ನ್ಯೂಸ್

ಕರ್ನಾಟಕ ಬಂದ್‌ಗೆ ಚಿತ್ರರಂಗದ ಬೆಂಬಲ ಇದ್ಯಾ?; ನಟ ಶಿವರಾಜ್​ಕುಮಾರ್​ ಹೇಳಿದ್ದಿಷ್ಟು

ಬೆಂಗಳೂರು: ಸೆ.29 ರಂದು ನಡೆಯಲಿರುವ ಕರ್ನಾಟಕ ಬಂದ್​ಗೆ ಕನ್ನಡ ಚಿತ್ರರಂಗದ ಸಂಪೂರ್ಣ ಬೆಂಬಲಿ ಇದೆಯಾ? ಎಂಬ ಪ್ರಶ್ನೆ ಹಲವು ಕನ್ನಡ ಪರ ಸಂಘಟನೆಗಳಲ್ಲಿ ಮೂಡಿತ್ತು. ಕಾವೇರಿ ವಿಚಾರ ಕುರಿತು ಮಾಡಲಿರುವ ಹೋರಾಟಕ್ಕೆ ಹಿರಿಯ ನಟ ಶಿವರಾಜ್​ಕುಮಾರ್​ ಹೇಳುವುದೇನು ಎಂಬುದನ್ನು ತಿಳಿಯಲು ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ನಟನ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.

ಶಿವರಾಜ್‌ಕುಮಾರ್ ನಿವಾಸಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಭೇಟಿ ನೀಡಿದ್ದು, ಶಿವರಾಜ್​ಕುಮಾರ್​ ಅವರೊಂದಿಗೆ ಮಾತುಕತೆ ಮಾಡಿದರು. ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಎನ್. ಸುರೇಶ್, "ಶಿವಣ್ಣ ಅವರ ನಿವಾಸಕ್ಕೆ ನಾವು ಪದಾಧಿಕಾರಿಗಳು ಬಂದಿದ್ದೆವು. ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಚಿತ್ರರಂಗದ ಬೆಂಬಲವಿದೆ" ಎಂದು ಹೇಳಿದರು.

"ಶಿವಣ್ಣ ಮೊದಲಿಗೆ ಈ ಬಂದ್​ ಏಕೆ ಎಂದು ಪ್ರಶ್ನಿಸಿದರು. ರೈತರ ಹೋರಾಟಕ್ಕೆ ನಮ್ಮ ಪ್ರತಿಭಟನೆ ಎಂದು ಹೇಳಿದ ನಂತರ ಅವರು, ಖಂಡಿತಾ ಬರುತ್ತೇನೆ ಎಂದು ಒಪ್ಪಿಗೆ ಸೂಚಿಸಿದರು. ನಾಳೆ ಶಿವರಾಜ್​ಕುಮಾರ್​ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಹೋರಾಟ ಪ್ರಾರಂಭವಾಗಲಿದೆ" ಎಂದು ಹೇಳಿದರು.

"ಸ್ಥಳಕ್ಕೆ ಚಿತ್ರರಂಗದ ಹಲವು ನಟ-ನಟಿಯರು ಆಗಮಿಸಲಿದ್ದಾರೆ. ಕಲಾವಿದರಾದ ಶಿವಣ್ಣ, ರವಿಚಂದ್ರನ್, ಪ್ರೇಮ್, ಧ್ರುವ ಸರ್ಜಾ, ವಿಜಯ್ ರಾಘವೇಂದ್ರ, ಶ್ರೀಮುರುಳಿ ಸೇರಿದಂತೆ ಎಲ್ಲರನ್ನೂ ಆಹ್ವಾನಿಸಿದ್ದೇವೆ. ಪ್ರತಿಭಟನೆಯನ್ನು ಹಬ್ಬದ ರೀತಿಯಲ್ಲಿ ಮಾಡಲಾಗುವುದು. ನಮ್ಮದು ರೈತರ ಪರ ಹೋರಾಟವಾಗಿದ್ದು, ಬಂದ್‌ಗೆ ಇಡೀ ಚಿತ್ರೋದ್ಯಮದ ಬೆಂಬಲವಿದೆ" ಎಂದು ಎನ್.ಎಂ. ಸುರೇಶ್ ಹೇಳಿದರು.