ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಮಾಸುವ ಮುನ್ನವೇ ನಗರದ ಗ್ಯಾರೇಜ್‌ವೊಂದರಲ್ಲಿ ಗ್ಯಾಸ್ ವೆಲ್ಡಿಂಗ್ ಟ್ಯಾಂಕ್ ಸ್ಫೋಟಗೊಂಡು ಗ್ಯಾರೇಜ್ ಮಾಲೀಕ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ನಗರದ ಬಸವೇಶ್ವರನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಪೈ ಷೋ ರೂಮ್ ಬಳಿ ಶನಿವಾರ ಸಂಜೆ ೫.೪೫ರ ವೇಳೆ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಗ್ಯಾರೇಜ್ ಮಾಲೀಕ ಜಾರ್ಜ್, ಕೆಲಸಗಾರ ಶಿವು ಹಾಗೂ ಇಬ್ಬರು ಪಾದಾಚಾರಿ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಜಾರ್ಜ್ ಎಂಬುವವರು ಗ್ಯಾರೇಜ್‌ವೊಂದನ್ನು ನಡೆಸುತ್ತಿದ್ದಾರೆ. ಶನಿವಾರ ಸಂಜೆ ಕಾರೊಂದನ್ನು ವೆಲ್ಡಿಂಗ್ ಮಾಡುವಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ಕೆಲವೇ ಕ್ಷಣದಲ್ಲಿ ಬೆಂಕಿ ವೆಲ್ಡಿಂಗ್ ಟ್ಯಾಂಕ್‌ಗೆ ತಾಕಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಗ್ಯಾರೇಜ್ ಸೇರಿದಂತೆ ಸುತ್ತಮುತ್ತಲ ಹಲವು ಮನೆಗಳು ಹಾಗೂ ನಿರ್ಮಾಣ ಹಂತದ ಕಟ್ಟಡಕ್ಕೆ ಹಾನಿಯಾಗಿದೆ. ಈ ವೇಳೆ ಗ್ಯಾರೇಜ್ ಮಾಲೀಕ ಜಾರ್ಜ್, ಕೆಲಸಗಾರ ಶಿವು ಹಾಗೂ ಇಬ್ಬರು ಪಾದಾಚಾರಿಗಳು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಗ್ಯಾರೇಜ್ ಮಾಲೀಕನ ವಿರುದ್ಧ ಪ್ರಕರಣ ದಾಖಲು:
ಗ್ಯಾರೇಜ್‌ನಲ್ಲಿ ದಟ್ಟ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಸ್ಥಳೀಯರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಂತೆಯೆ ಸ್ಫೋಟದ ವಿಚಾರ ತಿಳಿದು ಮಾಗಡಿ ರಸ್ತೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಗ್ಯಾರೇಜ್ ನಡೆಸಲು ಜಾರ್ಜ್ ಪರವಾನಗಿ ಪಡೆದಿದ್ದರೆ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಜತೆಗೆ ಗ್ಯಾರೇಜ್‌ನಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆಯೇ ಎಂಬುದರ ಬಗ್ಗೆಯೂ ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಗ್ಯಾರೇಜ್ ಮಾಲೀಕ ಜಾರ್ಜ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ರಭಸಕ್ಕೆ ಬೆಚ್ಚಿಬಿದ್ದ ಸ್ಥಳೀಯರು:
ಗ್ಯಾರೇಜ್‌ನಲ್ಲಿ ವೆಲ್ಡಿಂಗ್ ಟ್ಯಾಂಕ್ ಸ್ಫೋಟ ಸಂಭವಿಸಿದರಿಂದ ಭಾರೀ ಶಬ್ಧಕ್ಕೆ ಸ್ಥಳೀಯರು ಬೆಚ್ಚಿಬಿದ್ದಾರೆ. ಸ್ಫೋಟದ ಹಿನ್ನೆಲೆಯಲ್ಲಿ ಸ್ಥಳೀಯರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನರು ಗ್ಯಾರೇಜ್ ಬಳಿ ಜಮಾಯಿಸಿದ್ದರು. ಸ್ಫೋಟದ ರಭಸಕ್ಕೆ ಗ್ಯಾರೇಜ್‌ನ ನೆರೆಯ ಹೊರೆಯ ಮನೆಗಳ ಕಿಟಕಿ ಗಾಜುಗಳು ಹಾಗೂ ವಾಹನಗಳ ಗಾಜುಗಳು ಒಡೆದು ಹಾನಿಯಾಗಿದೆ. ಆರಂಭದಲ್ಲಿ ಗ್ಯಾರೇಜ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದಾಗ, ವೆಲ್ಡಿಂಗ್ ಟ್ಯಾಂಕ್ ಸ್ಫೋಟಗೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.