ಕೆ.ಎಂ.ದೊಡ್ಡಿಯ ಡಿ.ಸಿ.ತಮ್ಮಣ್ಣ ಅವರ ನಿವಾಸದ ಆವರಣದಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಿದರು. ಡಿ.ಸಿ.ತಮ್ಮಣ್ಣ, ವಿವೇಕಾನಂದ, ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ಡಿ.ರಮೇಶ್, ಹಾಗಲಹಳ್ಳಿ ಚಿಕ್ಕತಿಮ್ಮೇಗೌಡ, ಕಂಸಾಗರ ರವಿ ಇತರರಿದ್ದರು. 
ನ್ಯೂಸ್

ಕೃಷಿ ಸಚಿವರೇ ರಾಜ್ಯದ ರೈತರಿಗೆ ಏನು ಮಾಡಿದ್ದೀರಾ?

ಕೆ.ಎಂ.ದೊಡ್ಡಿ: ರಾಜ್ಯದ ಕೃಷಿ ಸಚಿವರೇ ರೈತರಿಗೆ ಏನು ಮಾಡ್ತಿದ್ದೀರಾ? ಕುಮಾರಣ್ಣ ಅವರು ದೆಹಲಿಯಲ್ಲಿ ರೈತರಿಗೆ ಏನು ಮಾಡ್ಬೇಕೊ ಮಾಡ್ತಿದ್ದಾರೆ. ನೀವು ಏನು ಮಾಡಿದ್ದೀರಾ? ಹೇಳಿ ಎಂದು ಸಚಿವ ಚಲುವರಾಯಸ್ವಾಮಿಗೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು.

ಇಲ್ಲಿನ ಡಿ.ಸಿ. ತಮ್ಮಣ್ಣ ನಿವಾಸದ ಆವರಣದಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಚಲುವರಾಯಸ್ವಾಮಿ ಅವರೇ ಕುಮಾರಸ್ವಾಮಿ ಅವರ ಬಗ್ಗೆ ಟೀಕೆ ಮಾಡಿದ್ರೆ ಯಾರ ಹೊಟ್ಟೇನೂ ತುಂಬುವುದಿಲ್ಲ ಎಂದು ಮಾರ್ಮಿಕವಾಗಿ ತರಾಟೆಗೆ ತೆಗೆದುಕೊಂಡರು.

ನೀವು ರಾಜಕಾರಣದಲ್ಲಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದೀರಾ ಅಲ್ವಾ. ಯಾರ ಆಶಯದಿಂದ? ನಿಮ್ಮ ಬಗ್ಗೆ ನನಗೆ ಗೌರವವಿದೆ. ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ. ನಿಮ್ಮ ರಾಜಕೀಯ ಬೆಳವಣಿಗೆಗೆ ಯಾರು ಕಾರಣ ಎಬುವುದನ್ನು ನಿಮಗೆ ನೀವೇ ಪ್ರಶ್ನೆ ಮಾಡಿಕೊಳ್ಳಿ ಎಂದು ತಿಕ್ಷ್ಣವಾಗಿ ಉತ್ತರಿಸಿದರು.

ಕೇಂದ್ರ ಕೈಗಾರಿಕಾ ಸಚಿವರಾಗಿ ಕುಮಾರಸ್ವಾಮಿ ಅವರು ಕೈಗಾರಿಕೆಗಳನ್ನ ತಂದಿಲ್ಲ ಎಂಬ ಮಾತುಗಳು ಬರ್ತಿವೆ. ಕೈಗಾರಿಕೆ ತರುವ ವಿಚಾರದಲ್ಲಿ ರಾಜ್ಯ ಸರ್ಕಾರದ ಜವಬ್ದಾರಿಯೂ ಇದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬಿಟ್ಟು ಎಚ್‌ಡಿಕೆಗೆ ರಾಜ್ಯ ಸರ್ಕಾರ ಸಹಕಾರ ಕೊಡಬೇಕು ಎಂದು ತಿಳಿಸಿದರು.

ಮತ್ತೆ ಮುಖ್ಯಮಂತ್ರಿ ಆಗ್ಬೇಕು: ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು. ಮೂರನೇ ಬಾರಿಗೆ 5 ವರ್ಷ ಪೂರ್ಣಾವಧಿ ಅಧಿಕಾರ ಮಾಡಬೇಕು. ಈ ಹಿಂದೆ ಕೊಟ್ಟ 20 ತಿಂಗಳ ಆಡಳಿತ ಎಲ್ಲರ ಮನಮುಟ್ಟಿದೆ. ರಾಜ್ಯದ ಎಲ್ಲ ವರ್ಗದ ಜನರು ಚ್‌ಡಿಕೆ ಮತ್ತೆ ಸಿಎಂ ಆಗಬೇಕು ಅನ್ನೋ ಆಶಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಾಡಿಗೆ ನೀಡಿದ ಕೊಡುಗೆಯನ್ನು ತಿಳಿಸಿ 2028ಕ್ಕೆ ಜೆಡಿಎಸ್ ಮತ್ತೊಮ್ಮೆ ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸೋಣ ಎಂದರು.

ಕುಮಾರಸ್ವಾಮಿ ಅವರು ಲೋಕಸಭೆಗೆ ಕೊನೇ ಕ್ಷಣದಲ್ಲಿ ಸ್ಪರ್ಧೆ ಮಾಡಿದರು. ಪ್ರಚಂಡ ಬಹುಮತದಲ್ಲಿ ಮಂಡ್ಯ ಜನರು ಗೆಲ್ಲಿಸಿದ್ರು. ಆರ್ಥಿಕತೆಯಲ್ಲಿ ಭಾರತ 5ನೇ ಸ್ಥಾನಕ್ಕೇರಿದೆ. 3ನೇ ಸ್ಥಾನಕ್ಕೆ ತರಲು ಮೋದಿಯವರ ಪ್ರಯತ್ನಕ್ಕೆ ಕುಮಾರಸ್ವಾಮಿ ಬೆಂಬಲವಾಗಿ ನಿಂತಿದ್ದಾರೆ ಎಂದು ಎಂದು ತಿಳಿಸಿದರು.