ನ್ಯೂಸ್

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸಿಎಂ, ಡಿಸಿಎಂ ಸಂಕಲ್ಪ ಮಾಡಿದ್ದೇನು ?

ಬೆಂಗಳೂರು: ಬಡ ಯಜಮಾನಿಗೆ ಮಾಸಿಕ ಎರಡು ಸಾವಿರ ರೂ ನೀಡುವ ಗೃಹಲಕ್ಷ್ಮಿ ಯೋಜನೆಗೆ ಇತ್ತೀಚೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಯಿತಷ್ಟೇ. ಈ ಸಮಾರಂಭಕ್ಕೆ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಡದೇವಿ ಚಾಮುಂಡೇಶ್ವರಿ ಸನ್ನಿಧಿಗೆ ಕಾಣಿಕೆ ಸಲ್ಲಿಸುವ ಮುನ್ನ ಸಂಕಲ್ಪ ಮಾಡಿದ್ದೇನು ? ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಹರಕೆ ತೀರಿಸಲು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋದಾಗ ‘ಆರ್ಯವರ್ತೆ, ಜಂಬೂದ್ವೀಪೆ, ಭರತ ವರ್ಷೇ, ಭರತ ಖಂಡೇ.....’ ಎಂದು ಸಂಕಲ್ಪ ಮಾಡಿ ಪೂಜೆ ಮಾಡಿಸಿದ್ದರು. ಸ್ವಹಿತಾಸಕ್ತಿಯ ಗಾಂಧಿ ಕುಟುಂಬದ ಪ್ರಭಾವಕ್ಕೆ ಒಳಗಾದವರು ತಮ್ಮ ಮೂಲ ಸಂಸ್ಕೃತಿಯನ್ನು ಮರೆಯಬಾರದು ಎಂದು ಚುಚ್ಚಿದರು.

ಭಾರತ ಎಂದರೆ ನಮ್ಮ ಅಸ್ತಿತ್ವ, ಅಸ್ಮಿತೆ, ಆತ್ಮ. ವ್ಯಕ್ತಿ ಆತ್ಮಹೀನನಾದರೆ ಏನೆಂದು ಕರೆಯುತ್ತೇವೋ ಹಾಗೆ ಆಗುತ್ತದೆ. ಭಾರತ ಹೆಸರನ್ನು ವಿರೋಧಿಸುವವರು ಯೋಚಿಸಬೇಕು. ದೇಶಕ್ಕೆ ಭಾರತವೆಂದು ಸಾವಿರಾರು ವರ್ಷಗಳಿಂದ ಬಂದಿದೆ. ಈ ಹೆಸರನ್ನು ಟೀಕಿಸುವವರು, ವಿರೋಧಿಸುವವರು ವಸಾಹತುಶಾಹಿ ಮನಸ್ಥಿತಿಯಿಂದ ಹೊರಬಂದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಉದಯನಿಧಿ ಅದೃಷ್ಟವಂತ !

ಬಹುಸಂಖ್ಯಾತ ಸನಾತನ ಧರ್ಮೀಯರು ವಾಸಿಸುವ ದೇಶದಲ್ಲಿ ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿ ಬಚಾವಾಗಿದ್ದಾರೆ. ಅದೇ ಇರಾಕ್, ಇರಾನ್, ಅರಬ್ ದೇಶಗಳಲ್ಲಿ ಅವರದೇ ಮತದ ಬಗ್ಗೆ ಹೀಗೆ ಮಾತನಾಡಿದ್ದರೆ ಉದಯನಿಧಿ ಖೇಲ್ ಖತಂ ಆಗುತ್ತಿತ್ತು ಎಂದು ಸಿ.ಟಿ.ರವಿ ಹೇಳಿದರು.

ಟೀಕೆ-ಟಿಪ್ಪಣೆ, ಚರ್ಚೆ, ಪ್ರಶ್ನೆಗೆ ಒಳಗಾಗುವುದು ಸನಾತನ ಧರ್ಮದ ವಿಶೇಷತೆಯಾಗಿದೆ. ತಾರತಮ್ಯ ಈ ಧರ್ಮದ ಭಾಗವಲ್ಲ. ಕೆಲವು ವ್ಯಕ್ತಿಗಳು ಸ್ವಹಿತಾಸಕ್ತಿ ಹುಟ್ಟಿಹಾಕಿದ ಬೇಧಭಾವನ್ನು ಧರ್ಮಕ್ಕೆ ಆರೋಪಿಸುವುದು ಸರಿಯಲ್ಲ. ಜಾತೀಯತೆ, ತಾರತಮ್ಯ ತೊಡೆದು ಹಾಕಬೇಕು ಎಂಬುದು ಪ್ರಿಯಾಂಕ್ ಖರ್ಗೆ ಬಯಸಿದ್ದರೆ ಖಂಡಿತ ಬೆಂಬಲಿಸುವೆ. ಜಾತಿ ಹೆಸರಿನಲ್ಲಿ ಲಾಭ ಪಡೆದವರು ಅದರ ವಿರುದ್ಧ ಹೋರಾಡಲು ಸಾಧ್ಯವೆ ? ಎಂದು ಕೇಳಿದರು.

ನಾಲ್ಕು ವರ್ಣಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ನಾಲ್ಕು ವರ್ಣಗಳನ್ನು ಗುಣದಿಂದ ವಿಭಜಿಸಲಾಗಿದೆ ಎಂದಿದ್ದಾನೆ. ಬಸವಾದಿ ಶರಣರು ಕೂಡ ಕಸುಬುಗಳನ್ನು ಆಧರಿಸಿ ಸಮುದಾಯಕ್ಕೆ ಹೆಸರಿಸಿದರೆ ವಿನಃ ಜಾತಿ ಬೇಧಗಳಿಂದಲ್ಲ. ಶೂದ್ರರು ಕಾಲು ಎಂದಾದರೆ ಅಡಿಪಾಯ ಗಟ್ಟಿಯಾಗಿರಬೇಕು ಎಂದರ್ಥ. ಕಾಲಿಗೆ ಶಿರಬಾಗಿ ನಮಿಸುತ್ತೇವೆ, ಕಾಲಿಗೆ ನೀಡಿದ ಪ್ರಾಧಾನ್ಯತೆಯದು.

ಮೆಕಾಲೆ ಶಿಕ್ಷಣ ಪದ್ಧತಿಯಿಂದ ಶೂದ್ರರಿಗೆ ಶಿಕ್ಷಣದ ಅವಕಾಶ ದೊರೆಯಿತೆಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ, ಮಹಾಭಾರತ ಬರೆಸಿದ ವೇದವ್ಯಾಸ ಸೇರಿ ಅನೇಕ ಋಷಿಪುಂಗವರನ್ನು ಅವಮಾನಿಸಿದ್ದಾರೆ ಎಂದು ಸಿ.ಟಿ.ರವಿ ಕುಟುಕಿದರು.