ನ್ಯೂಸ್

ಬಿಹಾರದ ಹವಾಮಾನ ಮುನ್ಸೂಚನೆ ಹೇಳುವುದೇನು?

ದೇಶದ ಕೆಲ ರಾಜ್ಯಗಳಲ್ಲಿ ಇನ್ನು ಒಂದು ವಾರ ಕಾಲ ಸಾಧಾರಣದಿಂದ ಭಾರಿ ಮಳೆಯಾಗಲಿದೆ; ಈ ಬಾರಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯಲಿದೆ; ಕೇರಳ ಪ್ರವೇಶಿಸಿರುವ ಮುಂಗಾರು ಮಾರುತಗಳು ಇನ್ನು ನಾಲ್ಕು ದಿನಗಳಲ್ಲಿ ಕರ್ನಾಟಕದತ್ತ ಬರಲಿವೆ.... ಇತ್ಯಾದಿಯಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡುವುದನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಕೆಲವೊಮ್ಮೆ ಈ ಅಂದಾಜು ಲೆಕ್ಕತಪು್ಪವುದೂ ಇದೆ. ಅದು ಬೇರೆ ವಿಚಾರ. ಅದೇ, ರಾಜಕೀಯದಲ್ಲಿ ‘ಹವಾಮಾನ ಮುನ್ಸೂಚನೆ’ ಅಂದಾಜಿಸುವುದರಲ್ಲಿ ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಲು ನಿಸ್ಸೀಮರು ಎಂದು ಹೇಳಬಹುದು! ಒಂದರ್ಥದಲ್ಲಿ ಅವರು ‘ರಾಜಕೀಯ ಹವಾಮಾನ ತಜ್ಞ.’ ಯಾವ ಸಮಯದಲ್ಲಿ ಯಾವ ಪಕ್ಷದ ಪರ-ವಿರೋಧ ಅಲೆ ಇರುತ್ತದೆ; ಭವಿಷ್ಯದಲ್ಲಿ ರಾಜಕೀಯ ಸಮೀಕರಣ ಏನಾಗಬಹುದು ಎಂಬುದನ್ನೆಲ್ಲ ಕರಾರುವಕ್ಕಾಗಿ ಲೆಕ್ಕಿಸಿ, ಅದಕ್ಕೆ ತಕ್ಕಂತೆ ದಾಳ ಉರುಳಿಸುವಲ್ಲಿ ಅವರು ಚತುರ. ಹೀಗೆಂದೇ, ಕಟ್ಟಾವಿರೋಧಿ ಲಾಲು ಪ್ರಸಾದರ ಪಕ್ಷದ ಜೊತೆಗೇ ಕೈಜೋಡಿಸಿ, ಅವರ ಮಗ ತೇಜಸ್ವಿ ಯಾದವರನ್ನು ಉಪಮುಖ್ಯಮಂತ್ರಿಯಾಗಿಸಿ ರಾಜ್ಯಭಾರ ಮಾಡಬಲ್ಲರು. ಈ ದೋಸ್ತಿ ಬೇಸರ ತಂದಿತು ಎಂದಾಗ, ಹಳೆಯ ಮಿತ್ರ ಬಿಜೆಪಿಯೊಂದಿಗೆ ಸೇರಿ ಮತ್ತೆ ಸಿಎಂ ಕುರ್ಚಿಯೇರಬಲ್ಲರು. ಒಟ್ಟಿನಲ್ಲಿ ಬಿಹಾರದಲ್ಲಿ ನಿತೀಶ್ ಹವಾ ಚಾಲ್ತಿಯಲ್ಲಿರಬೇಕು. ಅದಕ್ಕೆ ತಾನೇ ಒಂಬತ್ತನೇ ಬಾರಿ ಸಿಎಂ ಪಟ್ಟದಲ್ಲಿ ಪಟ್ಟಾಗಿ ಕೂತಿರುವುದು. ಈ ಕಾರಣಕ್ಕೆ ಉದ್ದಕ್ಕೂ ಟೀಕೆಗಳನ್ನು ಕೂಡ ಎದುರಿಸಿಕೊಂಡು ಬಂದರೂ ನಿತೀಶ್ ಅದಕ್ಕೆಲ್ಲ ಸೊಪು್ಪಹಾಕುವ ಆಸಾಮಿಯಲ್ಲ.

ಹಾಗಂತ, ಕೇವಲ ರಾಜಕೀಯ ನಡೆಯ ಕಾರಣಕ್ಕೆ ನಿತೀಶರನ್ನು ಇಡಿಯಾಗಿ ನಕಾರಾತ್ಮಕ ನೋಟದಿಂದ ನೋಡಬೇಕು ಎಂದಿಲ್ಲ. ಆಡಳಿತಾತ್ಮಕ ನೈಪುಣ್ಯವೂ ಇರುವ ಅವರು, ವಿಶೇಷವಾಗಿ ಮಹಿಳಾಪರ ನೀತಿನಿಲುವಿನ ಮೂಲಕ ಗಮನಸೆಳೆಯುತ್ತಾರೆ. ಅವರ ಈ ನಡೆಗಳು ಬಿಹಾರದ ಒಟ್ಟಾರೆ ಸಾಮಾಜಿಕ, ಆರ್ಥಿಕ, ರಾಜಕೀಯ ವಿನ್ಯಾಸದ ಮೇಲೆ ಒಂದಷ್ಟು ಪರಿಣಾಮ ಬೀರಿವೆಯೆಂದು ವಿಶ್ಲೇಷಕರು ಗುರುತಿಸುತ್ತಾರೆ.

ಬಿಹಾರದಲ್ಲಿ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡ 50 ಮೀಸಲಾತಿ ನೀಡುವ ನಿಯಮ 2006ರಲ್ಲಿ ಜಾರಿಗೆ ಬಂತು. ಅದೇ ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ. 50 ಮೀಸಲು ನೀಡುವ ಕ್ರಮ ಘೋಷಣೆಯಾಯಿತು. ಬಿಹಾರದ ಸರ್ಕಾರಿ ಹುದ್ದೆಗಳ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ.35 ಮೀಸಲಾತಿ ನೀಡುವ ಕ್ರಾಂತಿಕಾರಿ ನಿರ್ಣಯ 2016ರಲ್ಲಿ ಹೊರಹೊಮ್ಮಿತು. ಎಲ್ಲರಿಗೂ ಶೇ.35 ಮೀಸಲಾತಿ ನೀಡುವ ಬಗ್ಗೆ ಆಕ್ಷೇಪದ ದನಿಯೂ ವ್ಯಕ್ತವಾಗಿತ್ತು. ಹೀಗಾಗಿ ಕೆಲ ದಿನಗಳ ಹಿಂದೆ, ಬಿಹಾರದ ಶಾಶ್ವತ ನಿವಾಸಿ ಮಹಿಳೆಯರಿಗೆ ಮಾತ್ರ ನೌಕರಿ ಮೀಸಲಾತಿ ಎಂಬ ನಿಯಮ ತರಲು ಸರ್ಕಾರ ನಿರ್ಧರಿಸಿತು. ಇದರ ಜತೆಗೆ, ಯುವಶಕ್ತಿಯ ಮೇಲೂ ನಿತೀಶ್ ಕಣ್ಣುಹಾಕಿದ್ದಾರೆ. ಏಳು ಸದಸ್ಯರನ್ನೊಳಗೊಂಡ ಯುವ ಆಯೋಗ ರಚಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿಕ್ಕಿದೆ. ಸಹಜವಾಗಿಯೇ ನಿತೀಶ್ ಕುಮಾರ್ ಹೊಸ ಹೊಸ ದಾಳಗಳನ್ನು ಹೊಸೆಯುತ್ತ ಸಜ್ಜಾಗುತ್ತಿದ್ದಾರೆ.

ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ವಿಚಾರವು ನಿತೀಶ್ ಕುಮಾರ್ ಹಾಗೂ ಜೆಡಿಯು ಅಂದಿನ ಅಧ್ಯಕ್ಷ ಶರದ್ ಯಾದವ್ ನಡುವೆ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿತ್ತು. ಈ ಶೇ.33 ಮೀಸಲಾತಿಯಲ್ಲಿ ಇತರ ಹಿಂದುಳಿದ ವರ್ಗಕ್ಕೆ ಉಪ ಮೀಸಲಾತಿ ನೀಡಬೇಕು; ಇಲ್ಲವಾದಲ್ಲಿ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಆರ್​ಜೆಡಿಯ ಲಾಲು ಪ್ರಸಾದ್ ಯಾದವ್ ಜೊತೆಗೂಡಿ ಈ ಮಸೂದೆ ಅನುಮೋದನೆ ಪಡೆಯಲು ಬಿಡುವುದಿಲ್ಲ ಎಂದು ಶರದ್ ಯಾದವ್ ಗುಟುರುಹಾಕಿದ್ದರು. ‘ಮೊದಲು ಮಸೂದೆ ಅಂಗೀಕಾರವಾಗಲಿ. ನಂತರದಲ್ಲಿ ಉಪ ಕೋಟಾ ಬಗ್ಗೆ ಆಲೋಚಿಸಿದರಾಯಿತು’ ಎಂದು ನಿತೀಶ್ ಪ್ರತಿಕ್ರಿಯಿಸಿದ್ದರು.

ಬಾಲಕಿಯರಿಗೆ ಉಚಿತವಾಗಿ ಸೈಕಲ್ ವಿತರಣೆ ನಿತೀಶ್ ಕುಮಾರರ ಮತ್ತೊಂದು ಜನಪ್ರಿಯ ಯೋಜನೆಯಾಗಿತ್ತು. ಒಂಬತ್ತನೇ ತರಗತಿ ಮತ್ತು ಅದಕ್ಕಿಂತ ಮೇಲಿನ ತರಗತಿಯಲ್ಲಿ ಓದುತ್ತಿರುವ ಎಲ್ಲ ಹೆಣ್ಮಕ್ಕಳಿಗೆ ಸರ್ಕಾರದ ವತಿಯಿಂದ ಸೈಕಲ್ ಪೂರೈಸುವ ಈ ಯೋಜನೆಯಿಂದಾಗಿ, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸಂಚಲನವೇ ಆಯಿತು. ಬಿಹಾರದ ಸಣ್ಣಪುಟ್ಟ ಪಟ್ಟಣ ಪ್ರದೇಶ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಹೆಣ್ಣುಮಕ್ಕಳು ಸೈಕಲ್ ತುಳಿಯುತ್ತ ಗುಂಪುಗುಂಪಾಗಿ ಶಾಲೆಗೆ ತೆರಳುವ ದೃಶ್ಯ ಮಾಮೂಲಾಗಿತ್ತು.

ಹೆಣ್ಣುಮಗು ಜನಿಸಿದಾಗ ಆ ಮಗುವಿನ ಹೆಸರಿನಲ್ಲಿ 2 ಸಾವಿರ ರೂ. ಬಾಂಡ್ ನೀಡುವ ಯೋಜನೆ ತಂದರು. ಆ ಮಗುವಿಗೆ 18 ವರ್ಷ ತುಂಬಿದಾಗ ಈ ಬಾಂಡ್​ನ ಮೆಚ್ಯುರಿಟಿ ಹಣವನ್ನು ನೀಡಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಹೆಣ್ಣುಮಗುವಿಗೆ 18 ವರ್ಷ ತುಂಬಿದಾಗ 18 ಸಾವಿರ ರೂ. ನೀಡುವುದು ಇನ್ನೊಂದು ಯೋಜನೆ. ಆಕೆಯ ಓದು ಅಥವಾ ಸಣ್ಣ ಉದ್ಯಮ ಆರಂಭಿಸಲು ನೆರವಾಗುವುದು ಇದರ ಉದ್ದೇಶ. ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆ ಜಾರಿಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಹೆಣ್ಣುಮಕ್ಕಳಿಗೆ ಉನ್ನತ ವಿದ್ಯಾಭ್ಯಾಸದ ಅವಕಾಶ ತಪ್ಪಬಾರದೆಂದು, ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ನೀಡುವ ಯೋಜನೆಯನ್ನು 2014ರಲ್ಲಿ ಜಾರಿಗೆ ತಂದು, ಆ ಯೋಜನೆಗೆ ಆಗ 32 ಕೋಟಿ ರೂ.ಗಳನ್ನು ಒದಗಿಸಲಾಗಿತ್ತು.

2005ರಲ್ಲಿ ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ರಾಜ್ಯದಲ್ಲಿನ ಫಲವತ್ತತೆ ದರ (2005ರ ನವೆಂಬರ್) 4.3 ಇತ್ತು. ಇದು ದೇಶದ ಸರಾಸರಿಗಿಂತ ಅಧಿಕ ಪ್ರಮಾಣವಾಗಿತ್ತು. 2020ರಲ್ಲಿ ಈ ಪ್ರಮಾಣ 3.2ಕ್ಕೆ ಕುಸಿದಿತ್ತು. ಮಹಿಳಾ ಶಿಕ್ಷಣ ಹೆಚ್ಚಾದುದು ಇದಕ್ಕೆ ಕಾರಣ ಎಂಬುದು ನಿತೀಶ್ ಪ್ರತಿಪಾದನೆ. ರಾಜ್ಯದಲ್ಲಿ ಮಹಿಳೆಯರ ಶಿಕ್ಷಣ ಪ್ರಮಾಣ ಕಡಿಮೆಯಿರುವುದಕ್ಕೂ ಫಲವತ್ತತೆ ದರ ಹೆಚ್ಚಿಗೆಯಿರುವುದಕ್ಕೂ ಸಂಬಂಧವಿದೆ ಎಂಬುದು ಅವರ ಅಭಿಮತವಾಗಿತ್ತು. ‘ಹುಡುಗಿಯರು ಕನಿಷ್ಠಪಕ್ಷ 12ನೇ ತರಗತಿವರೆಗಾದರೂ ಓದಿದರೆ ರಾಜ್ಯದ ಫಲವತ್ತತೆ ದರ ಇಳಿಯುವುದಲ್ಲದೆ, ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಲು ಸಹ ಅನುವಾಗುತ್ತದೆ’ ಎಂದು ಆಗ ನಿತೀಶ್ ಹೇಳಿದ್ದರು. ಎಸ್​ಎಸ್​ಎಲ್​ಸಿ ಓದಿದ ಹೆಣ್ಮಕ್ಕಳು ಹಾಗೂ 12ನೇ ತರಗತಿವರೆಗೆ ಓದಿದವರನ್ನು ತೆಗೆದುಕೊಂಡಾಗ, ಫಲವತ್ತತೆ ದರದಲ್ಲಿ ವ್ಯತ್ಯಾಸವಿರುವುದನ್ನು ಅವರು ಉಲ್ಲೇಖಿಸಿದ್ದರು.

ವರದಕ್ಷಿಣೆ ಹಾಗೂ ಬಾಲ್ಯವಿವಾಹ ವಿರೋಧಿಸಿ 2018ರಲ್ಲಿ ಸಿಎಂ ನಿತೀಶ್ ನೇತೃತ್ವದಲ್ಲಿ ಬಿಹಾರದಲ್ಲಿ ಬೃಹತ್ ಅಭಿಯಾನ ನಡೆದಿತ್ತು. 2016ರಲ್ಲಿ ಪಾನನಿಷೇಧ ಜಾರಿಗೆ ತಂದಿದ್ದು ನಿತೀಶರ ಮತ್ತೊಂದು ಮುಖ್ಯ ಹೆಜ್ಜೆ. ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಹೋದಾಗ ಅನೇಕ ಕಡೆಗಳಲ್ಲಿ ಮಹಿಳೆಯರು ‘ಸ್ವಾಮೀ! ಸಾರಾಯಿ ನಿಷೇಧ ಮಾಡಿ ಪುಣ್ಯ ಕಟ್ಕೊಳಿ. ನಮ್ಮ ಮನೆಯಲ್ಲಿ ನಿತ್ಯ ರಂಪಾಟ. ಎಷ್ಟು ದಿನ ಅಂತ ಸಹಿಸೋದು...’ ಎಂದು ಮನವಿ ಮಾಡಿಕೊಂಡಿದ್ದರು. ಅಧಿಕಾರಕ್ಕೆ ಬಂದಲ್ಲಿ ಪಾನನಿಷೇಧ ಜಾರಿಗೆ ತರುವುದಾಗಿ ನಿತೀಶ್ ಭರವಸೆ ನೀಡಿದ್ದರು. ಅದರಂತೆ, 2016ರ ಏಪ್ರಿಲ್​ನಿಂದ ಅಲ್ಲಿ ಮದ್ಯನಿಷೇಧ ನೀತಿ ಜಾರಿಯಾಗಿದೆ. ಆದರೆ ಪಾನನಿಷೇಧ ಸುಲಭವಲ್ಲ. ಏಕೆಂದರೆ ಮದ್ಯ ನಿಷೇಧ ಮಾಡಿದರೆ ಅಕ್ರಮ ಮದ್ಯದ ಹಾವಳಿ ಜೋರಾಗುತ್ತದೆ ಎಂಬ ವಾದವಿದೆ. ಇನ್ನೊಂದೆಡೆ, ಸರ್ಕಾರಕ್ಕೆ ದೊಡ್ಡ ಪ್ರಮಾಣದ ಆದಾಯ ನಷ್ಟವಾಗುತ್ತದೆ. ಹೀಗೆಂದೇ, ನಮ್ಮ ರಾಜ್ಯವೂ ಸೇರಿದಂತೆ ಅನೇಕ ರಾಜ್ಯಗಳು ಅಬಕಾರಿ ಇಲಾಖೆಯ ಆದಾಯ ಸಂಗ್ರಹ ಗುರಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸುತ್ತವೆ ಹೊರತು ಕಡಿಮೆ ಮಾಡುವ ಗೋಜಿಗೆ ಹೋಗುವುದಿಲ್ಲ. ಇನ್ನು ಕೆಲ ರಾಜ್ಯಗಳು ಮದ್ಯಕ್ಕೆ ಭಾಗಶಃ ಅನುಮತಿಸುವ ಜಾಣನೀತಿಯನ್ನು ಅಳವಡಿಸಿಕೊಂಡಿವೆ. ಇದೇನೇ ಇದ್ದರೂ, ನಿತೀಶ್ ಕುಮಾರ್ ವಾಗ್ದಾನದಂತೆ ನಡೆದುಕೊಂಡಿದ್ದಂತೂ ನಿಜ.

‘ಮಹಿಳಾ ಮತಕ್ಷೇತ್ರ’ ಪರಿಕಲ್ಪನೆಯನ್ನು (ಅಂದರೆ ಚುನಾವಣೆಯಲ್ಲಿ ಮಹಿಳಾ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವುದು) ವಾಸ್ತವಕ್ಕೆ ತರಲು ನಿತೀಶ್ ಕುಮಾರ್ ಯತ್ನಿಸುತ್ತಿದ್ದಾರೆ ಎಂದು ದಶಕದ ಹಿಂದೆ ರಾಜಕೀಯ ವಿಶ್ಲೇಷಕರು ಗುರುತಿಸಿದ್ದರು. ನಂತರದ ಚುನಾವಣೆಗಳನ್ನು ಗಮನಿಸುತ್ತ ಬಂದರೆ, ಮಹಿಳಾ ಮತದಾರರ ಮನಗೆಲ್ಲುವಲ್ಲಿ ನಿತೀಶ್ ಸಾಕಷ್ಟು ಯಶಸ್ವಿಯಾಗಿದ್ದಾರೆ. ಬಿಹಾರದ ಸಂಕೀರ್ಣ ಜಾತಿ ಗಣಿತದ ನಡುವೆಯೂ, ಅದು ಮತವಾಗಿಯೂ ಪರಿವರ್ತನೆಯಾಗುತ್ತಿದೆ ಎಂದು ಕೆಲ ತಜ್ಞರು ಹೇಳುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಹ ಮಹಿಳಾ ಮತದಾರರ ಮನಗೆಲ್ಲುವಲ್ಲಿ ಯಶ ಕಂಡಿದ್ದಾರೆ ಎಂಬುದಕ್ಕೆ ಚುನಾವಣಾ ಫಲಿತಾಂಶದ ವಿಶ್ಲೇಷಣೆಗಳು ಸಾಕ್ಷಿ ಹೇಳುತ್ತವೆ. ಉಜ್ವಲಾ ಯೋಜನೆ, ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವ ಉದ್ದೇಶದ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಸಾಮುದಾಯಿಕ ಭಾಗೀದಾರಿಕೆ ಮೂಲಕ ಮಹಿಳಾ ಸಬಲೀಕರಣದ ಉದ್ದೇಶದ ಮಹಿಳಾ ಶಕ್ತಿ ಕೇಂದ್ರಗಳ ಸ್ಥಾಪನೆ, ಉದ್ಯೋಗಸ್ಥ ಮಹಿಳೆಯರಿಗೆ ಮಾತೃತ್ವ ರಜೆ, ಸುಕನ್ಯಾ ಸಮೃದ್ಧಿ ಯೋಜನಾ ಮುಂತಾದ ಉಪಕ್ರಮಗಳು ಮೋದಿ ಸರ್ಕಾರದಿಂದ ಜಾರಿಯಾಗಿವೆ. ಇದಲ್ಲದೆ, ಮಹಿಳೆಯರಿಗೆ ಶಾಸನಸಭೆಗಳಲ್ಲಿ ಶೇ.33 ಮೀಸಲಾತಿ ಮಸೂದೆಗೆ ರ್ತಾಕ ಅಂತ್ಯವನ್ನು ತಂದಿದ್ದು ಮೋದಿ ಸರ್ಕಾರದ ಅವಧಿಯಲ್ಲಿಯೇ.

ನಿತೀಶ ಕುಮಾರ್ ಅವರ ಜೆಡಿಯು ಪಕ್ಷವು ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಭಾಗವಾಗಿದೆ. ಹೀಗಾಗಿ ಚುನಾವಣಾ ಪ್ರಚಾರದಲ್ಲಿ ಮೋದಿ ಕೂಡ ಭಾಗವಹಿಸಲಿದ್ದಾರೆ. ಇನ್ನೊಂದೆಡೆ, ಕಳೆದ ಸಲ ಭಾರಿ ಪೈಪೋಟಿ ಒಡ್ಡಿದ್ದ ಆರ್​ಜೆಡಿ ಯುವ ನಾಯಕ ತೇಜಸ್ವಿ ಯಾದವ್ ಮಹಾಘಟಬಂಧನ ಹಡಗಿನಲ್ಲಿ ಕೂತು ಚುನಾವಣಾ ಸಮರಕ್ಕೆ ಎದುರು ನೋಡುತ್ತಿದ್ದಾರೆ. ಒಟ್ಟಿನಲ್ಲಿ ಬಿಹಾರದ ಕದನವು ಕುತೂಹಲದಿಂದ ಕಾಯುವಂತೆ ಮಾಡಿದೆ.

2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಸರಾಸರಿ ಶೇ.56.28ರಷ್ಟು ಮತದಾನವಾಗಿದೆ. ಇವರಲ್ಲಿ ಪುರುಷರ ಮತ ಚಲಾವಣೆ ಪ್ರಮಾಣ ಶೇ.53 ಇದ್ದರೆ, ಮಹಿಳೆಯರ ಪ್ರಮಾಣ ಶೇ.59ರಷ್ಟಿತ್ತು. ಸಾಕ್ಷರತಾ ಪ್ರಮಾಣ ತೆಗೆದುಕೊಂಡರೆ ಒಟ್ಟಾರೆ ಸರಾಸರಿ ಶೇ.61.80 ಇದೆ. ಪುರುಷರ ಸಾಕ್ಷರತಾ ಪ್ರಮಾಣ ಶೇ.71. 20 ಇದ್ದರೆ, ಮಹಿಳೆಯರ ಪ್ರಮಾಣ ಶೇ.51.50 ಇದೆ.

2023ರಲ್ಲಿ ಬಿಹಾರದಲ್ಲಿ ನಡೆದ ಜಾತಿಗಣತಿ ವರದಿ ಪ್ರಕಾರ, 13,07,25,310 ಜನಸಂಖ್ಯೆ ಹೊಂದಿದೆ. ಇವರಲ್ಲಿ ಶೇ.89 ಜನರು ಗ್ರಾಮೀಣ ಭಾಗದಲ್ಲಿ ನೆಲೆಸಿದ್ದಾರೆ. ಧರ್ಮವಾರು ನೋಡುವುದಾದರೆ, ಶೇ.82.69 ಜನರು ಹಿಂದು ಧರ್ವಿುಯರಾಗಿದ್ದರೆ, ಮುಸ್ಲಿಮರ ಪ್ರಮಾಣ ಶೇ.16.87ರಷ್ಟಿದೆ. ಇನ್ನು ಜಾತಿವಾರು ನೋಡುವುದಾದರೆ, ಇತರ ಹಿಂದುಳಿದ ವರ್ಗ (ಒಬಿಸಿ)- ಶೇ.27.12, ಆರ್ಥಿಕವಾಗಿ ಹಿಂದುಳಿದ ವರ್ಗ (ಇಬಿಸಿ)- ಶೇ.36.01, ಎಸ್​ಸಿ-ಶೇ.19.65, ಮುಂದುವರಿದ ವರ್ಗ- ಶೇ.15.52, ಎಸ್​ಟಿ ಶೇ.1.68 ಇದ್ದಾರೆ. 2011ರ ಜನಗಣತಿ ಪ್ರಕಾರ ಬಿಹಾರ ಜನಸಂಖ್ಯೆ 10.41 ಕೋಟಿಯಷ್ಟಿತ್ತು. ಇದರಲ್ಲಿ ಪುರುಷರ ಸಂಖ್ಯೆ 5,42,78,157 ಇದ್ದರೆ ಮಹಿಳೆಯರ ಸಂಖ್ಯೆ 4,98,21,295 ಇತ್ತು.

ಇತ್ತ, ಕೇಂದ್ರ ಚುನಾವಣಾ ಆಯೋಗವು ಬಿಹಾರದ ಎಲ್ಲ 243 ವಿಧಾನಸಭಾ ಕ್ಷೇತ್ರಗಳಲ್ಲಿ ಈಗ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್) ಯನ್ನು ನಡೆಸುತ್ತಿದೆ. ಈ ಉಪಕ್ರಮದಿಂದ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗಳಿಯುವಂತಾಗುತ್ತದೆ ಎಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ, ಸವೋಚ್ಚ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿದ್ದವು. ಆದರೆ ನ್ಯಾಯಾಲಯ ಈ ಕ್ರಮಕ್ಕೆ ತಡೆ ನೀಡಿಲ್ಲ. ಸೆಪ್ಟೆಂಬರ್ 30ರ ಹೊತ್ತಿಗೆ ಅಲ್ಲಿನ ಪಕ್ಕಾ ಮತದಾರರ ಯಾದಿ ಲಭಿಸುತ್ತದೆ. ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ, ಒಟ್ಟು 7.9 ಕೋಟಿ ಮತದಾರರ ಪೈಕಿ ಸುಮಾರು 35 ಲಕ್ಷ ಜನರು ತಾವು ಕೊಟ್ಟ ವಿಳಾಸದಲ್ಲಿ ಕಂಡುಬಂದಿಲ್ಲ. ಮತದಾರರ ಪಟ್ಟಿಯಲ್ಲಿ ನೇಪಾಳ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ಪ್ರಜೆಗಳೂ ಇರುವುದು ಪತ್ತೆಯಾಗಿದೆ. ಅಕ್ರಮ ವಿದೇಶಿ ವಲಸಿಗರನ್ನು ಪತ್ತೆ ಹಚ್ಚುವಲ್ಲಿ ಎಸ್​ಐಆರ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇದರ ಪರವಾಗಿರುವವರು ಪ್ರತಿಪಾದಿಸುತ್ತಾರೆ.

ಕೊನೇ ಮಾತು: ಬಿಹಾರ ಮತದಾರರು ಯಾರಿಗೆ ಜಯದ ‘ಹಾರ’ ತೊಡಿಸುತ್ತಾರೆ ಎಂಬುದು ತಿಳಿಯಲು ಇನ್ನೂ ಮೂರ್ನಾಲ್ಕು ತಿಂಗಳು ಬೇಕು. ಅಲ್ಲಿನ ಫಲಿತಾಂಶ ರಾಷ್ಟ್ರ ರಾಜಕಾರಣದ ಮೇಲೂ ಪರಿಣಾಮ ಬೀರುತ್ತದೆ. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ರಾಜಕೀಯದ ಎಲ್ಲ ರಂಗುಗಳೂ ಕಾಣಸಿಗುವುದಂತೂ ಖರೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)