ನ್ಯೂಸ್

ಈ ರಾಶಿಯವರಿಗೆ ಈ ವಾರ ಸಮಯ ತುಂಬ ಸುಂದರವಾಗಿದೆ: ವಾರಭವಿಷ್ಯ

ಮೇಷ

ಮನುಷ್ಯ ಸುಖವಾಗಿರಲು ಗುರುವಿನ ಬಲವೊಂದಿದ್ದರೆ ಸಾಕು. ಬೇಡಿದ ವರವನ್ನು, ಮನಃಸಂಕಲ್ಪವನ್ನು ಈಡೇರಿಸಲು, ಕೀರ್ತಿ-ಲಾಭವನ್ನು ಪಡೆಯಲು ಗುರುವಿನ ಆಶೀರ್ವಾದ ಬೇಕು. ಜೀವನ ಸರಿಯಾದ ಮಾರ್ಗದಲ್ಲಿ ಸಾಗುವುದರಲ್ಲಿ ಸಂಶಯವಿಲ್ಲ. ಅದರಲ್ಲೂ 11ರ ಗುರುವು ಭಾಗ್ಯವನ್ನು ತಂದುಕೊಡುತ್ತಾನೆ. ಸತ್​ಸಂಕಲ್ಪಮಾಡಿ, ಒಳ್ಳೆಯ ಕೆಲಸ ಮಾಡಿ ಆನಂದಿಸಿ.

ವೃಷಭ

ರಾಶ್ಯಾಧಿಪತಿ ಶುಕ್ರನು ಶನಿಯ ಮನೆಯಲ್ಲಿದ್ದು, ಬುಧನು ದೇವಗುರುವಿನ ಮನೆ ಧನುಸ್ಸಿನಲ್ಲಿದ್ದಾನೆ. ವ್ಯಾಪಾರ-ಉದ್ಯೋಗ ನಿಮಗೆ ತೃಪ್ತಿತರುವ ವಿಷಯವಾಗಿದ್ದು, ಶ್ರದ್ಧಾಭಕ್ತಿಯಿಂದ ಕುಲದೇವರನ್ನು ಆರಾಧಿಸಿದರೆ ಎಲ್ಲ ಕೆಲಸಗಳು ಕೈಗೂಡುವವು. ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಖರ್ಚು ಅಧಿಕವಾಗಿದ್ದು, ಸಮತೋಲನ ಕಷ್ಟವಾದರೂ 9ರ ಶನಿಯು ಸಹಕರಿಸಿ ಮನೋ ಆನಂದವನ್ನು ನೀಡುತ್ತಾನೆ.

ಮಿಥುನ

9ರ ಗುರು ಒಬ್ಬನೇ ಸಾಕು ನಿಮ್ಮನ್ನು ರಕ್ಷಿಸಲು. ಸ್ಥಾನ-ಮಾನವನ್ನು ಕಾಪಾಡಿ ತಕ್ಕ ಮಟ್ಟಿಗೆ ಆರೋಗ್ಯ ಕೊಟ್ಟು, ತೃಪ್ತಿಯ ಕೆಲಸವನ್ನು ಮಾಡಿಸಿ ಚಿತ್ತಕ್ಕೆ ನೆಮ್ಮದಿಯನ್ನು ಕೊಡುತ್ತಾನೆ. ಮರೆಯದಿರಿ. ಪೀಠಾಪುರದಲ್ಲಿ ನೆಲೆಸಿರುವ ದತ್ತನನ್ನು ಪೂಜಿಸಿ, ಧ್ಯಾನಿಸಿ. ಕೈಲಾದಷ್ಟು ಅನ್ನದಾನ ಸೇವೆ ಮಾಡಿ.

ಕಟಕ

ದೇವರ ದೇವನಾದ ಮಹಾದೇವನನ್ನು ಪೂಜಿಸುವರಾಗಿದ್ದರೆ ಯಾವ ಸ್ಥಾನ-ಮಾನವನ್ನು ಲೆಕ್ಕಿಸದೆ ವರವನ್ನು ನೀಡುತ್ತಾನೆ. ಆತುರಬೇಡ. ಚಿಂತೆಯೂ ಬೇಡ. ಸ್ವಾಸ್ಥ್ಯವನ್ನು ಹಾಳುಮಾಡಿಕೊಳ್ಳದೆ ಚಿತ್ತಶುದ್ಧಿಯಿಂದ ದೇವರನ್ನು ಸ್ಮರಿಸಿ ವಹಿವಾಟಿನಲ್ಲಿ ತೊಡಗಿಸಿಕೊಳ್ಳಿ. ಅನುಕೂಲ ನಿಮ್ಮನ್ನು ಅರಸಿ ಬರುವುದು.

ಸಿಂಹ

ಸಮಯ ತುಂಬ ಸುಂದರವಾಗಿದೆ. ಬೇಡಿದ ವರವನ್ನು ನೀಡುವ ಸೂರ್ಯನು ನಿಮ್ಮ ರಾಶಿಯ ಅಧಿಪತಿ. ಸೂರ್ಯಕವಚ, ಆದಿತ್ಯಹೃದಯ ಪಾರಾಯಣ ಮಾಡಿ. ಎಲ್ಲ ವಿಚಾರದಲ್ಲೂ ನಿಮಗೆ ಅನುಕೂಲ ಉಂಟುಮಾಡಿಕೊಡುತ್ತಾನೆ. ನಾಲ್ಕರ ಕೇತುವಿಗೆ ಗಣಪತಿಯನ್ನು ಸುಬ್ರಹ್ಮಣ್ಯನನ್ನು ಸದಾ ಕಾಲ ಅರ್ಚಿಸಿರಿ.

ಕನ್ಯಾ

‘ತೇನವಿನಾ ತೃಣಮಪಿ ನಚಲತಿ’ ದೇವರ ಆಜ್ಞೆ ಇಲ್ಲದೆ ಗಿಡಮರ-ಗಾಳಿಯೂ ಬೀಸುವುದಿಲ್ಲ. ಅಂದ ಮೇಲೆ ಮನುಷ್ಯ ಮಾತ್ರರು ನಾವು ಕೈ ಎಟುಕದ ಕೆಲಸಕ್ಕೆ ಕೈ ಹಾಕಿ ಸ್ವಾಸ್ಥ್ಯ ಕಳೆದುಕೊಳ್ಳಬಾರದು. ಆರರ ಗುರು, ಪಂಚಮ ಶನಿ ಬದಲಾವಣೆ ಆಗುವವರೆಗೂ ಕುಲದೇವರನ್ನು ಪ್ರಾರ್ಥನೆ ಮಾಡಿ ಮುಂದೆ ಸಾಗಿ. ಮುಂದೆ ಒಳ್ಳೆಯ ದಿನಗಳು ಬರಲಿವೆ.

ತುಲಾ

ಮನಸ್ಸಿಗೆ ಆಸೆಯನ್ನು, ಚಿಂತೆಯನ್ನು ಕೊಟ್ಟು ಅಶಾಂತಿಯನ್ನು ಉಂಟುಮಾಡುವವನು ಗ್ರಹಕಾರಕನೇ. ಪಂಚಮ ಗುರುವಿನ ಸದುಪಯೋಗ ಪಡಿಸಿಕೊಂಡಲ್ಲಿ, ದಕ್ಷಿಣಾಮೂರ್ತಿಯನ್ನು ಗುರುದತ್ತನನ್ನು ವಿಶೇಷವಾಗಿ ಪ್ರಾರ್ಥಿಸಿದಲ್ಲಿ ಇಷ್ಟಾರ್ಥಗಳು ಈಡೇರುತ್ತವೆ.

ವೃಶ್ಚಿಕ

ಒಳ್ಳೆಯ ಹಾದಿಯಲ್ಲಿ ನಿಮಗೆ ವರಮಾನವನ್ನು ತಂದುಕೊಡುವ ವಿದ್ಯಮಾನಗಳು ನಡೆದು ಕೈಗೆ ಧನ ಬಂದು ಸೇರುವ ಸಮಯ. ಕೇತುವು ತೊಡಕುಗಳನ್ನು ಕೊಟ್ಟರೂ ನೀವು ಮಾಡುವ ಗಣಪತಿಯ ಪ್ರಾರ್ಥನೆಯಿಂದ ಎಲ್ಲವನ್ನೂ ಗೆಲ್ಲಬಹುದು.

ಧನು

16ನೇ ಡಿಸೆಂಬರ್​ನಿಂದ ಗುರು ಮನೆಗೆ ರವಿಯೂ ಬಂದು ಸೇರಿ ನಿಮ್ಮ ಬಾಳಿಗೆ ಬೆಳಕನ್ನು ಚೆಲ್ಲಿ, ಶತ್ರುಗಳನ್ನು ಸದೆಬಡಿಯುತ್ತಾನೆ. ಈಗ ನಿಮ್ಮ ಸಮಯವು ಹೇಗಿದೆ ಎಂದರೆ ಬೇಡಿದ ವರವನ್ನು ಕೊಡುವ ಶ್ರೀರಾಮನನ್ನು ಪೂಜಿಸುವ ಸಂಕಲ್ಪವಿರಬೇಕು. ರಾಮ ರಾಜಾರಾಮನಾದ. ಈ ಏಳೂವರೆ ವರ್ಷದ ಶನಿಸಂಚಾರದಲ್ಲಿ ಬೇಕಾದಷ್ಟು ಪಾಠವನ್ನು ಕಲಿತಿದ್ದೀರ. ನಿಮಗೆ ವರವನ್ನು ಕೊಡುವ ಶ್ರೀರಾಮಕವಚವನ್ನು ಪಾರಾಯಣ ಮಾಡಿ.

ಮಕರ

ಲಗ್ನದಲ್ಲಿ ಶನಿ, ದ್ವಿತೀಯ ಗುರು ಇರುವಾಗ ಶನಿ ಏನೂ ಕೊಡನು. ಆದರೆ ದ್ವಿತೀಯ ಗುರುವು ಎಲ್ಲವನ್ನೂ ಕೊಡಲು ಸಮರ್ಥನು. ಬೇಡುವ ಭಕ್ತನು ಧರ್ಮಶ್ರದ್ಧೆಯಿಂದ ದೇವರನ್ನು ಪೂಜಿಸಬೇಕು. ಹಿರಿಯರಿಗೆ ವಂದಿಸಿ, ಕಿರಿಯರನ್ನು ಪ್ರೀತಿಯಿಂದ ಕಂಡರೆ ದೇವರ ಕಣ್ಣಲ್ಲಿ ಬೇಕಾದವರಾಗಿ ಬಾಳುತ್ತೀರ. ಶನಿ ಅಷ್ಟೋತ್ತರ ಪಠಿಸಿ.

ಕುಂಭ

ಲಗ್ನದಲ್ಲಿ ಗುರುವಿರುವಾಗ ಯಾವ ಭಯವೂ ಬೇಕಿಲ್ಲ. ಇಲ್ಲದ್ದನ್ನು ಕೊಡುತ್ತಾನೆ. ಇಲ್ಲದಿದ್ದರೂ ಕೊಡಿಸುತ್ತಾನೆ. ಕೊಡದೇ ಇರುವವರಿಗೆ ಕಷ್ಟ-ಕಾರ್ಪಣ್ಯ ಹಿಂದೆಯೇ ಇಟ್ಟಿರುತ್ತಾನೆ. ಈ ಸಮಯದಲ್ಲಿ ಬರುವ ಸೋಮವಾರಗಳು, ಪೌರ್ಣಮಿ ಶನಿವಾರದಂದು ರುದ್ರದೇವರಿಗೆ ಎಳನೀರು, ಜೇನುತುಪ್ಪ, ಸಕ್ಕರೆ ಕೊಟ್ಟು ಬನ್ನಿ. ಜೀವನವು ಸುಖ-ಶಾಂತಿಯಿಂದ ಸಾಗುತ್ತದೆ.

ಮೀನ

ಮನುಷ್ಯನು ದೈವಸಂಪರ್ಕ ಇಲ್ಲದೆ ಬದುಕುವುದು ಅಸಾಧ್ಯವಾದ ಮಾತು. ದ್ವಾದಶ ಗುರುವಿಗೆ ದತ್ತಾತ್ರೇಯನನ್ನು ಪ್ರಾರ್ಥಿಸಿ, ಪೂಜಿಸಿ-ನಿನ್ನೆಯ ಸ್ಮರಣೆಯೂ ಬೇಡ. ಇಂದಿನ ನೆನಪೂ ಬೇಡ. ಆಗ ದೇವರು ನಿಮ್ಮ ಕೈಹಿಡಿದು ನಡೆಸುತ್ತಾನೆ. ಗುರು 12ರಲ್ಲಿ ಇರುವುದರಿಂದ ವಿವೇಚನೆಯಿಂದ ಕೆಲಸ ಮಾಡಿದಲ್ಲಿ ವ್ಯಾಪಾರ ವೃದ್ಧಿಯಾಗಿ ತಕ್ಕಮಟ್ಟಿಗೆ ನಡೆಯುತ್ತದೆ. ಮನಸ್ಸನ್ನು ಹತೋಟಿಯಲ್ಲಿಡಿ.