ಮೇಷ: ಅಶ್ವಿನಿ, ಭರಣಿ, ಕೃತ್ತಿಕಾ1ನೇ ಪಾದದಲ್ಲಿ ಗುರುವು ವಕ್ರತ್ವವನ್ನು ಬಿಟ್ಟು ನೇರವಾಗಿ ಮೇಷದಲ್ಲಿ ಸಾಗುವ ಸಮಯವಿದು. ಇದರ ಸದುಪಯೋಗವನ್ನು ಪಡೆದು ವ್ಯಾಪಾರ, ವ್ಯವಹಾರಗಳನ್ನು ಸರಿಪಡಿಸಿಕೊಂಡು ಸಾಗಿದರೆ ನಿಮ್ಮ ಇಚ್ಛೆಯು ಪೂರ್ಣವಾಗುತ್ತದೆ. ದ್ವಾದಶದಲ್ಲಿ ರಾಹು ಇರುವುದರಿಂದ ಅಧರ್ಮ, ಅನೀತಿ, ಮಿತಿಮೀರಿದ ಆಸೆಯನ್ನು ದೂರವಿಟ್ಟು ಸುಬ್ರಹ್ಮಣ್ಯನನ್ನು ಅರ್ಚಿಸಿ.
ವೃಷಭ: ದ್ವಾದಶದಲ್ಲಿ ಗುರು ಇರುವುದು ಅಷ್ಟು ಶ್ರೇಯಸ್ಕರವಲ್ಲ. ರೋಗ ಋಣ, ಶತ್ರುಬಾಧೆ, ಮನುಷ್ಯನನ್ನು ಕಾಡುತ್ತದೆ. ಜಗತ್ತಿನಲ್ಲಿ ಎಲ್ಲ ತಾಯಂದಿರು ಮಕ್ಕಳು ಪೂರ್ಣಾಯುಷ್ಯ ಹೊಂದಿರಲೆಂದು ಬಯಸುತ್ತಾರೆ. ನೀವು ಈ ಸಮಯದಲ್ಲಿ ದುರ್ಗಾಮಾತೆಯನ್ನು ಪೂಜಿಸಿದರೆ ಸಂತೋಷ ಪಡೆಯಬಹುದು. ನಿರೀಕ್ಷೆಯಂತೆ ಫಲ ದೊರೆಯಲಿದೆ.
ಮಿಥುನ: ಮನುಷ್ಯನಿಗೆ ಗಂಡಾಂತರಗಳು ಬರುವುದು ಅವಾಂತರಗಳಿಂದ. ನಿಮ್ಮ ಅವಾಂತರದಿಂದ ನಿಮ್ಮನ್ನು, ನಿಮ್ಮ ವ್ಯಕ್ತಿತ್ವವನ್ನು ನಿಂದಿಸುತ್ತಾರೆ. ಶುಭದಾಯಕನಾಗಿ ಏಕಾದಶ ಗುರು ಇದ್ದಾನೆ. ಸನ್ಮಾರ್ಗದಲ್ಲಿ ನಡೆದು ಪ್ರೀತಿ ಪಡೆದುಕೊಳ್ಳುವ ಸಮಯವಿದು. ದುರಾಸೆ ಬಿಟ್ಟು ಸಾಗಿದರೆ 9ನೇ ಮನೆಯಲ್ಲಿರುವ ಶನಿ ಆರ್ಥಿಕವಾಗಿ ನಿಮಗೆ ಬಲನೀಡುತ್ತಾನೆ. ಕೊಲ್ಲಾಪುರದ ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.
ಕಟಕ: ಅಷ್ಟಮದಲ್ಲಿ ಶನಿ, ದಶಮದಲ್ಲಿ ಗುರು ಇದ್ದರೂ, ರಾಶ್ಯಾಧಿಪತಿ ಚಂದ್ರನು ತಾಯಿ ಅನುಸೂಯಾ ದೇವಿಗೆ ಬೆಳದಿಂಗಳ ರೂಪದಲ್ಲಿ ದರ್ಶನ ಕೊಟ್ಟು ದತ್ತನನ್ನು ಆರಾಧಿಸುವವರಿಗೆ ಸರ್ವತ್ರ ವಿಜಯವನ್ನು ನೀಡುತ್ತಾನೆ. ಬೋಲೆನಾಥನನ್ನು ಪ್ರಾರ್ಥಿಸಿ, ಪೂಜಿಸಿ. ಕಾಲಭೈರವನ ಅಷ್ಟೋತ್ತರ ಪಾರಾಯಣ ಮಾಡಿ.
ಸಿಂಹ: ರಾಶ್ಯಾಧಿಪತಿ ಸೂರ್ಯನಾಗಿರುವುದರಿಂದ ದಕ್ಷಿಣಾಯನದಲ್ಲಿ 15 ದಿನಗಳಿದ್ದು, ನಂತರ ಬೆಳಕನ್ನು ನೀಡಿ, ಉಜ್ವಲ, ಪ್ರಜ್ವಲವಾದ ಭವಿಷ್ಯವನ್ನು ನೀಡುತ್ತಾನೆ. ಸೂರ್ಯನ ಪ್ರಾರ್ಥನೆ ತಪ್ಪದೆ ಮಾಡಿ. ಕನ್ಯಾರಾಶಿಯಲ್ಲಿ ಕೇತು ಇರುವುದರಿಂದ ಗಣಪತಿಗೆ ಗರಿಕೆ ಅರ್ಪಿಸಿ, ಕಡಲೆಕಾಳು ನೈವೇದ್ಯ ಮಾಡುವುದರಿಂದ ಇಷ್ಟಾರ್ಥ ಪೂರೈಸಿ ಆರೋಗ್ಯ ಭಾಗ್ಯ ನೀಡುತ್ತಾನೆ.
ಕನ್ಯಾ: ಆಕಾಶದಲ್ಲಿ ಗಾಳಿಪಟ ಹಾರಿಸಲು ಸೂತ್ರ ಬೇಕು. ಸೂತ್ರವೇ ಇಲ್ಲದಿದ್ದರೆ ಗುರಿಮುಟ್ಟುವುದು ಅಸಾಧ್ಯ. ಜೀವನದ ಪಾತ್ರವನ್ನು ಸರಿಯಾಗಿ ಅರಿತುಕೊಂಡು ಹೆಜ್ಜೆ ಇಟ್ಟರೆ, 6ನೇ ಮನೆಯಲ್ಲಿರುವ ಶನಿಯು ಸಾಲ-ಶೂಲಗಳ ಬಾಧೆ ಪರಿಹರಿಸಿ ಸಂತೋಷ ನೀಡುತ್ತಾನೆ. ಕೊಟ್ಟ ಮಾತು ಮೀರಬೇಡಿ, ಮಾತಿನಲ್ಲಿ ಎಚ್ಚರಿಕೆ ಇರಲಿ.
ತುಲಾ: ಸಪ್ತಮಂ ಅಧಿಕ ಸುಖಂ ಎಂಬ ಮಾತಿನಂತೆ, ಸಪ್ತಮದಲ್ಲಿರುವ ಗುರುವು ನಿಮ್ಮನ್ನು ಆಕಾಶದಲ್ಲಿ ಹಾರಿಸಿ ನಿಮಗೆ ಹಿರಿಮೆ, ಕೀರ್ತಿ, ಸಂಪತ್ತು ನೀಡಿ ಕಾಪಾಡುತ್ತಾನೆ. ವಿಚಾರವಂತರು, ವಿಜ್ಞಾನಿಗಳು, ವೈದ್ಯರು ಎಲ್ಲರನ್ನೂ ಪ್ರೀತಿಯಿಂದ ಗೆಲ್ಲಬಹುದು. ಪ್ರತಿನಿತ್ಯ ಶನೈಶ್ಚರ ಅಷ್ಟೋತ್ತರ, ಸಂಪತ್ತಿಗಾಗಿ ಚಾಮುಂಡೇಶ್ವರಿ ಪ್ರಾರ್ಥನೆಯನ್ನು ಮಾಡಿರಿ.
ವೃಶ್ಚಿಕ: ರಾಶಿಗೆ ಅಧಿಪತಿ ಅಂಗಾರಕ. 6ನೇ ಮನೆಯಲ್ಲಿರುವ ಗುರುವು ಒಳ್ಳೆಯ ಫಲ ನೀಡುತ್ತಾನೆ. ಶನಿಯು ಪಂಚಮದಲ್ಲಿದ್ದರೂ ಸ್ವಕ್ಷೇತ್ರದಲ್ಲಿರುವುದರಿಂದ ಸಾಲಬಾಧೆಯನ್ನು ನಿವಾರಿಸಿ ಮನಸ್ಸಿಗೆ ನೆಮ್ಮದಿ, ಶಾಂತಿ ನೀಡುವ ಸಮಯವಿದು. ಪ್ರತಿನಿತ್ಯ ಅಂಗಾರಕ ಅಷ್ಟೋತ್ತರ ಪಾರಾಯಣ ಮಾಡಿ.
ಧನು: ಎಲ್ಲರಿಗೂ ಆಕಾಶ ಮುಟ್ಟಲು ಸಂತೋಷ. ಆದರೆ ಅದು ನಿಲುಕದ ನೀಲಿಬಾನು. ಧನುರಾಶಿಯವರು ಸ್ವಚ್ಛವಾದ ಆಕಾಶದಂತೆ, ಪೂರ್ಣ ಚಂದ್ರನಂತೆ. ಇಷ್ಟಾರ್ಥ ಈಡೇರುವ ಕಾಲವಿದು. 3ನೇ ಮನೆಯಲ್ಲಿ ಶನಿ ಇರುವುದರಿಂದ, ಸನ್ಮಿತ್ರರಲ್ಲಿ ನಂಬಿಕೆ ಇಟ್ಟು ಕೀರ್ತಿ, ಜಯವನ್ನು ಪಡೆಯಬಹುದು. ಪಂಚಮದ ಗುರುವು ತನು, ಮನ, ಧನ, ಸುಖ, ಶಾಂತಿ ನೀಡುತ್ತಾನೆ.
ಮಕರ: ಕುಂಭಾಧಿಪತಿ ಶನಿಯು 2ನೇ ಮನೆಯುಲ್ಲಿರುವುದರಿಂದ ನಿಮ್ಮನ್ನು ಬೇಕಂತಲೇ ಕೆಣಕಿ ಸಂತೋಷ ಪಡುತ್ತಾರೆ. ಅಂತಹವರಿಂದ ದೂರ ಇರಿ. ಮೌನದಿಂದ ಕಾರ್ಯತಃ ಕೆಲಸ ಮಾಡಿ ತೋರಿಸಬೇಕಾದ ಸಮಯವಿದು. ದೇವರು ಸರ್ವರನ್ನು ಪೀತಿಮಾಡಲು ಇಲ್ಲಿಗೆ ಕಳಿಸಿದ್ದಾನೆ. ನಿಮ್ಮ ಜ್ಞಾನವೃದ್ಧಿಗೆ ಗಾಯಿತ್ರಿದೇವಿಯನ್ನು ಪ್ರಾರ್ಥಿಸಿ.
ಕುಂಭ: ನಿಮಗೆ ಗುರುಬಲ ದೂರ ವಿದ್ದು, ಲಗ್ನದಲ್ಲಿ ಶನಿಯು ಕೂತಿದ್ದಾನೆ. ಆದ್ದರಿಂದ ಅಸೂಯೆ, ತಾತ್ಸಾರ, ಗುರಿ ಇಲ್ಲದ ಜೀವನ ಮಾಡಿ ಕಾಲಹರಣ ಮಾಡದೇ, ಪ್ರಹ್ಲಾದನ ರೀತಿ ಮಹಾವಿಷ್ಣುವನ್ನು ಪ್ರಾರ್ಥಿ ಸಿದರೆ ಜೀವನವನ್ನು ಗೆದ್ದು, ಮಾದರಿಯಾಗಿ ಬದುಕಬಹುದು. ಶನಿ ಸಂಚಾರ ವೇಳೆ ದೈವಭಕ್ತಿ ಪ್ರಮುಖವಾಗಿರಬೇಕು. ನರಸಿಂಹ ದೇವರ ಪ್ರಾರ್ಥನೆ, ರಾಮದೇವರ ಅಷ್ಟೋತ್ತರವನ್ನು ಪಠಿಸಿ.
ಮೀನ: ಇನ್ನೂ 3 ತಿಂಗಳು ಗುರು-ಬಲವಿದ್ದು, ಅವಿವಾಹಿತರಿಗೆ ವಿವಾಹಕ್ಕೆ ಸಕಾಲ. ಲಗ್ನದಲ್ಲಿ ರಾಹು ಇರುವುದರಿಂದ ತೊಡಕು ಬಂದರೂ ದೈವಬಲದಿಂದ ನಿವಾರಿಸಿಕೊಂಡು ಮುಂದೆ ಸಾಗಬಹುದು. ಮಾತಿನಲ್ಲಿ ತೂಕವಿರಬೇಕು, ಅಳತೆಯಲ್ಲಿ ಮೋಸವಿರಬಾರದು. ಶನೇಶ್ಚರನ ಒಲುಮೆಗಾಗಿ ಶಿವಸಹಸ್ರನಾಮ ಪಾರಾಯಣ, ಪಾರ್ವತಿ ಸಹಿತ ಸಾಂಬಸದಾಶಿವನ ವ್ರತಕತೆ ಓದಿದರೆ ಗುರಿ ಮುಟ್ಟಲು ಸಾಧ್ಯ.