ನ್ಯೂಸ್

ವಾರ ಭವಿಷ್ಯ: ಈ ರಾಶಿಯವರಿಗೆ ಶನಿ ವಿಶೇಷ ಫಲ ಕೊಟ್ಟು ಸಂತೋಷವಾಗಿರಿಸುತ್ತಾನೆ

ಮೇಷ: ಮೇಷದಲ್ಲಿ ರಾಹುವಿದ್ದು ಶುಕ್ರನ ಮನೆಯಲ್ಲಿ ಅಂಗಾರಕನಿರುವನು. ಅಂದುಕೊಂಡ ಕೆಲಸ ಮಾಡುವುದು ಅಸಾಧ್ಯ. ದೈವಕ್ಕೆ ಮೊರೆಹೋಗಿ ಸಮಯೋಚಿತವಾಗಿ ಕೆಲಸ ಮಾಡಿ ಸಾಧಕನಾಗಬೇಕೇ ಹೊರತು ಎಲ್ಲಾ ಕೆಲಸಗಳಲ್ಲೂ ಕೈಹಾಕಿ ಕೈಸುಟ್ಟುಕೊಂಡು ನಷ್ಟ ಅನುಭವವು ದುಃಖಕ್ಕೆ ದಾರಿಯಾಗುತ್ತದೆ. ಅನನ್ಯವಾಗಿ ಗುರುದಕ್ಷಿಣಾ ಮೂರ್ತಿಯನ್ನು ಪೂಜಿಸಿ. ಸತ್ಯಸಾಯಿನಾಥನನ್ನು ಭಜಿಸಿ.

ವೃಷಭ: ವೃಷಭ ರಾಶಿಗೆ ಅತಿಯಾದ ಖರ್ಚು-ವೆಚ್ಚಗಳು ಬಂದು ಆ ಖರ್ಚನ್ನು ಎಟುಕಿಸಲು ಪರದಾಡಬೇಕಾಗುತ್ತದೆ. ಅನಂತವಾಗಿ ಕೊಡುವ ಅನಂತಪದ್ಮನಾಭನನ್ನು ಪೂಜಿಸಿ ನಿಮ್ಮ ಇಷ್ಟಾರ್ಥಗಳನ್ನು ಸಾಧಿಸಿ. ಏಕಾದಶ ಗುರುವೇ ನಿಮ್ಮ ಕೆಲಸ ಕಾರ್ಯಗಳನ್ನು ನಿಭಾಯಿಸುತ್ತಾನೆ. ಅತಿಯಾದ ಆಯಾಸ ತೊಡೆದು, ಈಗಿರುವ ಒಳ್ಳೆಯ ಸಮಯವನ್ನು ಹಾಳು ಮಾಡಿಕೊಳ್ಳಬಾರದು.

ಮಿಥುನ: ಅಷ್ಟಮದಲ್ಲಿ ಶನಿಯಿರುವುದು, ಗುರುಬಲವೂ ಅತ್ಯಲ್ಪವಿರುವುದರಿಂದ ನುಡಿದಂತೆ ನಡೆಯಬೇಕು. ಎಚ್ಚರವಾಗಿ ಕಾರ್ಯೋನ್ಮುಖರಾಗಿ ಹೆಜ್ಜೆಯನ್ನು ಇಡಬೇಕು. ಜೇನುತುಪ್ಪ ತಿನ್ನಲು ಬಲು ರುಚಿ. ಆದರೆ, ಜೇನು ರೊಚ್ಚಿಗೆದ್ದರೆ ಬಲುಕಷ್ಟ. ಕೆಲಸ ಸರಿಯಾಗಿ ಸಾಗಬೇಕಾದರೆ ತಂದೆ-ತಾಯಿಯನ್ನು ಪೂಜಿಸಿ. ಕುಲದೇವರನ್ನು ಪೂಜಿಸಿ. ರಾಮನನ್ನು ಸೇವಿಸಿ, ಸುಖವನ್ನು ಕಂಡುಕೊಳ್ಳಿ.

ಕಟಕ: ಮನುಷ್ಯನ ದೇಹಕ್ಕೆ ಶಿರೋಭಾಗವು ಕಲಶವಿಟ್ಟಂತೆ. ದೇವರು ಕೊಟ್ಟದ್ದು ಸರಿಯಾಗಿ ಇಟ್ಟುಕೊಂಡು ನಮ್ಮ ಚಿಂತನೆಗಳು ಶುಭಾಶುಭಗಳನ್ನು ಹೊಂದಿರಬೇಕು. ಕೈಕಾಲುಗಳಿಗೆ ಎಷ್ಟು ಶಕ್ತಿಯಿದೆಯೋ ಅಷ್ಟೇ ಭಾರವನ್ನು ಹೊರಬಹುದು. ದೃಷ್ಟಿಕೋನವು ಸರಿಯಾಗಿದ್ದರೆ ಗುರುವು ನಿಮ್ಮನ್ನು ಸಂರಕ್ಷಿಸುತ್ತಾನೆ. ಚಂದ್ರಾಷ್ಟೋತ್ತರ ಪಾರಾಯಣ ಮಾಡಿ.

ಸಿಂಹ: ಸಿಂಹಕ್ಕೆ ಸಮನಾದ ಪ್ರಾಣಿಯಿಲ್ಲ. ಈ ಜಗತ್ತಿಗಿಂತ ದೊಡ್ಡದಾದ ಜಾಗವನ್ನು ದೇವರು ಸೃಷ್ಟಿಸಿಲ್ಲ. ದುಷ್ಟರನ್ನು ಮೆಚ್ಚಿಸಲು ಹೋಗಿ ಹಾನಿ ಮಾಡಿಕೊಳ್ಳಬೇಡಿರಿ. ಗುರುವು 8ನೇ ಮನೆಯಲ್ಲಿದ್ದು, ನೆಮ್ಮದಿಯನ್ನು ನೀಡದಿದ್ದರೂ ಆರರ ಶನಿ ವಿಶೇಷ ಫಲ ಕೊಟ್ಟು ಸಂತೋಷವಾಗಿರಿಸುತ್ತಾನೆ. ಶನಿವಾರದಂದು ಶನಿಪ್ರದೋಷ ಕಥೆಯನ್ನು ಭಕ್ತಿಯಿಂದ ಪಠಿಸಿ. ನಿಮ್ಮ ಉದ್ಧಾರಕ್ಕೆ ಶಿವಭಕ್ತಿಯೇ ಆಧಾರವಾಗಿರುತ್ತದೆ.

ಕನ್ಯಾ: ಏಳರ ಗುರುವು ಧೈರ್ಯ ನೀಡುತ್ತಾನೆ. ಆದರೆ, ಪಂಚಮ ಶನಿಯು ಧೈರ್ಯವನ್ನು ಅಲ್ಲಾಡಿಸಿ ವಿಘ್ನವನ್ನು ನಿಮ್ಮ ಪಾಲಿಗೆ ನೀಡುತ್ತಾ ಬಂದಿದ್ದಾನೆ. ಗುರುವು ಸಪ್ತಮದಲ್ಲಿ ಇರುವುದರಿಂದ ಅನ್ಯರ ಮನಸ್ಸಿಗೆ ನೋವು ಉಂಟು ಮಾಡದೆ ಮಾತಿಗೆ ತಪ್ಪದಂತೆ ನಡೆದು ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ಶನಿ ಸಂಚಾರ ನಂತರದಲ್ಲಿ ನಿಮಗೆ ಶುಭವಾಗುತ್ತದೆ.

ತುಲಾ: ಮನುಷ್ಯನು ಅಂದವಾಗಿ -ಚೆಂದವಾಗಿ -ಪೂರ್ಣಚಂದ್ರನಂತೆ ಕಂಗೊಳಿಸಬೇಕು. ಇಷ್ಟೆಲ್ಲವೂ ನಡೆಯಬೇಕಾದರೆ ಕಾಪಾಡುವ ದೇವರಲ್ಲಿ ದೃಢ ಭಕ್ತಿಯಿಂದ ಪೂಜಿಸಬೇಕು. ಗುರುವಿಗೆ ದತ್ತಾತ್ರೇಯ ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿರಿ. ನಿಮ್ಮನ್ನು ನೀವು ಸರಿದೂಗಿಸಿಕೊಂಡು ಇಟ್ಟ ಹೆಜ್ಜೆಯಲ್ಲಿ ಸುಖ-ಜಯವನ್ನು ಕಾಣಬಹುದು. ಶನಿ ಅಷ್ಟೋತ್ತರ ಪಠಿಸಿ.

ವೃಶ್ಚಿಕ: ಧರ್ಮಕ್ಕೆ ಧರ್ಮವೇ ಸಾಟಿ. ದೈವಬಲಕ್ಕೆ ಮನೆದೇವರ ಪೂಜೆಯೇ ಮಾರ್ಗ. ಗುರುಭಕ್ತಿಗೆ ಮೆಚ್ಚಿ ನಿಮ್ಮನ್ನು ಪಾವನಗೊಳಿಸಲು ಗಂಧರ್ವ ಪುರದಲ್ಲಿ ಅಷ್ಟತೀರ್ಥಗಳ ನಡುವೆ ಇರುವ ತ್ರಿಮೂರ್ತಿ ದತ್ತಾತ್ರೇಯನು ಪಾದುಕಾರೂಪದಲ್ಲಿ ದರ್ಶನ ನೀಡುತ್ತಾ ಇದ್ದಾನೆ. ಕಾರ್ಯಾಚರಣೆ ಮುಂದೆ ಸಾಗಲಿ. ಧನ-ಸಂಪತ್ತು, ಅಭೀಷ್ಟಗಳನ್ನು ಪಡೆಯುತ್ತೀರಿ.

ಧನು: ಸಿಂಹ ರಾಶಿಯಲ್ಲಿ ಸೂರ್ಯನಿದ್ದು, 9ರ ಸೂರ್ಯನು ಧೈರ್ಯ, ದಾರಿ ಬೆಳಕನ್ನು ನೀಡಿ ನಿಮ್ಮ ದೋಣಿಯನ್ನು ದಡ ಸೇರಿಸುತ್ತಾನೆ. ಚತುರ್ಥ ಗುರುವು ಸ್ವಕ್ಷೇತ್ರದಲ್ಲಿ ಇರುವುದರಿಂದ ಯಾವ ಕೆಡಕನ್ನು ಮಾಡದೆ ಈಗಿನ ಸಮಯವು ದ್ವಿತೀಯ ಶನಿಯಿಂದ ಮಂದವಾಗಿ ಸಾಗುತ್ತದೆ. ಯಾರ ಮೇಲೆ ನಿರಾಸೆ, ಬೇಸರವೂ ಬೇಡ. ಸ್ವಲ್ಪಕಾಲ ಶನಿಯನ್ನು ಪೂಜಿಸಿ. ಪಿಪ್ಪಲಾಸ್ತೋತ್ರ ಪಾರಾಯಣ ಮಾಡಿ. ಸುಖವನ್ನು ಕಂಡುಕೊಳ್ಳಿ. ಗುರುನರಸಿಂಹನನ್ನು ಪೂಜಿಸಿದರೆ ಅಭೀಷ್ಟಗಳು ಸಿದ್ಧಿಸುತ್ತವೆ.

ಮಕರ: ಮಂದವಾಗಿ ಚಲಿಸುವ ಕಾಲಚಕ್ರದಲ್ಲಿ ಶನಿಯು ಮಕರ ರಾಶಿ ಸಂಚಾರದಲ್ಲಿ ಇರುವುದರಿಂದ ಬೇಕಾದ ಸುಖ-ಸಂತೋಷ ಪಡೆಯುವುದು ಅಸಾಧ್ಯ, ಅದರೂ ಈ ಸಮಯದಲ್ಲಿ ದೇವರ ಅನನ್ಯ ಪ್ರಾರ್ಥನೆ ಒಂದೇ ನಿಮ್ಮನ್ನು ಸಕಲ ರೀತಿಯಿಂದಲೂ ಕಾಪಾಡುತ್ತದೆ. ನಿತ್ಯವೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದಲ್ಲಿ ಶನಿಯು ವಿಷ್ಣು ಭಕ್ತನಿಗೆ ಯಾವ ತೊಂದರೆ ನೀಡದೆ ಇಷ್ಟಾರ್ಥ ನೆರವೇರಿಸುತ್ತಾನೆ.

ಕುಂಭ: ದ್ವಿತೀಯದಲ್ಲಿ ಗುರುವಿದ್ದು, ದ್ವಾದಶ ಶನಿಯಿದ್ದಾನೆ. ಕೆಡಕುಗಳು ನಡೆಯದಂತೆ ನಿಮ್ಮನ್ನು ಗುರುವು ಸಂರಕ್ಷಿಸಿದರೆ ದ್ವಾದಶ ಶನಿಯು ಅಲ್ಪ ಪ್ರಮಾಣದ ನಿಮ್ಮ ಉತ್ಸಾಹ-ಆಸಕ್ತಿ ಕುಗ್ಗಿಸಿ ಮನೋವೇದನೆ ನೀಡುತ್ತಾನೆ. ಆದರೂ ಆಧ್ಯಾತ್ಮ ರಾಮಾಯಣದ ರಾಮಗೀತೆಯ ಸರ್ಗವನ್ನು ಓದಿದರೆ ಶನಿಯ ತಾಪವೂ ತಗ್ಗಿ ಕಾರ್ಯೋನ್ಮುಖರಾಗಲು ಶ್ರೀರಾಮಚಂದ್ರನೇ ದಾರಿಯನ್ನು ತೋರಿಸುತ್ತಾನೆ.

ಮೀನ: ಏಕಾದಶದಲ್ಲಿ ಶನಿಯಿದ್ದು, ಲಗ್ನದಲ್ಲಿ ಗುರುವು ಸ್ವಕ್ಷೇತ್ರದಲ್ಲಿ ಇರುವುದು ನಿಮ್ಮ ಪೂರ್ವಪುಣ್ಯವೇ ಕಾರ್ಯಗಳಲ್ಲಿ ಯಶಸ್ಸನ್ನು ತರಲು ಸಾಕಾಗುತ್ತದೆ. ಮುಂದೆ 5 ತಿಂಗಳಲ್ಲಿ ವ್ಯಾಪಾರ ವಹಿವಾಟು, ಕೆಲಸ-ಕಾರ್ಯದಲ್ಲಿ ಜಯ ಸಿಕ್ಕೇ ಸಿಗುತ್ತದೆ. ಗುರುವಿಗಾಗಿ ಗುರುನರಸಿಂಹನನ್ನು ಪ್ರಾರ್ಥಿಸಿ. ಕುಮನಿಯ ತ್ರಿವಿಕ್ರಮ ಭಾರತಿಗೆ ವಿಶ್ವರೂಪ ತೋರಿದ ಗುರುಗಳನ್ನು ಸಂದರ್ಶಿಸಿ ಅಲ್ಲಿಯೇ ಕುಳಿತು ಗುರುಚರಿತ್ರೆಯ 18ನೇ ಅಧ್ಯಾಯ ಪಾರಾಯಣ ಮಾಡಿರಿ. ತ್ರಿವಿಕ್ರಮ ಭಾರತಿಯೇ ನಿಮ್ಮನ್ನು ಅನುಗ್ರಹಿಸಿ ಅಭೀಷ್ಟವನ್ನು ಪೂರೈಸುತ್ತಾರೆ.