ನವದೆಹಲಿ/ಬೆಂಗಳೂರು: ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಕರೊನಾ ಮಹಾಮಾರಿಗೆ ಅಂಕೆ ಹಾಕಲು ಲಾಕ್ಡೌನ್ ಅವಧಿಯನ್ನು ಏ.14ರ ಬಳಿಕವೂ ವಿಸ್ತರಿಸಬೇಕೆಂದು ಎಲ್ಲ ರಾಜ್ಯಗಳು ಪಟ್ಟು ಹಿಡಿದಿರುವ ಬೆನ್ನಲ್ಲೇ ಶನಿವಾರ ಪ್ರಧಾನಿ ನರೇಂದ್ರ ಮೋದಿ ನಡೆಸಲಿರುವ ಮುಖ್ಯಮಂತ್ರಿಗಳ ಜತೆಗಿನ ವಿಡಿಯೋ ಕಾನ್ಪರೆನ್ಸ್ ತೀವ್ರ ಕುತೂಹಲ ಕೆರಳಿಸಿದೆ. ಇತ್ತ ರಾಜ್ಯ ಸರ್ಕಾರ ಕೂಡ ಪ್ರಧಾನಿ ಎದುರು ಪ್ರಸ್ತಾಪಿಸಬೇಕಾದ ವಿಚಾರ, ನೀಡಬೇಕಿರುವ ಮಾಹಿತಿಗಳ ಕುರಿತಂತೆ ಸಿದ್ಧತೆ ಮಾಡಿಕೊಂಡಿದೆ.
ಪ್ರಧಾನಿ ಅವರ ವಿಡಿಯೋ ಕಾನ್ಪರೆನ್ಸ್ನಲ್ಲಿ ಏ.14ಕ್ಕೆ ಕೊನೆಗೊಳ್ಳುವ 21 ದಿನಗಳ ದಿಗ್ಬಂಧನ ವಿಚಾರ ಮುಖ್ಯವಾಗಿ ಪ್ರಸ್ತಾಪವಾಗಲಿದೆ. ಈಗಾಗಲೇ ಒಡಿಶಾ, ಪಂಜಾಬ್ ಲಾಕ್ಡೌನ್ ಅವಧಿಯನ್ನು ಏ. 30ರವರೆಗೆ ವಿಸ್ತರಿಸಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಕೂಡ ಮೇವರೆಗೂ ಲಾಕ್ಡೌನ್ ವಿಸ್ತರಿಸಬೇಕೆಂಬ ಸಲಹೆ ಮುಂದಿಟ್ಟಿವೆ. ರಾಜ್ಯಗಳಿಂದ ವ್ಯಕ್ತವಾಗುವ ಅಭಿಪ್ರಾಯಗಳನ್ನು ಆಲಿಸಿ ಅಂತಿಮವಾಗಿ ಮೋದಿ ಅವರು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ಮೂಲಗಳ ಪ್ರಕಾರ ಶನಿವಾರವೇ ಲಾಕ್ಡೌನ್ ಕುರಿತು ಘೋಷಣೆ ಆಗುವ ನಿರೀಕ್ಷೆ ಇದೆ. ಇನ್ನೂ ಕೆಲವರ ಪ್ರಕಾರ ಶನಿವಾರದ ಬಳಿಕ ಘೋಷಣೆ ಆಗಬಹುದೆನ್ನಲಾಗಿದೆ. ಈಗಾಗಲೇ ಒಡಿಶಾ ಮತ್ತು ಪಂಜಾಬ್ ರಾಜ್ಯ ಸರ್ಕಾರಗಳು ಕೇಂದ್ರದ ನಿರ್ಧಾರಕ್ಕೂ ಮುಂಚೆಯೇ ಲಾಕ್ಡೌನ್ ಅವಧಿಯನ್ನು ಏ. 30ರವರೆಗೆ ವಿಸ್ತರಿಸಿವೆ. ಸರ್ಕಾರಿ ಮೂಲಗಳ ಪ್ರಕಾರ ಮೋದಿ ಅವರು ಈಗಿರುವ ನಿರ್ಬಂಧಗಳಲ್ಲಿ ಕೆಲವೊಂದು ಬದಲಾವಣೆ ತರುವ ಸಾಧ್ಯತೆ ಇದೆ.
ಲಾಕ್ಡೌನ್ ಅವಧಿ ವಿಸ್ತರಿಸುವುದಾದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೆಲವು ವಲಯಗಳ ಪುನಶ್ಚೇತನದ ಅಗತ್ಯತೆ ಪರಿಗಣಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಲಾಕ್ಡೌನ್ನಿಂದಾಗಿ ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ವಿಮಾನಯಾನ ಸಂಸ್ಥೆಗಳಿಗೂ ವಿಮಾನ ಹಾರಾಟ ನಡೆಸಲು ಅನುಮತಿ ನೀಡುತ್ತಾರೆಂಬ ಸಣ್ಣ ಸುಳಿವಿದೆ. ಹೀಗಾದಲ್ಲಿ ಎಲ್ಲ ವರ್ಗಗಳ ಸೀಟುಗಳಲ್ಲಿ ಇಬ್ಬರು ಪ್ರಯಾಣಿಕರ ನಡುವಿನ ಸೀಟನ್ನು ಖಾಲಿ ಬಿಡಬೇಕೆಂಬ ಷರತ್ತು ವಿಧಿಸಬಹುದೆನ್ನಲಾಗಿದೆ.