ಮೇಷ ರಾಶಿಯವರು ಮೇ 9,10,11,12 ನೇ ದಿನಾಂಕಗಳಲ್ಲಿ ಯಾವ ಶುಭಕಾರ್ಯಗಳನ್ನೂ ಮಾಡುವುದು ಬೇಡ. ಮೇ 16,17 ರಂದು ಕೆಲಸಗಳಲ್ಲಿ ತೊಡಗಿದರೆ ಯಶಸ್ಸು ಕಾಣುವಿರಿ. ಮೇಷಾಧಿಪತಿಯು ಬುಧನ ಮನೆಯಲ್ಲಿ ಇರುವುದರಿಂದ ನಿಮ್ಮ ಕಾರ್ಯ ಯಶಸ್ವಿ ಆಗಲು ಸುಬ್ರಹ್ಮಣ್ಯನ ಅನುಗ್ರಹ ಬೇಕು, ರಾಷ್ಟ್ರಕ್ಕೂ ಅದೇ ಬೇಕು. ಎಲ್ಲರಿಗಾಗಿ ಪ್ರಾರ್ಥಿಸಿ.
ಶುಕ್ರನು-ರಾಹು ವೃಷಭ ರಾಶಿಯಲ್ಲಿದ್ದು ಅಲ್ಲಿಗೆ ಸೂರ್ಯನು ಬಂದಾಗ ರವಿ-ರಾಹುವಿನ ಘರ್ಷಣೆಯಿಂದ ನಿಮ್ಮ ವ್ಯಕ್ತಿತ್ವ, ಘನತೆ ಕಾಪಾಡಿಕೊಂಡು ಇರಬೇಕಾದರೆ ದುರ್ಗಾರಾಧನೆಯನ್ನು ಮಾಡಬೇಕು. 10ರಲ್ಲಿ ಗುರು ಇರುವುದರಿಂದ ಮಧ್ಯಮಾವಸ್ಥೆಯಲ್ಲಿ ಕೆಲಸ ಸಾಗುತ್ತದೆ. ಕೆಲಸದಲ್ಲಿ ಅಭಿವೃದ್ಧಿಯಾಗಬೇಕಾದರೆ ದಕ್ಷಿಣಾಮೂರ್ತಿಯನ್ನು ಪೂಜಿಸಿ. ಧನವೂ ಬರುತ್ತದೆ.
ಅಷ್ಟಮ ಶನಿಯಿಂದ ಮನಸ್ಸಿಗೆ ಸಂತಸ ಸಿಗದೆ ನಿರ್ಣಾಯಕ ಕೆಲಸಗಳನ್ನು ಕೈಬಿಡುವ ಸಂದರ್ಭ ಬರುತ್ತದೆ. ಆರೋಗ್ಯವು ಹಾನಿಕರವಾಗಿಲ್ಲದಿದ್ದರೂ, ಸಣ್ಣಪುಟ್ಟ ಬೇನೆಗಳು ಇರುವುದರಿಂದ ಪುರುಷಸೂಕ್ತ ಪಾರಾಯಣ ಮಾಡಿ, ವಿಷ್ಣು ಅಷ್ಟೋತ್ತರ ಪಠಿಸಿ. ‘ಓಂ ನಮೋ ಭಗವತೇ ವಾಸುದೇವಾಯ’ ಮಂತ್ರ 108 ಬಾರಿ ಜಪಿಸಿ.
ಚಂದಾಧಿಪತ್ಯದ ಕಟಕ ರಾಶಿಯವರಿಗೆ ಈ ವಾರದಲ್ಲಿ ರವಿ-ರಾಹು-ಶುಕ್ರರು ಏಕಾದಶದಲ್ಲಿದ್ದು, ಸ್ವಲ್ಪ ಮಟ್ಟಿಗೆ ಸುಧಾರಿಸುತ್ತೀರಿ. ಅಷ್ಟಮ ಗುರು ಸಪ್ತಮ ಶನಿ ಇರುವುದರಿಂದ ಆಲಸ್ಯ, ಉದ್ವೇಗ ಸೂಚಿಸುತ್ತದೆ. ಸಕಾಲದಲ್ಲಿ ವಿಶ್ರಾಂತಿಯನ್ನು ಪಡೆಯಿರಿ. ಹರಿಚಿತ್ತದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಉಮಾಮಹೇಶ್ವರ ಸ್ತೋತ್ರ ಪಠಿಸಿ.
ಮನುಷ್ಯನು ಹೇಳಿದ್ದನ್ನು ಮಾಡಬೇಕು. ಮಾತು ಕೊಟ್ಟರೆ ಅದನ್ನು ಪಾಲಿಸಬೇಕು, ಇಲ್ಲವಾದರೆ ಸಮಯಾವಕಾಶ ಕೇಳಬೇಕು. ಮಘಾ, ಹುಬ್ಬಾ, ಉತ್ತರ ನಕ್ಷತ್ರದಲ್ಲಿ ಜನಿಸಿದವರು ಸುಬ್ರಹ್ಮಣ್ಯನ ಆರಾಧನೆ, ಗುರುಚರಿತ್ರೆ ಪಾರಾಯಣ ಮಾಡಿ. ಎಲ್ಲರಿಗೂ ಸಹಾಯ ಮಾಡಿ, ಒಳ್ಳೆಯದಾಗುತ್ತದೆ.
ಕನ್ಯಾರಾಶಿಯವರಿಗೆ ಪಂಚಮ ಶನಿ, ಆರರ ಗುರು ಮಾನಸಿಕವಾಗಿ ಖಿನ್ನತೆ ನೀಡುತ್ತಾನೆ. ವ್ಯಸನಿಗಳಾಗಬೇಡಿ. ಮುಂದೆ ಸೆಪ್ಟೆಂಬರ್ದಲ್ಲಿ ಪಂಚಮ ಗುರು ಬಂದಾಗ ನಿಮ್ಮ ಆಸೆಗಳು ಈಡೇರುತ್ತವೆ. ಗುರು ಅಷ್ಟೋತ್ತರ ಪಠಿಸಿ. ದತ್ತಸ್ತೋತ್ರವನ್ನು ಸಾಯಂಕಾಲದಲ್ಲಿ ಪಾರಾಯಣ ಮಾಡಿ. ಮನಸ್ಸಿಗೆ ಶಾಂತಿ ದೊರೆತು ನಿಮ್ಮ ಜೀವನವು ದೈವದ ಬೆಳಕಲ್ಲಿ ಸಾಗುತ್ತದೆ.
ಪಂಚಮದಲ್ಲಿ ಗುರು ಕುಳಿತಿರುವುದು ನಿಮಗೆ ಶುಭಫಲಗಳನ್ನು ನೀಡುವುದಕ್ಕಾಗಿಯೇ. ಧರ್ಮ-ಕರ್ಮಾಧಿಪತಿ ಶನಿಯ ಚತುರ್ಥ ಭಾಗದ ಕೆಲವೊಂದು ಅನಿರೀಕ್ಷಿತ ಭಾವಗಳನ್ನು ಎದುರಿಸಬೇಕಾಗುತ್ತದೆ. ಆದರೆ ಗುರು ಕೈಹಿಡಿದು ನಡೆಸುತ್ತಾನೆ. ರಾಶ್ಯಾಧಿಪತಿ ಶುಕ್ರ-ರಾಹು ಒಂದೇ ಮನೆಯಲ್ಲಿ ಕುಳಿತಿರುವುದರಿಂದ ಖಡ್ಗಮಾಲಾ ಸ್ತೋತ್ರ ಪಠಿಸಿ.
ರಾಹು-ಕೇತುಗಳ ಮಧ್ಯದಲ್ಲಿ ಗುರು-ಶನಿ ಇರುವುದರಿಂದ ನಿಮ್ಮ ಕೆಲಸಗಳು ಗುರಿಯನ್ನು ಮುಟ್ಟಬೇಕಿತ್ತು. ಆದರೆ ಇಡೀ ರಾಷ್ಟ್ರವೇ ಸಂಕಟದಲ್ಲಿರುವಾಗ ನೀವು ಏನನ್ನೂ ಪಡೆದುಕೊಳ್ಳಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಶುಭಾ-ಶುಭ ಫಲಗಳು, ತೃತೀಯ ಶನಿಯಿಂದ ಲಾಭ ಬಂದು ಧನದ ಕೊರತೆ, ಅಶಾಂತಿ ನಿವಾರಣೆಯಾಗುತ್ತದೆ. ಗಣಪತಿಗೆ ಗರಿಕೆ ಇರಿಸಿ ಪೂಜಿಸಿ. ಸುಬ್ರಹ್ಮಣ್ಯನನ್ನು ಆರಾಧಿಸಿ.
ದ್ವಾದಶ ಕೇತು, ಸಪ್ತಮ ರಾಹು ನಿಮ್ಮ ಆಸೆಗಳನ್ನು ಈಡೇರಿಸುವುದರಲ್ಲಿ ವಿಫಲವಾಗಿದ್ದಾರೆಂದು ತಿಳಿಯಬೇಡಿ. ಕೆಲವೊಂದು ಕಾರ್ಯ ವಿಳಂಬವಾಗಬಹುದು. ತೃತೀಯ ಗುರು ತಡೆಹಿಡಿಯುವುದಿಲ್ಲ. ನಿಮ್ಮ ಇಷ್ಟ ದೇವರನ್ನು ಪೂಜಿಸಿ. ಜಯ ದೊರೆಯುತ್ತದೆ. ಬ್ರಹ್ಮದೇವರು ಲಲಾಟದಲ್ಲಿ ಬರೆದಿಲ್ಲದ್ದನ್ನೂ ಗುರುವು ಕೊಡುತ್ತಾನೆ. ದತ್ತಾತ್ರೇಯನನ್ನು ಅನಂತ ಭಕ್ತಿಯಿಂದ ಪ್ರಾರ್ಥಿಸಿ. ಗಣೇಶ-ಸುಬ್ರಹ್ಮಣ್ಯನನ್ನು ಆರಾಧಿಸಿ.
ಹೇಳಿದ್ದನ್ನು ಕೇಳುವುದು ನಿಮ್ಮ ಒಳಿತಿಗಾಗಿ, ಯಾರು ಯಾರನ್ನೂ ಕೆಡಿಸಲಾಗುವುದಿಲ್ಲ. ದಾರಿಯನ್ನು ತೋರಬಹುದು. ಶನಿಯ ಸಂಚಾರದಲ್ಲಿ ಮಾರ್ಗವು ಕಠಿಣವಾಗಿದ್ದರೂ ಎರಡನೇ ಮನೆಯ ಗುರುವು ನಿಮಗೆ ಬೇಕಾದ್ದನ್ನು ಕೊಡುವ ಸ್ಥಿತಿಯಲ್ಲಿದ್ದಾನೆ. ಪರಮಾತ್ಮ ಏನು ಕೊಟ್ಟರೂ ಸ್ವೀಕರಿಸಿ. ಶನಿ ಪಿಪ್ಪಲಾ ಸ್ತೋತ್ರ ಪಠಿಸಿ. ದೇವಿಮಹಾತ್ಮೆ ಓದಿ, ಕಷ್ಟವನ್ನು ನಿವಾರಿಸಿಕೊಳ್ಳಿ.
ಮಕರ-ಕುಂಭ ಅಧಿಪತಿ ಶನಿ ದ್ವಾದಶದಲ್ಲಿರುವುದು ನಿಮಗೆ ತಿಳಿದಿದೆ. ಅಪರಿಚಿತರು ಬಂದಾಗ ಏಕಾಏಕಿ ಬಾಗಿಲನ್ನು ತೆರೆಯಬಾರದು. ಹಾಗೆಯೇ ಮಹಾದೇವರ ಸೃಷ್ಟಿ ಶನಿಯು ನಿಮ್ಮ ಬಾಗಿಲಲ್ಲಿ ನಿಂತಿರುವುದರಿಂದ ಹರಿ-ಹರರನ್ನು ಪೂಜಿಸಿ. ಶನಿವಾರದಂದು ವಿಷ್ಣು ಸಹಸ್ರನಾಮ, ಸೋಮವಾರದಂದು ಶಿವನಿಗೆ ಸಹಸ್ರನಾಮ ಮಾಡಿ. ಶನಿಗೆ ಪಿಪ್ಪಲಾ ಸ್ತೋತ್ರ ಪಾರಾಯಣ ಮಾಡಿ.
ರಾಶಿಯ ಅಧಿಪತಿ ಗುರುವು 12ರಲ್ಲಿರುವುದರಿಂದ ಹಿತಶತ್ರುಗಳ ಕಾಟವಿರುತ್ತದೆ. ಶತ್ರುಗಳ ಕಾಟವನ್ನೇ ತಡೆಯುವುದೇ ಕಷ್ಟ. ಹಿತಶತ್ರುಗಳು ಇನ್ನೂ ಅಪಾಯಕಾರಿ. ಅದನ್ನು ಗೆಲ್ಲಲು ದೃಢಶಕ್ತಿ ಇರಬೇಕು. 11ರ ಶನಿ ಆರೋಗ್ಯ ಧನ, ಕೆಲಸ-ಕಾರ್ಯಗಳಲ್ಲಿ ಜಯವನ್ನು ಕೊಟ್ಟು ಸಲ್ಲದ ವಿಚಾರವನ್ನು ಮರೆಸಲು ಪ್ರಯತ್ನಿಸುತ್ತಾನೆ. ನೀವು ಮಾಡಬೇಕಾದ ಕೆಲಸ ಶಿವಾರ್ಚನೆ. ಲಲಿತಾತ್ರಿಶತಿ ಮೂಲಕ ಪಾರ್ವತಿ ಪೂಜೆ ಮಾಡಿ. ಗುರುವಾರದಂದು ದತ್ತಾಷ್ಟಕವನ್ನು ಪಠಿಸಿ.