ನ್ಯೂಸ್

ಈ ರಾಶಿಯವರಿಗೆ ನಿತ್ಯ ಕೆಲಸ-ಕಾರ್ಯಗಳಲ್ಲಿ ಯಾವ ತೊಡಕು ಉಂಟಾಗುವುದಿಲ್ಲ: ರಾಶಿಭವಿಷ್ಯ

ಮೇಷ

ಭಾನುವಾರದಿಂದ ಈ ವಾರ ತ್ರಯೋದಶಿ ಆರಂಭವಾಗಿ 24ನೇ ತಾರೀಖು ನರಕಚತುರ್ದಶಿ ಎಂದು ಪಂಚಾಂಗಕರ್ತರು, ವಿಜ್ಞಾನಿಗಳು, ಗಣಿತಜ್ಞರು ಲೆಕ್ಕಾಚಾರ ಮಾಡಿ ಹಬ್ಬದ ನಿರ್ಧಾರ ಮಾಡಿರುತ್ತಾರೆ. 25ನೇ ತಾರೀಖು ಕೇತುಗ್ರಸ್ಥ ಸೂರ್ಯಗ್ರಹಣ ಉಂಟಾಗಿ ಲೋಕಕ್ಕೆ ಸವಾಲು ಒಡ್ಡಲಿದೆ. 26ನೇ ತಾರೀಖು ದೀಪಾವಳಿ. ಮೇಷ ರಾಶಿಯ ಅಶ್ವಿನಿ, ಭರಣಿ, ಕೃತ್ತಿಕಾ ನಕ್ಷತ್ರದವರಿಗೆ ಗ್ರಹಣ ದೋಷ ಇರುವುದಿಲ್ಲ. ಆದರೆ, ಅಶ್ವಿನಿ, ಭರಣಿ 4 ಪಾದಗಳು ಹಾಗೂ ಕೃತ್ತಿಕಾ 1ನೇ ಪಾದಕ್ಕೆ ಗುರುಬಲ ಇರುವುದಿಲ್ಲ. ಅರಿತು ಹೆಜ್ಜೆ ಹಾಕಿ. ಶನಿಯ ದಶಮ ಸ್ಥಾನದಿಂದ ಏನನ್ನೂ ವಿಶೇಷವಾಗಿ ಕೊಡಲು ಸಾಧ್ಯವಾಗುವುದಿಲ್ಲ.

ವೃಷಭ

ಏಕಾದಶ ಗುರು ಬೇಕಾದ್ದನ್ನು ನಡೆಸುತ್ತಾನೆ. ಆದರೆ, ರಾಶಿಗೆ 12ನೇ ರಾಹುವು ಮನಸ್ಸನ್ನು ಕೆಡಿಸಿ ಯೋಜನೆಯನ್ನು ಮುಂದುವರಿಸುವ ವಿಚಾರದಲ್ಲಿ ಧನಕ್ಕೆ ಕೊರತೆ ತಂದೊಡ್ಡುತ್ತಾನೆ. ಅತಿಯಾಗಿ ಯಾವ ವಿಚಾರ ಯೋಚಿಸದೆ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಮುಂದೆ ಬೇಕಾದ ಇಷ್ಟಾರ್ಥ ಪೂರೈಸುತ್ತಾನೆ. ದುರ್ಗಾ ಪೂಜೆಯನ್ನು ಖಂಡಿತವಾಗಿ ಮಾಡಿ. ಲಕ್ಷ್ಮೀಯನ್ನು ಅಮಾವಾಸ್ಯೆ ಸಾಯಂಕಾಲ ಪೂಜಿಸಿ.

ಮಿಥುನ

ಶನಿಯು ವಕ್ರತ್ವವನ್ನು ಬಿಟ್ಟು ಸುಸ್ಥಿರನಾಗಿ 9ರ ಫಲವನ್ನು ಕೊಡಲು ಉದ್ಯುಕ್ತನಾಗಿ ವಿಳಂಬ ಆಗಿರುವ ಕೆಲಸಗಳನ್ನು ಪೂರ್ಣ ಮಾಡಿ ಸಂತೃಪ್ತಿಯಾಗುವಷ್ಟು ಲಾಭ, ಸಂತೋಷ ನೀಡುತ್ತಾನೆ. 10ನೇ ಮನೆ ಗುರುವಿಗೆ ಶಿವಸಹಸ್ರನಾಮ ಪಠಿಸಿ. ಬಿಲ್ವಾರ್ಚನೆಯಿಂದ ಪಾರ್ವತಿ- ಸಾಂಬಸದಾಶಿವನನ್ನು ಪೂಜಿಸಿ. ನಿಮ್ಮ ಆತ್ಮಶಕ್ತಿಯನ್ನು, ತನ್ಮೂಲಕ ಗೌರವ ಧನ-ಧಾನ್ಯಾಭಿವೃದ್ಧಿ ಕಂಡುಕೊಳ್ಳಿ.

ಕಟಕ

ಕಟಕ ರಾಶಿಯವರಿಗೆ 9ರ ಗುರು ಇದ್ದಾನೆ. ಚಂದ್ರಾದಿಪತ್ಯ ಇರುವ ರಾಶಿ ಇದಾಗಿದೆ. ನಿತ್ಯ ಕೆಲಸ-ಕಾರ್ಯಗಳನ್ನು ನಡೆಸುವುದರಲ್ಲಿ ಯಾವ ತೊಡಕು ಉಂಟಾಗುವುದಿಲ್ಲ. ಸಪ್ತಮ ಶನಿ ತನ್ನ ವಕ್ರತ್ವವನ್ನು ಬಿಟ್ಟು ನೇರ ಸಂಚಾರದಲ್ಲಿ ಬಂದಾಗ ದೈಹಿಕ ಬಳಲಿಕೆ ಆಗಲಿದೆ. ಶನಿ ಅಷ್ಟೋತ್ತರ ಪಾರಾಯಣ ಮಾಡಿ. ಸದಾ ಶಿವನನ್ನು ಪೂಜಿಸಿದರೆ ಆರೋಗ್ಯ ಭಾಗ್ಯ.

ಸಿಂಹ

6ನೇ ಶನಿಯು ವಕ್ರದಿಂದ ಹೊರಬಂದು ನಿಮ್ಮ ಭರವಸೆ ಹೆಚ್ಚಿಸುತ್ತಾನೆ. ನಿಮಗೆ ಅರಿವಿಲ್ಲದಂತೆ ಆಗಿರುವ ಲಾಭ- ನಷ್ಟ ಸರಿದೂಗಿಸಿ, ಕೀರ್ತಿ- ಯಶಸ್ಸು ತಂದುಕೊಡುವ ಸಂದೇಹ ಬೇಡ. ಸ್ವಕ್ಷೇತ್ರದ ಅಷ್ಟಮ ಗುರುವಿಗೆ ಏಕೈಕ ದಾರಿ ಗುರುಪೂಜೆ. ದತ್ತಾತ್ರೇಯ ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ರಾಶ್ಯಾಧಿಪತಿ ಸೂರ್ಯನಿಗೆ ಪಾರಾಯಣ ಮಾಡಿದರೆ ಒಳ್ಳೆಯ ಫಲ ನಿಮ್ಮದಾಗುತ್ತದೆ.

ಕನ್ಯಾ

ಕನ್ಯಾ ರಾಶಿ ಅಧಿಪತಿ ರವಿಯು 17ನೇ ತಾರೀಖಿನಿಂದ ತುಲಾ ರಾಶಿ ಸಂಚಾರದಲ್ಲಿದ್ದಾನೆ. ಪಂಚಮ ಶನಿಯು ಅಲ್ಪ ನೋವುಗಳನ್ನು ಕೊಟ್ಟು, ನಿಮಗೆ ಅನಾವಶ್ಯಕವಾದ ಪಾಪ ಮತ್ತು ಕೀರ್ತಿಗೆ ಧಕ್ಕೆ ಉಂಟಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ವಚನಭ್ರಷ್ಟರಾಗದೆ ಸತ್ಯಾಸತ್ಯತೆ ಕಾಯ್ದುಕೊಂಡು ಕೊಟ್ಟ ಮಾತನ್ನು ನಡೆಸಿ. ಲಕ್ಷ್ಮೀವೆಂಕಟೇಶ್ವರನನ್ನು ಪ್ರಾರ್ಥಿಸಿ. ವೆಂಕಟೇಶ್ವರ ಅಷ್ಟೋತ್ತರ ಪಠಿಸಿ.

ತುಲಾ

ಚಿತ್ತಾ, ವಿಶಾಖ ನಕ್ಷತ್ರದವರು ಗ್ರಹಣ ದಿನ ಎಲ್ಲೂ ಓಡಾಡದೆ, ತಮ್ಮ ಸೌಖ್ಯ ಕಾಪಾಡಿಕೊಂಡು ಶರೀರಕ್ಕೆ ಗ್ರಹಣ ದೋಷವು ಬಾಧಿಸದಂತೆ ನೋಡಿಕೊಳ್ಳಬೇಕು. ಈ ಬಾರಿ ಗ್ರಹಣ ದೋಷವು ಚಿತ್ತಾ, ವಿಶಾಖ ನಕ್ಷತ್ರದವರಿಗೆ ಅಲ್ಪಬಾಧೆ ತರುವುದರಿಂದ ಕೆಂಪು ಗೋಧಿಯನ್ನು ದಾನ ಮಾಡಿ. ಹುರಳಿಯನ್ನು ನೀರಿನಲ್ಲಿ ನೆನಪಿ ಬೆಲ್ಲಸಹಿತ ಗೋವಿಗಿಡಿ. ಎಲ್ಲ ಕಷ್ಟಗಳು ಕಳೆದು ಮುಂದೆ ಸಹಕಾರಿಯಾಗುತ್ತದೆ. ಗ್ರಹಣ ಶಾಂತಿ ಮಾಡಿದರೆ ಅತ್ಯುತ್ತಮ.

ವೃಶ್ಚಿಕ

ವೃಶ್ಚಿಕ ರಾಶಿಯಲ್ಲಿ ಪಂಚಮ ಗುರು, ತೃತೀಯ ಶನಿ ತಮ್ಮ ವಕ್ರತ್ವ ಕಳೆದುಕೊಂಡಿರುವುದರಿಂದ ನಿರೀಕ್ಷಿಸಿದ ಧನವು ಬಂದು ತಲುಪುತ್ತದೆ. ಕೈಹಿಡಿದು ನಡೆಸುವ ಭಗವಂತನಿದ್ದಾನೆ. ದೈವ ಮಾರ್ಗದಲ್ಲಿ ನಡೆದು, ಶರೀರವನ್ನು ನೋಡಿಕೊಂಡು ಸುಖವಾಗಿ ಇರುವ ಕಾಲವಿದು. ಜನವರಿ ನಂತರ ಶನಿಯು ಚತುರ್ಥಕ್ಕೆ ಬರಲಿದ್ದಾನೆ.

ಧನಸ್ಸು

ಜ್ವರ ತಾಪಕ್ಕೂ, ಸೂರ್ಯನ ಉಷ್ಣತೆಗೂ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಈಗಾಗಲೇ ಅಸ್ಥಿರವಾದ ಅನಾರೋಗ್ಯಕ್ಕೆ ಒಳಗಾಗಿ, ಸ್ವಕ್ಷೇತ್ರ ಗುರುವಿನ ರಕ್ಷಣೆಯಿಂದ ಮುಂದೆ ಸಾಗುತ್ತಿದ್ದೀರಿ. ಗುರುವನ್ನು ಮರೆತವನು, ವಿಷ್ಣುವನ್ನು ಪೂಜಿಸದವನು ದುಃಖಿಗಳಾಗಿ ಉಳಿಯುತ್ತಾರೆ. ಶ್ರದ್ಧೆಯಲ್ಲಿ ಕಡಿಮೆ ಮಾಡಿಕೊಳ್ಳಬೇಡಿ. ದೈವಕ್ಕೆ ಮೊರೆಹೋಗಿ ರಾಜಯೋಗ ಸಂಪಾದಿಸಿ. ಪೂರ್ವಪುಣ್ಯದ ರಾಮ ಧ್ಯಾನ, ಸದಾ ಗುರುಚರಿತ್ರೆಯ ಅವತಾರ ಕಥನವನ್ನು ತಪ್ಪದೇ ಓದಿ.

ಮಕರ

ಈ ರಾಶಿಯವರು ಮಂಕುತಿಮ್ಮನಂತೆ ಕುಳಿತಿರಬಾರದು. ಶನಿಯ ವಕ್ರತ್ವ ಹೋಗುತ್ತದೆ. ಅದರಲ್ಲೇ ಆಗಿದ್ದ ಮಾನಾಪಮಾನಗಳನ್ನು ಸರಿ ಮಾಡಿ, ನಿಮ್ಮ ಧನ ಕೊರತೆಯನ್ನು ನೀಗಿಸಿ. ನಿಮಗೆ ಹರ್ಷವನ್ನು ತಂದುಕೊಡಬೇಕಾದರೆ ಕುಲದೇವರನ್ನು ಅರ್ಚಿಸಿ. 5 ಶನಿವಾರಗಳ ಕಾಲ ಶ್ರೀನಿವಾಸ ದೇವರ ದೇವಾಲಯಕ್ಕೆ ತೆರಳಿ ತುಳಸಿಯಿಂದ ಅರ್ಚನೆ ಮಾಡಿ, ಪಡಿಅಕ್ಕಿಯನ್ನು ಕೊಟ್ಟು ಬನ್ನಿ. ಮುಂದೆ ಹೋದ ಮೇಲೆ ಬೆಳಕಿನ ದಿನಗಳನ್ನು ಕಾಣುತ್ತೀರಿ.

ಕುಂಭ

ಕುಂಭಕ್ಕೆ ಗುರು 2ರಲ್ಲಿದ್ದಾನೆ. ಜನ್ಮಜನ್ಮಾಂತರದ ಪುಣ್ಯ ವಿಶೇಷದಿಂದ ಸಾಫಲ್ಯತೆ, ಮನಸ್ಸಿಗೆ ನೆಮ್ಮದಿ ಕೊಡುವ ಕಾಲ. ದ್ವಾದಶ ಶನಿಯಿಂದ ಕೆಲವೊಂದು ಕಾರ್ಯಗಳು ನಿಂತುಹೋಗಿ ನಷ್ಟ ಉಂಟಾಗಿರುತ್ತದೆ. ಕುಂಭ ರಾಶಿ ಪ್ರವೇಶಿಸಲು ನಿಮಗೆ ವ್ಯಾಪಾರ ವೃದ್ಧಿ ಮಾಡಿಕೊಳ್ಳಲು ಬುದ್ಧಿಯನ್ನು ಕೊಟ್ಟು, ಹಸಿವಾಗದ ತೃಪ್ತಿಯಾಗಿರುವ ಅನ್ನವನ್ನು ಧನವನ್ನು ಕೊಟ್ಟು ಕಾಪಾಡುತ್ತಾನೆ. ತಿಲಾದಾನ ಮಾಡಿ. 5 ಅಮಾವಾಸ್ಯೆ ಲಕ್ಷ್ಮೀಯನ್ನು ಪೂಜಿಸಿ.

ಮೀನ

ಒಳ್ಳೆಯದನ್ನು ಮಾಡಲು, ಪಾತ್ರರಿಗೆ ದಾನವನ್ನು ಕೊಡಲು ಯಾರಿಗೂ ಕಾಯಬಾರದು. ದೇವರು ಕೊಟ್ಟಾಗ ಅಂದೇ ಮಾಡಿದರೆ ಒಳ್ಳೆಯದು. ನಾಳೆಯೆಂದರೆ ಪುಣ್ಯವು ಲಯವಾಗುವುದು. ಲಗ್ನದಲ್ಲಿ ಗುರು, ಏಕಾದಶ ಶನಿ ಯಾವ ತೊಂದರೆ ನೀಡುವುದಿಲ್ಲ. ನೀವೇನಾದರೂ ದುಃಖಪಟ್ಟಿದ್ದರೆ ನಿಮ್ಮ ಅತೃಪ್ತಿಯೇ ಕಾರಣ. ಮುನಿಶ್ರೇಷ್ಠರಲ್ಲಿ ವಾಲ್ಮೀಕಿಗಳು ರಾಮಧಾನ್ಯದಿಂದ ರಾಮನನ್ನೇ ಕಂಡರು. ಅದರಂತೆ, ತ್ರಿವಿಕ್ರಮ ಭಾರತಿ ಮುನಿಗಳಿಗೆ ಕುಮಸಿಯಲ್ಲಿ ದತ್ತಾತ್ರೇಯನು ವಿಶ್ವರೂಪ ದರ್ಶನ ನೀಡಿದ. ಕುಮಸಿ ಕ್ಷೇತ್ರದ ನದಿಯಲ್ಲಿ ಮಿಂದು ನೀವೂ ವಿಶ್ವರೂಪ ದರ್ಶನ ಪಡೆದು ಸುಖದಿಂದ ಸಂಸಾರ ನಡೆಸಿ.