ನ್ಯೂಸ್

ಸನಾತನ ಧರ್ಮದಲ್ಲಿ ಮುಕ್ತಿ ಎಂದರೇನು?

ಧರ್ಮ, ಅರ್ಥ, ಕಾಮ ಹಾಗೂ ಮುಕ್ತಿ ಅಥವಾ ಮೋಕ್ಷಗಳು ಸನಾತನ ಧರ್ಮದ ಪ್ರಕಾರ ಮಾನವ ಜೀವನದ ನಾಲ್ಕು ಮುಖ್ಯ ಉದ್ದೇಶಗಳು. ಇವುಗಳನ್ನು ಚತುರ್ವಿಧ ಪುರುಷಾರ್ಥಗಳೆಂದು ಕರೆಯುತ್ತಾರೆ. ಮಾನವನು ಧರ್ಮಬದ್ಧ ಜೀವನವನ್ನು ನಡೆಸುತ್ತ, ನ್ಯಾಯವಾದ ರೀತಿಯಲ್ಲಿ ಅರ್ಥವನ್ನು ಸಂಪಾದಿಸಿ ತನ್ನ ಧರ್ಮಸಮ್ಮತ ಕಾಮನೆಗಳನ್ನು ಪೂರೈಸಿಕೊಂಡು, ಜೀವನದ ಚರಮ ಗುರಿಯಾದ (ಜನನ-ಮರಣ ಚಕ್ರದಿಂದ) ಮುಕ್ತಿಯನ್ನು ಪಡೆಯಬೇಕು.

ಉದಾರ ವೈವಿಧ್ಯತೆಯ ಆಗರವಾದ ಸನಾತನ ಧರ್ಮದ ವಿವಿಧ ಸೈದ್ಧಾಂತಿಕ ಶಾಖೆಗಳಲ್ಲಿ ‘ಮುಕ್ತಿ’ಗೆ ವಿವಿಧ ಅರ್ಥಗಳಿವೆ. ಆಯಾ ಶಾಖೆಗಳ ಅನುಯಾಯಿಗಳು ಆ ಅರ್ಥಗಳನ್ನೇ ನಂಬುತ್ತಾರೆ ಹಾಗೂ ಅಂಥ ಮುಕ್ತಿಯನ್ನೇ ಪರಮಗುರಿಯನ್ನಾಗಿ ಇರಿಸಿಕೊಂಡಿರುತ್ತಾರೆ. ‘ಮುಕ್ತಿ’ ಎಂಬ ಪದದ ಅರ್ಥವೆಂದರೆ ಬಿಡುಗಡೆ ಅಥವಾ ಸ್ವಾತಂತ್ರ್ಯ. ದುಃಖ-ಸಂಕಟಗಳಿಂದ ಬಿಡುಗಡೆ ಹೊಂದಬೇಕಾದರೆ ಜನ್ಮ, ಮೃತ್ಯು, ಜರಾ ಹಾಗೂ ವ್ಯಾಧಿಗಳಿಂದ ಕೂಡಿದ ಜನನ-ಮರಣ ಚಕ್ರದಿಂದ ಹೊರಬರಬೇಕು. ಆದ್ದರಿಂದ ಮುಕ್ತಿಯೆಂದರೆ ಜನನ-ಮರಣ ಚಕ್ರದಿಂದ ಬಿಡುಗಡೆ. ಆಗ ಮಾತ್ರ ಜೀವಿಗೆ ಅನಂತ, ಅಮರ ಆನಂದ ಪ್ರಾಪ್ತಿ ಹಾಗೂ ಶಾಶ್ವತ ದುಃಖ ನಿವೃತ್ತಿಗಳು ಸಾಧ್ಯ. ಇದನ್ನೇ ಶ್ರೀ ಆದಿ ಶಂಕರಾಚಾರ್ಯರು ತಮ್ಮ ಬಹು ಜನಪ್ರಿಯ ರಚನೆ ‘ಭಜ ಗೋವಿಂದಮ್ ನಲ್ಲಿ:

ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ |

ಇಹ ಸಂಸಾರೇ ಬಹು ದುಸ್ತಾರೇ ಕೃಪಯಾ ಪಾರೇ ಪಾಹೀ ಮುರಾರೇ ||

‘ಪುನಃ ಪುನಃ ಒಬ್ಬ ತಾಯಿಯ ಗರ್ಭದಿಂದ ಜನಿಸಿ, ಮರಣಿಸಿ, ಇನ್ನೊಬ್ಬ ತಾಯಿಯ ಗರ್ಭವನ್ನು ಪ್ರವೇಶಿಸುತ್ತ, ದಾರುಣ ಸಂಕಟ ಅನುಭವಿಸುತ್ತಿದ್ದೇನೆ. ಹೇ ಮುರಾರೀ, ನನ್ನ ಮೇಲೆ ಕರುಣೆದೋರಿ ಈ ದುಸ್ತರ ಭವಸಾಗರದಿಂದ ನನ್ನನ್ನು ಪಾರುಮಾಡು’ ಎಂದು ಜೀವಿಯ ಪ್ರಲಾಪವನ್ನು ಚಿತ್ರಿಸಿದ್ದಾರೆ. ಹೀಗೆ ಎಲ್ಲ ದುಃಖ-ಸಂಕಟಗಳಿಂದ ಪಾರಾಗಲು ಮುಕ್ತಿಯೊಂದೇ ದಾರಿ.

ಹದಿಮೂರನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಉದಯಿಸಿದ ಶ್ರೀ ಮಧ್ವಾಚಾರ್ಯರು ದ್ವೈತ ಸಿದ್ಧಾಂತವನ್ನು ಬೋಧಿಸಿ ಪ್ರಚುರಪಡಿಸಿದರು. ದ್ವೈತ ಸಿದ್ಧಾಂತದ ಪ್ರಕಾರ ಜೀವಿಯು (ಜೀವಾತ್ಮನು) ಬೇರೆ, ದೇವನು (ಪರಮಾತ್ಮನು) ಬೇರೆ. ಎಂದೂ ಇಬ್ಬರು ಒಂದಾಗಲು ಸಾಧ್ಯವಿಲ್ಲ. ಜೀವಾತ್ಮನು ಪರಮಾತ್ಮನ ಶಾಶ್ವತ ಸಾನಿಧ್ಯವನ್ನು ಪಡೆಯುವುದೇ ಮುಕ್ತಿ. ಮುಕ್ತಿಯನ್ನು ಪಡೆದ ಜೀವಿಗೆ ಪುನರ್ಜನ್ಮವಿಲ್ಲ; ಆದ್ದರಿಂದ ಮರಣವೂ ಇಲ್ಲ. ಇದನ್ನು ಪಡೆಯಲು ಜೀವಿಯು ಈ ಜಗತ್ತಿನಲ್ಲಿ ಪರಮಾತ್ಮನೆಡೆಗೆ ಭಕ್ತಿ ಹಾಗೂ ಶರಣಾಗತಿಗಳ ಜೀವನ ನಡೆಸಬೇಕು. ದೇಹವನ್ನು ತ್ಯಜಿಸಿದ ಮೇಲೆ ಮಾತ್ರ ಜೀವಿ ಮುಕ್ತಿ ಪಡೆಯುತ್ತಾನೆ. ಇದನ್ನು ‘ವಿದೇಹಮುಕ್ತಿ’ ಎಂದು ಕರೆಯುತ್ತಾರೆ.

ಹದಿನೈದನೆಯ ಶತಮಾನದಲ್ಲಿ ಬಂಗಾಳದಲ್ಲಿ ಜನಿಸಿದ ಶ್ರೀ ಚೈತನ್ಯ ಮಹಾಪ್ರಭುಗಳು ಕೂಡ ಮುಕ್ತಿಯ ಇದೇ ಅರ್ಥವನ್ನು ಪ್ರತಿಧ್ವನಿಸುತ್ತಾರೆ. ಅವರು ಭಗವಾನ್ ಶ್ರೀಕೃಷ್ಣ ಪರಮಾತ್ಮನ ಅನನ್ಯ ಪರಮ ಭಕ್ತರಾಗಿದ್ದರು. ಚೈತನ್ಯ ಮಹಾಪ್ರಭುಗಳ ಪ್ರಕಾರ ಪರಮಾತ್ಮನಲ್ಲಿ ಸಂಪೂರ್ಣ ಶರಣಾಗತನಾದ ಭಕ್ತನು ದೇಹವನ್ನು ತ್ಯಜಿಸಿದ ನಂತರ ಐದು ಹಂತಗಳ ಮುಕ್ತಿಯನ್ನು ಪಡೆಯುತ್ತಾನೆ; ಮೊದಲನೆಯದು, ‘ಸಾಷಿರ್r’- ಇದರಲ್ಲಿ ಭಕ್ತನು ಪರಮಾತ್ಮನಿಗೆ ಸಮಾನವಾದ ಸಂತುಷ್ಟಿಯ ಶ್ರೀಮಂತಿಕೆಯನ್ನು ಪಡೆಯುತ್ತಾನೆ; ಎರಡನೆಯದು, ‘ಸಾಲೋಕ್ಯ’- ಇದರಲ್ಲಿ ಮರಣದ ನಂತರ ಭಕ್ತನು ಪರಮಾತ್ಮನ ಲೋಕದಲ್ಲಿಯೇ (ಈಜಿಡಜ್ಞಿಛಿ ಕ್ಝಚ್ಞಛಿ ಟ್ಛ ಉಜಿಠಠಿಛ್ಞಿ್ಚ) ಶಾಶ್ವತವಾಗಿ ವಾಸಿಸುತ್ತಾನೆ; ಮೂರನೆಯದು, ‘ಸಾಮೀಪ್ಯ’- ಇದರಲ್ಲಿ ಜೀವಾತ್ಮನು ಪರಮಾತ್ಮನ ಲೋಕದಲ್ಲಿ ಅವನ ಅತ್ಯಂತ ಸಮೀಪದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾನೆ; ನಾಲ್ಕನೆಯದು, ‘ಸಾರೂಪ್ಯ’-ಇದರಲ್ಲಿ ಭಕ್ತನು ನಿರಂತರ ಚಿಂತನ-ಧ್ಯಾನಗಳಿಂದಾಗಿ ಪರಮಾತ್ಮನ ಗುಣ-ಲಕ್ಷಣಗಳನ್ನೇ ಹೊಂದುತ್ತಾನೆ; ಹಾಗೂ ಐದನೆಯದು, ‘ಸಾಯುಜ್ಯ’- ಈ ಅಂತಿಮ ಹಂತದಲ್ಲಿ ಜೀವಾತ್ಮನು ಪರಮಾತ್ಮನಲ್ಲಿ ಐಕ್ಯನಾಗುತ್ತಾನೆ. ಭಕ್ತಿಗೆ ಆಧಾರಗ್ರಂಥವೆನಿಸಿರುವ ಶ್ರೀಮದ್ಭಾಗವತದಲ್ಲಿ ವ್ಯಾಸ ಮಹರ್ಷಿಗಳು ಶ್ರೀಕೃಷ್ಣ ಪರಮಾತ್ಮ ಹಾಗೂ ಅವನ ಪರಮ ಭಕ್ತರ ಗುಣ-ಲಕ್ಷಣಗಳನ್ನು ವರ್ಣಿಸುತ್ತ, ಮುಕ್ತಿಯ ಈ ಐದು ಮಜಲುಗಳನ್ನು ಪ್ರಸ್ತಾಪಿಸಿದ್ದಾರೆ.

ಇದೇ ರೀತಿಯಲ್ಲಿ ವಿಶಿಷ್ಟಾದ್ವೈತ ಸಿದ್ಧಾಂತವೂ ಮುಕ್ತಿಯ ಕುರಿತಾಗಿ ತನ್ನ ಅರ್ಥವನ್ನು ನೀಡಿದ್ದು, ಅದು ದ್ವೈತದಲ್ಲಿನ ಅರ್ಥಕ್ಕಿಂತ ಸ್ವಲ್ಪ ಭಿನ್ನವಾಗಿದೆ.

ವಿಶಿಷ್ಟಾದ್ವೈತದ ಪ್ರಕಾರ, ಒಬ್ಬ ಜೀವಿ ತನ್ನ ದೇಹದಲ್ಲಿ ರುವಾಗಲೇ ಮುಕ್ತಿಯನ್ನು ಹೊಂದಬಹು ದೆಂಬುದನ್ನು ತಿಳಿಸುತ್ತದೆ. ಅಂತರ್ಯಾಮಿಯಾದ ಭಗವಂತನನ್ನು ಅರಿತು, ಅವನಿಗೆ ಸಂಪೂರ್ಣ ಶರಣಾದಾಗ, ಬದುಕಿರುವಾಗಲೇ ಆ ಜೀವಿ ಜನನ-ಮರಣಚಕ್ರದಿಂದ ಮುಕ್ತಿ ಪಡೆಯುತ್ತಾನೆ. ಇದನ್ನು ‘ಸದೇಹಮುಕ್ತಿ’ಯೆಂದು ಕರೆಯುತ್ತಾರೆ. ಅಲ್ಲದೆ ವಿಶಿಷ್ಟಾದೈ ್ವವು ಜೀವಾತ್ಮನು ಪರಮಾತ್ಮನ ಒಂದು ಅಂಶವೇ ಎಂದು ಪ್ರತಿಪಾದಿಸಿ, ದೇಹತ್ಯಾಗದ ನಂತರ ಜೀವಾತ್ಮನು ಪರಮಾತ್ಮನಲ್ಲಿ ಐಕ್ಯವಾಗಿ, ದೈ ್ವ ಸಿದ್ಧಾಂತದಲ್ಲಿ ಹೇಳಿರುವಂತೆಯೇ ‘ವಿದೇಹಮುಕ್ತಿ’ಯನ್ನು ಪಡೆಯುತ್ತಾನೆ. ಹನ್ನೊಂದನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ ಜನಿಸಿದ ಶ್ರೀರಾಮಾನುಜಾಚಾರ್ಯರು ವಿಶಿಷ್ಟಾದ್ವೈತವನ್ನು ತಮ್ಮ ಜೀವನ ಹಾಗೂ ಉಪದೇಶಗಳ ಮೂಲಕ ಬಹುಜನಪ್ರಿಯಗೊಳಿಸಿ ಪ್ರಚಾರ ಮಾಡಿದರು. ಎಲ್ಲ ಜೀವಿಗಳೂ ಪರಮಾತ್ಮನ ಅಂಶಗಳೇ ಆಗಿದ್ದು, ಎಲ್ಲರೂ ಸಮಾನರೇ, ಹಾಗೂ ಎಲ್ಲರಿಗೂ ಭಕ್ತಿ, ಸೇವೆ ಮತ್ತು ಪರಮಾತ್ಮನ ಜ್ಞಾನಗಳ ಮೂಲಕ ಮುಕ್ತಿಯನ್ನು ಪಡೆಯಲು ಸಮಾನವಾದ ಹಕ್ಕಿದೆಯೆಂದು ಪ್ರಭಾವಶಾಲಿಯಾಗಿ ಪ್ರತಿಪಾದಿಸಿ ಬೋಧಿಸಿದರು. ಆದರೆ, ಈ ಹಕ್ಕನ್ನು ಸಾಧಿಸಿ ಜನ್ಮ ಸಾಫಲ್ಯವನ್ನು ಪಡೆಯಬೇಕಾದರೆ ಜೀವಿಯು ಶ್ರದ್ಧೆಯಿಂದ ಅದಕ್ಕಾಗಿ ಶ್ರಮಿಸಬೇಕೆಂದು ಕರೆಯಿತ್ತರು.

ಎಂಟನೇ ಶತಮಾನದಲ್ಲಿ ಕೇರಳದ ಮಹಾನ್ ಜ್ಞಾನಿ ಆದಿಶಂಕರಾಚಾರ್ಯರು ಅದೈ ್ವ ಸಿದ್ಧಾಂತವನ್ನು ಪ್ರಪಂಚಕ್ಕೆ ಬೋಧಿಸಿದರು. ಜೀವಾತ್ಮ-ಪರಮಾತ್ಮರು ಬೇರೆಯಲ್ಲ. ಜೀವಾತ್ಮನೇ ಪರಮಾತ್ಮ. ಮಾಯೆಯಿಂದಾಗಿ ಜೀವಿಯು ತಾನು ಪರಮಾತ್ಮನಿಗಿಂತ ಭಿನ್ನವೆಂಬ ಆಜ್ಞಾನದ ಭ್ರಮೆಗೊಳಗಾಗುತ್ತಾನೆ. ತಾನು ದೇಹದಲ್ಲಿರುವಾಗಲೇ ವಿವೇಕ-ವೈರಾಗ್ಯಗಳನ್ನು ಬೆಳೆಸಿಕೊಂಡು ಆತ್ಮವಿಚಾರದ ಮೂಲಕ ಈ ಭ್ರಮೆಯಿಂದ ಹೊರಗೆಬಂದ ಕೂಡಲೇ ಮುಕ್ತಿ ಪಡೆಯಬಹುದು. ಇದನ್ನು ‘ಜೀವನ್ಮುಕ್ತಿ’ಯೆಂದು ಕರೆಯುತ್ತಾರೆ. ಆದಿಶಂಕರರು ಘೊಷಿಸಿರುವಂತೆ, ‘ಬ್ರಹ್ಮ ಸತ್ಯಂ ಜಗತ್ ಮಿಥ್ಯಾ, ಜಿವೋ ಬ್ರಹ್ಮೈವ ನಾಪರಃ - ಬ್ರಹ್ಮವೊಂದೇ ಸತ್ಯ; ಜಗತ್ತೆಲ್ಲವೂ ಮಿಥ್ಯೆಯೇ; ಜೀವಿಯು ಬ್ರಹ್ಮನಿಗಿಂತ ಭಿನ್ನವಲ್ಲ. ಇದನ್ನೇ ‘ಅಷ್ಟಾವಕ್ರಗೀತೆ’ಯಲ್ಲಿ ಅಷ್ಟಾವಕ್ರಮಹರ್ಷಿಯು ಜನಕ ಮಹಾರಾಜನಿಗೆ ಬೋಧಿಸಿರುವಂತೆ:

ಧರ್ವಧಮೌ ಸುಖಂ ದುಃಖಂ ಮಾನಸಾನಿ ನ ತೇ ವಿಭೋ |

ನ ಕರ್ತಾಸಿ ನ ಭೋಕ್ತಾಸಿ ಮುಕ್ತಯೇವಾಸಿ ಸರ್ವದಾ || (1.6)

‘ಹೇ ವಿಭುವೇ, ಧರ್ಮ-ಅಧರ್ಮಗಳಾಗಲೀ, ಸುಖ-ದುಃಖಗಳಾಗಲೀ ನಿನ್ನ ಮನಸ್ಸಿಗೆ ಸಂಬಂಧಿಸಿವೆಯೇ ಹೊರತು, ನಿನಗಲ್ಲ. ನೀನು ಕರ್ತವೂ ಅಲ್ಲ,

ಭೋಕೃ ್ತೂ ಅಲ್ಲ, ನೀನು ಸದಾ ಮುಕ್ತನೇ!’

ಮುಕ್ತಿಗೆ ಮೇಲೆ ಹೇಳಿರುವಂತೆ ಅನೇಕ ಅರ್ಥಗಳಿರುವಾಗ, ಇವುಗಳಲ್ಲಿ ಯಾವುದು ಸತ್ಯವೆಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ. ಸನಾತನ ಧರ್ಮವು ವಿವಿಧತೆಯಲ್ಲಿ ಏಕತ್ವವನ್ನು ದರ್ಶಿಸಿ ಸಮನ್ವಯವನ್ನು ಸಾಧಿಸುವ ಶಕ್ತಿ ಹೊಂದಿದ್ದು, ‘ಮುಕ್ತಿ’ಗೆ ಈ ಎಲ್ಲ ಅರ್ಥಗಳನ್ನೂ ಅಂಗೀಕರಿಸುತ್ತದೆ. ಅನಂತಸ್ವರೂಪನಾದ ಪರಬ್ರಹ್ಮನನ್ನು ಅಥವಾ ಪರಮಾತ್ಮನನ್ನು ಅರಿತು ಜೀವನ ಸಾಫಲ್ಯ ಪಡೆಯಲು ಅನಂತ ಪಥಗಳಿವೆಯೆಂದು ಸಾರುತ್ತದೆ. ಯಾರಿಗೆ ತಾನು ದೇಹವೆಂಬ ಭಾವನೆಯನ್ನು ಬಿಟ್ಟು ಹೊರಗೆ ಬರಲು ಸಾಧ್ಯವಿಲ್ಲವೋ, ಅವರು ದೈ ಪಥವನ್ನು ಅನುಸರಿಸಬಹುದು. ಏಕೆಂದರೆ ದೈ ಪಥದ ಪ್ರಕಾರ ‘ಅರಿಯುವುದು’ ಎಂದರೆ ಜೀವಾತ್ಮ ಹಾಗೂ ಪರಮಾತ್ಮನ ಮಧ್ಯೆಯಿರುವ ಭಿನ್ನತೆಯನ್ನು ತಿಳಿಯುವುದಾಗಿದೆ. ಹಾಗೂ ಭಕ್ತಿ ಮತ್ತು ಶರಣಾಗತಿಗಳ ಮೂಲಕ ಜೀವಾತ್ಮನು ಪರಮಾತ್ಮನನ್ನು ಹೊಂದಬಹುದಾಗಿದೆ. ಶರಣಾಗತಿ ಭಾವದ ಪರಾಕಾಷ್ಠೆ ತಲುಪಿದ ಜೀವಿ ಕೂಡಲೇ ಮುಕ್ತನಾಗುತ್ತಾನೆ; ಏಕೆಂದರೆ ಆ ಸ್ಥಿತಿಯಲ್ಲಿ ಜೀವಿಯ ಮನಸ್ಸು ಹಾಗೂ ಬುದ್ಧಿಗಳು ಪರಮಾತ್ಮನ ಭಕ್ತಿಯಲ್ಲಿ ಒಂದಾಗಿರುತ್ತವೆ; ಅಲ್ಲದೆ ದೇಹವು ಪರಮಾತ್ಮನ ಉಪಾಸನೆಯಿಂದಾಗಿ ಪರಿಶುದ್ಧವಾಗಿರುತ್ತದೆ. ಪರಮಾತ್ಮನ ಪರಮಪ್ರೇಮ ಹಾಗೂ ನಿರಂತರ ಸೇವೆಗಳಿಂದ ಭಕ್ತನಿಗೆ ಲಭ್ಯವಾಗುವ ಆನಂದ, ಮುಕ್ತಿಯ ಆನಂದಕ್ಕಿಂತ ಭಿನ್ನವಾದುದಲ್ಲ. ಆದರೆ ಅವರಲ್ಲಿ ದೇಹಾತ್ಮಭಾವವು ಉಳಿದಿರುವುದರಿಂದ, ಅವರಿಗೆ ನಿಜವಾದ ಮುಕ್ತಿ ಮರಣದ ನಂತರವೇ ಪ್ರಾಪ್ತವಾಗುತ್ತದೆ. ಅದುವೇ ವಿದೇಹಮುಕ್ತಿ.

ವಿಶಿಷ್ಟಾದೈತ್ವ ಜೀವಾತ್ಮನು ಪರಮಾತ್ಮನೇ ಎಂಬುದನ್ನು ಒಪ್ಪದಿದ್ದರೂ, ಜೀವಾತ್ಮನು ಆ ಪರಮಾತ್ಮನ ಒಂದು ಅಂಶವೆಂದು ನಂಬುತ್ತದೆ. ಆದ್ದರಿಂದ ಜೀವಿ ತನಗೆ ಇಷ್ಟವಾದ ಪರಮಾತ್ಮನ ಯಾವುದಾದರೂ ಒಂದು ನಾಮ-ರೂಪವನ್ನು ಸತತವಾಗಿ ಉಪಾಸನೆ ಮಾಡುವಾಗಲೇ ತನ್ನ ಅಂತರಂಗದಲ್ಲಿರುವ ಪರಮಾತ್ಮನ ಅಸ್ತಿತ್ವವನ್ನು ಅರಿತು ಅನುಭವಿಸುತ್ತಾನೆ. ಈ ರೀತಿಯಲ್ಲಿ ಜೀವಿ ದೇಹಭಾವದಿಂದ ಉದ್ಭವವಾಗುವ ಎಲ್ಲ ಮೋಹ ಹಾಗೂ ಕಾಮನೆಗಳನ್ನು ತ್ಯಜಿಸಲು ಸಾಧ್ಯವಾಗುತ್ತದೆ. ಹೀಗೆ ಜೀವಿ ಆ ಕ್ಷಣದಲ್ಲಿಯೇ ಎಲ್ಲ ದುಃಖಗಳಿಂದ ಬಿಡುಗಡೆ ಪಡೆದರೂ, ಮುಕ್ತಿಯನ್ನು ದೇಹದ ಮರಣದ ನಂತರವೇ ಪಡೆಯುತ್ತಾನೆ.

ಅದೈತ್ವ ಸಿದ್ಧಾಂತದ ಪ್ರಕಾರ ‘ಅರಿಯುವುದು’ ಎಂದರೆ, ಜೀವಿ ತಾನು ದೇಹವೆಂಬ ಅಜ್ಞಾನದ ಭ್ರಮೆಯನ್ನು ತೊರೆದು, ತಾನು ಬ್ರಹ್ಮನೇ ಎಂದು ತಿಳಿಯುವುದಾಗಿದೆ. ಇದರ ಪ್ರಕಾರ ಜೀವಾತ್ಮ ಹಾಗೂ ಪರಮಾತ್ಮರಲ್ಲಿ ಯಾವ ಬೇಧವೂ ಇಲ್ಲ. ಕೇವಲ ಮಾಯೆಯಿಂದಾಗಿ ಬೇಧಭಾವನೆಯ ಅಜ್ಞಾನವು ಜೀವಿಯನ್ನು ಆವರಿಸುತ್ತದೆ. ಆಗಲೂ ಪರಮಾತ್ಮನು ಬಿಂಬವಾದರೆ, ಜೀವಾತ್ಮವು ಪ್ರತಿಬಿಂಬ. ಹಾಗಾದರೆ ಇಬ್ಬರೂ ಒಂದೇ ಆಗಿರುವಾಗ, ಮುಕ್ತಿಯ ಅವಶ್ಯಕತೆಯಾದರೂ ಏನು? ಇಬ್ಬರೂ ಒಂದೇ ಎಂಬ ಸತ್ಯವನ್ನು ಸ್ವಾನುಭವದಿಂದ ಅರಿತು, ಎಲ್ಲ ಸಂಶಯಗಳನ್ನೂ ನೀಗಿಕೊಳ್ಳುವುದೇ ಮುಕ್ತಿ. ಇಂತಹ ಸ್ಥಿತಿಯಲ್ಲಿ ಸ್ಥಿರವಾಗಿ ನಿಂತು ಸ್ಥಿತಪ್ರಜ್ಞನಾಗುವವರೆಗೂ, ಜೀವಿಯು ಆಧ್ಯಾತ್ಮಿಕ ಸಾಧನೆ ಮಾಡುತ್ತ ಪರಿಪೂರ್ಣ ಪರಿಶುದ್ಧತೆ ಹಾಗೂ ನಿಷ್ಕಾಮ ಜೀವನಗಳ ಪಥದಲ್ಲಿ ಸಾಗಬೇಕಾಗುತ್ತದೆ. ಹೀಗೆ ಸನಾತನ ಧರ್ಮದಲ್ಲಿ ಅನಂತ ಸ್ವರೂಪನಾದ ಪರಮಾತ್ಮನನ್ನು ಅರಿತು ಅನುಭವಿಸಲು ಜೀವನಸಾಫಲ್ಯವನ್ನು ಪಡೆಯಲು ಮಾನವರಿಗೆ ಅನಂತ ಮಾರ್ಗಗಳಿವೆ. ಅವರವರಿಗೆ ಇಷ್ಟವಾದ ಮಾರ್ಗವನ್ನು ಅವರು ಆರಿಸಿಕೊಳ್ಳಬಹುದು.

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)