West Bengal Landslides: ಡಾರ್ಜಿಲಿಂಗ್ನಲ್ಲಿ ಸುರಿದ ಭಾರೀ ಮಳೆಗೆ ಭೂಕುಸಿತ ಸಂಭವಿಸಿದ್ದು, ಕನಿಷ್ಠ 14 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿಯಿಂದ ರಾಜ್ಯದ ಹಲವೆಡೆ ಧಾರಕಾರ ಮಳೆಯಾಗುತ್ತಿದ್ದು, ಸಿಕ್ಕಿಂ ಸೇರಿದಂತೆ ಹಲವು ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಗಳು ಬಂದ್ ಆಗಿವೆ.
ಇದನ್ನೂ ಓದಿ: ಶಸ್ತ್ರಾಸ್ತ್ರ ತ್ಯಜಿಸಿ..ಹಿಂಸಾಚಾರ ಮುಂದುವರೆದರೆ ಬೇರೆ ರೀತಿಯ ಕ್ರಮ ಎದುರಿಸಬೇಕಾಗುತ್ತದೆ; ನಕ್ಸಲರಿಗೆ Amit Shah ಎಚ್ಚರಿಕೆ!
ಭೂಕುಸಿತ ಸಂಭವಿಸಿದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆಗಳು, ತುರ್ತು ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಡಾರ್ಜಿಲಿಂಗ್ನಲ್ಲಿ ಭೂಕುಸಿತ ಸಂಭವಿಸಿದ್ದು, 14 ಮಂದಿ ಸಾವಿಗೀಡಾಗಿದ್ದಾರೆ. ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಈಗ ಪ್ರಾರಂಭವಾಗಿರುವುದರಿಂದ ನಮಗೆ ನಿಖರವಾದ ಅಂಕಿಅಂಶಗಳಿಲ್ಲ" ಎಂದು ಡಾರ್ಜಿಲಿಂಗ್ ಉಪ-ವಿಭಾಗೀಯ ಅಧಿಕಾರಿ (SDO) ರಿಚರ್ಡ್ ಲೆಪ್ಚಾ ಮಾಹಿತಿ ನೀಡಿದ್ದಾರೆ.
ನಿರಂತರ ಭಾರೀ ಮಳೆಯಿಂದಾಗಿ ಡಾರ್ಜಿಲಿಂಗ್ ಸೇರಿ ಕೆಲವು ಪ್ರದೇಶಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಇನ್ನು ಮಿರಿಕ್ ಮತ್ತು ಕುರ್ಸಿಯೊಂಗ್ ಜಿಲ್ಲೆಗಳನ್ನು ಸಂಪರ್ಕಿಸುವ ದುಡಿಯಾ ಐರನ್ ಸೇತುವೆ ಕೂಡ ಕುಸಿದಿದ್ದು, ಪ್ರಮುಖ ನಗರಗಳಿಗೆ ಪ್ರವೇಶ ಕಡಿತಗೊಂಡಿದೆ. ಸಿಕ್ಕಿಂ ಹೆದ್ದಾರಿ ಕೂಡ ಸ್ಥಗಿತಗೊಂಡಿದೆ. ವಿಪರೀತ ಮಳೆಯಿಂದ ಪಶ್ಚಿಮ ಬಂಗಾಳದ ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧ ಹೇರಲಾಗಿದೆ,(ಏಜೆನ್ಸೀಸ್).