ಜಗತ್ತಿನ ಒಡೆಯ ತ್ರಿಮೂರ್ತಿ ಸ್ವರೂಪ ದತ್ತಾತ್ರೇಯನು ನಿಮ್ಮನ್ನು ಕಾಪಾಡಬೇಕಾದರೆ ದೃಢವಾದ ಭಕ್ತಿ, ಗುರಿ ಅತ್ಯವಶ್ಯಕ. ‘ಮಾಸಂ ಏಕಮಾತ್ರಂ’ ಅಂದರೆ ಗುರುವು ಒಂದು ತಿಂಗಳ ಕಾಲ 11ರ ಫಲವನ್ನು ಕೊಟ್ಟು ಮುನ್ನಡೆಸುತ್ತಾನೆ. ಅನನ್ಯವಾಗಿ ದತ್ತದೇವರನ್ನು ಪ್ರಾರ್ಥಿಸಿದರೆ ಮಾತ್ರ ಮೇಷರಾಶಿಯವರು ಸಂತೋಷದ ದಿನ ಕಾಣಲು ಸಾಧ್ಯ.
ಪಾಪ ಕಳೆದಾಗಲೇ ಪುಣ್ಯದ ಫಲವು ನಮ್ಮನ್ನು 16 ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುತ್ತದೆ. ಗುರು ಏಕಾದಶಕ್ಕೆ ಬರುವ ಮೊದಲೇ ಗುರುಕ್ಷೇತ್ರ ಅಥವಾ ಅಯೋಧ್ಯಾ ಸರಯೂ ನದಿಯಲ್ಲಿ ಮಿಂದು ಕೈಲಾದ ದಾನವನ್ನು ಕೊಡಿ. ಮುಂದೆ, ನಿಮ್ಮ ಜೀವನದ ಉತ್ತುಂಗ ದಿನವನ್ನು ಕಾಣಬಹುದು, ರಾಮನಾಮವನ್ನೇ ಜೀವನದ ಮೂಲಮಂತ್ರವಾಗಿಸಿಕೊಳ್ಳಿ.
ಮುಂದಿನ ದಿನಗಳಲ್ಲಿ ಒಂಬತ್ತರ ಶನಿ ಶುಭವನ್ನು ತರುತ್ತಾನೆ. ಶನಿಯ ಸ್ಥಾನಗಳಿಗಿಂತ ನಾವು ಧರ್ಮನಿಷ್ಠರು, ಸತ್ಯವಂತರು ಆಗಿದ್ದಲ್ಲಿ ದೇವರು ರಕ್ಷಿಸುತ್ತಾನೆ. ನಿಮ್ಮಿಂದ ಈ ಹಿಂದೆ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ, ಆ ಸ್ಥಿತಿ, ವ್ಯಕ್ತಿಗಳನ್ನು ಸಮರ್ಥವಾಗಿ ನಿಭಾಯಿಸಿ.
9ರ ಗುರುವಿನ ಸತ್ಪಲ ನಿರೀಕ್ಷಿಸಿ. ಸಪ್ತಮ ಶನಿಯು ಸ್ವಕ್ಷೇತ್ರಕ್ಕೆ, ಅಷ್ಟಮಕ್ಕೆ ಬಂದರೂ, ಯಾವುದೇ ಬಾಧೆ, ಅನಾರೋಗ್ಯ ಕಾಣಿಸಿಕೊಂಡರೂ ಗುರು ಅನುಗ್ರಹದಿಂದ ಸುಖ, ಶಾಂತಿ ಮತ್ತು ಆರೋಗ್ಯ ಲಭಿಸುತ್ತದೆ. ದಕ್ಷಿಣಾಮೂರ್ತಿಗೆ ಪ್ರಾರ್ಥನೆ ಇರಲಿ. ಶಿವಪಂಚಾಕ್ಷರಿ ಜಪ ನಿತ್ಯವೂ ಇರಲಿ. ಷಣ್ಮುಖನನ್ನು ಪ್ರಾರ್ಥಿಸಿ.
ಕಾಡಿನ ರಾಜ ಸಿಂಹವು ನಗರಕ್ಕೆ ಬಂದರೆ ಏನಾಗುತ್ತದೆ ಎಂಬುದು ನಿಮಗೆ ಗೊತ್ತಿದೆ. ಅಂತೆಯೇ, ಗುರು-ಶನಿ ಸ್ಥಾನ ಪಲ್ಲಟವಾಗುತ್ತದೆ. ಸಿಂಹ ರಾಶಿಯವರು ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಮಾಡಿದ ಪುಣ್ಯ ನಿಮ್ಮನ್ನು ಸುಖವಾಗಿರುವಂತೆ ಮಾಡುತ್ತದೆ. ಸೂರ್ಯನ ಪ್ರಾರ್ಥನೆ ಇರಲಿ. ಸೂರ್ಯ ಅಷ್ಟೋತ್ತರ ಪಠಿಸಿ.
ಗುರುವಿನ ಸ್ಥಾನಪಲ್ಲಟದಿಂದಾಗಿ ಮುಂದಿನ ದಿನಗಳಲ್ಲಿ ಕಷ್ಟಕಾರ್ಪಣ್ಯಗಳು ಕಳೆದು, ಆರರ ಶನಿಯಿಂದ ಉತ್ತಮ ದಿನಗಳನ್ನು ಕಾಣುತ್ತೀರಿ. ಗುರಿಯನ್ನು ಮುಟ್ಟಲು ಸತ್ಚಿಂತನೆ ಅಗತ್ಯ. ಕಾಮ-ಕ್ರೋದಾಧಿಗಳನ್ನು ತ್ಯಜಿಸಿ. ನಿಂದನೆ, ಅಪಕಾರ ಬೇಡ. ನಿಮ್ಮ ಸಂಕಲ್ಪವು ಸತ್ಯಸಂಕಲ್ಪವಾದರೆ ಮಾತ್ರ ಏಳರ ಗುರು, ಆರರ ಶನಿ ವಿಶೇಷ ಫಲ ನೀಡುತ್ತಾರೆ.
ತುಲಾ ರಾಶಿಯವರಿಗೆ ಶನಿ ಪಂಚಮ ಸ್ಥಾನಕ್ಕೆ ಬಂದರೂ ಹೆದರುವ ಅಗತ್ಯವಿಲ್ಲ. ಏಕೆಂದರೆ, ಪರಮಾತ್ಮನೇ ನಿಮ್ಮನ್ನು ಕಾಪಾಡುತ್ತಾನೆ. ಗುರು ಷಷ್ಠಕ್ಕೆ ಹೋದರೂ ಧ್ಯಾನವೆಂಬ ಹಗ್ಗದಿಂದ ಕಟ್ಟಿ ಹಿಡಿದಿಟ್ಟರೆ ನೀವೇ ಜಾಣರು. ಧರ್ಮ-ಕರ್ವನುಸಾರವಾಗಿ ನಡೆದರೆ ವಿಶೇಷ ದಿನಗಳು ಬರಲಿವೆ. ಶನಿ ಧ್ಯಾನವಿರಲಿ, ದುರ್ಗೆಯನ್ನು ಪೂಜಿಸಿ.
ಲಾಭ, ನಷ್ಟಗಳು, ಸುಖ, ದುಃಖಗಳು ಎಲ್ಲವೂ ಇದ್ದು ಇಲ್ಲದಂತಾಗುವವು. ಜಗತ್ತನ್ನು ರಕ್ಷಿಸುವವನು ದೇವರೇ. ಅದನ್ನು ಮೀರಿ ಯಾರೂ ನಡೆಯಲು ಸಾಧ್ಯವಿಲ್ಲ. ಧ್ಯಾನ, ಪ್ರಾರ್ಥನೆ ಇದ್ದರೆ ಸುಖಕ್ಕೆ ಕೊರತೆಯಿಲ್ಲ. ಯಾವುದಕ್ಕೂ ಚಿಂತೆ ಬೇಡ, ಅತೃಪ್ತ ಮನಸ್ಸು ಬೇಡ. ಪ್ರಥಮ ಪೂಜಿತನಾದ ಗಣಪನನ್ನು ಆರಾಧಿಸಿ.
ಮೂಲ, ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರದವರು ಒಳ್ಳೆಯ ದಿನಗಳನ್ನು ನಿರೀಕ್ಷಿಸಬಹುದು. ಶುಭಕೃತು ಸಂವತ್ಸರದಲ್ಲಿ ಗ್ರಹಗಳ ಪಲ್ಲಟವನ್ನು ನಿರೀಕ್ಷಿಸಿ. ಒಳ್ಳೆಯ ಸ್ಥಾನಮಾನ ನಿರೀಕ್ಷಿಸಬಹುದು. ನಿಂತು ಹೋದ ಕೆಲಸಗಳು ಮುಂದೆಸಾಗುತ್ತವೆ. ಲಲಿತಾ ಸಹಸ್ರನಾಮದ ಜತೆಗೆ ಶಿವತ್ರಿಶತಿ ಪಾರಾಯಣ ಮಾಡಿರಿ.
ಮುಖಾರವಿಂದವು ತೇಜಸ್ಸನ್ನು ಪಡೆಯುವ ಕಾಲ. ಮಧ್ಯಾಹ್ನದ ಸೂರ್ಯನನ್ನು ನೋಡಲು ಯಾರಿಗೂ ಸಾಧ್ಯವಿಲ್ಲ. ಶನಿ ಕುಂಭರಾಶಿಗೆ ಪ್ರವೇಶಿಸಿದಾಗ ದೈವವೆಂಬ ಬಲವನ್ನೇ ನಂಬಿಕೊಳ್ಳಬೇಕು. ಬೇರೆ ದಾರಿಗಳು ಕಾಣದಂತಾಗುತ್ತವೆ. ದಶರಥ ವಿರಚಿತ ಶನಿಸ್ತೋತ್ರ ಪಠಿಸಿ. ಪ್ರತಿ ಶನಿವಾರದಂದು ತಪ್ಪದೇ ಹನುಮನ ದರ್ಶನ ಮಾಡಿರಿ.
ಜನ್ಮರಾಶಿಯ ಗುರು ಮುಂದಕ್ಕೆ ಸಾಗಿ, ಸ್ವಕ್ಷೇತ್ರಕ್ಕೆ ಬಂದರೂ ಶನಿಯು ನಿಮ್ಮನ್ನು ಯಾವ ಸಂಕಟಕ್ಕೆ ದೂಡುವುದಿಲ್ಲ. ಕೇತು ಬದಲಾವಣೆ ಇದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಕುಲಾಚಾರವನ್ನು ಮರೆಯಬೇಡಿ. ದೇವರ ಸ್ಮರಣೆ ಇರಲಿ. ಪ್ರಾತಃಕಾಲದಲ್ಲಿ ಭುಜಂಗ ಸ್ತೋತ್ರ ಪಠಿಸಿ.
ಇನ್ನು ನಾಲ್ಕು ವಾರಗಳು ಏನನ್ನೂ ಜಯಿಸಬಹುದು. ಆನಂತರದಲ್ಲಿ ದೈವಕೃಪೆ ಕಡಿಮೆಯಾಗಿ ನಿರಾಶೆಯ ದಿನಗಳು ಬರಲಿವೆ. ಹನ್ನೆರಡರ ಗುರು ಜನ್ಮಕ್ಕೆ ಬರಲಿದ್ದು, ಶನಿಯ ಸಾಡೇಸಾತ್ ಕಾಟ ಆರಂಭವಾಗಲಿದೆ. ನಿಮ್ಮ ನೌಕೆಯನ್ನು ದಾಟಿಸಲು ಭಗವಂತನೇ ಬೇಕು. ಇಡೀ ವಾರದಲ್ಲಿ ಆಯಾ ಗ್ರಹಗಳ ಅಷ್ಟೋತ್ತರ ಪಠಿಸಿ. ನಿತ್ಯವೂ ದತ್ತಾತ್ರೇಯ ಅಷ್ಟಕ ಮತ್ತು ಅಷ್ಟೋತ್ತರವನ್ನು ಪಠಿಸಿ.