ಪಶ್ಚಿಮಬಂಗಾಳ: ಆಹಾರ ಅರಸಿ ಬಂದ ಆನೆಯ ಮೇಲೆ ಜನರ ಗುಂಪೊಂದು ಬೆಂಕಿನ ಈಟಿ ಎಸೆದಿದ್ದಾರೆ. ಈ ನೋವನ್ನು ತಾಳಲಾರದೆ ಆನೆ ನರಳಿ ಪ್ರಾಣ ಬಿಟ್ಟಿದೆ. ಈ ಘಟನೆ ಪಶ್ಚಿಮ ಬಂಗಾಳದ ಝುರ್ಗ್ರಾಮದಲ್ಲಿ ನಡೆದಿದೆ.
ಆರು ಆನೆಗಳು ಹಾಗೂ ಎರಡು ಮರಿಗಳಿದ್ದ ಆನೆಗಳ ಗುಂಪೊಂದು ಝರ್‌ಗ್ರಾಮ್ ಜಿಲ್ಲೆಯ ರಾಜ್ ಕಾಲೇಜ್ ಕಾಲೋನಿಗೆ ಬಂದು ಕೆಲ ಗೋಡೆಗಳನ್ನು ಬೀಳಿಸಿವೆ ಅದೇ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರನ್ನು ಆನೆ ಕೊಂದು ಹಾಕಿದೆ. ಸಿಟ್ಟಿಗೆದ್ದ ಜನ ಕಬ್ಬಿಣದ ರಾಡ್‌ಗೆ ಬೆಂಕಿಯುಂಡೆಯನ್ನು ಹಾಗೂ ಪಂಜುಗಳನ್ನು ಕಟ್ಟಿ ಆನೆಗಳತ್ತ ಎಸೆದಿದ್ದಾರೆ. ಹುಲ್ಲಾ ಗ್ಯಾಂಗ್ ಧರ್ಮಪುರದ ಫುಟ್ಬಾಲ್ ಮೈದಾನದಲ್ಲಿ ಆನೆಗಳ ಮೇಲೆ ಈಟಿಗಳಿಂದ ಹಲವು ಬಾರಿ ದಾಳಿ ನಡೆಸಿದ್ದಾರೆ. ಇದರಿಂದ ಆನೆಯೊಂದು ಗಾಯಗೊಂಡು ಎದ್ದು ನಡೆಯಲಾಗದೇ ನರಳಿದೆ. ಆನೆಯನ್ನು ಅರಣ್ಯ ಸಿಬ್ಬಂದಿಯವರು ಘಟನೆ ನಡೆದ ಸುಮಾರು 8 ಗಂಟೆಯ ನಂತರ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಆದರೆ ಆನೆ ಚಿಕಿತ್ಸೆ ಫಲಕಾರಿಯಾಗದೇ ಪ್ರಾಣ ಬಿಟ್ಟಿದೆ.
ಆನೆಗಳನ್ನು ಓಡಿಸುವ ಈ ತಂಡಕ್ಕೆ ಸ್ಥಳೀಯರು ಹೌಲಾ ಗ್ಯಾಂಗ್ ಎಂದು ಕರೆಯುತ್ತಿದ್ದು, ಈ ಹೌಲಾ ಗ್ಯಾಂಗ್ ಅರಣ್ಯ ಇಲಾಖೆಯವರಿಗೆ ಅರಿವಿದ್ದೆ ಕೆಲಸ ಮಾಡುತ್ತಿದೆ. ಪರಿಸರವಾದಿ ಪ್ರೇರಣಾ ಸಿಂಗ್ ಬಿಂದ್ರಾ ಅವರು ಈ ಹೃದಯ ವಿದ್ರಾವಕವೆನಿಸುವ ದೃಶ್ಯಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ತೀವ್ರ ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಮೊನಚಾದ ಕಬ್ಬಿಣದ ರಾಡ್‌ಗೆ ಬೆಂಕಿಯುಂಡೆಗಳನ್ನು ಕಟ್ಟಿ ಅದನ್ನು ಆನೆಯತ್ತ ಎಸೆಯಲಾಗುತ್ತದೆ. ಪಶ್ಚಿಮ ಬಂಗಾಳದಾದ್ಯಂತ ವನ್ಯಜೀವಿಗಳನ್ನು ಓಡಿಸಲು ಬಳಸುವ ಕ್ರಮವನ್ನು 2018ರಲ್ಲೇ ಸುಪ್ರೀಂಕೋರ್ಟ್ ನಿಷೇಧ ಮಾಡಿದೆ. ಆದರೂ ಈಗ ಪಶ್ಚಿಮ ಬಂಗಾಳದಲ್ಲಿ ಈ ಪದ್ಧತಿಯನ್ನು ಫಾಲೋ ಮಾಡುತ್ತಲೇ ಇದೆ.