ನ್ಯೂಸ್

ವಾರ ಭವಿಷ್ಯ| ಈ ರಾಶಿಯವರಿಗೆ ಹನ್ನೊಂದರ ಗುರುವು ಯಶಸ್ಸು ಕೊಟ್ಟು, ಧನಸಹಾಯ ನೀಡಿ ರಕ್ಷಿಸುತ್ತಾನೆ

05-07-2020ರಿಂದ 11-07-2020

ಮೇಷ: ಕರುಣಾಸಮುದ್ರನಾದ ಭಗವಂತನ ದಯೆಯೊಂದಿದ್ದರೆ ಯಾವುದು ಅಸಾಧ್ಯ? ನವಮದ ಗುರು ಕೆಲಸದಲ್ಲಿ ಪ್ರಗತಿಯನ್ನು, ಉಲ್ಲಾಸಕರವಾದ ಮನಸ್ಸನ್ನು ಕೊಟ್ಟು ನಿಮ್ಮ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾನೆ. ಹನ್ನೊಂದರ ಶನಿಯು ನಿಮಗೆ ಭಾಗ್ಯವನ್ನು ತಂದುಕೊಡುತ್ತಾನೆ. ರಾಶ್ಯಾಧಿಪತಿಯಾದ ಷಣ್ಮುಖನನ್ನು, ಭವಾನಿ ಶಂಕರನನ್ನು ಆರಾಧಿಸುವುದನ್ನು ಮರೆಯಬೇಡಿ.

ವೃಷಭ: ಶುಕ್ರನು ಸ್ವಕ್ಷೇತ್ರದಲ್ಲಿ ವಕ್ರನಾಗಿ, ಜೂನ್ 29ರಿಂದ ಗುರುವು ಅಷ್ಟಮದಲ್ಲಿ ಸೇರಿದ್ದಾನೆ. ಸರಿಯಾದುದನ್ನು ಸಾಧಿಸಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ. ಗುರು, ಶನಿ, ಶುಕ್ರ ಮೂರು ಗ್ರಹಗಳ ವಕ್ರಗತಿಯು ನಿಮ್ಮನ್ನು ಗುರಿತಪ್ಪಿಸಬಹುದು. ಅಥವಾ ಹರಿತವಾದ ನಾಲಿಗೆಯಿಂದ ಕಠೋರ ಶಬ್ದ ಬರಬಹುದು. ಮೀನಾಕ್ಷಿ ಸುಂದರೇಶ್ವರನನ್ನು ಸ್ಮರಿಸಿ. ಉಮಾಮಹೇಶ್ವರನನ್ನು ಆರಾಧಿಸಿ.

ಮಿಥುನ: ಸಪ್ತಮದಲ್ಲಿ ಗುರುವು ಬಂದು ಸ್ವಲ್ಪಮಟ್ಟಿನ ಸಮಾಧಾನವನ್ನು ತಂದರೂ ಅಷ್ಟಮ ಶನಿಯು ನಿಮ್ಮನ್ನು ಪರೀಕ್ಷಿಸುತ್ತಾನೆ. ಗುರುಸೇವೆ, ಈಶ್ವರ ಸೇವೆ ಇರಲಿ. ಶುದ್ಧ ಸಂಕಲ್ಪ, ಅಚಲ ಭಕ್ತಿ ಇದ್ದಲ್ಲಿ ಶನಿ ಕಾಪಾಡುತ್ತಾನೆ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಗ್ರಹಣ ಕಾಲದ ಫಲದಿಂದ ಅನಿರೀಕ್ಷಿತ ಸಮಸ್ಯೆ ಬರಬಹುದು. ಪಾರ್ವತಿ ಸಮೇತ ಶ್ರೀಕಂಠೇಶ್ವರನನ್ನು ಆರಾಧಿಸಿ.

ಕಟಕ: ಷಷ್ಠಗುರು, ಸಪ್ತಮ ಶನಿಯಿಂದ ವೃಥಾ ಆಯಾಸಪಟ್ಟು ನಿಮ್ಮ ಆರೋಗ್ಯಕ್ಕೆ ಹಾನಿ ತಂದುಕೊಳ್ಳಬೇಡಿ. ಈಶ್ವರನು ಕೊಟ್ಟ ಜೀವವನ್ನು ಜೋಪಾನವಾಗಿ ಕಾಪಾಡಿಕೊಳ್ಳಿ. ಮನಸ್ಸು-ಮಿದುಳಿಗೆ ಶುದ್ಧವಾದ ಚಿಂತನೆ, ಆರೋಗ್ಯಕರವಾದ ಆಹಾರ ಮುಖ್ಯ. ಚಂದ್ರನನ್ನು ಶಿರದಲ್ಲಿ ಧರಿಸಿರುವ ತ್ರಯಂಬಕನನ್ನು ಧ್ಯಾನಿಸಿ. ಚಂದ್ರಾಷ್ಟೋತ್ತರವನ್ನು ತಪ್ಪದೇ ಪಠಿಸಿ.

ಸಿಂಹ: ಪಂಚಮದಲ್ಲಿ ಗುರು ಬಂದು ದೇವರು ವರವನ್ನೂ, ಅದೃಷ್ಟವನ್ನೂ ನಿಮ್ಮ ಬಾಗಿಲಮುಂದೆ ಬಿಟ್ಟು ಹೋಗಿದ್ದಾನೆ. ದೇವರು ಕೊಟ್ಟ ಪ್ರಸಾದ ಸ್ವೀಕರಿಸಿ. ಪ್ರಾಥಃಕಾಲೇ ದಿವಾಕರಂ, ಮಧ್ಯಾಹ್ನೇತು ಮಹೇಶ್ವರ, ಸಾಯಂಕಾಲೆ ಸಾಕ್ಷಾತ್ ವಿಷ್ಣು ಎಂಬಂತೆ ದೈವಬಲ ಇದ್ದು ಸೂರ್ಯನಾರಾಯಣನನ್ನು ಪ್ರಾರ್ಥಿಸಿ, ಆದಿತ್ಯ ಹೃದಯ ಪಾರಾಯಣ ಮಾಡಿ. ದೇಶದ ಅಶಾಂತಿ, ಯುದ್ಧಭೀತಿ, ಆರ್ಥಿಕ ಮುಗ್ಗಟ್ಟು ದೂರವಾಗಿ ಬೇಡವಾದ ಸೋಂಕನ್ನು ನಿಮೂಲನೆ ಮಾಡಲು ನಿತ್ಯ ಸೂರ್ಯನನ್ನು ಪ್ರಾರ್ಥಿಸಿ.

ಕನ್ಯಾ: ಆಲಸ್ಯವನ್ನು ಬಿಟ್ಟು ನಡೆದಲ್ಲಿ ದೇವರು ನಿಮ್ಮನ್ನು ಮುಂದೆ ನಡೆಸಿಯಾನು. ನಂಬಿಕೆ ಇದ್ದಲ್ಲಿ ದೇವರು ಇರುತ್ತಾನೆ. ಇಲ್ಲವಾದಲ್ಲಿ ನಿಮ್ಮ ಮನೋಚಿಂತನೆ ಅಧಿಕವಾಗಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಚಿಂತಿಸಬೇಕು ಆದರೆ ಚಿತೆಯೇರುವಷ್ಟಲ್ಲ. ದೇವರ ಅನುಗ್ರಹ ಪಡೆದುಕೊಳ್ಳಿ. ಮಹಾವಿಷ್ಣು ಅಷ್ಟೋತ್ತರ ಪಠಿಸಿ. ಲಕ್ಷ್ಮೀ ಸತ್ಯನಾರಾಯಣನ ಕಥೆಯನ್ನು ಶ್ರವಣ ಮಾಡಿ. ಒಳ್ಳೆಯದಾಗುವುದು ನಿಶ್ಚಿತ.

ತುಲಾ: ತೃತೀಯದಲ್ಲಿ ಗುರು, ಚತುರ್ಥದಲ್ಲಿ ವಕ್ರ ಶನಿ, ಆತಂಕವನ್ನು ತರುತ್ತಾನೆ. ಕೆಲಸದಲ್ಲಿ ಧೋರಣೆ ಬೇಡ. ನಿಮ್ಮ ವೃತ್ತಿಯನ್ನು ದೈವವೆಂದು ಆರಾಧಿಸಿ. ಪುನರ್ವಸು, ಪೂರ್ವಾಭಾದ್ರ, ವಿಶಾಖ ಮೂರು ಗುರು ನಕ್ಷತ್ರಗಳು, ಗುರುವಿನ ಮಾತನ್ನು ತಪ್ಪದೇ ಕೇಳಿ. ತಂದೆಗಿಂತ ದೇವರಿಲ್ಲ. ತಾಯಿಗಿಂತ ಎತ್ತರವಾದ ಪರ್ವತ ಇಲ್ಲವೇ ಇಲ್ಲ. ಪ್ರದೋಷ ಸಮಯದಲ್ಲಿ ಶಿವಾಷ್ಟೋತ್ತರ, ಶನಿ ಅಷ್ಟೋತ್ತರ ಪಠಿಸಿ.

ವೃಶ್ಚಿಕ: ಮನಸ್ಸಿಗೆ ಆನಂದವಿದ್ದಲ್ಲಿ ಆಕಾಶವು ಹತ್ತಿರವಾಗಿ ಕಾಣುತ್ತದೆ. ಭೂಮಿಯು ಅತ್ಯಂತ ಪವಿತ್ರವಾದ ಮಾತೆ ಎನಿಸುತ್ತದೆ. ಶುಭ್ರವಾದ ಮನಸ್ಸು, ದೂರದೃಷ್ಟಿ, ಸಂಯಮ, ಸಾಕ್ಷಾತ್ ಗುರುವಿನ ಅನುಗ್ರಹವಿದ್ದು, ದ್ವೀತಿಯ ಗುರುವು, ತೃತೀಯ ಶನಿಯು ಆಗಿಲ್ಲದ ಕೆಲಸಗಳನ್ನು ಆಗುವಂತೆ ಮಾಡಿ ನಿಮ್ಮ ಮುಂದಿನ ಯಶಸ್ಸು, ಜಾಣ್ಮೆ ಪ್ರದರ್ಶಿಸುತ್ತಾನೆ. ಮಕ್ಕಳ ಬಗ್ಗೆ ಚಿಂತೆಯಿರಲಿ. ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ.

ಧನಸ್ಸು: ಕಳೆದುಹೋದ ವಸ್ತುವನ್ನು ಹುಡುಕುವುದು ಮನುಷ್ಯನ ಅಭ್ಯಾಸ. ಕಳೆದ ಸಮಯ, ಘಟನೆಗಳು ನೆನಪಲ್ಲಿ ಇರಬಾರದು. ಗುರುವು ಸ್ವಂತ ರಾಶಿಗೆ ಬಂದಿರುತ್ತಾನೆ. ಪ್ರಗತಿಪರ ಚಿಂತನೆಯಲ್ಲಿ ನಿಮಗೆ ಸಮಾಧಾನವನ್ನು, ಯಾವುದೋ ಸಂಕಟವನ್ನು ದೂರಮಾಡಿ, ನೀವು ಪ್ರೀತಿಸುವ ಹಾಗೂ ಗೌರವಿಸುವ ವ್ಯಕ್ತಿಯೋರ್ವನು ನಿಮ್ಮನ್ನು ಭಾಗ್ಯೋದಯಕ್ಕೆ ಕೊಂಡೊಯ್ಯುತ್ತಾನೆ. ಜನಕ- ಜನನಿಯರನ್ನು ಮರೆಯಬೇಡಿ.

ಮಕರ: ಅನನ್ಯಾಶ್ಚಿಂತೆಯೆಂತೋಮಯೆ ಜನ ಪರಿಪಾಲತೆ. ತೇಷಾಂ ನಿತ್ಯಾಯುಕ್ತಾನ ಯೋಗಕ್ಷೇಮಂ ಮಹಾಮ್ಯಹಂ. ನಿಮ್ಮ ಯೋಗಕ್ಷೇಮ ಕಾಪಾಡಿಕೊಳ್ಳಿ. ದ್ವಾದಶ ಗುರು, ಜನ್ಮಶನಿ-ಬೇಡದ ವಿಚಾರ ಹಾಗೂ ಚರ್ಚೆಯಿಂದ ಮನಸ್ಸನ್ನು ಅಶುದ್ಧ ಮಾಡುತ್ತದೆ. ವ್ಯಸನವನ್ನು ದೂರಮಾಡುವವನು ದತ್ತಾತ್ರೇಯನೊಬ್ಬನೇ. ಶನಿಗಾಗಿ ಶನಿಪ್ರಾರ್ಥನೆ ಮಾಡಿ. ತಿಲಾದಾನ ಮಾಡಿ.

ಕುಂಭ: ಹನ್ನೊಂದರ ಗುರುವು ಸ್ವಲ್ಪಮಟ್ಟಿಗೆ ನಿಮಗೆ ಯಶಸ್ಸನ್ನು ಕೊಟ್ಟು, ಧನಸಹಾಯ ನೀಡಿ ರಕ್ಷಣೆ ನೀಡುತ್ತಾನೆ. ನಾವು ಮಾಡುವ ಕೆಲಸಗಳು, ಯೋಚನೆಗಳೇ ದೈವದ ಪರೀಕ್ಷೆ. ಅನ್ಯರ ಮಾತನ್ನು ಕೇಳಿ ಬೇರೆಯವರ ಮನಸ್ಸಿಗೆ ಕಿಚ್ಚನ್ನು ಹಚ್ಚದಿರಿ. ಅಗ್ನಿಯ ಪ್ರತಿಭೆಯೇನೆಂದರೆ ಮೊದಲು ಹಚ್ಚಿದವನನ್ನೇ ಭಸ್ಮಮಾಡಿ ನಂತರ ಬೇರೆಯವರನ್ನು ಭಸ್ಮ ಮಾಡುತ್ತದೆ. ಧನ್ವಂತರಿ ಸ್ತೋತ್ರ ಪಠಿಸಿ. ವೆಂಕಟೇಶ್ವರನ ದ್ವಾದಶನಾಮ ಪಠಿಸಿ.

ಮೀನ: ಏಕಾದಶ ಶನಿ, ಗುರು- ಸ್ವಕ್ಷೇತ್ರ ಮೀನದಲ್ಲಿ ಕುಜ ನಿಮ್ಮನ್ನು ಸಂತಸದಿಂದಿರಿಸಿ ಶುದ್ಧವಾದ ಆಕಾಶವನ್ನು, ಪವಿತ್ರವಾದ ಭೂಮಿಯನ್ನು, ಕುಡಿಯಲು ಗಂಗೆಯನ್ನು ನೀಡಿದ್ದಾನೆ. ನೀವೂ ಸುಖವಾಗಿರಿ. ನಿಮ್ಮೊಂದಿಗೆ ಇರುವ ಸಜ್ಜನರಿಗೆ ಸಹಾಯಮಾಡಿ. ನಿಮ್ಮ ಪ್ರಾರ್ಥನೆ ದೇಶಕ್ಕಾಗಿ ಇರಲಿ. ಈಗ ನಿಮಗೆ ದೇವರು ಮಾತನಾಡಿಸುವ ಕಾಲ. ರಾಷ್ಟ್ರಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ. ಶುಭವಾಗಲಿ.