ಶಿವಮೊಗ್ಗ: ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ, ನೆಲೆ ಸಿಗದು. ಸಂಸ್ಕಾರದಿಂದ ಬೆಲೆಯುಳ್ಳ ಬದುಕು ಸಾರ್ಥಕವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಮಂಗಳವಾರ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಕೈಗಾರಿಕಾ ತರಬೇತಿ ಸಂಸ್ಥೆ ಆಶ್ರಯದಲ್ಲಿ ಜರುಗಿದ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ಎಸ್‌ಜೆಪಿ ಐಟಿಐನ 31ನೇ ವಾರ್ಷಿಕೋತ್ಸವ ಹಾಗೂ ವೀರಶೈವ ಲಿಂಗಾಯತ ವಧು-ವರರ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಒಂದಿಷ್ಟಾದರೂ ಶಿವಜ್ಞಾನದ ಅರಿವು ಮತ್ತು ಧರ್ಮಪ್ರಜ್ಞೆ ಬೆಳೆಸಿಕೊಳ್ಳುವ ಅಗತ್ಯವಿದೆ. ಮನುಷ್ಯನಿಗೆ ನೀರು, ಅನ್ನ ದೈಹಿಕ ವಿಕಾಸಕ್ಕೆ ಕಾರಣವಾದರೆ, ಧರ್ಮ ಬದುಕನ್ನು ವಿಕಾಸಗೊಳಿಸುತ್ತದೆ. ದುಡಿಮೆಯ ಬೆವರಿನಿಂದ ಗಳಿಸಿದ್ದು ಶಾಶ್ವತ ಮತ್ತು ಸುಖದಾಯಕ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಕಾಯಕವೇ ಕಳಾ ಚೈತನ್ಯವೆಂದು ಬೋಧಿಸಿದ್ದಾರೆ. ಪರಿಶ್ರಮ-ಸಾಧನೆಯಿಲ್ಲದೆ ಶ್ರೇಯಸ್ಸು ಸಿಗಲಾರದು ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ವಿಘ್ನೇಶ್ವರಯ್ಯ ಸೋಲಾಪುರ ಅವರು ಛಲದಂಕ ಮಲ್ಲನಾಗಿ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಸ್ವಾವಲಂಬನೆಯ ಬದುಕಿಗೆ ಶಕ್ತಿ ತುಂಬಿದ್ದಾರೆ. ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ವಧು-ವರರ ಸಮಾವೇಶ ಹಮ್ಮಿಕೊಂಡಿರುವುದು ಅವರ ದೂರದೃಷ್ಟಿ ಮತ್ತು ಗುಣಾತ್ಮಕ ಕಾರ್ಯಗಳಿಗೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್‌ಆರ್‌ಎನ್‌ಇ ಸಂಸ್ಥೆ ಅಧ್ಯಕ್ಷ ಹುನಗುಂದ ಎಸ್.ಆರ್.ನವಲಿ ಹಿರೇಮಠ ಮಾತನಾಡಿ, ವಿಘ್ನೇಶ್ವರಯ್ಯ ಸೋಲಾಪುರ ತಮ್ಮ ಧಾರ್ಮಿಕ ಸಾಮಾಜಿಕ ಕಾರ್ಯಗಳಿಂದ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ವಿಘ್ನೇಶ್ವರಯ್ಯ ಸೋಲಾಪುರ ಮಾತನಾಡಿ, ಸಂಸ್ಥೆ ಅಲ್ಪಾವಧಿಯಲ್ಲಿ ಇಷ್ಟೊಂದು ಬೆಳೆಯಬೇಕಾದರೆ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ, ಮಾರ್ಗದರ್ಶನ, ಕೈ ಜೋಡಿಸಿದ ಸಂಸ್ಥೆಯ ಸಿಬ್ಬಂದಿಯ ಪರಿಶ್ರಮ ಕಾರಣ ಎಂದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಎಂಆರ್‌ಎಸ್ ವೃತ್ತದಿಂದ ಐಟಿಐ ಕಾಲೇಜುವರೆಗೆ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ನೂತನ ಕಾಯಕ ಕಳಾ ಚೈತನ್ಯ ವೇದಿಕೆಯನ್ನು ಉದ್ಘಾಟಿಸಲಾಯಿತು. ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮುಂಡರಗಿಯ ಪ್ರಭಾವತಿ ವಿಶ್ವನಾಥ ಹಿರೇಮಠ ಅವರು ಸಂಸ್ಥೆಯ ಏಳಿಗೆ ಕುರಿತು ಮಾತನಾಡಿದರು. ನಿಧಿಗೆಯ ಟಿಎಂಎಇಎಸ್ ಆಯುರ್ವೇದ ಮಹಾವಿದ್ಯಾಲಯದ ವೈದ್ಯರಿಂದ ಆರೋಗ್ಯ ತಪಾಸಣೆ ಜರುಗಿತು.
ಬಿ.ಟಿ.ಶೇಖರಪ್ಪ, ಲಿಂಗಸುಗೂರು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸರ್ವೇಶ್ವರಿ, ಎಸ್.ಜಿ.ಶೇಖರ, ಮಂಜುನಾಥ, ಸಿ.ಎಚ್.ಬಾಳನಗೌಡ ಗೌರವ ಸನ್ಮಾನ ಸ್ವೀಕರಿಸಿದರು. ಶಿವಮೊಗ್ಗ ನಿವೃತ್ತ ಇಂಜನಿಯರ್ ನಾಗರಾಜ ಬೆಳಕೇರಿಮಠ ಹಾಗೂ ಜಾವಳ್ಳಿ ದಯಾನಂದಸ್ವಾಮಿ ಗುರುರಕ್ಷೆ ಸ್ವೀಕರಿಸಿದರು. ಮಳಲಿ ಸಂಸ್ಥಾನದ ಶ್ರೀ ನಾಗಭೂಷಣ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.