ಯಮದೇವನು ನಚಿಕೇತನಿಗೆ ಮತ್ತೊಂದು ಸನಾತನವಾದ ವೇದರಹಸ್ಯವನ್ನು ಹೇಳುವುದಾಗಿ ಘೊಷಿಸುತ್ತಾನೆ. ಇಲ್ಲಿಯವರೆಗೆ, ಜೀವನು ಜೀವನಾಗಿ ಬದುಕಿರುವುದೇ ಪರಮಾತ್ಮನ ಸಾನ್ನಿಧ್ಯ ಅವನಲ್ಲಿರುವುದರಿಂದ, ಎಂದು ಹೇಳಿದ ಮೇಲೆ, ಇಂತಹ ಸಾನ್ನಿಧ್ಯ ಎಂದೆಂದೂ ಇರುವಾಗಲೂ, ‘ಜೀವಾತ್ಮನು ನಾನಾ ಯೋನಿಗಳಲ್ಲಿ ಬಿದ್ದು ತೊಳಲುವುದು ಹೇಗೆ?’ ಎಂಬ ಪ್ರಶ್ನೆಗೆ ಈಗ ಉತ್ತರಿಸುತ್ತಾನೆ. ಅನೇಕರಿಗೆ ಇದೂ ದೈವಚೇಷ್ಟೆಯೋ? ಎಂದು ಭ್ರಮೆಯಾಗಬಹುದು. ಇದರಿಂದ, ನಾನಾ ಯೋನಿಗಳಲ್ಲಿ ನಮ್ಮನ್ನು ತಳ್ಳುವ ಪರಮಾತ್ಮನ ಬಗೆಗೂ ತಪ್ಪು ಕಲ್ಪನೆಗಳಾಗಬಹುದು. ಆದುದರಿಂದ ಜೀವಾತ್ಮನಲ್ಲಿ ಭಗವಂತನ ಅಂತರ್ಯಾಮಿತ್ವವು ಏನನ್ನು ಮಾಡುತ್ತದೆ? ಮತ್ತು ಇದಕ್ಕೂ, ಜೀವಾತ್ಮನ ಉನ್ನತಿ ಅವನತಿಗಳಿಗೂ ಇರುವ ಸಂಬಂಧವನ್ನೂ ಕುರಿತು ಮುಂದಿನ ಹಲವು ಮಂತ್ರಗಳಲ್ಲಿ ಯಮದೇವನು ಸಮಂಜಸವಾದ ಉತ್ತರವನ್ನು ನೀಡುತ್ತಾನೆ. (2-2-6)
ಲೋಕಸ್ರಷ್ಟಾ ಯಾರು?: ಇವನು ನಿದ್ರಿಸಿದರೂ, ನಿದ್ರೆಯಲ್ಲಿಯೂ ‘‘ಜೀವನ’’ದ ದಿನ ದಿನದ ಕರ್ವನುಸಾರವಾಗಿ, ಸ್ವಪ್ನದಲ್ಲಿಯೂ ಅನುಭವಗಳನ್ನು ಸಂಕಲ್ಪಿಸುತ್ತ ನಿಂತಿರುವವನೇ ಅಮೃತಮಯನಾದ, ಜ್ಯೋತಿರ್ಮಯನಾದ, ಬ್ರಹ್ಮಶಬ್ದವಾಚ್ಯನಾದ ಆ ಪರಮ ಪುರುಷನು. (‘ಎಲ್ಲರಿಗೂ ಒಂದೇ ವಿಧವಾದ ಕನಸುಗಳು ಬೀಳುವುದಿಲ್ಲ. ಇವಕ್ಕೆ ಪ್ರತಿ ಜೀವಿಯ ದೈನಂದಿನ ಕರ್ಮ, ಭಾವನೆ, ವಿಚಾರಗಳ ಹಿನ್ನೆಲೆ ಇರುತ್ತವೆ. ಅವುಗಳಿಗನುಸಾರ ಸುಖದುಃಖಾದಿ ಅನುಭವಗಳು ಒಂದು ನಿಯತಿಯಿಂದಲೇ ಆಗುತ್ತವೆ. ಸ್ವಪ್ನಗಳ ಅರ್ಥವಾಗಲೀ, ಅವುಗಳಲ್ಲೂ ಅಡಗಿರುವ ಏಕಸೂತ್ರತೆಯಾಗಲೀ ನಮಗೆ ತಿಳಿಯಲಿಲ್ಲವೆಂದ ಮಾತ್ರಕ್ಕೆ ಅವು ಯಾವ ನಿಯಮಕ್ಕೂ ಒಳಪಟ್ಟಿಲ್ಲವೆಂದು ಅರ್ಥವಲ್ಲ.’ ಈ ನಿಯಮವನ್ನು ತಿಳಿದು ಅವುಗಳಿಗೆ ಅನುಸಾರವಾಗಿ ಅಸಂಖ್ಯಾತ ಜೀವರಾಶಿಗಳಲ್ಲಿ ಅವರವರ ಕಾಮನೆಗಳಂತೆ ಏಕಕಾಲಕ್ಕೆ ಚಿತ್ರವಿಚಿತ್ರವಾದ ಸ್ವಪ್ನಾನುಭವಲೋಕಗಳನ್ನು ನಿರ್ವಿುಸುತ್ತ ಎಲ್ಲರನ್ನೂ ನಿಷ್ಪಕ್ಷಪಾತವಾಗಿ ಅಂತರ್ಯಾಮಿಯಾಗಿ ಇರುವುದು ಭಗವಂತನ ದೊಡ್ಡತನಕ್ಕೂ ಇತರ ಗುಣಗಳಿಗೂ ಒಂದು ದೊಡ್ಡ ಸಾಕ್ಷಿ. (ಬ್ರ.ಸೂ.: ‘‘ಸಂಧ್ಯೇ ಸೃಷ್ಟಿರಾಹ ಹಿ’’ 3-2-1.)
ಸರ್ವಭೂತಾಂತರಾತ್ಮ ವೈಭವ: ಹಲವರು ಇದನ್ನು ನಂಬುವುದು ಕಷ್ಟವಾಗಬಹುದು. ಏಕಕಾಲಕ್ಕೆ ಎಲ್ಲ ಜೀವಿಗಳಲ್ಲಿಯೂ ಭಗವಂತನಿರುವುದಾದರೆ, ಇಷ್ಟೊಂದು ಪ್ರತಿರೂಪಗಳು ಹೇಗೆ ಇರುವುದು ಸಾಧ್ಯ? ಎಂಬ ಪ್ರಶ್ನೆಗೆ, ಮೂರು ದಿವ್ಯವಾದ ಉಪಮಾನಗಳನ್ನು ಕೊಟ್ಟು ಪರಮಾತ್ಮನ ಲೋಕವಿಲಕ್ಷಣ ಸ್ವಭಾವವನ್ನು ಯಮದೇವನು ಸಿದ್ಧಾಂತ ಮಾಡಿ ತೋರಿಸುತ್ತಾನೆ:
1) ಅಗ್ನಿಯು ಎಲ್ಲಿದ್ದರೂ, ಮೂಲಸ್ವರೂಪದಲ್ಲಿ ಒಬ್ಬನೇ, ಆದರೂ ಲೋಕವನ್ನು ಪ್ರವೇಶಿಸಿ, ಪ್ರತಿಯೊಂದು ರೂಪದಲ್ಲಿಯೂ ಅಡಗಿಕೊಂಡಿದೆ. ‘ಅಗ್ನಿ’ ಎಂದರೆ ‘ತೇಜಸ್ಸಿನ ತತ್ತ್ವ’. ಕಣ್ಣು ನೋಡುವುದೇ ತೇಜಸ್ಸಿನಿಂದ. ಅಂದರೆ ಯಾವುದೇ ಪದಾರ್ಥದಲ್ಲಿ ಒಂದು ನಿಯತವಾದ ರೂಪವೂ, ಆಕಾರವೂ ಇದ್ದರೆ ಅದು ಅದರಲ್ಲಿರುವ, ಅಗ್ನಿಸಾನ್ನಿಧ್ಯದಿಂದ, ಹೀಗೆ ಸಮಸ್ತ ಪದಾರ್ಥಗಳಲ್ಲಿಯೂ ಅವುಗಳ ರೂಪಕ್ಕೆ ಆಧಾರನಾದ ಅಗ್ನಿಯು ಇದ್ದರೂ, ಹೇಗೆ ಆಕಾರಗಳು ಬದಲಾಗುತ್ತವೆಯೋ (‘ಉಳಿದ ಧಾತುಗಳ ವೈಷಮ್ಯದಿಂದ’), ಹಾಗೆಯೇ, ಪರಮಾತ್ಮನು ಎಲ್ಲವನ್ನೂ ವ್ಯಾಪಿಸಿದ್ದರೂ ಕರ್ಮಭೇದಗಳಿಂದ ಜೀವಿಗಳಲ್ಲಿ ಆಕಾರ, ಗುಣ ಇತ್ಯಾದಿಗಳಲ್ಲಿ ಭೇದವು ಇದ್ದೇ ಇರುವುದು.