ವಿಜಯವಾಡ: ಕರೊನಾ ಸೋಂಕಿನ ಬಗ್ಗೆ ಅದೆಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಅದರ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಳ್ಳುವುದನ್ನು ಬಿಟ್ಟಿಲ್ಲ. ಇನ್ನೊಂದೆಡೆ ಅದರ ಬಗ್ಗೆ ಭಯ ಪಡುವುದನ್ನೂ ಕಡಿಮೆ ಮಾಡಿಕೊಂಡಿಲ್ಲ. ಅದೇ ರೀತಿಯ ಭಯದಿಂದಾಗಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಕೃಷ್ಣ ಜಿಲ್ಲೆಯ ವಾಸಿಗಳಾಗಿದ್ದ ಪ್ರಸಾದ್ (40) ಮತ್ತು ಅವರ ಪತ್ನಿ ಭಾರತಿ (37) ಕಳೆದ 10 ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಇತ್ತೀಚೆಗೆ ಅವರ ಕರೊನಾ ಪರೀಕ್ಷೆಯನ್ನೂ ಮಾಡಿಸಲಾಗಿತ್ತು. ಅವರ ಕರೊನಾ ವರದಿ ಪಾಸಿಟಿವ್ ಬಂದಿದೆ. ಇದರಿಂದಾಗಿ ದಂಪತಿ ಭಯಭೀತರಾಗಿದ್ದಾರೆ.
ನಮಗೆ ಸೋಂಕು ಬಂದಿದೆ, ನಮ್ಮಿಂದ ಆ ಸೋಂಕು ನಮ್ಮ ಮಕ್ಕಳಿಗೂ ಹರಡಿ ಬಿಡಬಹುದು ಎಂದು ಭಯ ಶುರುವಾಗಿದೆ. ಹಾಗಾಗದಿರಲಿ ಎನ್ನುವ ಕಾರಣಕ್ಕೆ ದಂಪತಿ ಒಂದು ಕಠಿಣ ನಿರ್ಧಾರ ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ದಂಪತಿಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿ, ಅಂತ್ಯಸಂಸ್ಕಾರ ಮಾಡಲಾಗಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)