Plane : ಬಸ್ ಅಥವಾ ರೈಲಿನಲ್ಲಿ ಯಾವುದಾದರೂ ಖಾಲಿ ಸೀಟು ಕಂಡಾಗ, ಅದು ಇಷ್ಟವಾದರೆ ಸಾಕು ನಾವು ಮೊದಲೇ ಕುಳಿತಿದ್ದ ಸೀಟನ್ನು ಬಿಟ್ಟು ಅಲ್ಲಿಗೆ ಹೋಗಿ ಕುಳಿತುಬಿಡುತ್ತೇವೆ. ಇದು ಸಹಜ. ಆದರೆ, ಇದೇ ಪ್ರಯತ್ನವನ್ನು ನೀವು ವಿಮಾನದಲ್ಲಿ ಮಾಡಿದರೆ ಏನಾಗಬಹುದು? ಈ ಬಗ್ಗೆ ವರ್ಜಿನ್ ಅಟ್ಲಾಂಟಿಕ್ ವಿಮಾನ ಸಂಸ್ಥೆಯ ಮಾಜಿ ಕ್ಯಾಪ್ಟನ್ ಮತ್ತು ಪೈಲಟ್ ಪೀಟ್ ಹಚಿಸನ್ ಅವರು ಆಸಕ್ತಿದಾಯಕ ಮಾಹಿತಿಯನ್ನು ನೀಡಿದ್ದಾರೆ.
ವಿಮಾನ ಟೇಕಾಫ್ ಆಗುವ ಸಮಯದಲ್ಲಿ ನೀವು ಬುಕ್ ಮಾಡಿದ ಸ್ಥಳವನ್ನು ಬಿಟ್ಟು ಖಾಲಿ ಸೀಟಿಗೆ ಹೋಗಿ ಕುಳಿತುಕೊಳ್ಳುವುದನ್ನು ತಪ್ಪಿಸಬೇಕು ಎಂದು ಪೀಟ್ ಹಚಿಸನ್ ಹೇಳಿದ್ದಾರೆ. ಏಕೆಂದರೆ, ಈ ರೀತಿ ಮಾಡುವುದು ತುಂಬಾನೇ ಅಪಾಯಕಾರಿ ಎಂದಿರುವ ಹಚಿಸನ್, ವಿಮಾನದ ರಚನೆಯನ್ನು ಸ್ವಿಂಗ್ ಮತ್ತು ಸೀಸಾಗೆ ಹೋಲಿಸುತ್ತಾರೆ.
ವಿಮಾನಯಾನ ಸಂಸ್ಥೆಗಳು, ಪ್ರಯಾಣಿಕರು, ಅವರು ತೆಗೆದುಕೊಂಡು ಬಂದ ಸಾಮಾನುಗಳು ಮತ್ತು ಸರಕುಗಳ ತೂಕವನ್ನು ಲೆಕ್ಕಹಾಕುವ ಮೂಲಕ ವಿಮಾನದ ಒಟ್ಟು ತೂಕವನ್ನು ಸಮತೋಲನಗೊಳಿಸುತ್ತವೆ. ತೂಕವನ್ನು ಸುರಕ್ಷಿತ ಮಿತಿಯೊಳಗೆ ಇಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಇದನ್ನು ಮಾಡಲು, ವಿಮಾನದ ಸಿಬ್ಬಂದಿ ಆಗಾಗ್ಗೆ ಪ್ರಯಾಣಿಕರು, ಸರಕು ಮತ್ತು ಸಾಮಾನುಗಳ ಸ್ಥಾನವನ್ನು ಸರಿಹೊಂದಿಸುತ್ತಾರೆ ಎಂದು ಸುಮಾರು 40 ವರ್ಷಗಳ ಹಾರಾಟದ ಅನುಭವ ಹೊಂದಿರುವ ಪೀಟ್ ತಿಳಿಸಿದರು.
ಒಂದು ವೇಳೆ ತೂಕವು ಸಮಾನವಾಗಿಲ್ಲದಿದ್ದರೆ ಅಥವಾ ಸಮತೋಲನದಲ್ಲಿ ಇಲ್ಲದಿದ್ದರೆ ನೂರಾರು ಬಾರಿ ಹಾರಾಟ ನಡೆಸಿದ ಅನುಭವಿ ಪೈಲಟ್‌ಗು ಸಹ ವಿಮಾನದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ವಿಮಾನದ ಕ್ಯಾಬಿನ್‌ನಲ್ಲಿ ನೀವು ಯಾವ ಸೀಟಿನಲ್ಲಿ ಕುಳಿತುಕೊಳ್ಳುತ್ತೀರಿ ಎಂಬುದು ತುಂಬಾ ಮುಖ್ಯ. ಹಾರಾಟಕ್ಕೂ ಮೊದಲೇ ಸಿಬ್ಬಂದಿಯ ಅನುಮತಿಯೊಂದಿಗೆ ನೀವು ಸೀಟುಗಳನ್ನು ಬದಲಾಯಿಸಲು ಸಾಧ್ಯವಾಗಬಹುದು ಆದರೆ, ಟೇಕ್ ಆಫ್ ಮತ್ತು ಲ್ಯಾಂಡಿಂಗ್ ನಡುವೆ ನೀವು ನಿಮ್ಮ ನಿಗದಿಪಡಿಸಿದ ಸೀಟಿನಲ್ಲಿಯೇ ಇರಬೇಕು' ಎಂದು ಪೀಟ್ ವಿವರಿಸಿದರು.
ಕಡಿಮೆ ಪ್ರಯಾಣಿಕರಿರುವ ವಿಮಾನಗಳಲ್ಲಿ ಹೆಚ್ಚಿನ ಗಮನ ವಹಿಸಬೇಕು. ಏಕೆಂದರೆ, ಶೇ. 80 ಕ್ಕಿಂತ ಕಡಿಮೆ ಪ್ರಯಾಣಿಕರಿದ್ದಾಗ, ಆಸನಗಳನ್ನು ಬದಲಾಯಿಸುವುದು ಸಾಮಾನ್ಯ. ಈ ನಡೆ ದುರಂತಕ್ಕೆ ಕಾರಣವಾಗಬಹುದು ಎಂದು ಪೀಟ್ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)