ಶಿವಮೊಗ್ಗ ಮೆಗ್ಗಾನ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ದಿನಾಚರಣೆಯನ್ನು ಡಾ. ಸಿದ್ದನಗೌಡ ಪಾಟೀಲ್ ಉದ್ಘಾಟಿಸಿದರು. ಡಾ. ಸುನೀತಾ, ಡಾ. ನಾಗರಾಜ ನಾಯ್ಕ, ಡಾ. ಲೇಪಾಕ್ಷಿ, ಡಾ. ತಿಮ್ಮಪ್ಪ, ಡಾ. ಆರ್.ಬಿ.ಪಾಟೀಲ್, ಡಾ. ವಿರೂಪಾಕ್ಷಪ್ಪ, ಅನ್ನಪೂರ್ಣ ಇತರರಿದ್ದರು.  
ನ್ಯೂಸ್

ಶಿವಮೊಗ್ಗದಲ್ಲಿ ಸುಸಜ್ಜಿತ ಮಿಲ್ಕ್ ಬ್ಯಾಂಕ್

ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ತಾಯಿ ಹಾಲು ಸಂಗ್ರಹಣ ನಿಧಿ ಸ್ಥಾಪಿಸಿದ್ದು, ಇದಕ್ಕೆ ತಾಯಂದಿರೇ ದಾನಿಗಳಾಗಿರುತ್ತಾರೆ. ಈವರೆಗೆ ಒಟ್ಟು 56 ಲೀ. ಹಾಲು ಸಂಗ್ರಹವಾಗಿದೆ. 38 ಲೀ. ಹಾಲನ್ನು ಮಕ್ಕಳಿಗೆ ನೀಡಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್ ಹೇಳಿದರು.

ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರು ನಂತರ ಶಿವಮೊಗ್ಗದಲ್ಲಿ ಮಾತ್ರ ಮಿಲ್ಕ್ ಬ್ಯಾಂಕ್ ವ್ಯವಸ್ಥೆ ಇರುವುದು. ಇದು ಶಿಶುಮರಣ ತಡೆಗಟ್ಟುವಲ್ಲಿ ಬಹಳ ಸಹಕಾರಿ. ಮಗುವಿಗೆ ಅಗತ್ಯವಿರುವುದಕ್ಕಿಂತ ಹೆಚ್ಚು ಹಾಲು ಉತ್ಪತ್ತಿಯಾಗುತ್ತಿದ್ದರೆ ಅದನ್ನು ಮಿಲ್ಕ್ ಬ್ಯಾಂಕ್‌ಗೆ ತಾಯಂದಿರು ದಾನ ಮಾಡಬಹುದು ಎಂದು ತಿಳಿಸಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಶಿಶು ಆರೈಕೆಗೆ ಸುಸಜ್ಜಿತ ವ್ಯವಸ್ಥೆ ಮತ್ತು ತಜ್ಞ ವೈದ್ಯರಿಂದ ಸೇವೆ ಒದಗಿಸಲಾಗುತ್ತಿದೆ. ಇತ್ತೀಚಿನ ಶಿಶು ಮರಣದ ಅಂಕಿಅಂಶಗಳನ್ನು ಪರಿಗಣಿಸಿದಾಗ ಶಿಶು ಮರಣ ತಡೆಗಟ್ಟುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದೇವೆ. ಹಿಂದಿನ ವರ್ಷಗಳಲ್ಲಿ 20-25 ರಷ್ಟಿದ್ದ ಶಿಶು ಮರಣ ಪ್ರಮಾಣ 6ರಿಂದ 7ಕ್ಕೆ ಇಳಿಕೆಯಾಗಿದೆ ಎಂದರು.
ಮಕ್ಕಳ ತಜ್ಞೆ ಡಾ. ಸುನೀತಾ ಮಾತನಾಡಿ, ತಾಯಿ ಹಾಲು ಮಕ್ಕಳ ಬೌದ್ಧಿಕ, ಶಾರೀರಿಕ ಬೆಳವಣಿಗೆಗೆ ಬಹಳ ಮುಖ್ಯ. ತಾಯಿಹಾಲು ಕುಡಿಯುವ ಮಕ್ಕಳು ಇತರ ಮಕ್ಕಳಿಗಿಂತ ಹೆಚ್ಚು ಸದೃಢವಾಗಿರುತ್ತಾರೆ. ತಾಯಿ ಹಾಲು ಕುಡಿಸುವುದರಿಂದ ತಾಯಿ ಮತ್ತು ಮಗು ಇಬ್ಬರಿಗೂ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಹೇಳಿದರು.
ಜಿಲ್ಲಾ ಲಸಿಕಾಧಿಕಾರಿ ಡಾ. ನಾಗರಾಜ ನಾಯ್ಕ, ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ. ಲೇಪಾಕ್ಷಿ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಆರ್.ಬಿ.ಪಾಟೀಲ್, ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ, ಮಿಲ್ಕ್ ಬ್ಯಾಂಕ್ ವಿಭಾಗದ ಡಾ. ವಂಸತ್, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ, ಟಿಎಚ್‌ಒ ಡಾ. ಚಂದ್ರಶೇಖರ್ ಇತರರಿದ್ದರು.