ನಮ್ಮ ದೇಶದ ನೇರ ತೆರಿಗೆ ವಿಧಾನ ವಿಭಿನ್ನ ವಾದದ್ದು. ಈ ತೆರಿಗೆ ವಿಧಾನವನ್ನು ಸಂಪೂರ್ಣ ತೆಗೆದುಹಾಕಬೇಕು ಎಂಬ ಕೂಗು ಗಟ್ಟಿಯಾಗುತ್ತಲೇ ಇದೆ. ಆದರೆ ಸರಕಾರ ಒಮ್ಮಿಂದೊಮ್ಮೆಲೇ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಆದರೆ ಕಳೆದ ಫೆಬ್ರವರಿಯಲ್ಲಿ ಘೊಷಿಸಿದ ಹೊಸ ನೇರ ತೆರಿಗೆ ವಿಧಾನ ಕೆಲವರಿಗೆ ಕೊಂಚ ನಿರಾಳತೆಯನ್ನಂತೂ ನೀಡಿದೆ. ತೆರಿಗೆದಾರರು ಅಂದುಕೊಂಡಂತೆ ಈ ಬಾರಿ ಭರ್ಜರಿ ಕೊಡುಗೆಯನ್ನೇ ಸರಕಾರ ನೀಡಿದೆ. ಆದರೆ ‘ಷರತ್ತುಗಳು ಅನ್ವಯ’ ಎಂದೂ ಹೇಳಿದೆ. ಆದಾಯ ತೆರಿಗೆ ದರಗಳಲ್ಲಿ ಮಹತ್ತರ ಬದಲಾವಣೆ ತರಲಾಗಿದೆ. ಹಾಗಾದರೆ ಬದಲಾಗಿದ್ದೇನು ಮತ್ತು ಷರತ್ತುಗಳು ಏನು? ನೋಡೋಣ ಬನ್ನಿ.
| ಪ್ರಸನ್ನ ಕಂಬದಮನೆ
ಕೇಂದ್ರ ಸರ್ಕಾರ ಇತ್ತೀಚೆಗೆ ಬಜೆಟ್ನಲ್ಲಿ ಹೊಸ ಆದಾಯ ತೆರಿಗೆ ಸ್ಲಾ್ಯಬ್ ಘೊಷಿಸಿದೆ. ಈ ಹೊಸ ನೇರ ತೆರಿಗೆ ಪದ್ಧತಿ ಕಡ್ಡಾಯವಲ್ಲ. ಬದಲಿಗೆ ಸರ್ಕಾರ ಇಲ್ಲಿ ತೆರಿಗೆದಾರರಿಗೆ ಹೊಸ ಮತ್ತು ಹಳೆಯ ತೆರಿಗೆ ಪದ್ಧತಿಯಲ್ಲಿ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದೆ. ತೆರಿಗೆ ವಿನಾಯಿತಿ ಹೊಂದಬೇಕೋ ಬೇಡವೋ ಎನ್ನುವುದು ವೇತನದಾರನ ನಿರ್ಣಯದ ಮೇಲೆ ಅವಲಂಬಿತವಾಗಿದೆ.
ಈ ಹೊಸ ತೆರಿಗೆ ಪದ್ಧತಿ ಅನ್ವಯಿಸುವುದು ಹಣಕಾಸು ವರ್ಷ 2020-21ಕ್ಕೆ. ಅಂದರೆ 2020ರ ಏಪ್ರಿಲ್ 1ರಿಂದ 2021ರ ಮಾಚ್ 31ವರೆಗೆ ಗಳಿಸುವ ಆದಾಯದ ಮೇಲೆ ಈ ಹೊಸ ಪದ್ಧತಿ ಅನ್ವಯಿಸುತ್ತದೆ. ಹಾಗಾಗಿ ತೆರಿಗೆದಾರರು ಈ ವ್ಯವಸ್ಥೆಯ ಬಗ್ಗೆ ತಿಳಿಯುವುದು ಉತ್ತಮ.
ಲಾಭಗಳು, ನ್ಯೂನತೆಗಳು: ಹೊಸ ವಿಧಾನ ಆಯ್ಕೆ ಮಾಡಿಕೊಳ್ಳುವುದರಿಂದ ಇನ್ಕಮ್ ಟ್ಯಾಕ್ಸ್ ಫೈಲಿಂಗ್ ಸರಳವಾಗುತ್ತದೆ. ರಿಟರ್ನ್ ಫೈಲಿಂಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯಇಲ್ಲ. ಮುಂಚೆ ಕೆಲವರು ಸುಳ್ಳು ಡಿಡಕ್ಷನ್ಗಳನ್ನು ಕ್ಲೇಮ್ ಮಾಡಿಕೊಂಡು ರಫಂಡ್ ಪಡೆಯುತ್ತಿದ್ದರು. ಹೊಸ ತೆರಿಗೆ ವಿಧಾನದಲ್ಲಿ ಈ ಮೋಸಕ್ಕೆ ಜಾಗವಿಲ್ಲ. ಲಕ್ಷಗಟ್ಟಲೆ ಹಣವನ್ನು ಹೂಡಿರುವವರಿಗೆ ಹೊಸ ಪದ್ಧತಿ ಲಾಭದಾಯಕವಲ್ಲ. ಗೃಹಸಾಲ ಪಡೆದು ಅದರ ಮರುಪಾವತಿಯನ್ನು ಆದಾಯ ತೆರಿಗೆಯ ಡಿಡಕ್ಷನ್ಗೆ ಬಳಸಿಕೊಳ್ಳುತ್ತಿರುವವರ ಸಂಖ್ಯೆ ತುಂಬ ಇರುವುದರಿಂದ ಈ ತೆರಿಗೆ ಪದ್ಧತಿ ಅಷ್ಟೊಂದು ಪರಿಣಾಮಕಾರಿ ಬದಲಾವಣೆ ತರುವುದು ಕಷ್ಟ. ಹೊಸ ಪದ್ಧತಿ ಜನರಲ್ಲಿ ಹೂಡಿಕೆ ಮಾಡುವ ಮನಃಸ್ಥಿತಿಯನ್ನು ನಾಶ ಮಾಡುವ ಸಾಧ್ಯತೆಯೇ ಹೆಚ್ಚು ಎಂಬುದು ಕೆಲವು ಆರ್ಥಿಕ ತಜ್ಞರ ಅಭಿಪ್ರಾಯ.
ರಿಯಲ್ ಎಸ್ಟೇಟ್ಗೆ ಪೆಟ್ಟು?: ಹೊಸ ಪದ್ಧತಿಯಿಂದ ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಜನರ ಹೂಡಿಕೆ ಕಮ್ಮಿಯಾಗಬಹುದು ಎಂಬ ಮಾತೂ ಕೇಳಿಬರುತ್ತಿದೆ. ಕಂಪನಿಗಳು ಉದ್ಯೋಗಿಯ ಸಂಬಳದ ಮೇಲೆ ಟಿಡಿಎಸ್ ಕಡಿತಗೊಳಿಸಲು ಶುರು ಮಾಡುವುದು ಸಾಮಾನ್ಯವಾಗಿ ಹಣಕಾಸು ವರ್ಷ ಶುರುವಾಗುವ ಮೊದಲ ತಿಂಗಳಿನಿಂದ. ಹಾಗಾಗಿ ಉದ್ಯೋಗಿ ಹೊಸ ತೆರಿಗೆ ವಿಧಾನವನ್ನು ಯಾವಾಗ ಆಯ್ಕೆ ಮಾಡಿಕೊಳ್ಳಬೇಕು? ಉದ್ಯೋಗದಾತ ಕಂಪನಿಗಳು ಹೇಗೆ ಟಿಡಿಎಸ್ ಲೆಕ್ಕಾಚಾರ ಮಾಡಬೇಕು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲದೆ ಸರ್ಕಾರ ರಿಟರ್ನ್ ಫೈಲಿಂಗ್ ಸಂದರ್ಭದಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗುವುದು ಎಂದರೆ ಒಮ್ಮೆಲೆ ತೆರಿಗೆಪಾವತಿ ಮಾಡುವುದು ತೆರಿಗೆದಾರನಿಗೆ ಕಷ್ಟ. ರಿಫಂಡ್ಗೆ ಕಾಯಬೇಕಾಗುತ್ತದೆ. ಹಾಗಾಗಿ ಸರ್ಕಾರ ಆದಷ್ಟು ಬೇಗ ಒಂದಿಷ್ಟು ಸ್ಪಷ್ಟೀಕರಣ ನೀಡಬೇಕಾಗುತ್ತದೆ. ಈ ಹೊಸ ವ್ಯವಸ್ಥೆಯ ಬಗ್ಗೆ ತುರ್ತಾಗಿ ಅರ್ಥೈಸಿಕೊಂಡು ಯೋಗ್ಯರೀತಿಯಲ್ಲಿ ತಮ್ಮ ಆದಾಯ ತೆರಿಗೆ ಯೋಜನೆ ರೂಪಿಸಿಕೊಳ್ಳಬೇಕಾದವರು ಮಾಸಿಕ ವೇತನ ಪಡೆಯುತ್ತಿರುವ ನೌಕರರು. ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಅನೇಕರು ಈ ಹೊಸ ತೆರಿಗೆ ಪದ್ಧತಿಯನ್ನು ನಿರ್ಲಕ್ಷಿಸದಿರುವುದು ಉತ್ತಮ. ಜತೆಗೆ ಆದಾಯ ತೆರಿಗೆ ಇಲಾಖೆ ವೆಬ್ಸೈಟ್ನಲ್ಲಿ ಈ ಕ್ಯಾಲ್ಕು್ಯಲೇಟರ್ ಒಂದನ್ನು ಬಿಡುಗಡೆಗೊಳಿಸಿದ್ದು ಅದು ಹೊಸ ಮತ್ತು ಹಳೆಯ ಎರಡೂ ತೆರಿಗೆ ಪದ್ಧತಿಯಡಿ ಟ್ಯಾಕ್ಸ್ ಲೆಕ್ಕಾಚಾರ ಮಾಡಿ ಯಾವುದು ಲಾಭದಾಯಕ ಎಂದು ಹೇಳುತ್ತದೆ. ಹಾಗಾಗಿ ಅದನ್ನು ಕೂಡ ಗಮನಿಸುವುದು ಉತ್ತಮ.
ಕೆಲವು ಡಿಡಕ್ಷನ್ಗಳಿಗೆ ಇತಿಶ್ರೀ: ಯಾರು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳುತ್ತಾರೋ ಅವರು ಕೆಲವು ಡಿಡಕ್ಷನ್ಗಳನ್ನು ತೆಗೆದುಕೊಳ್ಳುವಂತಿಲ್ಲ ಎಂಬುದೇ ಹೊಸ ಪದ್ಧತಿಯ ಪ್ರಮುಖ ನಿಯಮ. ಬಜೆಟ್ ಘೊಷಣೆ ಪ್ರಕಾರ, ಈಗಾಗಲೇ 70 ರೀತಿಯ ವಿನಾಯಿತಿ ಮತ್ತು ಡಿಡಕ್ಷನ್ಗಳನ್ನು ತೆಗೆದುಹಾಕಲಾಗಿದೆ. ಅವುಗಳೆಂದರೆ
ಹೊಸ ತೆರಿಗೆ ಪದ್ದತಿಯನ್ವಯ ನಿಮ್ಮ ಆದಾಯ 5 ಲಕ್ಷ ರೂ.ನಿಂದ 7.5 ಲಕ್ಷ ರೂ. ಇದ್ದರೆ ನೀವು ಶೇ. 10ರಷ್ಟು ಆದಾಯ ತೆರಿಗೆ ಪಾವತಿಸಬೇಕು. ಹಳೆಯ ಪದ್ದತಿಯನ್ವಯ ಶೇ. 20ರಷ್ಟನ್ನು ಪಾವತಿಸಬೇಕಿತ್ತು. ಇನ್ನು 7.5 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೂ ನಿಮ್ಮ ಆದಾಯವಿದ್ದರೆ ಹೊಸ ಪದ್ಧತಿ ಪ್ರಕಾರ ಶೇ. 15ರಷ್ಟನ್ನು ತೆರಿಗೆ ರೂಪದಲ್ಲಿ ಪಾವತಿಸಬೇಕು. ಆದರೆ ಹಳೆಯ ಪದ್ಧತಿಯನ್ವಯ ಶೇ. 20ರಷ್ಟನ್ನು ಪಾವತಿಸಬೇಕಿತ್ತು. ಇದೇ ರೀತಿ ನಿಮ್ಮ ಆದಾಯ 10 ಲಕ್ಷ ರೂ.ನಿಂದ 12.5 ಲಕ್ಷ ರೂ. ಇದ್ದರೆ ಹೊಸ ತೆರಿಗೆ ಪದ್ಧತಿಯನ್ವಯ ನೀವು ಶೇ. 20ರಷ್ಟು ತೆರಿಗೆಯನ್ನು ಪಾವತಿಸಬೇಕು. ಹಳೆಯ ಪದ್ಧತಿಯನ್ವಯ ಶೇ. 30ರಷ್ಟು ಪಾವತಿಸಬೇಕಿತ್ತು. ಇನ್ನು 12.5 ಲಕ್ಷದಿಂದ 15 ಲಕ್ಷದವರೆಗೆ ಆದಾಯವಿದ್ದರೆ ಶೇ. 25ರಷ್ಟು ತೆರಿಗೆ ಪಾವತಿಸಬೇಕು. ಹಳೆಯ ಪದ್ಧತಿ ಪ್ರಕಾರ ನೀವು ಶೇ. 30ರಷ್ಟು ತೆರಿಗೆ ಪಾವತಿಸಬೇಕಿತ್ತು. ಇನ್ನು 15 ಲಕ್ಷ ರೂ. ಮೇಲ್ಪಟ್ಟು ನಿಮ್ಮ ಆದಾಯವಿದ್ದರೆ ಹಳೆ ಹಾಗೂ ಹೊಸ ಪದ್ಧತಿಯನ್ವಯ ಶೇ. 30ರಷ್ಟು ತೆರಿಗೆಯನ್ನು ನೀವು ಪಾವತಿಸಬೇಕು. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದೇ ರೀತಿ 5 ಲಕ್ಷ ರೂ.ವರೆಗಿನ ಆದಾಯವಿದ್ದರೆ ಹಳೆಯ ತೆರಿಗೆ ಪದ್ಧತಿ ಪ್ರಕಾರ ನೀವು ಶೇ. 5ರಷ್ಟು ತೆರಿಗೆ ಪಾವತಿಸಬೇಕು. ಆದರೆ ಹೊಸ ಪದ್ಧತಿಯಲ್ಲಿ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.