ಕೋಲ್ಕತ್ತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಅನಿರೀಕ್ಷಿತ ಕ್ರಮ ಕೈಗೊಂಡಿದೆ.
ವೈದ್ಯಕೀಯ ವಿದ್ಯಾರ್ಥಿಗಳು, ಕಿರಿಯ ವೈದ್ಯರು ಕೈಗೊಂಡಿರುವ ಪ್ರತಿಭಟನಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ 43 ವೈದ್ಯರನ್ನು ವರ್ಗಾವಣೆ ಮಾಡಲಾಗಿದೆ ಎಂದು ಯುನೈಟೆಡ್ ವೈದ್ಯರ ಸಂಘ (ಯುಡಿಎಫ್‌ಎ) ಅಭಿಪ್ರಾಯಪಟ್ಟಿದೆ. ವೈದ್ಯರ ವರ್ಗಾವಣೆಯಲ್ಲಿ ಸಂಪೂರ್ಣ ಅನ್ಯಾಯವಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಮತ್ತು ವೈದ್ಯರ ಸುರಕ್ಷತೆಗಾಗಿ ಮುಂದಿಟ್ಟಿರುವ ನಮ್ಮ ಬೇಡಿಕೆಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಸಂಘ ಹೇಳಿದೆ.
ವೈದ್ಯರ ವರ್ಗಾವಣೆ ಅಧಿಸೂಚನೆ ಹೊರಬೀಳುತ್ತಿದ್ದಂತೆ ವೈದ್ಯ ಸಮುದಾಯ ಹಾಗೂ ವಿರೋಧ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರನ್ನು ವರ್ಗಾವಣೆ ಮಾಡಿರುವುದು ಸರ್ಕಾರದ ಸೇಡಿನ ಮನೋಭಾವದ ಸೂಚನೆಯಾಗಿದೆ ಎಂದು ಆರೋಪಿಸುತ್ತಿವೆ.
ಬಿಜೆಪಿ ರಾಷ್ಟ್ರೀಯ ಪ್ರತಿನಿಧಿ ಶೆಹಜಾದ್ ಪೂನಾವಾಲಾ ಮಾತನಾಡಿ, ಸಂತ್ರಸ್ತ ಮಹಿಳೆಗೆ ನ್ಯಾಯ ದೊರಕಿಸಿಕೊಡಬೇಕೆಂದು ದೇಶದಲ್ಲಿ ಎಲ್ಲರೂ ಆಗ್ರಹಿಸುತ್ತಿರುವಾಗ ತೃಣಮೂಲ ಕಾಂಗ್ರೆಸ್ ಸರ್ಕಾರ ನ್ಯಾಯ ಕೊಡಿಸುವ ಬದಲು ಅತ್ಯಾಚಾರ ಮಾಡಿದವರನ್ನು ರಕ್ಷಿಸುತ್ತಿದೆ. ಇದು 'ತಾಲಿಬಾನ್ ಮುಜೆ ಚಾಹಿಯೆ' ಎಂದು ಕಿಡಿ ಕಾರಿದ್ದಾರೆ.