ಕೋಲ್ಕತ್ತಾ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕೋಲ್ಕತ್ತಾದ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇದೀಗ ರಾಜಕೀಯ ತಿರುವು ಪಡೆಯುತ್ತಿದೆ. ಘಟನೆಯ ಬಗ್ಗೆ ಸುಳ್ಳು ಮಾಹಿತಿ ಪ್ರಚಾರ ಮಾಡಿದ್ದಾರೆಂದು ಆರೋಪಿಸಿ ಕೋಲ್ಕತ್ತಾ ಪೊಲೀಸರು ಬಿಜೆಪಿ ನಾಯಕಿ ಲಾಕೆಟ್ ಚಟರ್ಜಿ ಅವರನ್ನು ವಿಚಾರಣೆಗೆ ಕರೆದಿದ್ದಾರೆ.
ಲಾಕೆಟ್ ಚಟರ್ಜಿ ಜೊತೆಗೆ ವೈದ್ಯರಾದ ಕುನಾಲ್ ಸರ್ಕಾರ್ ಮತ್ತು ಸುಬರ್ನೋ ಗೋಸ್ವಾಮಿ ಅವರಿಗೂ ಸಮನ್ಸ್ ಜಾರಿಗೊಳಿಸಲಾಗಿದೆ. ಭಾನುವಾರ ಮಧ್ಯಾಹ್ನ 3 ಗಂಟೆಯೊಳಗೆ ಠಾಣೆಗೆ ಹಾಜರಾಗಬೇಕು ಎಂದು ಸಮನ್ಸ್‌ನಲ್ಲಿ ತಿಳಿಸಲಾಗಿದೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಡಾ.ಗೋಸ್ವಾಮಿ ಅವರು ಕೋಲ್ಕತ್ತಾ ವೈದ್ಯರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ 150 ಗ್ರಾಂ ವೀರ್ಯ ಮತ್ತು ಮೂಳೆ ಮುರಿದಿದೆ ಎಂದು ಹೇಳಿದ್ದರು. ಆದರೆ, ಕೋಲ್ಕತ್ತಾ ಪೊಲೀಸರು ಅವರ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ. ಅವರ ಮಾತುಗಳು ಸ್ವಲ್ಪವೂ ನಿಜವಲ್ಲ ಮತ್ತು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಆರೋಪಿಸಲಾಯಿತು. ಈ ನಡುವೆ ಸಂತ್ರಸ್ತೆಯ ಹೆಸರು ಮತ್ತು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಪೊಲೀಸರು ಲಾಕೆಟ್ ಚಟರ್ಜಿಯನ್ನು ಪ್ರಶ್ನಿಸುವ ಸಲುವಾಗಿ ಸಮನ್ಸ್ ಜಾರಿಗೊಳಿಸಲಾಗಿದೆ ಎನ್ನಲಾಗುತ್ತಿದೆ.
ಇದೆಲ್ಲ ಬೆಳವಣಿಗೆಗಳ ನಡುವೆ ಲಾಕೆಟ್ ಚಟರ್ಜಿ, ಕೋಲ್ಕತ್ತಾ ಪೊಲೀಸರು ಮತ್ತು ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮ 'X' ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳ ಪೋಸ್ಟ್, ವ್ಯಕ್ತಿಗಳು ಹಾಗೂ ವಿರೋಧ ಪಕ್ಷದ ನಾಯಕರಿಗಿಂತ ಆರ್ ಜಿ ಕರ್ ಪ್ರಕರಣದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವತ್ತ ಸರ್ಕಾರ ಹಾಗೂ ಪೊಲೀಸರು ಗಮನಹರಿಸಿದರೆ ಒಳಿತು ಎಂದು ಹಿತವಚನ ನೀಡಿದ್ದಾರೆ.
ಸಿಬಿಐಗೆ ಸಹಕರಿಸುವ ಮತ್ತು ಸಾಕ್ಷ್ಯಾಧಾರಗಳನ್ನು ಹಾಳು ಮಾಡದಂತೆ ನೋಡಿಕೊಳ್ಳುವತ್ತ ಸರ್ಕಾರಿ ಯಂತ್ರ ಗಮನಹರಿಸಬೇಕು. ಸಂತ್ರಸ್ತೆಯ ಕುಟುಂಬವು ನ್ಯಾಯ ಸಿಗುತ್ತದೆಯೇ ಎಂದು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.