ನ್ಯೂಸ್

ಈ ರಾಶಿಯವರ ಸಕಲ ಸಂಕಟ-ಕಷ್ಟಗಳು ದೂರವಾಗುತ್ತವೆ: ವಾರ ಭವಿಷ್ಯ

ಮೇಷ

ಮೇಷ ರಾಶಿಯಲ್ಲಿ ಜನಿಸಿದವರ ಶಕ್ತಿಯು 11ರ ಗುರುವಿನಿಂದ ಮನುಷ್ಯನ ಊಹೆಗೂ ನಿಲುಕದಂತಿರುತ್ತದೆ. ಸಂಕಲ್ಪ ಮಾಡಿ ಏನು ಬೇಕಾದರೂ ಮಾಡಿ ತೋರಿಸುತ್ತಾರೆ. ಅವರು ಗುರುವಿನ ಸಂಪರ್ಕದಲ್ಲಿರುವುದರಿಂದ ಸಜ್ಜನರ ಸಹವಾಸ, ಧನಕ್ಕಾಗಿ ಅತಿ ಆಸೆ ಇಲ್ಲದಿದ್ದಲ್ಲಿ ಒಳ್ಳೆಯದನ್ನು ಪಡೆಯುತ್ತಾರೆ. ಸಕಾರಾತ್ಮಕ ಚಿಂತನೆ ಉತ್ತುಂಗಕ್ಕೆ ಕೊಂಡೊಯ್ಯುವುದು. ಸುಬ್ರಹ್ಮಣ್ಯನನ್ನು, ನಟರಾಜನನ್ನು ಪೂಜಿಸಿ.

ವೃಷಭ

ಕುಳಿತಿರುವವನು ಎದ್ದು ನಿಲ್ಲಬೇಕಾದರೆ ತನ್ನ ಸಾಮರ್ಥ್ಯ ಅರಿವು ಮಾಡಿಕೊಂಡು ಸದೃಢವಾಗಿ ನಿಲ್ಲಬೇಕು. ಅದೇ ನಿಂತವನು ಕುಳಿತುಕೊಳ್ಳುವ ಸಂಕಲ್ಪ ಮಾಡಿದರೆ ಪದ್ಮಾಸನ ಹಾಕಿ ಕುಳಿತುಕೊಳ್ಳಬಹುದು. ಅಂದರೆ ರವಿಬುಧರು ರಾಹುವಿನ ಛಾಯೆಗೆ ಒಳಗಾಗಿ ದೃಢ ಸಂಕಲ್ಪ ಇಲ್ಲದವರನ್ನು ದಾರಿ ತಪ್ಪಿಸಲು ಸಾಧ್ಯ. ಯೋಚಿಸಿ ಕೆಲಸ ಮಾಡಿ. ನೀಳಾಂಬದೇವಿಯನ್ನು ಪೂಜಿಸಿ. ಶನಿವಾರ ನೀಲಿ ಪುಷ್ಪದಲ್ಲಿ ರಾಹುವನ್ನು ಪೂಜಿಸಿ. ಬೇಕಾದ್ದನ್ನು ಪಡೆಯಬಹುದು.

ಮಿಥುನ

ಶುಕ್ರನು ಸ್ವಕ್ಷೇತ್ರವನ್ನು ಬಿಟ್ಟು ಬುಧನ ಮನೆಯನ್ನು ಸೇರಿದ್ದಾನೆ. ಬುಧ ದೆಶೆಯಲ್ಲಿ ಶುಕ್ರ ಭುಕ್ತಿ ಅಥವಾ ಶುಕ್ರ ದೆಶೆಯಲ್ಲಿ ಬುಧ ಭುಕ್ತಿಯು ನಿಮಗೆ ಬೇಕಾದ್ದನ್ನು ಕೊಡಲು ತಯಾರಿರುತ್ತಾರೆ. ಅನಂತ ಪದ್ಮನಾಭನಲ್ಲಿ ಭಕ್ತಿ ಇರಲಿ. 9ರ ಗುರುವು ಕೇಳಿದ ವರ ಕೊಡುವ ಗ್ರಹ. ಆದರೆ ಅಷ್ಟಮ ಶನಿಯಿಂದ ದಾರಿ ತಪ್ಪಿಸುವವರು ಇರುತ್ತಾರೆ. ಎಚ್ಚರಿಕೆಯಿಂದ ಸಾಗಿ. ಚಾಮುಂಡೇಶ್ವರಿಯನ್ನು ಅರ್ಚಿಸಿ- ಪೂಜಿಸಿ.

ಕಟಕ

ದ್ವಾದಶದಲ್ಲಿ ಶುಕ್ರನು ಬಂದಿರುವುದರಿಂದ ಒತ್ತಡ ಅಧಿಕವಾಗಿ ಧನದ ಕೊರತೆ ಇರುತ್ತದೆ. ಎಷ್ಟೇ ಯೋಚಿಸಿದರೂ, ಎಷ್ಟೇ ಪ್ರಯತ್ನವಿದ್ದರೂ ನಿಮ್ಮ ಭಾಗ್ಯದಲ್ಲಿ ಎಷ್ಟು ಕೊಡಬೇಕೆಂಬ ನಿರ್ಧಾರವನ್ನು ಭಗವಂತನೇ ಮಾಡಿರುತ್ತಾನೆ. ಜಲರಾಶಿಯಲ್ಲಿ ಹುಟ್ಟಿದ ನಿಮಗೆ ದ್ವಂದ್ವವೂ ಬೇಡ. ಉಮಾಮಹೇಶ್ವರ ಅಷ್ಟಕ ಪಠಿಸಿ. ಪಾರ್ವತಿಯೇ ಲಕ್ಷ್ಮಿಯಾಗಿ ನಿಮ್ಮ ಆಸೆಗಳನ್ನು ಪೂರೈಸುತ್ತಾಳೆ.

ಸಿಂಹ

ಜಗತ್ತಿಗೆ ಬೆಳಕನ್ನು ಕೊಡುವ ಏಕೈಕ ರಾಶಿ ಸಿಂಹ ರಾಶಿ. ಇದರ ಅಧಿಪತ್ಯ ಛಾಯಾ ಸಂಜ್ಞಾ ಸಮೇತ ಸೂರ್ಯನಾರಾಯಣ ದೇವರು. ಆರರ ಶನಿ, ಏಳರ ಗುರು ನಿಮ್ಮ ಚಲನ-ವಲನ ಗಮನಿಸಿರುತ್ತಾರೆ. ಸಮಯ ವ್ಯರ್ಥಮಾಡದೆ ಕಾರ್ಯೋನ್ಮುಖರಾದರೆ ನಿಮ್ಮ ಸತ್ಯಸಂಕಲ್ಪ ಈಡೇರುವುದು. ಗಂಧರ್ವ ಪುರದ ದತ್ತಾತ್ರೇಯನನ್ನು ಪೂಜಿಸಿ.

ಕನ್ಯಾ

ಕನ್ಯೆ ಎಂದರೆ ಯಾವ ಕಪಟವನ್ನು ತಿಳಿಯದ 3 ವರ್ಷದ ಸುಂದರ ಬಾಲಕಿ. ಅವಳೇ ಮಾತೆ. ಲಲಿತೆ. ಅವಳೇ ಸಮುದ್ರ ದಾಟಿಸಿ ದಡ ಸೇರಿಸುವ ದುರ್ಗಾ ಪರಮೇಶ್ವರಿ. ಈ ಸಮಯಕ್ಕೆ ಪಂಚಮ ಶನಿ, ಷಷ್ಠ ಗುರು ಇರುವುದರಿಂದ ದೈವವೆಂಬ ನಾವೆಯಲ್ಲಿ ಕುಳಿತು ದಡವನ್ನು ಸೇರವಹುದು. ಅನ್ನಪೂರ್ಣಾಷ್ಟಕವನ್ನು ಪಠಿಸಿ.

ತುಲಾ

ರಾಶ್ಯಾಧಿಪತಿ 9ರ ಬುಧನ ಮನೆಗೆ ಬಂದು ನೀವು ಮಾಡುತ್ತಿರುವ ಕಾರ್ಯಗಳು ಸಾಫಲ್ಯವಾಗುವ ಕಾಲ. ತೂಕವೆಂಬ ತಕ್ಕಡಿ ನ್ಯಾಯದೇವತೆಯ ಅಧೀನದಲ್ಲಿರುತ್ತದೆ. ಇದನ್ನು ಅರ್ಥಮಾಡಿಕೊಂಡು ಮುನ್ನುಗ್ಗಿ. ಯಶಸ್ಸು, ಕೀರ್ತಿ ನಿಮ್ಮದಾಗುತ್ತದೆ. ಗಾಯತ್ರಿದೇವಿಯನ್ನು ಪೂಜಿಸಿ. ಅಷ್ಟೋತ್ತರ ಪಠಿಸಿ. ಮಲ್ಲಿಕಾ ಪುಷ್ಪದಿಂದ ಅರ್ಚಿಸಿ.

ವೃಶ್ಚಿಕ

ರಾಶಿಗೆ ಶನಿಯು ತೃತೀಯದಲ್ಲಿದ್ದು. 3,6,11 ಶನಿಗೆ ಒಳ್ಳೆಯ ಸ್ಥಾನಗಳು. ಆದರೆ ದೇಶವೇ ರೋಗದಿಂದ ಬಳಲುತ್ತಿರುವಾಗ ಇದಕ್ಕೆ ಪರಿಹಾರವಿಲ್ಲ. ದೇವರ ಮುಂದೆ ನಿಂತು ನಿಶ್ಚಲವಾದ ಭಕ್ತಿಯಿಂದ ಗಣಪತಿಯನ್ನು ಪ್ರಾರ್ಥಿಸಿ. ವಾಸುಕಿ ಸಹಿತ ನಾಗರಾಜನನ್ನು ಪ್ರಾರ್ಥಿಸಿ. ನಿಮ್ಮ ಸಕಲ ಸಂಕಟ, ಕಷ್ಟಗಳು ದೂರವಾಗುತ್ತದೆ.

ಧನು

ನೀವು ಸಾಗುವ ಮಾರ್ಗದಲ್ಲಿ ಅನ್ಯರ ಮೇಲೆ ದ್ವೇಷ ಬೇಡ. ಶನಿಯ ಸಂಚಾರದ ಅಂತ್ಯದಲ್ಲಿ ಅಪಕೀರ್ತಿಗಳು ಬರುವುದು ಸಹಜ. ಬಾರದೆ ಇರುವ ಹಾಗೆ ನೋಡಿಕೊಳ್ಳಿ. ಶತ್ರುಗಳು ನಿಮ್ಮ ಜಾಗ ಆಕ್ರಮಿಸಿಕೊಂಡರೆ ಭಗವಂತನೇ ನಿಮ್ಮನ್ನು ನಿಮ್ಮ ಸ್ಥಾನದಲ್ಲಿ ನಿಲ್ಲಿಸುತ್ತಾನೆ. ತಾಳ್ಮೆ, ದೇವರಲ್ಲಿ ನಂಬಿಕೆ-ಭಕ್ತಿ ಇರಬೇಕು. ದುರ್ಗಾದೀಪ ನಮಸ್ಕಾರ ಮಾಡಿದರೆ ಯಶಸ್ಸು ದೊರೆಯುತ್ತದೆ.

ಮಕರ

ಈ ಶನಿಯ ಸಂಕಷ್ಟದಲ್ಲಿ ದೈವವೆಂಬ ಜಲದಿಂದ ನಿಮ್ಮ ಮನಸ್ಸನ್ನು ಶುದ್ಧಮಾಡಿಕೊಂಡು, ಯಾವ ಪಾಪವೂ ಘಟಿಸದಂತೆ ಕಾಪಾಡಿಕೊಳ್ಳುವುದು ಆದ್ಯ ಕರ್ತವ್ಯವಾಗಿರಲಿ. ನಿತ್ಯವೂ ದಾರಿದ್ರ್ಯ ದುಃಖ ದಹನ ಸ್ತೋತ್ರವನ್ನು ಶನಿ ಸಂಚಾರ ಮುಗಿಯುವವರೆಗೂ ಪಠಿಸಿ. ಬಿಡಿಸಲಾರದ ಸಮಸ್ಯೆಯಿಂದ ಹೊರಬಂದು ಪ್ರಜ್ವಲಿಸುವ ಕಾಲ ಬರುತ್ತದೆ.

ಕುಂಭ

ಶಿವನು ಏನು ಕೊಟ್ಟರೂ ಶಾಶ್ವತ. ಈ ಸಮಯ ನಿಮ್ಮನ್ನು ಪರೀಕ್ಷೆಗೆ ಒಳಪಡಿಸಿದರೂ ಕುಂಭದಲ್ಲೇ ಗುರುವಿರುವುದರಿಂದ ಅಲ್ಪಕಷ್ಟಗಳು ದೂರವಾಗಿ ಊಟ ಉಪಚಾರಗಳಿಗೆ ತೊಂದರೆ ಇಲ್ಲದಂತೆ ನಡೆಸುತ್ತಾನೆ. ಶಿವಗೀತೆಯನ್ನು ಪಾರಾಯಣ ಮಾಡಿ. ದೈವತ್ವ ಪಡೆಯಿರಿ. ಕಷ್ಟಗಳಿಂದ ಮುಕ್ತಿ ಹೊಂದುತ್ತೀರಿ.

ಮೀನ

ದ್ವಾದಶ ಗುರು, ಏಕಾದಶ ಶನಿ ಎಲ್ಲವನ್ನೂ ಕೊಡುತ್ತಾರೆ. ಆದರೆ ಗುರುವಿನ ಕರುಣೆ ಇಲ್ಲದಿದ್ದರೆ ವ್ಯರ್ಥ. ಆದ್ದರಿಂದ ದ್ವಾದಶ ಗುರುವಿಗೆ ಶಿವಾಪರಾಧ ಕ್ಷಮಾಪಣ ಸ್ತೋತ್ರ ಪಠಿಸಿ. ನಿಮ್ಮ ಅಡೆತಡೆಗಳು ದೂರಾಗಿ ಸುಖ ಅನುಭವಿಸುತ್ತೀರಿ. ಶಿವಸ್ತೋತ್ರದಲ್ಲಿ ಅಡಗಿರುವ ಸುವರ್ಣಮಾಲಾ ಸ್ತೋತ್ರ ಪಠಿಸಿ. ಚಂದ್ರಮೌಳಿ ಸ್ತೋತ್ರ ಪ್ರಾತಃಕಾಲದಲ್ಲಿ ಪಠಿಸಿ.