ಅಮೃತಸರ: ಇಂದು ಮುಂಜಾನೆ ಅಮೃತಸರ ಜಲಂದರ್ ಹೆದ್ದಾರಿಯ ಜಂಡಿಯಾಲಾ ಗುರು ಟೌನ್ ಬಳಿ ಸಂಭವಿಸಿದ ಭೀಕರ ಕಾರ್ ಅಪಘಾತದಲ್ಲಿ ಖ್ಯಾತ ಪಂಜಾಬಿ ಗಾಯಕ ದಿಲ್ಜಾನ್ (32) ಮೃತಪಟ್ಟಿದ್ದಾರೆ.
ಘಟನೆಗೆ ಕಾರಣ ತಿಳಿದು ಬಂದಿಲ್ಲವಾದರೂ, ಪ್ರಾಥಮಿಕ ತನಿಖೆ ಪ್ರಕಾರ ಸರಕು ಸಾಗಾಣೆಯ ವಾಹನವೊಂದಕ್ಕೆ ಮಂಗಳವಾರ ನಸುಕಿನ ಜಾವ ದಿಲ್ಜಾನ್ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತವಾದ ತಕ್ಷಣ ಸ್ಥಳೀಯರು ದಿಲ್ಜಾನ್ನ್ನು ರಕ್ಷಿಸಲು ಮುಂದಾದರೂ ಸಹ ಅಪಘಾತದ ತೀವ್ರತೆಗೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ದಿಲ್ಜಾನ್ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ. ಕೆನಡಾದಲ್ಲಿ ನೆಲಸಿರುವ ದಿಲ್ಜಾನ್ ಕುಟುಂಬ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಭಾರತಕ್ಕೆ ಬರುತ್ತಿದೆ.