ನ್ಯೂಸ್

ಸಚಿನ್​ ಪೈಲಟ್​ ಜತೆ ದೆಹಲಿಗೆ ಹೋಗಿ, ಈಗ ಉಲ್ಟಾ ಹೊಡೆದ ಶಾಸಕರು; ನಾವು ಕಾಂಗ್ರೆಸ್​ ಸೈನಿಕರು ಎಂದರು...!

ಜೈಪುರ: ಕರೊನಾ ಬಿಕ್ಕಟ್ಟಿನ ಮಧ್ಯೆ ರಾಜಸ್ಥಾನ ಸರ್ಕಾರವೂ ಅಸ್ಥಿರಗೊಂಡಿದೆ. ಡಿಸಿಎಂ ಸಚಿನ್​ ಪೈಲಟ್​ ಅವರು ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ವಿರುದ್ಧ ಬಂಡಾಯ ಎದ್ದು ತಮ್ಮ ಆಪ್ತ ಶಾಸಕರೊಟ್ಟಿಗೆ ದೆಹಲಿಗೆ ತೆರಳಿದ್ದಾರೆ.

ಈ ಮಧ್ಯೆ ಸಚಿನ್​ ಪೈಲಟ್​ ಅವರಿಗೆ ಜೈಪುರಕ್ಕೆ ಹಿಂತಿರುಗುವಂತೆ ಹೈಕಮಾಂಡ್​ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಇದೀಗ ಸಚಿನ್ ಪೈಲಟ್​ ಜತೆ ದೆಹಲಿಗೆ ತೆರಳಿದ್ದ ಮೂವರು ಶಾಸಕರು ಸುದ್ದಿಗೋಷ್ಠಿ ನಡೆಸಿದ್ದಲ್ಲದೆ, ಪೂರ್ತಿ ಉಲ್ಟಾ ಹೊಡೆದಿದ್ದಾರೆ.

ಸಚಿನ್​ ಪೈಲಟ್​ ಅವರ ಆಪ್ತರೆನಿಸಿಕೊಂಡು, ಅವರೊಂದಿಗೆ ದೆಹಲಿಗೆ ಹೋಗಿದ್ದ ಶಾಸಕರಾದ ರೋಹಿತ್​ ಬೊಹ್ರಾ, ಚೇತನ್ ದುಡಿ ಮತ್ತು ದಿನೇಶ್​ ಅಬ್ರಾರ್​ ಅವರು ಇಂದು ಜೈಪುರದಲ್ಲಿರವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ನಾವು ವೈಯಕ್ತಿಕ ಕಾರಣಕ್ಕಾಗಿ ದೆಹಲಿಗೆ ಹೋಗಿದ್ದೆವು ಹೊರತಾಗಿ ಬೇರೇನೂ ಇಲ್ಲ ಎಂದಿದ್ದಾರೆ.

ಬಂಡಾಯ ಎದ್ದು ಸಚಿನ್​ ಪೈಲಟ್​ ಜತೆ ಹೋಗಿದ್ದೇವೆ..ವಿವಾದ ಸೃಷ್ಟಿಸಿದ್ದೇವೆ ಎಂದು ಮಾಧ್ಯಮಗಳಲ್ಲಿ ವರದಿಯಾಗದರೆ ಅದು ನಮ್ಮ ತಪ್ಪಲ್ಲ ಎಂದೂ ಹೇಳಿದ್ದಾರೆ.

ನಾವು ಕಾಂಗ್ರೆಸ್​ನ ಸೈನಿಕರು. ನಮ್ಮ ಕೊನೇ ಉಸಿರು ಇರುವವರೆಗೂ ಈ ಪಕ್ಷದಲ್ಲಿಯೇ ಇರುತ್ತೇವೆ. ಸಚಿನ್​ ಪೈಲಟ್​ ಅವರು ರಾಜಸ್ಥಾನದ ಕಾಂಗ್ರೆಸ್​ ಅಧ್ಯಕ್ಷರು. ಅವರೊಂದಿಗೆ ನಮ್ಮ ಮಾತುಕತೆ, ಕೆಲವು ವಿಚಾರಗಳ ಬಗ್ಗೆ ಚರ್ಚೆ ಯಾವಾಗಲೂ ಇರುತ್ತದೆ ಎಂದು ಮೂವರು ಶಾಸಕರೂ ಹೇಳಿದ್ದಾರೆ.

ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ. ನಾವೆಲ್ಲ ಕೊವಿಡ್​-19 ವಿರುದ್ಧ ಹೋರಾಡುತ್ತಿದ್ದರೆ, ಬಿಜೆಪಿ ಅಧಿಕಾರಕ್ಕೋಸ್ಕರ ಮಸಲತ್ತು ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. (ಏಜೆನ್ಸೀಸ್​)