ಗುರುವು ದ್ವಾದಶ ಶನಿಯು ಏಕಾದಶದಲ್ಲಿದ್ದು, 5/6/2022ರಿಂದ ವಕ್ರವಾಗಿ ಸಾಗುತ್ತಾನೆ. ಅವನು ದಶಮ ಸ್ಥಾನ ಫಲ ನೀಡುತ್ತಾನೆ. ಈ ಸಂದರ್ಭದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ. ಬಳಲಿದ ಶರೀರ, ಉತ್ಸಾಹವಿಲ್ಲದ ಮನಸ್ಸು ಎರಡೂ ಒಂದೇ. ಷಣ್ಮುಖನನ್ನು ಪ್ರಾರ್ಥಿಸಿ. ಸೋಮವಾರ ಈಶ್ವರನ ಪೂಜೆ ಮಾಡಿದಲ್ಲಿ ಸಂತೋಷ ಸಾಧ್ಯ.
ರವಿ-ಬುಧರು ಲಗ್ನದಲ್ಲೇ ಇದ್ದು, ಗುರುವು ಏಕಾದಶದಲ್ಲಿ ಶುಭಸೂಚಕನಾಗಿದ್ದಾನೆ. ರಾಹು-ಶುಕ್ರರು ಮನಸ್ಸಿನ ಮೇಲೆ ಒತ್ತಡ ಬೀರಿ ತಾಳಕ್ಕೆ ಸರಿಯಾದ ರಾಗವಿಲ್ಲದಂತೆ ಜೀವನದ ಹೆಜ್ಜೆ ತಪ್ಪಬಹುದು. ಎಚ್ಚರದಿಂದ ಸಾಗಿ. ಮತ್ತೊಬ್ಬರು ಹೇಳಿದ ವಿಚಾರವನ್ನು ಕೂಲಂಕಷವಾಗಿ ವಿಚಾರಿಸಿ. ಸರಸ್ವತಿ, ದುರ್ಗೆಯನ್ನು ಶ್ವೇತ ಪುಷ್ಪದಿಂದ ಪೂಜಿಸಿ ತ್ರಿಮಧುರ ನೈವೇದ್ಯ ಮಾಡಿ.
ಲಗ್ನಾಧಿಪತಿಯು ಸೂರ್ಯನ ಜತೆ ದ್ವಾದಶದಲ್ಲಿದ್ದು ನಿಮ್ಮ ಚಿತ್ತವನ್ನು ಕೆಡಿಸಿ ಕಾರ್ಯಗಳಲ್ಲಿ ವಿಘ್ನ ಉಂಟು ಮಾಡುವ ಕಾಲ. ಜೂನ್ 15ರ ನಂತರ ಸೂರ್ಯನು ಬುಧನ ಮನೆಗೆ ಬಂದಾಗ ಕಾರ್ಯದಲ್ಲಿ ಮುನ್ನಡೆ, ಖರ್ಚು ವೆಚ್ಚಗಳು ಅಧಿಕವಾಗಿರುತ್ತವೆ. ಹಣಕಾಸಿನ ವಿಚಾರದಲ್ಲಿ ಯೋಚನೆ ಮಾಡಿ ಮುನ್ನಡೆದರೆ ನಿಮಗೆ ಧನದ ಕೊರತೆ ಉಂಟಾಗುವುದಿಲ್ಲ. ಈ ಮಾಸವು ಮುಗಿದೊಡನೆ ಕುಂಬಾಸಿಗೆ ತೆರಳಿ ಗಜಾನನನನ್ನು ಪೂಜಿಸಿ.
9ರ ಗುರುವು ಕಟಕ ರಾಶಿಯವರಿಗೆ ಸ್ವಕ್ಷೇತ್ರದಲ್ಲಿದ್ದು, ಪಂಚಮ ದೃಷ್ಟಿಯಿಂದ ಹಿತಕಾರಕನೂ ಆಗುತ್ತಾನೆ. ಅಷ್ಟಮದ ಶನಿಗೆ ಸುಂದರಕಾಂಡ ಪಾರಾಯಣ ಇರಲಿ. ದತ್ತಾತ್ರೇಯನ ಗುರು ಚರಿತ್ರೆಯ 14ನೇ ಅಧ್ಯಾಯ ಪಾರಾಯಣವಿರಲಿ. ಕೆಲಸ ಮಾಡುವಾಗ ನಮ್ಮ ಶರೀರವನ್ನು ಕಾಪಾಡಿಕೊಂಡು ಆಲಸ್ಯಕ್ಕೆ ತುತ್ತಾಗದಂತೆ ನೋಡಿಕೊಂಡು ಅಸಾಧ್ಯವಾದ ಸಂಸಾರ ಭಾರ ಹೊತ್ತು ಬಳಲದಿರಿ. ಆರೋಗ್ಯಕ್ಕೆ ಆದಿತ್ಯ ಹೃದಯ ಪಾರಾಯಣ ಮಾಡಿರಿ.
ಜುಲೈ 12ರ ನಂತರ ಶನಿಯು ಮಕರ ರಾಶಿಗೆ ಸರಿದು 6ನೇ ಮನೆಯ ವಿಶಿಷ್ಟ ಫಲ ಹಾಗೂ ಸ್ವಕ್ಷೇತ್ರದಲ್ಲಿ ಗುರುವು ಕೂತಿರುವುದು ಸುಖ-ಶಾಂತಿ, ಆಯುಷ್ಯ, ಆರೋಗ್ಯ, ಐಶ್ವರ್ಯ ಕೊಡುವುದರಲ್ಲಿ ಸಂದೇಹ ಬೇಡ. ಒಮ್ಮೆ ಅಮೃತ ಕುಡಿದರೆ ಸಾಕು, ಅಮೃತಾಂಶದ ದೇಹ ಇರುವಂತೆ ಮುಂದಿನ 6 ತಿಂಗಳು ನಿಮಗೆ ದೈವ ಬಲದಿಂದ ಸಂತೋಷದ ಸಮಯ. ಸೂರ್ಯನಾರಾಯಣನ ಅಷ್ಟೋತ್ತರ ಪಠಿಸಿ. ವಲ್ಲಿ-ದೇವಸೇನಾ ಸಹಿತ ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.
ಸಪ್ತಮದಲ್ಲಿ ಗುರು, ಷಷ್ಠ ಶನಿ ಆಸೆಯನ್ನು ಮೂಡಿಸಿದ್ದಾರೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಪುಣ್ಯ ಸಮಯ. ಜ್ಞಾಪಕವಿರಲಿ, ಶನಿಯು ಮತ್ತೆ ಜುಲೈ 12ರಿಂದ ಹಿಂದಕ್ಕೆ (ಪಂಚಮಕ್ಕೆ) ಬರುತ್ತಾನೆ. ಸಂಪಾದನೆಗೆ ಹೆಚ್ಚಿನ ಆದ್ಯತೆ ಇರಲಿ. ಅವಶ್ಯವಿರುವ ವಿಚಾರಕ್ಕೆ ಹಣ ವಿನಿಯೋಗಿಸಿ. ಕೋರ್ಟ್ ಕಚೇರಿಯ ವಿಷಯಗಳಲ್ಲಿ ನ್ಯಾಯಬದ್ಧವಾಗಿ ಮುಗಿಸಿ. ವರಸಿದ್ಧಿ ವಿನಾಯಕ ವ್ರತಕಥೆ ಓದಿ ವಿಘ್ನ ದೂರ ಮಾಡಿಕೊಳ್ಳಿ.
ಮನುಷ್ಯ ಮಾಡಿದ ಎಲ್ಲಾ ಕೆಲಸಗಳಲ್ಲೂ ಅತ್ಯುತ್ತಮ ಫಲ ಪಡೆಯಬೇಕೆಂಬ ಆಸೆ ಇರುತ್ತದೆ. ಪಾಪ- ಪುಣ್ಯಗಳ ಫಲವು ಹಿಂದೆ-ಮುಂದೆ ಸರಿಸಿ ಕೆಲವೊಂದು ನಿರಾಸೆ, ಹಲವು ಬಾರಿ ಉತ್ಸಾಹ ಮೂಡಿಬರುತ್ತದೆ. ಪಂಚಮ ಶನಿಗೆ ಶನಿ ಅಷ್ಟೋತ್ತರ ಪಠಿಸಿ. ಯಾರನ್ನೂ ಗೆಲ್ಲಬಹುದು, ಎಲ್ಲ ಪಡೆಯಬಹುದು. ಲಲಿತೆಯನ್ನು ಪೂಜಿಸಿ. ಷಷ್ಠ ಗುರುವಿಗೆ ಗುರು ಚರಿತ್ರೆಯ ಪಾರಾಯಣ ಮಾಡಿರಿ.
ಪಂಚಮದಲ್ಲಿ ಗುರುವಿದ್ದು, ಕಾರ್ಯಗಳನ್ನು ಸಾಧಿಸಿಕೊಳ್ಳುವ ಕಾಲ. ಮುನ್ನುಗ್ಗಿ ಕೆಲಸ ಮಾಡುವುದೇ ಮನುಷ್ಯನ ಲಕ್ಷಣ. ಚತುರ್ಥದಲ್ಲಿ ಶನಿಯಿದ್ದು, ಸ್ವಕ್ಷೇತ್ರದಲ್ಲಿರುವುದು, ಕೆಲವೊಮ್ಮೆ ಕೆಲಸಗಳನ್ನು ನಿಧಾನವಾಗಿಸುತ್ತಾನೆ. ಆದರೆ, ಆಸೆ, ಸಫಲತೆಯನ್ನು ಕೊಟ್ಟು ಗುರಿ ಮುಟ್ಟುವಂತೆ ಮಾಡುತ್ತಾನೆ. ಕೊಟ್ಟ ಮಾತನ್ನು ನಡೆಸಬೇಕು. ನಂಬಿದ ಗುರುವಿನ ಮೇಲೆ ವಿಶ್ವಾಸವಿರಲಿ. ಇಷ್ಟೇ ಸಾಕು ಜೀವನವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಲು.
ಸಾಧಕರ ಸಾಲಿನಲ್ಲಿ ನಿಂತಿರುವ ನೀವು ತೃತೀಯ ಶನಿ ಬಂದ ಮೇಲೆ ಬೇಕಾದಷ್ಟು ವಿಚಾರದಲ್ಲಿ ತೊಡಗಿಸಿಕೊಂಡಿರುವಿರಿ. ಸ್ವಕ್ಷೇತ್ರದ ಗುರುವು ಯಾವ ಅತೃಪ್ತಿಯನ್ನಾಗಲಿ. ಕಾರ್ಯವಿಘ್ನಗಳನ್ನು ಉಂಟು ಮಾಡುವುದಿಲ್ಲ. ಗುರುವನ್ನು ನಂಬಬೇಕು. ಗುರುಚರಿತ್ರೆಯ 16ನೇ ಅಧ್ಯಾಯವೇ ಗುರು ಸೇವೆ ಮಾಡಿ ಫಲ ಪಡೆದ ಹಾಗೆ. ವ್ಯಕ್ತಿಗಳ ಆಯ್ಕೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಧನಕ್ಕೂ ಆರೋಗ್ಯಕ್ಕೂ ಕೊರತೆಯಿಲ್ಲ.
ಮಕರಾಧಿಪತಿ ದ್ವಿತೀಯದಲ್ಲೂ ಸರ್ವೆಷನು, ಮಹಾದೇವ ಸ್ವರೂಪನಾದ ಗುರುವು ತೃತೀಯದಲ್ಲೂ ಇರುವಾಗ ಗ್ರಹಗಳು ಕಂಟಕಪ್ರಾಯವಾಗುವುದಿಲ್ಲ. ಯಾವುದೇ ಕಂಟಕ ಬಂದರೂ ಗುರುವು ರಕ್ಷಣೆ ನೀಡುತ್ತಾನೆ. ಆದರೆ, ನಿಮ್ಮಲ್ಲಿ ದೈವ ಧರ್ಮ, ಗುರು ಹಿರಿಯರಲ್ಲಿ ಭಕ್ತಿಯಿದ್ದರೆ ದಾರಿಯು ಸುಗಮವಾಗುತ್ತದೆ. ಕಾಲಭೈರವನನ್ನು ಪೂಜಿಸಿ. ದಕ್ಷಿಣಾಮೂರ್ತಿಗೆ ಕಡಲೆಕಾಳು-ಬೆಲ್ಲ ನೈವೇದ್ಯ ಮಾಡಿರಿ.
ಕುಂಭ ರಾಶಿಗೆ ರಾಶ್ಯಾಧಿಪತಿ ಶನಿ. ಅವನಿಗೆ ದ್ವಿತೀಯದಲ್ಲಿ ಗುರುವಿರುವುದು ಶುಭಸೂಚಕ. ಅಲ್ಲಿಗೆ ಗುರು ರಕ್ಷಣೆಯಿದ್ದರೆ ನಿಮಗೆ ಬೇಕಾದ್ದು ಸಿಗುತ್ತದೆ. ಜ್ಞಾಪಕವಿರಲಿ, ಜನ್ಮಶನಿ ನಿಮ್ಮ ಧರ್ಮವನ್ನು ನೀವು ದೇವರಲ್ಲಿ ಮಾಡುವ ಭಕ್ತಿಯನ್ನು ಅನ್ಯರಿಗೆ ಮಾಡುವ ಉಪಕಾರವನ್ನು ಲೆಕ್ಕ ಹಾಕಿ ಫಲಾಫಲ ನೀಡುತ್ತಾನೆ. ಶನಿ ಅಷ್ಟೋತ್ತರ ಪಠಿಸಿ.
ಸ್ವಕ್ಷೇತ್ರದ ಗುರುವು ನಿಮ್ಮ ಸ್ವಂತ ಅನುಷ್ಠಾನ, ದೇವತಾ ಪೂಜೆ, ಗುರುಭಕ್ತಿ ಮಾಡಿದ ಉಪಕಾರಗಳನ್ನು, ಜನ್ಮಾಂತರದ ಪುಣ್ಯಗಳನ್ನು ತುಲನೆ ಮಾಡಿದ ಮೇಲೆಯೇ ಫಲ ನೀಡುತ್ತಾನೆ. ದ್ವಾದಶ ಶನಿಯು ನಿಮ್ಮನ್ನು ಪರೀಕ್ಷಿಸಲು ತಲ್ಲಣಗಳನ್ನು ಉಂಟು ಮಾಡುವ ಕಾಲವಿದು. ಸೌಂದರ್ಯ ಲಹರಿ ಪಾರಾಯಣ ಮಾಡಿ. ಉಮಾಮಹೇಶ್ವರ ವ್ರತಕಥೆ ಓದಿ. ನಿಮ್ಮ ಜೀವನವು ಸುಖದ ಹಾದಿ ಸೇರುತ್ತದೆ.