ಶುಭಕೃತು ನಾಮ ಸಂವತ್ಸರದ ಪುಷ್ಯಮಾಸವು ಆರಂಭವಾಗಿದ್ದು, 27-29ನೇ ಡಿಸೆಂಬರ್ನಲ್ಲಿ ಬುಧ ಶುಕ್ರರು ಬಂದು ಸೇರುತ್ತಾರೆ. ಬುಧನಿಗೆ 30 ಡಿಸೆಂಬರ್ನಿಂದ ವಕ್ರಗತಿ ಆರಂಭವಾಗಿ ಮಿತ್ರ ಕ್ಷೇತ್ರದಲ್ಲಿ ಇರುವುದರಿಂದ ಸೂಕ್ಷ್ಮವಾದ ವಿಚಾರವನ್ನು ಕೈಬಿಟ್ಟು ಯೋಚಿಸಿಯೇ ಮಾಡುವುದು ಒಳ್ಳೆಯದು. ಗುರುಬಲ ಇಲ್ಲದಿರುವುದರಿಂದ ರಾಹು ಕೆಲವೊಂದು ಗೊಂದಲ, ಆತಂಕ ಸೃಷ್ಟಿಸುತ್ತಾನೆ. ರಾಹು ಚಾಂಡಲ ಗ್ರಹವಾಗಿದ್ದು ಅವನನ್ನು ಪೂಜಿಸಿದರೆ ನಿಮ್ಮ ಕಾರ್ಯಗಳು ಒಂದು ಹಂತ ತಲುಪುತ್ತದೆ.
ವೃಷಭ ರಾಶಿಗೆ ದ್ವಾದಶದಲ್ಲಿ ರಾಹು, ಲಗ್ನ ಅಂಗಾರಕನು ಸ್ಥಿತನಾಗಿರುವುದರಿಂದ ಸರ್ಪಪೂಜೆ, ನಾಗದೇವರ ಪ್ರಾರ್ಥನೆ ಮಾಡುವುದು ಒಳಿತು. ಏಕಾದಶದಲ್ಲಿರುವ ಗುರುವಿನ ರಕ್ಷಣೆಯನ್ನು ಪಡೆದು ನಿಮ್ಮಕೆಲಸವನ್ನು ಧೈರ್ಯದಿಂದ ಹೆಚ್ಚಿಸಿ ಧನವನ್ನು ಕೊಡಿಸುತ್ತಾನೆ. ದುರ್ಗಾದೇವಿಯನ್ನು ಪೂಜಿಸಿ ನಾಗಾಷ್ಟೋತ್ತರ ಪಾರಾಯಣ ಮಾಡಿರಿ. ಶೀಘ್ರವಾಗಿ ಚಿಂತಿಸಿದರೆ ಫಲಗಳು ದೊರಕುವುದು.
ರಾಶ್ಯಾಧಿಪತಿ ಸಪ್ತಮದಿಂದ ಎಂಟಕ್ಕೆ ಬರುತ್ತಾನೆ. ಸ್ವಲ್ಪ ಆರೋಗ್ಯದ ದೃಷ್ಟಿಯಿಂದ ಅಹಿತಕರವಾಗಬಹುದು. ಯೋಚಿಸಿ ಮುನ್ನುಗ್ಗಿದರೆ ನಿಮಗೆ ಗ್ರಹಸ್ಥಿತಿಯ ಸಹಾಯ ದೊರಕಿ, ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ. ಬುಧನು ವಕ್ರತ್ವವಿರುವುದರಿಂದ ಮಹಾವಿಷ್ಣುವನ್ನು ಅರ್ಚಿಸಿಯೇ ನೀವು ಬಲ-ವರ ಎರಡನ್ನೂ ಪಡೆದು ಮುಂದೆ ಸಾಗಬೇಕು. ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿರಿ.
9ರ ಗುರುವು ಭಾಗ್ಯವನ್ನು ಉಂಟು ಮಾಡಿ, ಬಯಸದೇ ಮನೆಯಲ್ಲಿ ಎಲ್ಲರಿಂದಲೂ ಪ್ರಶಂಸೆ ದೊರೆತು ಸುಖವೂ ಸಂತೋಷವೂ ಸಿಗುತ್ತದೆ. ಶರೀರದ ಮೇಲೆ ಒತ್ತಡ ಹಾಕಬೇಡಿ. ಕೈಲಾದಷ್ಟು ಕೆಲಸವನ್ನೇ ಮಾಡಿರಿ. ಮಿಕ್ಕಂತೆ ಶಿವಧ್ಯಾನದಲ್ಲಿ ನಿರತರಾಗಿರಿ. ಸುಖದ ಜೀವನಕ್ಕೆ ಶಿವಾರಾಧನೆಯೇ ಮೂಲ.
ಸಿಂಹ ರಾಶಿಯವರಿಗೆ ತೃತೀಯದಲ್ಲಿ ಕೇತುವು ಷಷ್ಠದಲ್ಲಿ ಶನಿಯು ಇದ್ದು, ಸಮತೋಲನದಲ್ಲಿ ಬಾಳ್ವೆಯನ್ನು ನಡೆಸುತ್ತಾರೆ. ವ್ಯಾಪಾರ- ವಹಿವಾಟುಗಳು ಸುಖದ ಬಾಗಿಲು ತೆರೆದು ನಿಮಗೆ ಲಾಭ ಉಂಟು ಮಾಡುತ್ತವೆ. ಆದರೆ ಎಂಟರ ಗುರುವು ಮನಸ್ಸಿಗೆ ಕ್ಷೋಭೆಯನ್ನು ನೀಡುತ್ತದೆ. ನಿರಂತರವಾಗಿ ದುರ್ಗಾಮಾತೆಯನ್ನು ಮಕರ ಮಾಸ ಬಹುಳ ನವಮಿಯಿಂದ ಹೆಣ್ಣು ಮಕ್ಕಳಿಗೆ ಅರಿಶಿನ-ಕುಂಕುಮ ಕೊಟ್ಟು ಕನ್ನಿಕಾಪೂಜೆ ಮಾಡಿದರೆ ಬರುವ ಕಷ್ಟಗಳು ಮಂಜಿನಂತೆ ಕರಗುವವು.
ಕನ್ಯಾ ರಾಶಿಯವರಿಗೆ ಪಂಚಮ ಶನಿಯ ಕಾಲ ಮುಗಿದು ಮುಂದೆ ಸಾಗಲು ಅನುಕೂಲಕರವಾದ ದಿನಗಳು ಹುಡುಕಿಕೊಂಡು ಬರುತ್ತವೆ. ‘ಆಲಸ್ಯಂ ಅಮೃತಂ ವಿಷಂ’. ಯಾವ ವಿಚಾರದಲ್ಲೇ ಆಗಲಿ ನೀವು ಹಠಮಾರಿತನ, ಸೋಮಾರಿತನ ಎರಡನ್ನೂ ಮಾಡದೆ ಶುದ್ಧವಾದ ವಿಶ್ವಾಸಾರ್ಹತೆ ಪ್ರದರ್ಶಿಸಿ, ಕೆಲವೊಂದು ವಿಚಾರಗಳಲ್ಲಿ ನಿಮ್ಮನ್ನು ನೀವು ತಿದ್ದಿಕೊಂಡು ನಡೆದರೆ ಶುಭವಾಗುತ್ತದೆ. ಮರೆಯದೆ ಅನಂತನ ವ್ರತಕಥೆ ಓದಿ. ಜೀವನವು ಸುಖವಾಗಿರುತ್ತದೆ.
ವಿಶೇಷವಾದ ಗ್ರಹದ ನಡಿಗೆಯಿಂದ ಎಲ್ಲರ ಕೈಮೀರಿದ ವಿಚಾರವು ತಾರ್ಕಿಕ ಹಂತಕ್ಕೆ ಬಂದು ಯುಗಾದಿಯು ಲಾಭ, ಕೀರ್ತಿ, ಯಶಸ್ಸನ್ನು ಕೊಡುತ್ತಾನೆ. ದೈವಬಲ ಇಲ್ಲದವನು ದುರ್ಬಲನೇ ಸರಿ. ದೈವೀ ಸಂಪತ್ತು ಬೆಳೆಸಿ. ಶುಕ್ರಾಷ್ಟೋತ್ತರವನ್ನು, ರಾಜರಾಜೇಶ್ವರಿಯನ್ನು ಅರ್ಚಿಸಿ. ಹಿತವೂ, ಸುಖವೂ ಸಿಗುತ್ತದೆ.
ನಿಮ್ಮ ಮನಸ್ಸಿನಲ್ಲಿ ಏನು ಮಾಡಬೇಕೆಂಬ ತೊಳಲಾಟವಿದೆ. ಶನಿಗ್ರಹವು ಕಟ್ಟ ಕಡೆಯ ಅಂಶದಲ್ಲಿದ್ದು, ಶನಿಯ ಸಾಡೇಸಾತಿಯ ಅಂತ್ಯಕ್ಕೆ ಬಂದು ತಾನಾಗಿಯೇ ಜಯ ಸಿಗುತ್ತದೆ. ಮನುಷ್ಯರನ್ನು ನಂಬಿ ಕೆಟ್ಟವರಿದ್ದಾರೆ. ಆದರೆ, ದೇವರನ್ನು ನಂಬಿ ಕೆಟ್ಟವರಿಲ್ಲ. ಶ್ರೀರಾಮಚಂದ್ರನನ್ನು ಅರ್ಚಿಸಿ ಪೂಜಿಸಿ. ಈಶ್ವರನನ್ನು ಶ್ರದ್ಧೆಯಿಂದ ರುದ್ರಾಧ್ಯಾಯದಿಂದ ಅರ್ಚಿಸಿ. ಕೆಲಸವು ಕೈಗೂಡಿ ನಿಮ್ಮ ಶತ್ರುಗಳ ಸಂಕಟದಿಂದ ಪಾರು ಮಾಡುತ್ತಾನೆ. ಶಿರಬಾಗಿ ತಂದೆ ತಾಯಿಯನ್ನು ಅರ್ಚಿಸಿ.
ಎಲ್ಲಿಂದ ಎಲ್ಲಿಗೆ ಹೋದರೂ ನಿಮ್ಮ ಕೆಲಸ ನಾವೇ ಮಾಡಿಕೊಳ್ಳಬೇಕು. ಗ್ರಹಸ್ಥಿತಿಯು ಅತ್ಯುತ್ತಮವಾಗಿದೆ. ಮುಂದೆಯೂ ಶುಭವನ್ನು ಕೊಟ್ಟೇ ಕೊಡುತ್ತಾರೆ. ನಿಮ್ಮ ಪ್ರಯತ್ನವು ಮುಂದೆ ಸಾಗಲಿ ದಡ ಸೇರಲಿ. ಮರೆಯದಿರಿ ಗಣಪತಿಗೆ ಉಂಡೆ, ಕರ್ಜೂರ ಕೊಟ್ಟು ಅವನ ಕರ್ಣಗಳಲ್ಲಿ ಅಲ್ಲಾಡಿಸಿದರೆ ಶುಭ್ರವಾದ ಗಾಳಿ ಬೀಸಿ ನಿಮ್ಮ ಮನಸ್ಸಿಗೆ ನೆಮ್ಮದಿ ಕೊಟ್ಟು ನಿಮ್ಮನ್ನು ಹರಸುತ್ತಾನೆ. ಜತೆಗೆ ಕುಲದೇವರನ್ನು ಪೂಜಿಸಿ. ಸುಖವನ್ನು ಕಂಡುಕೊಳ್ಳಿ.
ಮಕರ ರಾಶಿಗೆ ಸಂಕಷ್ಟ ಕಾಲವು ಮುಗಿದು ಕಂಟಕವೆಲ್ಲ ನಿವಾರಣೆಯಾಗಿ ಸುಖವನ್ನು ಕಾಣಲು ನಿಷ್ಕಳಂಕನಾದ ನೀಲಕಂಠೇಶ್ವರನನ್ನು ಪೂಜಿಸಲು ಮರೆಯದಿರಿ. ಶನಿಯು ಮಹಾದೇವನ ಸೃಷ್ಟಿ. ಶಿವಪೂಜೆಯಲ್ಲಿ ಸಾಧು-ಸಂತರು, ಗುರುಗಳಿಗೆ, ಸನ್ಯಾಸಿಗಳಿಗೆ ಗುರುಪೀಠದಲ್ಲಿ ವಿರಾಜಮಾನರಾಗಿರುವವರಿಗೆ ವಿಶೇಷ ಸ್ಥಾನಮಾನ ಕೊಟ್ಟು ಅವರನ್ನು ಪೂಜಿಸಿದರೆ ಶಿವನನ್ನೇ ಪೂಜಿಸಿದ ಫಲ ಸಿಗುತ್ತದೆ. ಆಸ್ತಿ-ಸಂಪತ್ತು ದೊರಕುತ್ತದೆ.
ದ್ವಿತೀಯದಲ್ಲಿ ಗುರುವಿದ್ದು, ಶನಿ ಸ್ವಕ್ಷೇತ್ರಕ್ಕೆ ಬರುವುದರಿಂದ ಗುರುವಿನ ಸ್ಥಾನ ಬದಲಾವಣೆ ಆಗುವುದರಿಂದ ಅವನು ಕೊಡುವ ಭೋಗಭಾಗ್ಯಗಳನ್ನು ಅನುಭವಿಸಿ ಈ ಅರ್ಚನೆಯನ್ನು ಮಾಡಿ. ಮುಂದೆ ಗುರುವು ಮೇಷಕ್ಕೆ ಬರುವಾಗಲೂ ನಿಮಗೆ ಯಾವ ಗ್ರಹಗಳ ಭಯವೂ ಬೇಡ. ನವೆಂಬರ್ ನಂತರದಲ್ಲಿ ರಾಹು ಕೇತುಗಳು ಬದಲಾಗಲಿದ್ದು ಎಚ್ಚರಿಕೆಯಿಂದ ಸಾಗಬೇಕು. ಲಕ್ಷ್ಮೀ ನರಸಿಂಹ ದೇವರನ್ನು ಆರಾಧಿಸಿದರೆ ಎಲ್ಲ ವಿಷಯಗಳಲ್ಲಿ ಜಯ ದೊರೆತು ಇಷ್ಟಾರ್ಥ ಸಿದ್ಧಿಯಾಗುತ್ತದೆ.
ದುಃಖವನ್ನು ಎರಡು ಭಾಗಗಳಾಗಿ ಮಾಡಿದ್ದಾರೆ. ಮೊದಲನೆಯದು ಕಣ್ಣೀರು ಹರಿದು ದುಃಖವನ್ನು ಇಮ್ಮಡಿಗೊಳಿಸಿಕೊಳ್ಳುವುದು. ಎರಡನೆಯದು ದುಃಖ ಅದುಮಿಟ್ಟು ನಿಮ್ಮನ್ನು ನೀವೇ ಶಿಕ್ಷಿಸಿಕೊಳ್ಳುವುದು. ಇದು ಮನುಷ್ಯನ ಕರ್ತವ್ಯಲೋಪದಿಂದ ಆಗುವ ಲೋಪದೋಷಗಳು. ಗುರುವು ಸ್ವಗೃಹದಲ್ಲಿ ಇರುವುದರಿಂದ ಈಶ್ವರನನ್ನು ಪೂಜಿಸಬೇಕು. ದೈವಪ್ರಾರ್ಥನೆ ಮುಂದುವರಿಸಿ. ಶುಭವು ಲಾಭವು ಆ ಸ್ಥಿರ ಆನಂದವು ಸಿಗುವುದು. ಧನ್ವಂತರಿ ಪಾರಾಯಣ ಮಾಡಿ.