9ಕ್ಕೆ ಏರಿದ್ದು, ಭಾರತವು ಇನ್ನೂ ಶೇ.2.5ರಷ್ಟಿದೆ ಎಂದರು.

ಪ್ರಸ್ತುತ 13,845 ಡಾಲರ್ ಮತ್ತು ಅದಕ್ಕಿಂತ ಹೆಚ್ಚಿನ ತಲಾದಾಯ ಹೊಂದಿರುವ ದೇಶಗಳನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು (ಐಎಂಎ್) ಅಭಿವೃದ್ಧಿ ಹೊಂದಿದ ದೇಶಗಳೆಂದು ವರ್ಗೀಕರಿಸುತ್ತವೆ. ಇದು 2047ರ ವೇಳೆಗೆ ಮತ್ತಷ್ಟು ಹೆಚ್ಚಳವಾಗಲಿದೆ. ಪ್ರಸ್ತುತ ಭಾರತದ ತಲಾದಾಯವು 2,500 ಡಾಲರ್ (ಐಎಂಎ್ ವರದಿ 2024ರ ಏಪ್ರಿಲ್) ಇದೆ. ನಾವು ಪ್ರಯಾಣಿಸಬಹುದಾದ ಮುಂದಿನ ದಾರಿಯನ್ನು ಈ ಅಂಕಿಅಂಶಗಳು ತೋರಿಸಲಿವೆ ಎಂದು ತಿಳಿಸಿದರು.

ಕೊರೊನಾ ನಂತರದ ವರ್ಷಗಳಲ್ಲಿ ದೇಶದ ಜಿಡಿಪಿಯು ಕ್ರಮವಾಗಿ ಶೇ.6.7, 6.4 ಮತ್ತು 5.9 ಆಗಿದೆ. ರೂಪಾಯಿಯ ಭವಿಷ್ಯದ ವಿನಿಮಯ ದರ ಮತ್ತು ದೇಶೀಯ ಹಣದುಬ್ಬರ ಆಧಾರದ ಮೇಲೆ ವಾರ್ಷಿಕ ಸರಾಸರಿ ಶೇ.6ರಿಂದ 7ರಷ್ಟು ಬೆಳವಣಿಗೆಯ ನೈಜ ದರವನ್ನು ಹೊಂದಬೇಕಾಗುತ್ತದೆ. ಇದು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಬೇಸ್ ಕುಲಪತಿ ಡಾ. ಎಸ್.ಆರ್. ಭಾನುಮೂರ್ತಿ, ಕುಲಸಚಿವೆ ವಿದ್ಯಾಶ್ರೀ ಚಂದರಗಿ, ಪರೀಕ್ಷೆಗಳ ನಿಯಂತ್ರಕ ಡಾ. ನಾಗೇಶ್ವರ್ ಬಂಸೋಡೆ ಮತ್ತು ಹಣಕಾಸು ಅಧಿಕಾರಿ ಪ್ರಶಾಂತ್‌ಕುಮಾರ್ ಎಂ.ವಿ. ಉಪಸ್ಥಿತರಿದ್ದರು.