ರಾಜ್ಯದಲ್ಲಿ ಎರಡನೇ ಹಂತದ ನಗರಗಳಿಗೆ ವಿಮಾನಯಾನ ಸೇವೆ ಆರಂಭವಾದರೆ ಕೈಗಾರಿಕೆ, ಹೂಡಿಕೆ ಸೇರಿ ಹಲವು ವಲಯಗಳ ಬೆಳವಣಿಗೆಗೆ ಪೂರಕವಾಗುತ್ತದೆ, ಜನಸಂಚಾರಕ್ಕೆ ಅನುಕೂಲವಾಗುತ್ತದೆ ಎಂಬ ಆಶಯದಿಂದ ಹಲವೆಡೆ ನೂರಾರು ಕೋಟಿ ರೂಪಾಯಿಗಳನ್ನು ವ್ಯಯಿಸಿ ವಿಮಾನ ನಿಲ್ದಾಣಗಳನ್ನು ನಿರ್ವಿುಸಲಾಗಿದೆ. ಆದರೆ, ಕೆಲವೆಡೆ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದರೆ, ಮತ್ತೆ ಕೆಲವು ಕಡೆ ಪ್ರಯಾಣಿಕರಿದ್ದರೂ ವಿಮಾನಗಳಿಲ್ಲ. ಈ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಾದ ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಹೀಗಾಗಿ, ವಿಮಾನಯಾನ ಸೇವೆಯ ಕನಸು ನನಸಾಗುತ್ತಿಲ್ಲ.
ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿಯ ಜಿಂದಾಲ್ ವಿಜಯನಗರ ವಿಮಾನ ನಿಲ್ದಾಣದಿಂದ ನಿತ್ಯ ಬೆಂಗಳೂರು ಹಾಗೂ ಹೈದರಾಬಾದಿಗೆ ತೆರಳುತ್ತಿದ್ದ ವಿಮಾನ ಸಂಚಾರ ಪ್ರಯಾಣಿಕರ ಕೊರತೆ ನೆಪವೊಡ್ಡಿ ಕಳೆದ ಒಂದು ತಿಂಗಳಿಂದ ಬಂದ್ ಆಗಿದೆ. ಜಿಲ್ಲೆಯಲ್ಲಿ ಸರ್ಕಾರಿ ವಿಮಾನ ನಿಲ್ದಾಣ ಸ್ಥಾಪನೆಗಾಗಿ ಸಿರವಾರ ಹಾಗೂ ಚಾಗನೂರು ಮಧ್ಯೆ ಕಳೆದ ಒಂದೂವರೆ ದಶಕದ ಹಿಂದೆ 900 ಎಕರೆ ಸ್ಥಳ ಮೀಸಲಿಡಲಾಗಿದೆ. ಇದರ ನಡುವೆ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಹೊಸಪೇಟೆ ಹಾಗೂ ಬಳ್ಳಾರಿ ಮಧ್ಯದಲ್ಲಿ ನಿರ್ವಿುಸಬೇಕೆಂಬ ಚಿಂತನೆ ನಡೆದಿದೆ. ಸದ್ಯ ವಿಮಾನ ನಿಲ್ದಾಣದ ನಿರ್ಮಾಣ ಗೊಂದಲದ ಗೂಡಾಗಿದೆ.
ಮೈಸೂರಿನಿಂದ ದೇಶದ ವಿವಿಧೆಡೆಗೆ ವಿಮಾನದ ಮೂಲಕ ಸಂಚರಿಸುವ ಪ್ರಯಾಣಿಕರಿಗೇನು ಕೊರತೆ ಇಲ್ಲ. ಆದರೆ, ವಿಮಾನಗಳ ಕೊರತೆಯಿಂದ ಮೈಸೂರು ವಿಮಾನ ನಿಲ್ದಾಣ ಸೊರಗಿದೆ. ಪ್ರಸ್ತುತ ನಗರಕ್ಕೆ ಇಂಡಿಗೋ ಸಂಸ್ಥೆಯ ಎರಡು ವಿಮಾನಗಳು ಮಾತ್ರ ಆಗಮಿಸುತ್ತಿವೆ. ಈ ವಿಮಾನಗಳು ಮೈಸೂರು-ಹೈದರಾಬಾದ್ ಹಾಗೂ ಮೈಸೂರು -ಚೆನ್ನೈ ನಡುವೆ ಸಂಚರಿಸುತ್ತಿವೆ. ಮೈಸೂರು ವಿಮಾನ ನಿಲ್ದಾಣದ ರನ್ವೇ ವಿಸ್ತರಣೆಯಾಗದ ಹಿನ್ನೆಲೆಯಲ್ಲಿ ನಗರಕ್ಕೆ ಸಣ್ಣ ವಿಮಾನಗಳು ಮಾತ್ರ ಬಂದು ಹೋಗುತ್ತಿವೆ. ಮೈಸೂರಿಗೆ ವಿಮಾನಯಾನ ಸೇವೆ ಒದಗಿಸುತ್ತಿರುವ ಇಂಡಿಗೋ ಬಳಿ ಸಣ್ಣ ವಿಮಾನಗಳ ಸಂಖ್ಯೆ (ಎಟಿಆರ್ ಫ್ಲೈಟ್) ಕಡಿಮೆ ಇರುವ ಹಿನ್ನೆಲೆಯಲ್ಲಿ ಮೈಸೂರಿಗೆ ಮತ್ತಷ್ಟು ವಿಮಾನಯಾನ ಸೇವೆ ಒದಗಿಸಲು ಅವರಿಂದ ಸಾಧ್ಯವಾಗುತ್ತಿಲ್ಲ.
ಈ ಹಿಂದೆ ನಗರದಿಂದ ಹಲವು ನಗರಗಳಿಗೆ ವಿಮಾನಯಾನ ಸೇವೆ ನೀಡುತ್ತಿದ್ದ ಅಲಯನ್ಸ್ ಏರ್ ಸಂಸ್ಥೆಯು ಪ್ರಸ್ತುತ ಆರ್ಥಿಕ ಸಮಸ್ಯೆಯಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಹಲವು ವಿಮಾನಗಳು ಸ್ಥಗಿತಗೊಂಡವು. ಜತೆಗೆ ಉಡಾನ್ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತಿದ್ದ ಸಬ್ಸಿಡಿ ಸ್ಥಗಿತಗೊಂಡಿದ್ದು ಸಹ ವಿಮಾನ ಸೇವೆ ಸ್ಥಗಿತಗೊಳ್ಳಲು ಮತ್ತೊಂದು ಕಾರಣವಾಗಿದೆ. ಈ ಹಿಂದೆ ಮಾಸಿಕ ಸರಾಸರಿ 14ರಿಂದ 16 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದರು. ಈ ಸಂಖ್ಯೆ ಇದೀಗ 7ರಿಂದ 8 ಸಾವಿರಕ್ಕೆ ಕುಸಿತ ಕಂಡಿದೆ.
ವಿಮಾನ ನಿಲ್ದಾಣದ ರನ್ವೇ ವಿಸ್ತರಣೆ ಕಾರ್ಯ ಆದಷ್ಟು ಬೇಗ ಕೈಗೊಳ್ಳಬೇಕಾಗಿದೆ. ಜತೆಗೆ ಮೈಸೂರು-ಬೆಂಗಳೂರು ನಡುವೆ ವಿಮಾನ ಸೇವೆಯನ್ನು ಮತ್ತೆ ಆರಂಭಿಸಬೇಕಾಗಿದೆ. ಪ್ರಸ್ತುತ ಮೈಸೂರು ವಿಮಾನ ನಿಲ್ದಾಣದ ರನ್ವೇ 1.75 ಕಿ.ಮೀ. ಉದ್ದವಿದೆ. ಹೀಗಾಗಿ ಎಟಿಆರ್ ವಿಮಾನಗಳು ಮಾತ್ರ ಇಲ್ಲಿಗೆ ಬಂದಿಳಿಯಬಹುದು. ಎ320 ವಿಮಾನಗಳು ಮೈಸೂರಿಗೆ ಬರಬೇಕಾದರೆ ರನ್ವೇ ವಿಸ್ತರಣೆ ಅತ್ಯಗತ್ಯ. ರನ್ವೇ ಅನ್ನು 1.75 ಕಿ.ಮೀ. ನಿಂದ 2.75 ಕಿ.ಮೀ.ವರೆಗೆ ವಿಸ್ತರಿಸಲು ಉದ್ದೇಶಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲವಾದ್ದರಿಂದ ರನ್ವೇ ವಿಸ್ತರಣೆ ನನೆಗುದಿಗೆ ಬಿದ್ದಿದೆ.
ರಾಯಚೂರಿನಲ್ಲಿ ವಿಮಾನ ನಿಲ್ದಾಣದ ಕನಸು ಇನ್ನೂ ಸಾಕಾರಗೊಂಡಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಹೊರತುಪಡಿಸಿ, ಇತರ ಕಾಮಗಾರಿಗಳಿಗೆ 15 ರಿಂದ 20 ಕೋಟಿ ರೂ. ಖರ್ಚು ಮಾಡಲಾಗಿದೆ. ಒಂದು ವರ್ಷದೊಳಗೆ ಕಾಮಗಾರಿ ಮುಗಿಸುವಂತೆ ಜಿಲ್ಲಾಡಳಿತ ಟೆಂಡರ್ ಪಡೆದ ಏಜೆನ್ಸಿಗೆ ಸೂಚನೆ ನೀಡಿದೆ. ರೈಟ್ಸ್ ಸಂಸ್ಥೆ ನೀಡಿದ್ದ 216 ಕೋಟಿ ರೂ ಅಂದಾಜು ವಿಸõತ ಯೋಜನೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಅನುಮೋದನೆ ನೀಡಿ ಬಜೆಟ್ನಲ್ಲಿ ಘೊಷಣೆ ಮಾಡಿವೆ. ಆದರೆ, ರನ್ ವೇ ನಿರ್ಮಾಣ ಒಳಗೊಂಡಂತೆ ಇತರ ಷರತ್ತು ಪೂರೈಸಲು ಇನ್ನಷ್ಟು ಆರ್ಥಿಕ ನೆರವಿನ ಅವಶ್ಯಕತೆ ಇದೆ.
ಉಡಾನ್ ಯೋಜನೆಯಡಿ ಕೊಪ್ಪಳದಲ್ಲಿ ವಿಮಾನ ಓಡಾಟಕ್ಕೆ ಕೇಂದ್ರ ಸರ್ಕಾರ 2018ರಲ್ಲಿ ಅನುಮತಿ ನೀಡಿತ್ತು. ಆದರೆ, ಜಿಲ್ಲೆಯಲ್ಲಿ ಸರ್ಕಾರಿ ವಿಮಾನ ನಿಲ್ದಾಣವಿಲ್ಲ. ಬಿಎಸ್ಪಿಎಲ್ ಕಂಪನಿಯ ಖಾಸಗಿ ವಿಮಾನ ನಿಲ್ದಾಣವಿದ್ದು, ನಾಗರಿಕ ಬಳಕೆಗೆ ಕಂಪನಿ ನೀಡುತ್ತಿಲ್ಲ. ಹೊಸ ವಿಮಾನ ನಿಲ್ದಾಣಕ್ಕಾಗಿ ಕೊಪ್ಪಳದ ಕುಷ್ಟಗಿ ರಸ್ತೆಯಲ್ಲಿನ ಭೂಮಿ ಆಯ್ಕೆ ಮಾಡಬಹುದೆಂದು ವಿಮಾನಯಾನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಭೂ ಸ್ವಾಧೀನಕ್ಕಾಗಿ ಕಳೆದ ಬಿಜೆಪಿ ಸರ್ಕಾರ ಕೆಕೆಆರ್ಡಿಬಿಯಿಂದ 40 ಕೋಟಿ ರೂ. ಅನುದಾನ ನೀಡಿದೆ. ಆದರೆ, ಅದನ್ನು ಅನ್ಯ ಕೆಲಸಕ್ಕೆ ಬಳಕೆ ಮಾಡಿದ್ದು, ವಿಮಾನ ನಿಲ್ದಾಣದ ಯೋಜನೆ ನನೆಗುದಿಗೆ ಬಿದ್ದಿದೆ.
ಬೀದರ್ನಿಂದ ನಾಗರಿಕ ವಿಮಾನಯಾನ ಸೇವೆ ಪುನಃ ಆರಂಭವಾಗಿ ಆರು ತಿಂಗಳಾಗಿದ್ದು, ಯಾವುದೇ ಸಮಸ್ಯೆ ಇಲ್ಲ. ಕೇಂದ್ರ ಸರ್ಕಾರ ಸಬ್ಸಿಡಿ ಹಿಂಪಡೆಯುವ ನಿರ್ಧಾರದಿಂದ 2023ರ ಡಿ.26ರಂದು ಸಂಚಾರ ನಿಲ್ಲಿಸಿತ್ತು. ರಾಜ್ಯ ಸರ್ಕಾರದಿಂದಲೇ ಸಬ್ಸಿಡಿ (ಶೇ.70 ಕೆಕೆಆರ್ಡಿಬಿ, ಶೇ.30 ಸರ್ಕಾರ) ಹಣ ಭರಿಸಲು ನಿರ್ಧರಿಸಿದ್ದರಿಂದ 2025ರ ಏಪ್ರಿಲ್ 16ರಿಂದ ಸೇವೆ ಆರಂಭಗೊಂಡಿದೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವಾರಕ್ಕೆ 84 ಟ್ರಿಪ್ ವಿಮಾನಯಾನ ಕಾರ್ಯಾಚರಣೆ ಇದೆ. ನಿತ್ಯ ಬೆಂಗಳೂರಿಗೆ ಎರಡು, ದೆಹಲಿ, ಹೈದರಾಬಾದ್, ಮುಂಬೈಗೆ ತಲಾ ಒಂದೊಂದು ವಿಮಾನಗಳ ಸಂಪರ್ಕವಿದೆ. ವಾರದಲ್ಲಿ ಮೂರು ದಿನ (ಶನಿವಾರ, ಭಾನುವಾರ ಮತ್ತು ಸೋಮವಾರ) ಅಹಮದಾಬಾದ್ ಹಾಗೂ ಭಾನುವಾರ, ಸೋಮವಾರ ಮತ್ತು ಮಂಗಳವಾರ ಜೈಪುರಗೆ ನೇರ ವಿಮಾನ ಸಂಪರ್ಕವಿದೆ. ಕಳೆದ ವರ್ಷಕ್ಕಿಂತ ಈ ಸಲ ಪ್ರಯಾಣಿಕರ ಓಡಾಟವೂ ಹೆಚ್ಚಾಗಿದೆ. ವಿಮಾನಗಳ ಓಡಾಟದ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ 3 ವಿಮಾನ ರ್ಪಾಂಗ್ ಸಾಮರ್ಥ್ಯವನ್ನು 12 ವಿಮಾನಗಳ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುತ್ತಿದೆ.
ರಾಜ್ಯದಲ್ಲಿ ಬೆಂಗಳೂರು, ಮಂಗಳೂರು ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ದೇಶದ ವಿವಿಧ ರಾಜ್ಯಗಳ ಮಹಾನಗರಗಳಿಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಹುಬ್ಬಳ್ಳಿಯಿಂದ ನಿತ್ಯ ಬೆಂಗಳೂರಿಗೆ 2 ವಿಮಾನ, ಹೈದ್ರಾಬಾದ್ಗೆ 1, ಮುಂಬೈಗೆ 1, ದೆಹಲಿಗೆ 1 ವಿಮಾನ ಹಾಗೂ ಪುಣೆಗೆ 4 ವಿಮಾನಗಳು ಸಂಚರಿಸುತ್ತವೆ. ನಿತ್ಯ 1 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದು, ಹೋಗುತ್ತಾರೆ. ಹೊಸತಾಗಿ 320 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಟರ್ವಿುನಲ್ ಬಿಲ್ಡಿಂಗ್ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಮಧ್ಯ ಕರ್ನಾಟಕ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಗಳಿಗೆ ಅನುಕೂಲವಾಗುವ ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆಯಾಗಿದ್ದು 2023ರ ಫೆಬ್ರವರಿ 27ರಂದು. ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿರುವ ಕರ್ನಾಟಕದ ಮೊದಲ ವಿಮಾನ ನಿಲ್ದಾಣವಿದು. ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಮೊದಲ ವಿಮಾನ ಸಂಪರ್ಕ ಪ್ರತಿದಿನ ಶಿವಮೊಗ್ಗ-ಬೆಂಗಳೂರು ನಡುವೆ ಆರಂಭವಾಗಿದ್ದು 2023ರ ಆಗಸ್ಟ್ 31ರಂದು. ಬಳಿಕ ಅದೇ ವರ್ಷ ನವೆಂಬರ್ 21ರಂದು ವಾರದಲ್ಲಿ ನಾಲ್ಕು ದಿನ ಶಿವಮೊಗ್ಗದಿಂದ ತಿರುಪತಿ, ಹೈದರಾಬಾದ್ ಹಾಗೂ ಗೋವಾಕ್ಕೂ ವಿಮಾನ ಸಂಚಾರ ಆರಂಭವಾಯಿತು. ಇದುವರೆಗೆ ಶಿವಮೊಗ್ಗ ಏರ್ಪೋರ್ಟ್ ಮೂಲಕ 1.10 ಲಕ್ಷ ಮಂದಿ ಪ್ರಯಾಣಿಸಿದ್ದಾರೆ.
ಕಲಬುರಗಿ ನಗರದ ಹೊರವಲಯದಲ್ಲಿ 2019ರಲ್ಲಿ ಆರಂಭವಾಗಿದ್ದ ನಾಗರಿಕ ವಿಮಾನಯಾನ ಸೇವೆ ಅ.15ರಿಂದ (ಬುಧವಾರ) ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. 6 ವರ್ಷದಿಂದ ವಿಮಾನಯಾನ ಸೇವೆ ನೀಡುತ್ತಿದ್ದ ಸ್ಟಾರ್ ಏರ್ ಕಂಪನಿ ಶೇಕಡ 30-40 ಸೀಟ್ ಖಾಲಿ ಉಳಿಯುತ್ತಿವೆ ಎಂಬ ಕಾರಣ ನೀಡಿ ಎಲ್ಲ ರೀತಿಯ ವಿಮಾನ ಹಾರಾಟ ಸ್ಥಗಿತಗೊಳಿಸಿದೆ. ಆರಂಭದಲ್ಲಿ ಬೆಂಗಳೂರು, ತಿರುಪತಿ, ಹಿಂಡೋನ್ (ದೆಹಲಿ)ಗೆ ವಿಮಾನ ಸೇವೆ ಇತ್ತು. ಒಂದೊಂದಾಗಿ ಸ್ಥಗಿತಗೊಳ್ಳುತ್ತ ಬಂದಿದೆ. ಕೇಂದ್ರ ಸರ್ಕಾರ ‘ಉಡಾನ್’ ಯೋಜನೆ ಕೈಬಿಟ್ಟಿದ್ದರಿಂದ ನಷ್ಟವಾಗುತ್ತಿದೆ ಎಂದು ಸ್ಟಾರ್ ಏರ್ ಕಂಪನಿ ಎಲ್ಲ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ಭಾಗದ ಜನಪ್ರತಿನಿಧಿಗಳು ಆಸಕ್ತಿ ವಹಿಸಿ, ಸರ್ಕಾರದ ಮೇಲೆ ಒತ್ತಡ ಹೇರಿ ಉಡಾನ್ ಸಬ್ಸಿಡಿ ಯೋಜನೆ ಪುನರಾರಂಭಿಸಿದರೆ ಮತ್ತೆ ವಿಮಾನಯಾನ ಸೇವೆ ಶುರುವಾಗಬಹುದು. ಸದ್ಯ ರೆಡ್ ಬಸ್, ಎಪಿಎಫ್ ಸಂಸ್ಥೆಗಳಲ್ಲಿ 200 ವಿದ್ಯಾರ್ಥಿಗಳ ವಿಮಾನಯಾನ ತರಬೇತಿಗೆ ಕಲಬುರಗಿ ವಿಮಾನ ನಿಲ್ದಾಣ ಸೀಮಿತವಾದಂತಾಗಿದೆ. ದಶಕಗಳ ಹೋರಾಟದ ಬಳಿಕ ನಿರ್ಮಾಣವಾಗಿದ್ದ ಕಲಬುರಗಿ ವಿಮಾನ ನಿಲ್ದಾಣ, ಈಗ ವಿಮಾನ ಹಾರಾಟವಿಲ್ಲದೆ ಸ್ತಬ್ಧವಾಗಿದೆ.