ನ್ಯೂಸ್

ಈ ರಾಶಿಯವರು ಸ್ತ್ರೀಯರಿಗೆ ನೋವನ್ನು ಉಂಟು ಮಾಡಬೇಡಿ, ಅದು ನಿಮಗೆ ಮಾರಕ: ವಾರಭವಿಷ್ಯ

ಮೇಷ ರಾಶಿ

ಜಗತಃ ಪಿತರೋ ಪಾರ್ವತಿ ಪರಮೇಶ್ವರ. 12ರ ಗುರುವಿಗಾಗಿ ಲೋಕ ಸಂರಕ್ಷಕ ಈಶ್ವರನನ್ನು ಪೂಜಿಸಬೇಕು. ಗುರು ಸ್ವರೂಪವಾದ ಪಾರ್ವತಿ ಪರಮೇಶ್ವರರೆ ಲೋಕಕ್ಕೆ ತಂದೆ ತಾಯಿ. 11ರ ಶನಿಯನ್ನು ಧರ್ಮ ಕರ್ವಚರಣೆ ಮೂಲಕ ಸರಿಯಾಗಿ ಉಪಯೋಗ ಮಾಡಿದರೆ ಲಾಭ, ಸುಖ ಸಿಗುವುದರಲ್ಲಿ ಸಂಶಯವಿಲ್ಲ. ನೀವು ಆಡುವ ಮಾತು ನಿಮಗೆ ಮುಳ್ಳಾಗಬಾರದು ಎಂಬ ದೃಷ್ಟಿಕೋನದಲ್ಲಿ ಮಾತನಾಡಬೇಕೆ ಹೊರತು ಎಲ್ಲ ವಿಷಯಗಳಲ್ಲಿ ಸ್ಪಂದನೆ ಮಾಡಿದರೆ ಗೌರವಕ್ಕೆ ಕುಂದು ಉಂಟಾದೀತು. ಈ ತತ್ವ ಅರಿತು ಜೀವನ ಮಾಡಿದರೆ ನಿಮಗೆ ಈಶ್ವರ ಒಲಿದು ಒಳ್ಳೆಯದಾಗುತ್ತದೆ.

ವೃಷಭ ರಾಶಿ

ಏಕದಶದಲ್ಲಿ ಗುರು, ದ್ವಾದಶದಲ್ಲಿ ರಾಹು ಇದ್ದಾರೆ. ಗುರು ಮೀನದಲ್ಲಿ ಸ್ವಕ್ಷೇತ್ರದಲ್ಲಿ ಇದ್ದು, ನಿಮ್ಮನ್ನು ಗೊಂದಲದಲ್ಲಿ ಸಿಕ್ಕಿಸುತ್ತಾನೆ. ಶುಕ್ರನು ಮೀನದಲ್ಲಿದ್ದು, ಸ್ತ್ರೀಯರಿಗೆ ನೋವನ್ನು ಉಂಟು ಮಾಡಬೇಡಿ. ಅದು ನಿಮಗೆ ಮಾರಕವಾಗುತ್ತದೆ. ಗುರಿ ಇರಬೇಕು ಹೊರತು ಬಾಣದ ಏಟಿಗೆ ಯಾರನ್ನು ತತ್ತರಿಸುವಂತೆ ಮಾಡಬಾರದು. ಎಚ್ಚರಿಕೆಯಿಂದ ಜೀವನದಲ್ಲಿ ಮುಂದೆ ಸಾಗಿರಿ.

ಮಿಥುನ ರಾಶಿ

ಮಾತನ್ನು ಕೊಟ್ಟು ಹಿಂಜರಿದರೆ ಮಾರ್ಗ, ಸುಖ ಎರಡು ಇಲ್ಲವೆಂಬಂತೆ ಜೀವನ ಸಾಗುತ್ತದೆ. ಗುರು ಶುಕ್ರರು ಒಟ್ಟಿಗೇ ಇದ್ದು, ನಿಮ್ಮ ಕಷ್ಟ ನಿವಾರಣೆ ಆಗಬೇಕಾದರೆ ಶೃಂಗೇರಿಯಲ್ಲಿ ಪರಮಪೂಜ್ಯ ಗುರುಗಳಾದ ಚಂದ್ರಶೇಖರ ಭಾರತಿಗಳು ಪೂಜೆಗೈದ ದುರ್ಗೆಯನ್ನು ಪೂಜಿಸಿ. ನಡೆ ನುಡಿ ಸರಿ ಮಾಡಿಕೊಂಡರೆ ದೈವ ಒಲಿದು ಬಂದು ಸುಖ, ಆರೋಗ್ಯ ಲಭಿಸುತ್ತದೆ. ದುರ್ಗಾಷ್ಟೋತ್ತರ ಪಠಿಸಿ. ಒಳ್ಳೆಯ ದಾರಿಯಲ್ಲಿ ನಡೆದ ಹಿರಿಯರನ್ನು ಅನುಸರಿಸಿ.

ಕಟಕ ರಾಶಿ

ಗುರು ಶುಕ್ರರು ಒಂಬತ್ತರಲ್ಲಿ ಇದ್ದು ಚಿಂತನೆ ಕೈಗೂಡುವ ಕಾಲ. ಅಷ್ಟಮ ಶನಿ ಸ್ವಕ್ಷೇತ್ರದಲ್ಲಿ ಇರುವುದರಿಂದ ತಟಸ್ಥರಾಗಿ ಇರಬೇಕು. ನಿಮಗೆ ಆರಾಧ್ಯ ದೇವರ ಅನುಗ್ರಹದಿಂದ ಸರ್ವತೋಮುಖ ಅಭಿವೃದ್ಧಿ ದೊರಕಲಿದೆ. ನಕಾರಾತ್ಮಕ ಯೋಚನೆ ಬೇಡ. ಪರಿಪೂರ್ಣ ಆರೋಗ್ಯಕ್ಕೆ ಸುಬ್ರಹ್ಮಣ್ಯನನ್ನು ಪೂಜಿಸಿ.

ಸಿಂಹ ರಾಶಿ

ಕುದುರೆ ಸವಾರರಿಗೆ ಗುರಿ ಇರಬೇಕು, ಕುದುರೆ ಓಡಿಸುವ ಛಲ ಇರಬೇಕು. ಗಜಶ್ವಗಳು ದೇವರ ವಾಹನ ಎಂದು ತಿಳಿದ ನೀವು ಜೀವನದ ವಾಹನವನ್ನು ಸರಿಯಾಗಿ ಸಾಗಿಸುತ್ತ ಬನ್ನಿ. ಸಪ್ತಮ ಶನಿ ಏನೂ ತೊಂದರೆ ಮಾಡಲಾರ. ಅಷ್ಟಮದಲ್ಲಿ ಗುರು, ಶುಕ್ರರಿದ್ದಾರೆ. ದೈವ ಪ್ರಾರ್ಥನೆಯಿಂದ ಚಿತ್ತ ಸಮಾಧಾನದಲ್ಲೂ ಇದ್ದು, ಶಾಂತಿಯಿಂದ ಜೀವನ ಮಾಡಿ. ಮಾರ್ತಾಂಡ ಮೈಲಾರಲಿಂಗನನ್ನು ಪೂಜಿಸಿ. ನಿಮ್ಮನ್ನು ಹರಸಿ ಜಯ ಆರೋಗ್ಯ ಕೊಡುತ್ತಾನೆ.

ಕನ್ಯಾ ರಾಶಿ

ಕನ್ಯಾ ರಾಶಿಯವರ 6ನೇ ಮನೆಯಲ್ಲಿ ರವಿ, ಶನಿ ಇದ್ದು, ಮಕರದಲ್ಲಿ ಬುಧನಿದ್ದಾನೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭವಾಗಲು ಲಕ್ಷ್ಮಿಸಹಿತ ಅನಂತನನ್ನು ಪೂಜಿಸಿ. ವ್ಯಾಪಾರಿಗಳು ಧರ್ಮ ಭ್ರಷ್ಟರಾಗಬಾರದು. ಅದನ್ನು ಅರಿತು ಮುಂದೆ ಸಾಗಿರಿ. ದೇವರ ಪ್ರಾರ್ಥನೆ ಸದಾ ಇರಲಿ.

ತುಲಾ ರಾಶಿ

ಅಪರೂಪದ ಲಾಭಗಳು, ನಿಮ್ಮ ನಿರೀಕ್ಷೆಗೂ ಮೀರಿದ ಕೀರ್ತಿ ಬಂದೊದಗುತ್ತವೆ. ಎಲ್ಲವೂ ನಿಮ್ಮಂತೆ ನಡೆಯುವ ಕಾಲ. ತುಲಾ ರಾಶಿಗೆ ಶನಿಯು ಉಚ್ಚನಾಗಿರುತ್ತಾನೆ. 6ನೇ ಮನೆಯ ಗುರುವಿಗೆ ಪ್ರಾರ್ಥನೆ ಇರಲಿ. ಶ್ರೀಶೈಲ ಮಲ್ಲಿಕಾರ್ಜುನನ್ನು ಪೂಜಿಸಿ.

ವೃಶ್ಚಿಕ ರಾಶಿ

ಕ್ಷಿಪ್ರ ಶುಭ ಫಲಗಳನ್ನು ನೀಡಲು ದ್ವಾದಶ ಕೇತು ಗಣಪತಿ ಸ್ವರೂಪದಲ್ಲಿ ಕುಳಿತಿರುತ್ತಾನೆ. ಅರ್ಕ ಹೂವಿನಿಂದ ಪೂಜಿಸಿ. ಉಂಡೆ ಬೆಲ್ಲ ನೈವೇದ್ಯ ಮಾಡಿದರೆ ಯೋಗ ಕೊಡುವುದರಲ್ಲಿ ಸಂದೇಹವಿಲ್ಲ. ಅನೇಕ ಕೋಟಿ ಬ್ರಹ್ಮಾಂಡ ನಾಯಕ ವಿನಾಯಕನನ್ನು ಪೂಜಿಸಿದರೆ ನವಗ್ರಹಾದಿ ಎಲ್ಲಾ ದೇವರನ್ನು ಪೂಜಿಸಿದ ಫಲ ದೊರಕುತ್ತದೆ. ಲಕ್ಷ್ಮಿ ಕಟಾಕ್ಷಕ್ಕಾಗಿ ಲಕ್ಷ್ಮೀಪತಿ ವಿಷ್ಣುವನ್ನು ಪೂಜಿಸಿ.

ಧನುರ್ ರಾಶಿ

ಶ್ರೀರಾಮನ ಪ್ರಾರ್ಥನೆಯಲ್ಲಿ ಇರಬೇಕಾದವರು ಧನುರ್ ರಾಶಿಯಲ್ಲಿ ಹುಟ್ಟಿದವರು. ಲೋಕ ಕಂಟಕನನ್ನು ಸಂಹಾರ ಮಾಡಿ ಕೃಷ್ಣಂ ವಂದೇ ಜಗದ್ಗುರು ಎಂಬ ಬಿರುದನ್ನು ಹೊಂದಿದವನು ಶ್ರೀರಾಮಚಂದ್ರನು. ಶನಿಯ ತಾಪವಿಲ್ಲ. ಚತುರ್ಥ ಗುರುವಿಗೆ ಎಚ್ಚರಿಕೆಯಿಂದ ಸಾಗಬೇಕು. ದೇವರ ನಾಮ ಒಂದೇ ನಿಮ್ಮ ಕೈ ಹಿಡಿಯುತ್ತದೆ. ಪಿತೃ ವಾಕ್ಯ ಪಾಲನೆ ಮಾಡಿದ ರಾಮ- ಲಕ್ಷ್ಮಣರನ್ನು ಅನುಸರಿಸಿದರೆ ಕೀರ್ತಿ, ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಗುರು ಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಗುರುವನ್ನು ಬಿಟ್ಟರೆ ದುರ್ಗತಿ ಮನುಷ್ಯನನ್ನು ಅನುಸರಿಸುತ್ತದೆ.

ಮಕರ ರಾಶಿ

ಶನಿ 2ನೇ ಮನೆಗೆ ಬಂದು ಅಲ್ಪ ಸ್ವಲ್ಪ ಚೈತನ್ಯ ನೀಡಿದ್ದಾನೆ. ಆರೋಗ್ಯ ಇದ್ದರೆ ಏನನ್ನಾದರೂ ಗಳಿಸಬಹುದು. ನಿಮ್ಮ ಆರೋಗ್ಯ ಮನಸ್ಸಿನ ಮೇಲೆ ಪರಿಣಾಮ ಮಾಡದೆ ನೀವು ಮುಂದೆ ಸಾಗಲು ಶನಿ ದೇವರನ್ನು ಅರ್ಚಿಸಿ. ಪ್ರತಿ ಮಾಸದ ಪ್ರದೋಷದಲ್ಲಿ ಈಶ್ವರನನ್ನು ಆರಾಧಿಸಿ. ಸಮಸ್ಯೆಗೆ ಪರಿಹಾರವನ್ನು ಸುಬ್ರಹ್ಮಣ್ಯ ದೇವರೆ ನೀಡುತ್ತಾನೆ.

ಕುಂಭ ರಾಶಿ

ಲಗ್ನದಲ್ಲಿ ಶನಿ, ದ್ವಿತೀಯದಲ್ಲಿ ಗುರು ಇರುವುದರಿಂದ ನಿಮಗೆ ಅನಿರೀಕ್ಷಿತ ಶುಭ ಉಂಟಾಗುತ್ತದೆ. ಮನುಷ್ಯನಿಗೆ ಶನಿ ಸಂಚಾರ ಇರುವಾಗ ಭಗವದ್ಗೀತೆ, ರಾಮಾಯಣವನ್ನು ಪಾರಾಯಣ ಮಾಡುತ್ತಿದ್ದರೆ ಸರ್ವ ಸಂಕಟದಿಂದ ಮುಕ್ತರಾಗಬಹುದು. ದುಃಖವೂ ದೂರವಾಗಿ ಸುಖವನ್ನು, ಅಭಿಷ್ಟವನ್ನು ಪಡೆಯಬಹುದು.

ಮೀನ ರಾಶಿ

ದ್ವಾದಶದಲ್ಲಿನ ಶನಿ, ಲಗ್ನದಲ್ಲಿನ ಗುರು ಕಾರಣದಿಂದಾಗಿ ಅಲ್ಪಸ್ವಲ್ಪ ವಿಘ್ನಗಳು ಇದ್ದರೂ ಪೂರ್ವ ಪುಣ್ಯದಿಂದ ಸಂಕಟ ಸಂಕೋಲೆಗಳಿಂದ ಬಿಡುಗಡೆ ಇರುತ್ತದೆ. ಯಾವುದೇ ಗ್ರಹ ಎಲ್ಲಾದರೂ ಇರಲಿ ಮನುಷ್ಯನಿಗೆ ಪೂರ್ವ ಪುಣ್ಯ ಒಂದಿದ್ದರೆ ಬರುವ ಕಷ್ಟ ನಷ್ಟ ದೂರವಾಗಿ ಅವನ ಮನೋ ಇಚ್ಛೆ ಪೂರೈಸುವವನು ಗುರು ದತ್ತಾತ್ರೇಯನು ಒಬ್ಬನೇ. ಶನಿ ಸಂಚಾರದಲ್ಲಿ ನಿತ್ಯವೂ ಗುರು ಚರಿತ್ರೆ ಪಾರಾಯಣ ಮಾಡಿ. ನಿಮ್ಮ ಅಜ್ಞಾನವನ್ನು ಹಿಂದೆ ಹಾಕಿ ದೈವವೇ ಮಾರ್ಗ ತೋರಿಸುತ್ತದೆ. ನವಗ್ರಹ ಸ್ತೋತ್ರ ಪಠಿಸಿ. ಸುಖ- ಶಾಂತಿ ನೆಮ್ಮದಿ ದೊರಕುತ್ತದೆ.