ನ್ಯೂಸ್

ಡಿ.ಜೆ.ಹಳ್ಳಿ ಗಲಭೆ ಕುರಿತು ಕಾಂಗ್ರೆಸ್​ ನಾಯಕರು ಹೇಳಿದ್ದೇನು?

ಬೆಂಗಳೂರು: ಕೋಮುಗಲಭೆಗಳಲ್ಲಿ‌ ಸಾವು-ನೋವಿಗೆ ಒಳಗಾಗುವವರು ಅಮಾಯಕರು ಎಂಬ ಸತ್ಯವನ್ನು ಅನುಭವದ ಪಾಠ ನಮಗೆ ಹೇಳಿಕೊಟ್ಟಿದೆ. ಮೊದಲು ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೋರಿದ್ದಾರೆ.

ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆ ಪ್ರಕರಣವನ್ನು ಖಂಡಿಸಿರುವ ಸಿದ್ದರಾಮಯ್ಯ, ಶಾಂತಿ ಸ್ಥಾಪಿಸಲು ರಾಜ್ಯ ಸರ್ಕಾರದ ಪ್ರಯತ್ನಕ್ಕೆ ನಮ್ಮ ಪಕ್ಷದ ಸಂಪೂರ್ಣ ಸಹಕಾರ ಇದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್​ ಮೂಲಕ ಆಗ್ರಹಿಸಿದ್ದಾರೆ.

ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ಖಂಡನೀಯ. ಇದರಿಂದ ಪೊಲೀಸರು ನೈತಿಕ ಸ್ಥೈರ್ಯ‌ ಕಳೆದು ಕೊಳ್ಳಬಾರದು. ಇಂತಹ ಸಂದರ್ಭಗಳಲ್ಲಿ ಪೊಲೀಸರು

ತಕ್ಷಣ ವಿವೇಚನೆಯಿಂದ ನಿರ್ಧಾರ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಣ್ಣ ನಿರ್ಲಕ್ಷ್ಯ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಗಲಭೆಗೆ ಪ್ರಚೋದಿಸಿದ್ದ ಮತ್ತು ಹಿಂಸಾಚಾರದ ಮೂಲಕ ಪ್ರತಿಕ್ರಿಯಿಸಿದ್ದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಕಮಿಷನರ್‌ಗೆ ತಿಳಿಸಿದ್ದೇನೆ ಎಂದು ವಿವರಿಸಿದರು.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಡಿ.ಜೆ.ಹಳ್ಳಿ ಗಲಭೆಯನ್ನು ಖಂಡಿಸುತ್ತೇನೆ. ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವ ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಬೇಕು. ನಮ್ಮ ಶಾಸಕರು ಕೂಡ ಗಲಭೆ ನಿಯಂತ್ರಿಸಲು ಪ್ರಯತ್ನಿಸಿದ್ದರೂ ಕಂಟ್ರೋಲ್​ಗೆ ಬಂದಿಲ್ಲ. ಈ ಗಲಭೆಯನ್ನು ಕಾಂಗ್ರೆಸ್​ ಪಕ್ಷ ಖಂಡಿಸಲಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಇಂದು (ಬುಧವಾರ) ಮಧ್ಯಾಹ್ನ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಮೇಯರ್​ಗಳ ಸಭೆಯನ್ನು ಡಿಕೆಶಿ ಕರೆದಿದ್ದಾರೆ.