ನ್ಯೂಸ್

ಈ ರಾಶಿಯವರಿಗೆ ಗುರು ಒಬ್ಬನೇ ಎಲ್ಲ ಸಾಮರ್ಥ್ಯ ಕೊಟ್ಟು ಮುಂದೆ ಸಾಗಿಸುತ್ತಾನೆ: ವಾರಭವಿಷ್ಯ

ಮೇಷ

ರವಿ-ಬುಧರು 9ರಲ್ಲಿ, ಏಕಾದಶದಲ್ಲಿ ಗುರುವಿರುವುದು ಶುಭಸಂಕೇತ. ಮೇಷಾಧಿಪತಿಯು ಅಂಗಾರಕನಾಗಿದ್ದು ಅವನ ಅಧಿದೇವತೆ ಸುಬ್ರಹ್ಮಣ್ಯ ದೇವರು. ಆದರೆ ಸದಾಕಾಲ ಸುಬ್ರಹ್ಮಣ್ಯನನ್ನು ಪೂಜಿಸಲೇಬೇಕು. ಯಾವುದೇ ಗ್ರಹಗಳು ಸರ್ವಸಮ್ಮತ ಶುಭಫಲ ನೀಡಬೇಕಾದರೆ ರಾಶ್ಯಾಧಿಪತಿಯನ್ನು ಪೂಜಿಸುವುದು ಕಡ್ಡಾಯವಾಗಿರುತ್ತದೆ. ಷಣ್ಮುಖನನ್ನು ಪೂಜಿಸಿ. ದೇವತಾ ಪ್ರಾರ್ಥನೆಗಳನ್ನು ಬದಿಗೊತ್ತಬೇಡಿ.

ವೃಷಭ

ಏಕಾದಶ ಗುರುವಿಗೆ ಅನ್ಯಗ್ರಹಗಳ ಸ್ಥಾನಗಳು ಹೇಗೇ ಇದ್ದರೂ ಹನ್ನೊಂದನೆ ಮನೆಯ ಶುಭಾಶುಭ ಕಾರ್ಯದಲ್ಲಿ ಯಶಸ್ಸು, ಧೈರ್ಯ, ಆರೋಗ್ಯವನ್ನು ಕೊಟ್ಟು ಕಾಪಾಡುತ್ತಾನೆ. ಶುಕ್ರಾಧಿಪತ್ಯ ಇರುವ ವೃಷಭ ರಾಶಿಯವರು ದುರ್ಗೆಯನ್ನು ಪೂಜಿಸಿದರೆ ಎಲ್ಲ ವಿಷಯಗಳಲ್ಲೂ ಯಶಸ್ಸು ಬರುತ್ತದೆ.

ಮಿಥುನ

ಸಪ್ತಮದಲ್ಲಿ ರವಿ-ಬುಧರು ಒಟ್ಟಿಗಿದ್ದು, 9ರಲ್ಲಿ ಗುರುವು, ಸ್ವಕ್ಷೇತ್ರದಲ್ಲಿ ಶನಿಯು ಪೂರಕವಾದ ವಿಷಯಗಳಿಗೆ ಒತ್ತಾಸೆಯನ್ನು, ಗುರಿ ಮುಟ್ಟುವ ಛಲ ಕೊಟ್ಟು ಅನುಗ್ರಹಿಸುತ್ತಾನೆ. ಅಷ್ಟಮದಲ್ಲಿ ಶನಿಯಿರುವುದರಿಂದ ಆರೋಗ್ಯದ ಕಡೆ ಗಮನವಿರಲಿ. ಆಗ್ರಹ ಹಾಗೂ ಉದ್ವೇಗ ಆರೋಗ್ಯವನ್ನು ಹಾನಿ ಮಾಡದಂತೆ ನೋಡಿಕೊಳ್ಳಿ.

ಕಟಕ

ಜಲತತ್ತ್ವದ ಕಟಕ ರಾಶಿಯವರಿಗೆ ಪೂರ್ವಪುಣ್ಯದ ಬಲ ಹಾಗೂ ಹಿರಿಯರ ಆಶೀರ್ವಾದದಿಂದ ವಿಳಂಬವಾದರೂ ಕೆಲಸಗಳು ನಡೆದು ಮನಸ್ಸು ಸಮಾಧಾನಕರ ಸ್ಥಿತಿಯಲ್ಲಿರುತ್ತದೆ. ಶಾಂತಿಯನ್ನು ಕಳೆದುಕೊಳ್ಳಬೇಡಿ. ಈಶ್ವರನ ಪ್ರಾರ್ಥನೆ ಇರಲಿ. ಶಿವಾಷ್ಟಕ ಪಾರಾಯಣ ಮಾಡಿ.

ಸಿಂಹ

ಪೂರ್ವಪುಣ್ಯಗಳು ಕಾಪಾಡಲಿವೆ. ಗುರು-ಶನಿ ಗ್ರಹಗಳು ಕಾರ್ಯಕಾರಣವನ್ನು ಲೆಕ್ಕಿಸದೆ ಬಯಸಿದ ವರ ನೀಡುತ್ತಾರೆ. ಆನಂದವಿರಲಿ. ಸುಖವೂ ಇರಲಿ. ಆರೋಗ್ಯದ ಸಮಸ್ಯೆಗಳಿಲ್ಲ. ಗುರು-ಗಣೇಶನನ್ನು ತಪ್ಪದೇ ನಿತ್ಯ ಪೂಜೆ ಮಾಡಿರಿ. ಒಳಿತಿನ ದಾರಿ ಪ್ರಶಸ್ತವಾಗುತ್ತದೆ.

ಕನ್ಯಾ

ಕನ್ಯಾ ರಾಶಿಯವರು ಸುಜ್ಞಾನಕ್ಕಾಗಿ ಶಾರದೆಯನ್ನು ಪ್ರಾರ್ಥಿಸಿ. ಕೈಗೆಟುಕುವಷ್ಟೇ ಕೆಲಸವನ್ನು ಮಾಡಿ. ನಿಮ್ಮ ಮನಸ್ಸನ್ನು ಕಟ್ಟಿಹಾಕಿ ದೈವದ ಜೊತೆ ಸಾಗಿದರೆ ಕಷ್ಟಕಾರ್ಪಣ್ಯ ಕಳೆದು, ಇರುಳು ಸರಿದು ಬೆಳಕು ಮೂಡುತ್ತದೆ. ದತ್ತಸ್ತವನ ಪಾರಾಯಣ ಮಾಡಿ.

ತುಲಾ

ಆಡುವ ಮಾತುಗಳನ್ನು ತೂಗಿಸಿ, ಯೋಚಿಸಿ ಮಾತನಾಡದಿದ್ದರೆ ನಿಷ್ಠುರ ಬರುವುದು ಸತ್ಯ. ಅದರಿಂದ ಮನಸ್ಸಿಗೆ ನೋವು ಉಂಟಾಗುತ್ತದೆ. ದೈನಂದಿನ ಕೆಲಸದಲ್ಲಿ ಯಾವ ಅಡಚಣೆ ಇಲ್ಲ. ಪಂಚಮ ಗುರುವಿನಿಂದ ಸರ್ವ ಕಾರ್ಯದಲ್ಲಿ ಜಯ. ಏನು ಬೇಕಾದರೂ ಮಾಡಿ, ಎಲ್ಲಾದರೂ ಇರಿ. ದೈವಭಕ್ತರಾಗಿ ಧರ್ಮಶ್ರದ್ಧೆಯಲ್ಲಿರಿ.

ವೃಶ್ಚಿಕ

ಸ್ವಾರ್ಥಬಿಟ್ಟು ಕೇತುವಿಗೆ ಗಣಪತಿಯನ್ನು, ಕುಜನಿಗೆ ಸುಬ್ರಹ್ಮಣ್ಯನನ್ನು ಪೂಜಿಸಿ. ವಿಶ್ವಪೂಜಿತ ಗುರುವನ್ನು ಸಂದೇಹಬಿಟ್ಟು ಪ್ರಾರ್ಥಿಸಿದರೆ ಎಲ್ಲವೂ ಶುಭಕ್ಕೆ ತಿರುಗಿ ಆನಂದ ದೊರೆಯುತ್ತದೆ. ವಿಶೇಷವಾಗಿ ನಿಮಗೆ ವಹಿಸಿರುವ ದೈವಪ್ರಾರ್ಥನೆ ಮಾಡಿ ಬೇಕಾದ್ದನ್ನು ಪಡೆಯಬಹುದು.

ಧನು

ಧನುರ್ ರಾಶಿಯವರಿಗೆ ಲಗ್ನದಲ್ಲಿ ರವಿ-ಬುಧರಿದ್ದು, ದ್ವಿತಿಯದಲ್ಲಿ ಶನಿಯಿದ್ದಾನೆ. ತೃತೀಯದಲ್ಲಿ ಗುರುವಿರುವುದರಿಂದ ನಿಮ್ಮ ದೃಢವಾದ ಮನಸ್ಸಿನಿಂದ ಏನಾದರೂ ಪಡೆಯಬಹುದು. ಅಲ್ಪ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಜಗತ್ತಿನ ನಿಯಮದಲ್ಲಿ ಉಪಕಾರ ಮಾಡುವವರಿಗೆ ಅಪಕಾರ ಬರುವುದು. ನಿಮ್ಮ ಬೆನ್ನ ಹಿಂದೆ ದೇವರಿದ್ದಾನೆಂದು ಮುಂದೆ ಸಾಗಿ. ಜಯದ ಹಾದಿ ಬಿಟ್ಟು ಓಡಬಾರದು. ಸದಾ ಮಾತಾ-ಪಿತರನ್ನು ವಂದಿಸಿ. ಹೃದಯಮಂದಿರದಲ್ಲಿಟ್ಟು ಪೂಜಿಸಿ.

ಮಕರ

ಜನ್ಮ ಶನಿಯಿಂದ ಕೆಲವೊಂದು ಕೆಲಸ ಮಂದಗತಿಯಲ್ಲಿ ಸಾಗಿದರೂ, ಮುಂದೆ ಸಾಗುತ್ತದೆ. ಈಶ್ವರನ ದೇವಸ್ಥಾನದಲ್ಲಿ ರುದ್ರಜಪ, ರುದ್ರಾಭೀಷೇಕ ಮಾಡಿಸಿ. ಗುಡಾನ್ನವನ್ನು, ಕಬ್ಬಿನ ಹಾಲನ್ನು ದೇವರಿಗೆ ನೈವೇದ್ಯ ಮಾಡಿಸಿ. ಎಲ್ಲ ಕಷ್ಟ-ಕಾರ್ಪಣ್ಯ ಕಳೆದು ಜೀವನವನ್ನು ಸರಿದೂಗಿಸುತ್ತಾನೆ.

ಕುಂಭ

ಕುಂಭ ಸ್ಥಿತೇ ಗುರುವೆಂಬುದು ಒಂದು ಮಹಾಯೋಗವೇ ಆಗಿದೆ. ಕುಂಭದಲ್ಲಿ ಗುರುವಿರುವುದರಿಂದ ಕುಂಭಮೇಳ ನಡೆಯುತ್ತದೆ. ಪರಮಾತ್ಮನು ಭಕ್ತರಿಗೆ ಒಲಿದು ಎಲ್ಲವನ್ನೂ ಕೊಡಬಲ್ಲವನೆಂದರ್ಥ. ಆತ್ಮಕಾರಕನಾದ ಗುರುವನ್ನು, ನಿಮ್ಮ ಕುಲಗುರುಗಳನ್ನು, ಗುರುಹಿರಿಯರನ್ನು, ಮಾತಾ-ಪಿತೃಗಳನ್ನು ಪೂಜಿಸಿ ಮುಂದೆ ಸಾಗಿ- ಇಷ್ಟಾರ್ಥ ನೆರವೇರುತ್ತದೆ.

ಮೀನ

ಮನಸ್ಸನ್ನು ಹಗುರವಾಗಿ ಇಟ್ಟುಕೊಂಡು ದೇವರ ದೇವ ಮಹಾದೇವನನ್ನು ಪೂಜಿಸಿದರೆ ಯಾವುದೂ ಕಷ್ಟವಲ್ಲ. ಸಾಧನೆ ಮಾರ್ಗವನ್ನು ಹಿಡಿದು ಉಮಾಮಹೇಶ್ವರನನ್ನು ಪೂಜಿಸಿ. ಕಾರ್ಯ ಕೈಗೂಡುವುದು. ದ್ವಾದಶದಲ್ಲಿರುವ ಗುರುವಿಗೆ ಕಡಲೆಬೇಳೆಯನ್ನು, ಏಕಾದಶ ಶನಿಗೆ ಎಳ್ಳಣ್ಣೆಯನ್ನು ಬ್ರಾಹ್ಮಣರಿಗೆ ಕೊಟ್ಟು ಆಶೀರ್ವಾದ ಪಡೆಯಿರಿ. ನಿಮ್ಮ ರಾಶಿಗೆ ಗುರು ಒಬ್ಬನೇ ಎಲ್ಲ ಸಾಮರ್ಥ್ಯ ಕೊಟ್ಟು ಮುಂದೆ ಸಾಗಿಸುತ್ತಾನೆ.