ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ನಾವು ನ್ಯಾಯಾಲಯದ ಸಂಕಷ್ಟ ಸ್ಥಿತಿ ನೀರು ಹಂಚಿಕೆ ಸೂತ್ರವನ್ನು ಗೌರವಿಸುತ್ತೇವೆ. ತಮಿಳುನಾಡಿನವರು ಇಷ್ಟು ಆತುರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಅಗತ್ಯ ಇರಲಿಲ್ಲ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ.
ಜಲಸಂಪನ್ಮೂಲ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿ, ತಮಿಳುನಾಡಿನ ಅರ್ಜಿ ವಿಚಾರವಾಗಿ ಕಾನೂನು ತಜ್ಞರ ಜತೆ ಚರ್ಚೆ ಮಾಡುತ್ತೇನೆ. ನಾವು ಯಾವುದೇ ಸಂಘರ್ಷಕ್ಕೆ ಮುಂದಾಗುವ ಮನಸ್ಥಿತಿ ಇಲ್ಲ. ನಾವೆಲ್ಲರೂ ಅಣ್ಣತಂಮ್ಮಂದಿರಂತೆ. ಸಂಘರ್ಷಕ್ಕೆ ಇಳಿಯದೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ನಮ್ಮ ಅಗತ್ಯ ಪ್ರಮಾಣದ ಕುಡಿಯುವ ನೀರು ಇಟ್ಟುಕೊಂಡು ತಮಿಳುನಾಡಿಗೆ ನೀರು ನೀಡಲು ಬದ್ಧರಾಗಿದ್ದೇವೆ. ನೀರು ಹರಿಸುವ ಸಂಪೂರ್ಣ ಅಧಿಕಾರ ಪ್ರಾಧಿಕಾರದ ಬಳಿ ಇದೆ. ನಾವು ಎರಡೂ ರಾಜ್ಯದ ರೈತರನ್ನು ಉಳಿಸಬೇಕಿದೆ. ಎಲ್ಲರೂ ವಾಸ್ತವಾಂಶ ಅರಿತು ಹೆಜ್ಜೆ ಇಡಬೇಕಿದೆ ಎಂದರು.
ಎರಡೂ ರಾಜ್ಯಗಳ ಹಿತ ಕಾಯಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಹಂಗಾಮಿನಲ್ಲಿ ಬೀಳುತ್ತಿರುವ ಮಳೆ ಹಾಗೂ ಆಣೆಕಟ್ಟುಗಳಿಗೆ ಒಳಹರಿವು ಪ್ರಮಾಣ ಆಧರಿಸಿ ಕ್ರಮ ಕೈಗೊಳ್ಳುತ್ತಿದ್ದೇವೆ. ಮಂಡ್ಯದ ರೈತರಿಗೆ ಯಾವುದೇ ರೀತಿಯ ಬಿತ್ತನೆ ಮಾಡಬೇಡಿ ಮನವಿ ಮಾಡಲಾಗಿದೆ. ನಮ್ಮ ರೈತರ ಜಮೀನು ಒಣಗಬಾರದು, ಅದೇ ರೀತಿ ತಮಿಳುನಾಡಿನ ರೈತರ ಜಮೀನು ಒಣಗಬಾರದು. ಹಾಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.